ಹಾಜಿ ಅಬ್ದುಲ್ಲಾ ಸರಕಾರಿ ಆಸ್ಪತ್ರೆ ಖಾಸಗೀಕರಣ: ನ್ಯಾಯಾಲಯದಿಂದ ಸಾರ್ವಜನಿಕ ಹಿತಾಸಕ್ತಿ ದಾವೆ ಸ್ವೀಕಾರ
ಉಡುಪಿ, ಮಾ.28: ಹಾಜಿ ಅಬ್ದುಲ್ ಸಾಹೇಬರು ದಾನವಾಗಿ ನೀಡಿ ರುವ ಉಡುಪಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಅತ್ಯಾಧುನಿಕ ಆಸ್ಪತ್ರೆ ನಿರ್ಮಿಸಲು ಬಿಟ್ಟು ಕೊಟ್ಟಿರುವ ರಾಜ್ಯ ಸರಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಉಡುಪಿ ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಇಂದು ಸ್ವೀಕರಿಸಿ, ವ್ಯಾಜ್ಯ ನೋಂದವಾಣೆ ಮಾಡಲು ಆದೇಶ ನೀಡಿದೆ.
ಹಾಜಿ ಅಬ್ದುಲ್ ಸಾಹೇಬರ ಸೋದರ ಸಂಬಂಧಿ ಖುರ್ಷಿದ್ ಅಹ್ಮದ್ ಸೇರಿದಂತೆ ಎಂಟು ಮಂದಿ ಸಂಬಂಧಿಗಳು, ಮೀನಾಕ್ಷಿ ಭಂಡಾರಿ, ಪ್ರೊ.ಕೆ. ಫಣಿರಾಜ್ ಸೇರಿದಂತೆ ಉಡುಪಿಯ 40ಕ್ಕೂ ಅಧಿಕ ಮಂದಿ ಸಾರ್ವಜನಿಕರು ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸಾರ್ವಜನಿಕರ ಪರವಾಗಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಉಡುಪಿಯ ನ್ಯಾಯವಾದಿ ಎನ್.ಕೆ.ಆಚಾರ್ಯ ನ್ಯಾಯಾಲಯದಲ್ಲಿ ದಾಖಲಿಸಿದ್ದಾರೆ.
ಈ ದಾವೆಯನ್ನು ಉಡುಪಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಮಿಲನಾ ಸ್ವೀಕರಿಸಿ, ನೋಂದಾವಣೆ ಮಾಡಲು ಆದೇಶ ನೀಡಿದ್ದಾರೆ. ಅದರಂತೆ ವ್ಯಾಜ್ಯ ನೋಂದಾವಣೆಯಾಗಿದ್ದು, ಅದರ ಮುಂದಿನ ಪ್ರಕ್ರಿಯೆಯು ಮಾ.30ರಂದು ನಡೆಯಲಿದೆ ಎಂದು ನ್ಯಾಯವಾದಿ ಎನ್.ಕೆ.ಆಚಾರ್ಯ ತಿಳಿಸಿದ್ದಾರೆ.