ಸರ್ವಾಧಿಕಾರಿ ಪ್ರಭುತ್ವದೆಡೆಗೆ ನಾವು ಸಾಗುತ್ತಿದ್ದೇವೆಯೇ?
ಪ್ರಚಂಡ ಬಹುಮತ, ಹೀರೋ ಆರಾಧನೆ, ಜನಾಂಗ ಶ್ರೇಷ್ಠತೆ ಮತ್ತು ಧರ್ಮ ಶ್ರೇಷ್ಠತೆಗಳು ಇಂದು ನಮ್ಮನ್ನು ಎಂತಹ ಭಯಾನಕ ಸ್ಥಿತಿಗೆ ತಂದು ನಿಲ್ಲಿಸಿವೆ ಎಂಬುದರ ಅರಿವು ಹೆಚ್ಚಿನವರಿಗೆ ಇರುವಂತಿಲ್ಲ. ಬೇರೊಂದು ಕಾಲದಲ್ಲಿ, ಬೇರೊಂದು ಭೂಖಂಡದಲ್ಲಿ ಜನಾಂಗ ಶ್ರೇಷ್ಠತೆಯ ಅಂತಿಮ ಪರಿಣಾಮ ಏನಾಯಿತೆಂದು ಹಲವರಿಗಷ್ಟೇ ತಿಳಿದಿದೆ. ಕೆಲವರು ಅದೆಲ್ಲ ಅವಾಸ್ತವಿಕ, ಕಾಲ್ಪನಿಕ, ಉತ್ಪ್ರೇಕ್ಷಿತ ಎನ್ನುತ್ತಾರೆ. ಆದರೆ ಹೆಚ್ಚಿನವರಿಗೆ ಅದರ ಅರಿವು ಇರುವಂತಿಲ್ಲ. ಇಂತಹ ಪರಿಸ್ಥಿತಿ ಇರುವಾಗ ಭಾರತದಲ್ಲಿ ಪ್ರಜಾಸತ್ತೆಯ ಉಳಿವು, ಬೆಳವಣಿಗೆಗಳನ್ನು ಬಯಸುವವರೆಲ್ಲರೂ ಡಾ. ಬಾಬಾಸಾಹೇಬ ಅಂಬೇಡ್ಕರರ ಮುನ್ನೆಚ್ಚರಿಕೆಯನ್ನು ಮತ್ತೆ ನೆನಪಿಸಿಕೊಂಡು ನೆಲಮಟ್ಟದಲ್ಲಿ ಕಾರ್ಯೋದ್ಯುಕ್ತರಾಗಲೇಬೇಕಾದ ಅನಿವಾರ್ಯತೆ ಇದೆ.
‘‘ರಾಜಕಾರಣದಲ್ಲಿ ಭಕ್ತಿ ಅಥವಾ ಹೀರೋ ಆರಾಧನೆಯು ಅವನತಿಯೊಂದಿಗೆ ಅಂತಿಮವಾಗಿ ಸರ್ವಾಧಿಕಾರಕ್ಕೆ ನಿಶ್ಚಿತ ಮಾರ್ಗವಾಗಿದೆ.’’
- ಡಾ. ಬಾಬಾಸಾಹೇಬ್ ಅಂಬೇಡ್ಕರ್
ಭಾರತದ ಸರ್ವೋಚ್ಚ ಸಂವಿಧಾನವನ್ನು ಎತ್ತಿಹಿಡಿಯುತ್ತ ಅದರ ನಿರ್ದೇಶನಗಳಿಗೆ ಅನುಗುಣವಾಗಿ ಕಾರ್ಯಾಚರಿಸಬೇಕಾಗಿರುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಮೇ 2014ರ ನಂತರ ಅವನತಿಯ ಹಾದಿ ಹಿಡಿದಿರುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕು, ಕೇಂದ್ರ ವಿಚಕ್ಷಣಾ ದಳ, ಸಿಬಿಐ, ಎನ್‌ಐಎ, ಇತಿಹಾಸ ಸಂಶೋಧನಾ ಸಂಸ್ಥೆ, ಭಾರತೀಯ ವಿಜ್ಞಾನ ಪರಿಷತ್ತು ಇವೇ ಮೊದಲಾದ ಪ್ರಜಾತಾಂತ್ರಿಕ ಸಂಸ್ಥೆಗಳ ಮೇಲೆ ಗದಾಪ್ರಹಾರ ಆಗುತ್ತಿದೆ. ಆಳುವ ಪಕ್ಷದ ಪ್ರಚಂಡ ಬಹುಮತ ಸಂಸತ್ತನ್ನು ಬರೀ ನಾಮ್ ಕಾ ವಾಸ್ತೆ ಎಂದಾಗಿಸಿದೆ. ನ್ಯಾಯಾಂಗದಲ್ಲಿ ರಾಜಕೀಯ ನಾಯಕರ ಬಗ್ಗೆ ಮೃದು ಧೋರಣೆ ಇರುವಂತಿದೆ. ಇತ್ತೀಚಿನ ಬಿರ್ಲಾ-ಸಹಾರ ಪೇಪರ್ಸ್, ರಾಷ್ಟ್ರಗೀತೆ, ಬಾಬರಿ ಮಸೀದಿಯಂತಹ ಪ್ರಕರಣಗಳು ನ್ಯಾಯಾಂಗ ತುಂಬಾ ದುರ್ಬಲವಾಗುತ್ತಿರುವ ಸೂಚಕದಂತೆ ಕಾಣುತ್ತಿದೆ.
ನ್ಯಾಯಾಂಗ ಹೀಗೆ ಅಧಿಕಾರದಲ್ಲಿರುವವರ ಕಡೆ ವಾಲುವುದು ಪ್ರಜಾಸತ್ತೆಯ ಮಟ್ಟಿಗೆ ಖಂಡಿತಾ ಶುಭಶೂಚಕವಲ್ಲ. ಈ ಸಂದರ್ಭದಲ್ಲಿ ಅಮೆರಿಕದ ನ್ಯಾಯಾಂಗದೊಂದಿಗೆ ತುಲನೆ ಮಾಡದೆ ಇರಲಾಗುವುದಿಲ್ಲ. ಪ್ರಜಾಪ್ರಭುತ್ವದ ನಾಲ್ಕನೆ ಆಧಾರಸ್ತಂಭ ಎನ್ನಲಾಗುವ ಮಾಧ್ಯಮದ ಕಥೆಯೂ ಭಿನ್ನವಾಗಿಲ್ಲ. ಮಾಧ್ಯಮದ ವಾಣಿಜ್ಯೀಕರಣ, ಪಕ್ಷಪಾತೀಯ ಧೋರಣೆಗಳು, ಆಳುವ ವರ್ಗದ ತಪ್ಪುಗಳನ್ನು ನೇರವಾಗಿ ಹೇಳದಿರುವುದು ಪ್ರಜಾಪ್ರಭುತ್ವದ ಬೇರೂರುವಿಕೆಗೆ ಪೂರಕವಲ್ಲ. ವಾಸ್ತವದಲ್ಲಿ ಅಡ್ಡಿಯಾಗಿವೆ ಎಂದೇ ಹೇಳಬಹುದು. ಬೆರಳೆಣಿಕೆಯಷ್ಟನ್ನು ಹೊರತುಪಡಿಸಿದರೆ ಮಿಕ್ಕ ಮಾಧ್ಯಮಗಳೆಲ್ಲವೂ ಪ್ರಧಾನಿಯ ಹಿನ್ನೆಲೆ, ಅವರ ಚರಿತ್ರೆಯ ಬಗ್ಗೆ, ಪೋಷಿಸುವ ದಂಡಿನ ಬಗ್ಗೆ ಪ್ರಸ್ತಾಪ ಮಾಡುವುದರ ಮೇಲೆ ಸ್ವಯಂನಿಷೇಧ ಹೇರಿಕೊಂಡಂತಿದೆ. ಆ ಸ್ವಯಂನಿಷೇಧದ ಹಿಂದೆ ಅವ್ಯಕ್ತ ಭಯ, ಸ್ವಾರ್ಥ, ಲಾಭಬಡುಕತನ, ಅವಕಾಶವಾದ ಮೊದಲಾದ ಹಲವು ಕಾರಣಗಳಿರಬಹುದು.
ಭಾರತದ ಮಹಾನ್ ಮೇಧಾವಿಗಳಲ್ಲೊಬ್ಬರಾದ ಡಾ. ಬಾಬಾಸಾಹೇಬ್ ಅಂಬೇಡ್ಕರರು ನಮ್ಮ ದೇಶದಲ್ಲಿ ಇಂತಹ ಪರಿಸ್ಥಿತಿಯೊಂದು ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಅಂದೇ ಯೋಚಿಸಿದ್ದರು. ಸುದೀರ್ಘ ಕಾಲದಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆಯಿರದ ಭಾರತದಂತಹ ದೇಶದಲ್ಲಿ ಪ್ರಜಾಸತ್ತೆಯು ಸರ್ವಾಧಿಕಾರಕ್ಕೆ ಎಡೆಗೊಡುವ ಅಪಾಯದ ಸಾಧ್ಯತೆ ಇದೆ. ವಾಸ್ತವವಾಗಿ ಈ ಹೊಸ ಪ್ರಜಾಸತ್ತೆ ಅದರ ಹೊರರೂಪವನ್ನು ಉಳಿಸಿಕೊಂಡು ಸರ್ವಾಧಿಕಾರಕ್ಕೆ ಎಡೆಮಾಡಿಕೊಡುವ ಗಣನೀಯ ಸಾಧ್ಯತೆಗಳಿವೆ. ಪ್ರಚಂಡ ಬಹುಮತ ದೊರೆತ ಸಂದರ್ಭಗಳಲ್ಲಿ ಆ ಸಾಧ್ಯತೆ ನಿಜವಾಗುವ ಅಪಾಯ ತುಂಬಾ ಹೆಚ್ಚು.
‘‘ವ್ಯಕ್ತಿಯೊಬ್ಬ ಶ್ರೇಷ್ಠನಿರಬಹುದು; ಆದರೆ ಜನ ತಮ್ಮ ಸ್ವಾತಂತ್ರ್ಯವನ್ನು ಅವನ ಪದತಲಕ್ಕೆ ಸಮರ್ಪಿಸುವ ಬಗ್ಗೆ ಅಥವಾ ತಮ್ಮ ಸಂಸ್ಥೆಗಳನ್ನು ಬುಡಮೇಲುಗೊಳಿಸುವ ಅಧಿಕಾರವನ್ನು ಆತನಿಗೆ ನೀಡುವ ಬಗ್ಗೆ ಎಚ್ಚರ ವಹಿಸಬೇಕು’’ ಎಂದು ಜಾನ್ ಸ್ಟುವರ್ಟ್ ಮಿಲ್ ಹೇಳಿದ್ದರು. ಪ್ರಜಾಸತ್ತೆಯ ಸಂರಕ್ಷಣೆಯಲ್ಲಿ ಆಸಕ್ತಿ ಇರುವವರೆಲ್ಲರೂ ಮಿಲ್‌ರ ಈ ಸಲಹೆಯನ್ನು ಪಾಲಿಸಲೇಬೇಕಾಗಿದೆ. ಭಾರತದ ರಾಜಕಾರಣದಲ್ಲಿ ಭಕ್ತಿ ಅಥವಾ ಭಕ್ತಿ ಮಾರ್ಗ ಅಥವಾ ಹೀರೋ ಆರಾಧನೆ ವಹಿಸುವ ಪಾತ್ರ ಎಷ್ಟಿದೆ ಎಂದರೆ ಅದಕ್ಕೆ ಸರಿಸಾಟಿಯಾಗಬಲ್ಲ ದೇಶ ಜಗತ್ತಿನಲ್ಲೆಲ್ಲೂ ಇಲ್ಲ. ಆದುದರಿಂದಲೇ ಮಿಲ್‌ರ ಸಲಹೆಯನ್ನು ಪಾಲಿಸುವುದು ಇತರ ದೇಶಗಳಿಗಿಂತಲೂ ಭಾರತಕ್ಕೇ ಹೆಚ್ಚು ಆವಶ್ಯಕವಾಗಿದೆ.
ಧರ್ಮದಲ್ಲಿ ಭಕ್ತಿಯು ಆತ್ಮೋದ್ಧಾರಕ್ಕೆ ಮಾರ್ಗ ಆಗಿರಬಹುದು. ಆದರೆ ರಾಜಕಾರಣದಲ್ಲಿ ಭಕ್ತಿ ಅಥವಾ ಹೀರೋ ಆರಾಧನೆಯು ಅವನತಿಯೊಂದಿಗೆ ಅಂತಿಮವಾಗಿ ಸರ್ವಾಧಿಕಾರಕ್ಕೆ ನಿಶ್ಚಿತ ಮಾರ್ಗವಾಗಿದೆ ಎಂದು ಎಚ್ಚರಿಸಿದ್ದರು. ಆದರೆ ಅವರ ಎಚ್ಚರಿಕೆಯ ಮಾತುಗಳೆಲ್ಲ ನೀರ ಮೇಲಿನ ಹೋಮದಂತಾಗಿರುವುದು ಅತ್ಯಂತ ದುರದೃಷ್ಟಕರ.
ಪ್ರಚಂಡ ಬಹುಮತ, ಹೀರೋ ಆರಾಧನೆ, ಜನಾಂಗ ಶ್ರೇಷ್ಠತೆ ಮತ್ತು ಧರ್ಮ ಶ್ರೇಷ್ಠತೆಗಳು ಇಂದು ನಮ್ಮನ್ನು ಎಂತಹ ಭಯಾನಕ ಸ್ಥಿತಿಗೆ ತಂದು ನಿಲ್ಲಿಸಿವೆ ಎಂಬುದರ ಅರಿವು ಹೆಚ್ಚಿನವರಿಗೆ ಇರುವಂತಿಲ್ಲ. ಬೇರೊಂದು ಕಾಲದಲ್ಲಿ, ಬೇರೊಂದು ಭೂಖಂಡದಲ್ಲಿ ಜನಾಂಗ ಶ್ರೇಷ್ಠತೆಯ ಅಂತಿಮ ಪರಿಣಾಮ ಏನಾಯಿತೆಂದು ಹಲವರಿಗಷ್ಟೇ ತಿಳಿದಿದೆ. ಕೆಲವರು ಅದೆಲ್ಲ ಅವಾಸ್ತವಿಕ, ಕಾಲ್ಪನಿಕ, ಉತ್ಪ್ರೇಕ್ಷಿತ ಎನ್ನುತ್ತಾರೆ. ಆದರೆ ಹೆಚ್ಚಿನವರಿಗೆ ಅದರ ಅರಿವು ಇರುವಂತಿಲ್ಲ. ಇಂತಹ ಪರಿಸ್ಥಿತಿ ಇರುವಾಗ ಭಾರತದಲ್ಲಿ ಪ್ರಜಾಸತ್ತೆಯ ಉಳಿವು, ಬೆಳವಣಿಗೆಗಳನ್ನು ಬಯಸುವವರೆಲ್ಲರೂ ಡಾ. ಬಾಬಾಸಾಹೇಬ ಅಂಬೇಡ್ಕರರ ಮುನ್ನೆಚ್ಚರಿಕೆಯನ್ನು ಮತ್ತೆ ನೆನಪಿಸಿಕೊಂಡು ನೆಲಮಟ್ಟದಲ್ಲಿ ಕಾರ್ಯೋದ್ಯುಕ್ತರಾಗಲೇಬೇಕಾದ ಅನಿವಾರ್ಯತೆ ಇದೆ.
ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಭಾರತೀಯರೆಲ್ಲ ಜಾತಿ, ಮತ, ಲಿಂಗ ಭೇದಗಳನ್ನು ಮರೆತು ವಿದೇಶಿ ಪ್ರಭುತ್ವದ ದುರಾಡಳಿತ, ದಬ್ಬಾಳಿಕೆಗಳ ವಿರುದ್ಧ ಒಂದುಗೂಡಲು ಸಾಧ್ಯವಾಗಿದ್ದರೆ ಅದರ ಹಿಂದೆ ಸಮಾಜದ ಕೊಟ್ಟಕೊನೆಯ ವ್ಯಕ್ತಿಯನ್ನೂ ಒಳಗೊಂಡ ಭವ್ಯ ಭಾರತವನ್ನು ಕಟ್ಟುವ ಘನ ಉದ್ದೇಶವಿತ್ತು. ಆ ಉದ್ದೇಶವನ್ನು ಮರೆತ ಸ್ವಾತಂತ್ರ್ಯಾನಂತರದ ಸ್ವದೇಶಿ ಪ್ರಭುತ್ವಗಳ ಭ್ರಷ್ಟಾಚಾರ, ಬಂಡವಾಳವಾದ, ಕೋಮುವಾದಗಳಿಂದಾಗಿ ಭ್ರಮನಿರಸನಕ್ಕೆ ಒಳಗಾಗಿ, ಫ್ಯಾಶಿಸ್ಟ್ ದುಶ್ಶಕ್ತಿಗಳಿಗೆ ದೇಶದ ಲಗಾಮನ್ನು ಒಪ್ಪಿಸಹೊರಟ ಜನರಲ್ಲಿ ತಿಳಿವಳಿಕೆ ಮೂಡಿಸಿ, ನಂಬಿಕೆ ಹುಟ್ಟಿಸುವಂತಹ ಭರವಸೆಯೊಂದಿಗೆ ಅವರನ್ನು ಮತ್ತೊಮ್ಮೆ ಒಗ್ಗೂಡಿಸುವ ಬಗೆ ಹೇಗೆಂದು ಗಂಭೀರವಾಗಿ ಯೋಚಿಸುವ ಸಮಯ ಬಂದಿದೆ.
(ಆಧಾರ: ದ ವೈರ್‌ನಲ್ಲಿ ಉಜ್ಜಲ್ ದೊಸಂಜ್ ಮತ್ತು ದುಷ್ಯಂತ್ ದವೆಯವರ ಲೇಖನಗಳು)