ಅಂಧತ್ವವನ್ನು ಮೆಟ್ಟಿ ನಿಂತ ಚೆಸ್ ಪ್ರತಿಭೆ ಕಿಶನ್ ಗಂಗೊಳ್ಳಿ
ಮಣಿಪಾಲ, ಮಾ.31: ಅಂಧತ್ವದೊಂದಿಗೆ ಜನಿಸಿದರೂ, ಅದನ್ನು ಹಿನ್ನಡೆ ಯಾಗಿ ಪರಿಗಣಿಸದೇ ಅದನ್ನೊಂದು ಸವಾಲಾಗಿ ಸ್ವೀಕರಿಸಿ ಜೀವನದಲ್ಲಿ ಮಹತ್ವದ ಸಾಧನೆ ಮಾಡುತ್ತಿರುವ ಕನ್ನಡಿಗ ಕ್ರೀಡಾ ಪ್ರತಿಭೆಯೇ ಕಿಶನ್ ಗಂಗೊಳ್ಳಿ.
ಇಂದು ಮಣಿಪಾಲದಲ್ಲಿ ಮುಕ್ತಾಯಗೊಂಡ ಅಂಧರ ಐಬಿಸಿಎ ಏಷ್ಯನ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಗರಿಷ್ಠ ಎಂಟು ಅಂಕಗಳಲ್ಲಿ ಆರು ಜಯ ಹಾಗೂ ಎರಡು ಡ್ರಾಗಳೊಂದಿಗೆ ಗರಿಷ್ಠ ಎಂಟರಲ್ಲಿ ಏಳು ಅಂಕಗಳನ್ನು ಸಂಪಾದಿಸುವ ಮೂಲಕ ಅಗ್ರಸ್ಥಾನಿಯಾಗಿ ಚಾಂಪಿಯನ್ ಪಟ್ಟಕ್ಕೇರಿದ ಕಿಶನ್ ಸಾಧನೆಯ ಹೊಸ ಮೆಟ್ಟಲೇರಿದ್ದಾರೆ.
ಅವರು ಮುಂದಿನ ಗುರಿ ನೆಟ್ಟಿರುವುದು ಜೂನ್ ತಿಂಗಳಲ್ಲಿ ಮಸಿಡೋನಿಯಾದಲ್ಲಿ ನಡೆಯುವ ಅಂಧರ ಚೆಸ್ ಒಲಿಂಪಿಯಾಡ್ ಮೇಲೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಚೆಸ್ ಒಲಿಂಪಿಯಾಡ್‌ನಲ್ಲಿ ವಿಶ್ವದ ಪ್ರಮುಖ ದೇಶಗಳೆಲ್ಲವೂ ಭಾಗವಹಿಸಲಿವೆ. ಇದರಲ್ಲಿ ತಂಡಕ್ಕೆ ಚಿನ್ನದ ಪದಕ ಗೆಲ್ಲಿಸುವುದರೊಂದಿಗೆ ವೈಯಕ್ತಿಕವಾಗಿ ತಾವೂ ಚಿನ್ನದ ಪದಕ ಗೆಲ್ಲುವ ಕಠಿಣ ಗುರಿಯನ್ನು ಅವರು ಹೊಂದಿದ್ದಾರೆ.
2012ರಲ್ಲಿ ಭಾರತದ ಚೆನ್ನೈನಲ್ಲಿ ನಡೆದ ಅಂಧರ ಚೆಸ್ ಒಲಿಂಪಿಯಾಡ್ ನಲ್ಲೂ ಭಾರತವನ್ನು ಪ್ರತಿನಿಧಿಸಿದ್ದ ಕಿಶನ್ ಗಂಗೊಳ್ಳಿ, ಅಲ್ಲಿ ವೈಯಕ್ತಿಕವಾಗಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಅಂಧರ ಚೆಸ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆಗೆ ಕಾರಣರಾಗಿದ್ದರು. ಇದರಲ್ಲಿ ಭಾರತ ತಂಡ ವಿಶ್ವದಲ್ಲಿ ಐದನೇ ಸ್ಥಾನ ಪಡೆದು ಸ್ಪರ್ಧೆಯನ್ನು ಮುಗಿಸಿತ್ತು. ಹಿಂದಿನ ಒಲಿಂಪಿಯಾಡ್‌ನಲ್ಲಿ 16ನೇ ಸ್ಥಾನ ಪಡೆದಿದ್ದ ಭಾರತದ ಅತ್ಯುತ್ತಮ ಸಾಧನೆ ಇದಾಗಿತ್ತು.
ಆದರೆ ಈ ಬಾರಿ ಭಾರತವನ್ನು ಅಗ್ರಸ್ಥಾನಕ್ಕೇರಿಸುವುದರೊಂದಿಗೆ ತಾನೂ ವೈಯಕ್ತಿಕ ಚಿನ್ನದ ಪದಕ ಗೆಲ್ಲುವ ಮಹದಾಸೆಯೊಂದಿಗೆ ಕಿಶನ್ ಈಗ ಪ್ರತಿದಿನ 4-5ಗಂಟೆಗಳ ಕಾಲ ಕಠಿಣ ಅಭ್ಯಾಸ ನಡೆಸುತ್ತಿರುವುದಾಗಿ ತಿಳಿಸಿದರು. ಈ ಬಾರಿ ಭಾರತ ತಂಡ ಕಿಶನ್ ಗಂಗೊಳ್ಳಿ ಅಲ್ಲದೇ, ಇಲ್ಲಿ ಬೆಳ್ಳಿ ಪದಕ ಪಡೆದ ಗುಜರಾತ್‌ನ ಮಕ್ವಾನ್ ಅಶ್ವಿನ್ ಕೆ., ಒರಿಸ್ಸಾದ ಸೌಂದರ್ಯ ಕುಮಾರ್ ಪ್ರಧಾನ್, ಮಹಾರಾಷ್ಟ್ರದ ಆರ್ಯನ್ ಜೋಶಿ ಹಾಗೂ ಪಾಟೀಲ್ ಶಿರಿಷ್ ಅವರನ್ನೊಳಗೊಂಡಿದೆ.
25ರ ಹರೆಯದ ಹುಟ್ಟಾ ಪ್ರತಿಭಾವಂತ ಕಿಶನ್ ಗಂಗೊಳ್ಳಿ, ಮೂಲತ: ಕುಂದಾಪುರ ತಾಲೂಕು ಗಂಗೊಳ್ಳಿಯವರು. ಕಿಶನ್ ತಂದೆ ಕೆನರಾ ಬ್ಯಾಂಕ್ ಉದ್ಯೋಗಿ ರವೀಂದ್ರ ಅವರು ಈಗ ಶಿವಮೊಗ್ಗದ ವಿನೋಬಾ ನಗರದಲ್ಲಿ ನೆಲೆಸಿದ್ದಾರೆ. ತಾಯಿ ಶಿವಮೊಗ್ಗದಲ್ಲಿ ಬ್ಯೂಟಿಷಿಯನ್ ಆಗಿದ್ದಾರೆ. ಹುಟ್ಟಿನಿಂದಲೇ ಅಂಧರಾದ ಕಿಶನ್ ಅವರ ಏಕೈಕ ಸಂತಾನ. ಶೇ.75ರಷ್ಟು ಅಂಧತ್ವವನ್ನು ಹೊಂದಿರುವ ಕಿಶನ್, ಶಿವಮೊಗ್ಗದ ಕುವೆಂಪು ವಿವಿಯಿಂದ ಇಕನಾಮಿಕ್ಸ್‌ನಲ್ಲಿ ಎಂ.ಎ. ಪದವಿಯನ್ನು ಎರಡನೇ ರ್ಯಾಂಕ್‌ನೊಂದಿಗೆ ಪಡೆದ ಪ್ರತಿಭಾವಂತ. ಕಲಿಕೆಯಲ್ಲಾಗಲಿ, ಚೆಸ್‌ನಲ್ಲಾಗಲಿ ಅವರಿಗೆ ಅಂಧತ್ವ ಎಂದೂ ಅಡ್ಡಿಯಾಗಿ ಪರಿಣಮಿಸಲೇ ಇಲ್ಲ.
ಕಿಶನ್ ಆರನೇ ತರಗತಿಯಲ್ಲಿದ್ದಾಗ ಚೆಸ್ ಆಟವನ್ನು ಗಂಭೀರವಾಗಿ ಆಡತೊಡಗಿದರು. ಇದಕ್ಕೆ ಅವರ ಸೋದರಮಾವನ (ತಾಯಿಯ ಸಹೋದರ) ಪ್ರೇರಣೆಯೇ ಕಾರಣವಾಗಿತ್ತು ಎಂದು ಅವರು ತಿಳಿಸಿದರು. ಆರಂಭದಲ್ಲಿ ಅವರು ಎಲ್ಲರ ಜೊತೆಗೆ ಆಟವಾಡುತ್ತಾ ಇದ್ದರು. 2011ರಲ್ಲಿ ತಾನು ಅಂಧರ ಚೆಸ್‌ನಲ್ಲಿ ಸ್ಪರ್ಧಿಸಲು ಆರಂಭಿಸಿದ್ದಾಗಿ ಕಿಶನ್ ನೆನಪಿಸಿಕೊಂಡರು. ಅದೇ ವರ್ಷದಿಂದ ತಾನು ಸತತವಾಗಿ ಚೆಸ್‌ನಲ್ಲಿ ದೇಶವನ್ನು ಪ್ರತಿನಿಧಿಸುತ್ತಾ ಬಂದಿದ್ದೇನೆ ಎಂದೂ ಅವರು ಹೆಮ್ಮೆಯಿಂದ ಹೇಳಿಕೊಂಡರು.
6ನೇ ತರಗತಿಯಿಂದ 9ನೇ ತರಗತಿಯವರೆಗೆ ತಾನು ಶಿವಮೊಗ್ಗದ ಮತ್ತೊಬ್ಬ ಅಂಧ ಚೆಸ್ ಆಟಗಾರ ಕೃಷ್ಣ ಉಡುಪರ ಬಳಿ ಚೆಸ್ ತರಬೇತಿ ಪಡೆದರು. ಅನಂತರ ತಾವು ಸ್ವಯಂ ಆಗಿ ಚೆಸ್ ಕಲಿಕೆ ಆರಂಭಿಸಿದೆ. ಕಂಪ್ಯೂಟರ್ ಮೂಲಕವೂ ತಾನು ಚೆಸ್ ಆಟವನ್ನು ಕಲಿತು, ಅಭ್ಯಸಿಸಿದೆ ಎಂದರು. ಮಣಿಪಾಲದಲ್ಲಿ ಗುರು-ಶಿಷ್ಯರಿಬ್ಬರೂ ಸ್ಪರ್ಧಿಸಿದ್ದು, ಶಿಷ್ಯ ಚಾಂಪಿಯನ್ ಪಟ್ಟ ಪಡೆದರೆ, ಗುರು ಆರನೇ ಸ್ಥಾನ ಪಡೆದರು.
ತನ್ನ ಅಂಗವೈಕಲ್ಯವನ್ನು ಎಲ್ಲೂ ಪ್ರಕಟಿಸಿದೇ, ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆಯುವ ಕಿಶನ್ 2013ರಿಂದ 2017ರವರೆಗೆ ಸತತ ನಾಲ್ಕು ಬಾರಿ ಅಂಧರ ರಾಷ್ಟ್ರೀಯ ಱಎೞಚೆಸ್ ಚಾಂಪಿಯನ್ ಆಗಿ ದಾಖಲೆ ಬರೆದಿದ್ದಾರೆ. 2012ರಲ್ಲಿ ಚೆನ್ನೈನಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ ಚಿನ್ನದ ಪದಕ ಜಯಿಸಿದ ದೇಶದ ಏಕೈಕ ಆಟಗಾರ.
ಈ ವರ್ಷದ ಜೂನ್ ತಿಂಗಳಲ್ಲಿ ಮತ್ತೊಮ್ಮೆ ನಡೆಯುವ ಚೆಸ್ ಒಲಿಂಪಿಯಾಡ್‌ನಲ್ಲಿ ಎರಡು ಚಿನ್ನದ ಪದಕ ಗೆಲ್ಲುವ ಗುರಿಯನ್ನು ಹಾಕಿಕೊಂಡಿರುವ ಕಿಶನ್, ಇದಕ್ಕಾಗಿ ಈಗ ಕಠಿಣ ಅಭ್ಯಾಸದಲ್ಲಿ ತಲ್ಲೀನ ರಾಗಿದ್ದಾರೆ. ತನ್ನೆಲ್ಲಾ ಸಾಧನೆಗೆ ತನ್ನ ತಂದೆ-ತಾಯಿಗಳ ಆಶೀರ್ವಾದ ಹಾಗೂ ಪ್ರೋತ್ಸಾಹ ಕಾರಣ ಎನ್ನುತ್ತಾರೆ.
ಅಂಧತ್ವ ತನ್ನ ಸಾಧನೆಗೆ ಅಡ್ಡಿ ಎಂಬ ಭಾವನೆಯೇ ಎಂದೂ ತನಗೆ ಬಂದಿಲ್ಲ. ಇದರಿಂದಲೇ ತನಗೆ ಚೆಸ್‌ನಲ್ಲಿ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಗಿದೆ. ಮುಂದೆಯೂ ಕ್ರೀಡಾ ಬದುಕಿನಲ್ಲಿ ಹಾಗೂ ಜೀವನದಲ್ಲಿ ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.