ಇದು ಪ್ರಜಾಪ್ರಭುತ್ವದ ಆಶಯಕ್ಕೆ ಮಾಡಿದ ಅಪಚಾರವಲ್ಲವೇ?
ಒಂದು ಚುನಾವಣೆ ಮುಗಿದು ದೂಳು ಆರುವ ಮೊದಲು, ಪೋಸ್ಟರ್ ಮಾಸುವ ಮೊದಲು ಇನ್ನೊಂದು ಚುನಾವಣೆಯನ್ನು ಜನತೆಯ ಮೇಲೆ ಹೇರುವುದು ಯಾವ ನ್ಯಾಯ? ಇದು ಯಾವ ರೀತಿಯ ಆಡಳಿತ ವ್ಯವಸ್ಥೆ? ಇದು ಪ್ರಜಾಪ್ರಭುತ್ವದ ಆಶಯಕ್ಕೆ ಮಾಡಿದ ಅಪಚಾರವಲ್ಲವೇ?
ಯಾವುದಾದರೂ ಘಟನೆಗಳು ಸ್ವಲ್ಪವೂ ಬದಲಾವಣೆ ಇಲ್ಲದೆ ಪುನರಾವರ್ತನೆಯಾಗುತ್ತಿದ್ದರೆ, ಅದನ್ನು ‘‘ಅದೇ ರೈಲಿನಲ್ಲಿ ಅದೇ ಹಳಿಯಲ್ಲಿ ಮತ್ತು ಅದೇ ಬೋಗಿಯಲ್ಲಿ’’ ಎಂದು ಬಣ್ಣಿಸುವುದು ವಾಡಿಕೆ. ದೇಶದ ರಾಜಕೀಯ ಬೆಳವಣಿಗೆಯನ್ನು, ಅದು ಹೋಗುತ್ತಿರುವ ದಾರಿಯನ್ನು, ಪಡೆದುಕೊಳ್ಳುತ್ತಿರುವ ತಿರುವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ನಾಣ್ಣುಡಿ ಬೇಡವೆಂದರೂ ನೆನಪಿಗೆ ಬರುತ್ತದೆ. ಭಾಜಪ (ಭಾರತೀಯ ಜನತಾ ಪಕ್ಷ) 2014ರ ಲೋಕಸಭಾ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಅಧಿಕಾರದ ಗದ್ದುಗೆ ಹಿಡಿದ ಮೇಲೆ ಮತ್ತು ನಂತರ ನಡೆದ ರಾಜ್ಯಗಳ ವಿಧಾನ ಸಭೆಗಳ ಚುನಾವಣೆಗಳಲ್ಲಿ ಬಹುತೇಕ ರಾಜ್ಯಗಳನ್ನು ಕೈವಶ ಮಾಡಿಕೊಂಡ ಮೇಲೆ, ದೇಶದ ರಾಜಕೀಯದಲ್ಲಿ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆಯಾಗಬಹುದೆಂದು ಜನರು ನಿರೀಕ್ಷಿಸಿದ್ದರು. ತಾನು ಬೇರೆ ಪಕ್ಷಕ್ಕಿಂತ ಭಿನ್ನ ಎಂದು ಸದಾ ಬಿಂಬಿಸಿಕೊಳ್ಳುವ ಪಕ್ಷ ಭಾರೀ ಬದಲಾವಣೆಯನ್ನು ತರಬಹುದು ಎಂದು ಜನರು ನಿರೀಕ್ಷಿಸಿದ್ದರು. ಆ ಬದಲಾವಣೆಗಾಗಿ ಹಂಬಲಿಸಿದ್ದರೂ ಕೂಡಾ.
ಭಾಜಪವು ವಿರೋಧ ಪಕ್ಷದಲ್ಲಿದ್ದಾಗ, ಕಾಂಗ್ರೆಸ್‌ನ ಹೈಕಮಾಂಡ್ ಸಂಸ್ಕೃತಿ ಬಗೆಗೆ ಸದಾ ಟೀಕಿಸುತ್ತಿತ್ತು. ‘‘ದಿಲ್ಲಿಯಲ್ಲಿ ಸ್ವಿಚ್ ಹಾಕಿದರೆ ಮಾತ್ರ ರಾಜ್ಯಗಳಲ್ಲಿ ಬಲ್ಬು ಬೆಳಗುತ್ತದೆ’’ ಎಂದು ಸದಾ ಲೇವಡಿ ಮಾಡುತ್ತಿತ್ತು. ಖ್ಯಾತ ನ್ಯಾಯವಾದಿ ಎಂ.ಸಿ.ಛಗಲಾ ತಮ್ಮ ‘Roses In December’ ಪುಸ್ತಕದಲ್ಲಿ ಈ ಹೈಕಮಾಂಡ್ ಸಂಸ್ಕೃತಿಯನ್ನು ಕಟುವಾಗಿ ಟೀಕಿಸಿದ್ದರು. ದಿಲ್ಲಿಯಿಂದ ಸಾವಿರಾರು ಕಿ.ಮಿ. ದೂರದ ಸಣ್ಣ ಪಟ್ಟಣ ಪಂಚಾಯತ್ ಅಧ್ಯಕ್ಷನನ್ನೂ ಹೈಕಮಾಂಡ್ ನಿರ್ಧರಿಸುವುದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ ಎಂದು ಹೇಳಿದ್ದರು. ಈ ಸಂಸ್ಕೃತಿ ಪ್ರಜಾಪ್ರಭುತ್ವದ ಆಶಯಕ್ಕೆ ಮಾಡುವ ಮಹಾ ಅನ್ಯಾಯ ಎಂದು ಅವರು ಹೇಳುತ್ತಿದ್ದರು. ಅಂದು ಅವರು ಎತ್ತಿ ಹೇಳಿದ ನ್ಯೂನತೆಯನ್ನು ನಮ್ಮ ರಾಜಕೀಯ ಪಕ್ಷಗಳು ಇನ್ನೂ ಮುಂದುವರಿಸಿ ಕೊಂಡು ಹೋಗುತ್ತಿರುವುದು ತೀರಾ ವಿಷಾದನೀಯ ಬೆಳವಣಿಗೆ ಎನ್ನಬಹುದು.
ಈಗ ಹೈಕಮಾಂಡ್ ನಶಿಸಿದೆ. ಆದರೆ, ಅದರ ಸ್ಥಾನವನ್ನು ಭಾಜಪದ ‘ವರಿಷ್ಠರು’ ಅಕ್ರಮಿಸಿಕೊಂಡಿದ್ದಾರೆ. ಭಾಜಪವು ಹಿಂದಿ ಮೂಲದ ಪಕ್ಷವಾಗಿರುವುದರಿಂದ, ಇಂಗ್ಲಿಷ್‌ನ ‘ಹೈಕಮಾಂಡ್’ ಬದಲು ಹಿಂದಿ ಭಾಷೆಯ ‘ವರಿಷ್ಠರು’ ಪದವನ್ನು ಉಪಯೋಗಿಸುತ್ತಾರೆ. ಕಾಂಗ್ರೆಸ್ ಪಕ್ಷ ದಂತೆ ಇವರೂ ಪ್ರತಿಯೊಂದಕ್ಕೂ ದಿಲ್ಲಿಯತ್ತ ಹಸಿರು ನಿಶಾನೆಗೆ ಚಾತಕ ಪಕ್ಷಿ ಯಂತೆ ಕಾಯುತ್ತಾರೆ. ಎಲ್ಲಾ ರಾಜಕೀಯ ಪಕ್ಷಗಳಿಗಿಂತ ಭಿನ್ನ ರಾಜಕೀಯ ಪಕ್ಷ ಎಂದು ಫೋಸು ಕೊಡುವ ಪಕ್ಷದ ‘ಭಿನ್ನತೆ’ ಇದೆಯೇ?
ಕಾಂಗ್ರೆಸ್ ಪಕ್ಷದಲ್ಲಿ ಕೇಂದ್ರ ಮಂತ್ರಿಗಳನ್ನು ಮತ್ತು ಸಂಸದರಿಂದ ರಾಜೀನಾಮೆ ಪಡೆದು ರಾಜ್ಯದ ಮುಖ್ಯಮಂತ್ರಿಗಳಿಗಾಗಿ ಕಳುಹಿಸಿ ಜನತೆಯ ಮೇಲೆ ತೆರವಾದ ಸ್ಥಾನಕ್ಕೆ ಚುನಾವಣೆ ಹೇರುವುದು ತೀರಾ ಮಾಮೂಲು. ಹಾಗೆಯೇ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳಿಂದ ರಾಜೀನಾಮೆ ಪಡೆದು ಅವರನ್ನು ದಿಲ್ಲಿಗೆ ಕಳುಹಿಸುವುದೂ ತೀರಾ ಸಾಮಾನ್ಯ. ಇದಕ್ಕೆ ಈ ದೇಶದಲ್ಲಿ ಸುದೀರ್ಘ ಇತಿಹಾಸವಿದೆ. ಇದ್ದವರನ್ನು, ಇದ್ದ ಪ್ರತಿಭೆಯನ್ನು ಮತ್ತು ಅರ್ಹರನ್ನು ಬಳಸಿಕೊಳ್ಳದೆ, ಯಾವುದೋ ಹಿತಾಸಕ್ತಿಯನ್ನು ಮೆಚ್ಚಿಸಲು ಇದು ಅವ್ಯಾಹತವಾಗಿ ನಡೆಯುತ್ತದೆ. ಗೋವಾದ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ರನ್ನು ಮುಖ್ಯಮಂತ್ರಿ ಪದವಿಯಿಂದ ಬಿಡಿಸಿ, ದಿಲ್ಲಿಗೆ ಕರೆದು ಕೇಂದ್ರ ಮಂತ್ರಿಯನ್ನಾಗಿ ಮಾಡಲಾಯಿತು. ಈಗ ಅವರನ್ನು ಪುನಃ ಗೋವಾಕ್ಕೆ ಕರೆದು ತಂದು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಗೋವಾದಲ್ಲಿ ಬೇರೆ ಅರ್ಹರಿಗೆ ಕೊರತೆಯೇ? ಉತ್ತರ ಪ್ರದೇಶದಲ್ಲೂ ಇದೇ ಹಾಡು.
325 ಶಾಸಕರಿರುವ ಭಾಜಪ ಕೂಟದಲ್ಲಿ ಮುಖ್ಯಮಂತ್ರಿ ಅರ್ಹತೆ ಯವರು ಯಾರೂ ಇರಲಿಲ್ಲವೇ? ಸಂಸದ ಯೋಗಿ ಆದಿತ್ಯನಾಥ್‌ರನ್ನು ದಿಲ್ಲಿಯಿಂದ ಕರೆದೊಯ್ಯಬೇಕಾಯಿತೇ? ಇನ್ನು ಆರು ತಿಂಗಳಲ್ಲಿ ಈ ರಾಜ್ಯಗಳಲ್ಲಿ ಮತ್ತೆ ಚುನಾವಣೆಗಳು. ಒಂದು ಚುನಾವಣೆ ಮುಗಿದು ದೂಳು ಆರುವ ಮೊದಲು, ಪೋಸ್ಟರ್ ಮಾಸುವ ಮೊದಲು ಇನ್ನೊಂದು ಚುನಾವಣೆಯನ್ನು ಜನತೆಯ ಮೇಲೆ ಹೇರುವುದು ಯಾವ ನ್ಯಾಯ? ಇದು ಯಾವ ರೀತಿಯ ಆಡಳಿತ ವ್ಯವಸ್ಥೆ? ಇದು ಪ್ರಜಾಪ್ರಭುತ್ವದ ಆಶಯಕ್ಕೆ ಮಾಡಿದ ಅಪಚಾರವಲ್ಲವೇ? ಇದು ಬಡ ಬೋರೇಗೌಡನ ತೆರಿಗೆಯ ಹಣದ ದುಂದು ವೆಚ್ಚವಲ್ಲವೇ? ಆರಿಸಿ ಬಂದವರಲ್ಲಿ ಒಬ್ಬರಿಗೂ ಮುಖ್ಯಮಂತ್ರಿ ಆಗುವ ಅರ್ಹತೆ ಉಳ್ಳವರು ಯಾರೂ ಇಲ್ಲವೇ? ಚುನಾವಣಾ ಸಮಯದಲ್ಲಿ ಟಿಕೆಟ್ ಕೊಡುವಾಗ ಈ ನಿಟ್ಟಿನಲ್ಲಿ ಯೋಚಿಸಲಿಲ್ಲವೇಕೆ? ಆಕಸ್ಮಾತ್ ಈ ಚುನಾವಣೆಗಳಲ್ಲಿ ಈ ಮುಖ್ಯಮಂತ್ರಿಗಳು ಸೋತರೆ? ರಾಜಕೀಯ ಮತ್ತು ಕ್ರಿಕೆಟ್‌ನಲ್ಲಿ ನಿರೀಕ್ಷಿಸಿದಂತೆ ಯಾವುದೂ ನಡೆಯುವುದಿಲ್ಲ ಎನ್ನುವ ಮಾತು ಇದೆ. ಆಡಳಿತ ಬದಲಾವಣೆ ಮತ್ತು ರಾಜಕೀಯ ಸುಧಾರಣೆ ಎನ್ನುವುದು ಬರೀ ಭ್ರಮೆ. ವ್ಯಕ್ತಿಗಳು ಮಾತ್ರ ಬೇರೆ. ಆದರೆ, ವ್ಯವಸ್ಥೆ ಅದೇ. ಭಾರತದ ರಾಜಕೀಯ ವ್ಯಕ್ತಿ ಪ್ರಧಾನ ಮತ್ತು ವಿಷಯಗಳು ಕೇವಲ ಪ್ರಣಾಳಿಕೆಗೆ ಮತ್ತು ವೇದಿಕೆಗೆ ಸೀಮಿತ ಎನ್ನುವುದು ಸತ್ಯ. ಶಾಸನ ಸಭೆಗೆ ಆರಿಸಿ ಬಂದವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿದ್ದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನೂ ವಿಕಸನಗೊಳ್ಳುತ್ತಿತ್ತು.
ರಾಜಕೀಯ ಪಕ್ಷಗಳಿಗೆ ಅದರದ್ದೇ ಆದ ಗುಣಾಕಾರ, ಭಾಗಾಕಾರ, ಸಮೀಕರಣ ಮತ್ತು ರಾಜಕೀಯ ಲೆಕ್ಕಾಚಾರ ಇರಬಹುದು. ಇಂತಹ ಲೆಕ್ಕಾಚಾರ ಮಾಡುವಾಗ ಜನಸಾಮಾನ್ಯರು ಏನು ಹೇಳಬಹುದು ಎನ್ನುವು ದನ್ನೂ ಸಮೀಕರಿಸಿಕೊಳ್ಳಬೇಕು. ಇಂದು ಮತದಾರ ಜಾಗೃತನಾಗಿದ್ದಾನೆ ಮತ್ತು ಪ್ರತಿಯೊಂದು ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾನೆ. ರಾಜಕೀಯ ಪಕ್ಷಗಳ ನಡವಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಹಾಸ್ಯ ಮಾಡಬಾರದು ಮತ್ತು ದುರುಪಯೋಗ ಮಾಡಿ ಕೊಳ್ಳಬಾರದು. ಜನರು ಬದಲಾವಣೆಯನ್ನು ಬಯಸುತ್ತಾರೆ. ಜನತೆಯ ಈ ಆಶಯವನ್ನು ರಾಜಕೀಯ ಪಕ್ಷಗಳು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ರಾಜಕೀಯ ಪಕ್ಷಗಳಿಗೆ ಎರಡು ಅಭಿಪ್ರಾಯಗಳು ಇರುತ್ತವೆ..ಒಂದು ಆಡಳಿತ ಪಕ್ಷದಲ್ಲಿದ್ದಾಗ..ಇನ್ನೊಂದು ವಿರೋಧ ಪಕ್ಷದಲ್ಲಿದ್ದಾಗ ಎನ್ನುವುದು ಇನ್ನೊಮ್ಮೆ ದೃಢವಾಗಿ ಕಾಣುತ್ತಿದೆ.