ಓ.. ಮೆಣಸೇ ...!
ರಾಹುಲ್‌ಗೆ ಇದು ಸಾಧ್ಯವೇ?
ಪ್ರಮುಖ ರಾಜಕೀಯ ಘಟನಾವಳಿಗಳ ಬಳಿಕ ಬ್ರೇಕ್ ಪಡೆಯುವುದು ಮಾಮೂಲಾಗಿ ಬಿಟ್ಟಿದೆ. ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ, ರಾಹುಲ್‌ಗಾಂಧಿ ವಿದೇಶಕ್ಕೆ ಹಾರಿದ್ದರು. ಇದೀಗ ಸ್ವದೇಶಕ್ಕೆ ಮರಳಿದ್ದಾರೆ. ಇದೀಗ ಎಲ್ಲರ ಕಣ್ಣು ಅವರತ್ತ ನೆಟ್ಟಿದ್ದು, ಎಐಸಿಸಿ ಕಚೇರಿಯಲ್ಲಿ ಬದಲಾವಣೆಯಾಗುತ್ತದೆಯೇ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ಸೋನಿಯಾ ಗಾಂಧಿ ನಾಯಕತ್ವದಲ್ಲಿ 19 ವರ್ಷಗಳ ಕಾಲ ಕಚೇರಿಯಲ್ಲಿ ಸೇವೆ ಸಲ್ಲಿಸಿದ ಕೆಲ ಕಿರಿಯ ನಾಯಕರು ಎಐಸಿಸಿ ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ. ಅವರನ್ನು ಕಿತ್ತುಹಾಕಲು ರಾಹುಲ್ ಗಾಂಧಿಯವರ ಮೇಲೆ ಒತ್ತಡ ಹೆಚ್ಚುತ್ತಿದೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ. ಈ ಮುತ್ಸದ್ಧಿಗಳಿಗೆ ಗುಡ್‌ಬೈ ಹೇಳುವ ಬಗ್ಗೆ ರಾಹುಲ್‌ಗಾಂಧಿ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಈ ಪೈಕಿ ಹಲವರು ರಾಜೀವ್‌ಗಾಂಧಿ ಹಾಗೂ ಇಂದಿರಾಗಾಂಧಿ ಅವರ ಕಾಲದಿಂದಲೂ ಸೇವೆ ಸಲ್ಲಿಸುತ್ತಿದ್ದಾರೆ. ಒಮ್ಮೆ ಸೋನಿಯಾ ಕೂಟವನ್ನು ಹೊರಗಟ್ಟಿದರೆ, ರಾಹುಲ್‌ರ ಹೊಸ ಕೂಟ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಮ್ಯಾನ್ ವಿದ್ ಎ ಮಿಷನ್
ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಬಿಜೆಪಿ ಜಯ ಅಮಿತ್ ಶಾ ಅವರನ್ನು ‘ಮಿಷನ್ ಗುಜರಾತ್’ಗೆ ಹೆಚ್ಚು ಗಮನ ಹರಿಸುವಂತೆ ಮಾಡಿದೆ. ರಾಜ್ಯದಲ್ಲಿ ಈ ವರ್ಷದ ಕೊನೆಗೆ ವಿಧಾನಸಭಾ ಚುನಾವಣೆ ನಡೆಯಲಿದೆ. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಇತ್ತೀಚೆಗೆ ಪಕ್ಷದ ಎಲ್ಲ ಹಂತದ ಪ್ರತಿನಿಧಿಗಳನ್ನು ದಿಲ್ಲಿಗೆ ಕರೆಸಿಕೊಂಡು ಗುಜರಾತ್‌ನ 182 ಸ್ಥಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಭೆಯಲ್ಲಿ ಹಾಜರಿದ್ದವರ ಪ್ರಕಾರ, ಉಭಯ ನಾಯಕರು ಬೆರಳ ತುದಿಯಲ್ಲೇ ರಾಜ್ಯದ ಅಂಕಿ ಅಂಶಗಳನ್ನು ಹೊಂದಿದ್ದು, ಬಳಿಕ ರಚನೆಯಾದ ವಿವಿಧ ಸಮಿತಿಗಳು ಹಾಗೂ ಉಪಸಮಿತಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ, ಸ್ಥಳೀಯ ಮಾಧ್ಯಮಗಳ ಜತೆ ಸಂಪರ್ಕ ಹೊಂದಲು ಕೂಡಾ ವಿಶೇಷ ತಂಡ ರಚಿಸಲಾಗಿದೆ ಎಂದು ಹೇಳಲಾಗಿದೆ.
ಅಡ್ವಾಣಿ ಸರಿಯೇ?
ಉತ್ತರ ಪ್ರದೇಶವನ್ನು ಬುಟ್ಟಿಗೆ ಹಾಕಿಕೊಂಡ ಬಳಿಕ ಬಿಜೆಪಿಯ ಮಾರ್ಗದರ್ಶಕ ಮಂಡಳಿಯ ಸದಸ್ಯರ ಅಭಿಪ್ರಾಯ ಏನು? ರಾಜಕೀಯ ವರ್ತುಲದಲ್ಲಿ ಓಡಾಡುತ್ತಿ ರುವ ಒಂದು ಸ್ವಾರಸ್ಯಕರ ಚರ್ಚೆ ನಡೆಯುತ್ತಿದೆ. ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದನ್ನು ಟೆಲಿವಿಷನ್‌ನಲ್ಲಿ ವೀಕ್ಷಿಸಿದ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ, ‘‘ನಾನು ಮೋದಿಯನ್ನು ಪ್ರಧಾನಿಯಾಗಿ ಆಯ್ಕೆ ಮಾಡುವ ಮೂಲಕ ಎಸಗಿದ ತಪ್ಪನ್ನೇ, ಯೋಗಿಯನ್ನು ಮುಖ್ಯಮಂತ್ರಿ ಮಾಡುವ ಮೂಲಕ ಮೋದಿ ಎಸಗುತ್ತಿದ್ದಾರೆ’’ ಎಂದು ಹೇಳಿದ್ದಾಗಿ ತಿಳಿದುಬಂದಿದೆ. ಆದರೆ ಪಕ್ಷದಲ್ಲಿ ಅಡ್ವಾಣಿಯವರಿಗೆ ಇರುವ ಸ್ಥಾನಮಾನದ ಹಿನ್ನೆಲೆಯಲ್ಲಿ ಅಡ್ವಾಣಿಯವರ ಮಾತಿಗೆ ಬಹುತೇಕ ಯಾರೂ ಕಿವಿಗೊಡಲಿಲ್ಲ.
ಕಮಲನಾಥ್ ಕನಸು
ಪಂಜಾಬ್ ಚುನಾವಣಾ ಫಲಿತಾಂಶ ಹಾಗೂ ಅಮರೀಂದರ್ ಸಿಂಗ್ ಸ್ಥಳೀಯ ನಾಯಕರಾಗಿ ಮತ್ತೆ ರೂಪುಗೊಂಡು ಶಿರೋಮಣಿ-ಅಕಾಲಿದಳ ಮೈತ್ರಿಕೂಟದ ವಿರುದ್ಧ ಸೆಣಸಲು ಪ್ರಬಲ ಮುಖಂಡರಾಗಿರುವುದು ಕಾಂಗ್ರೆಸ್ ಹೈಕಮಾಂಡ್‌ಗೆ ಹೊಸ ಯೋಚನಾ ಲಹರಿ ಮೂಡಲು ಕಾರಣವಾಗಿದೆ. ಮಣ್ಣಿನ ಮಕ್ಕಳು ಗಟ್ಟಿಯಾಗಿ ಬೇರೂರಲು ಇದು ಸಕಾಲ ಎಂಬ ಅಭಿಪ್ರಾಯಕ್ಕೆ ಪಕ್ಷ ಬಂದಿದೆ. ಕಮಲನಾಥ್ ಅವರು ಇತ್ತೀಚಿನ ದಿನಗಳಲ್ಲಿ ದಿಢೀರನೇ ಪ್ರಮುಖ ವ್ಯಕ್ತಿಯಾಗಿರುವುದು ಇದೇ ಕಾರಣಕ್ಕಾಗಿಯೇ? ಮಧ್ಯಪ್ರದೇಶ ರಾಜ್ಯ ಘಟಕದ ಅಧ್ಯಕ್ಷರಾಗುವ ಇಚ್ಛೆಯನ್ನು ಕಮಲನಾಥ್ ಹೊಂದಿದ್ದಾರೆ. ಸಂಜಯ್ ಗಾಂಧಿ ಅನುಯಾಯಿಯಾಗಿ ಅವರು ಚಿಂದ್ವಾರಾದಿಂದ ಚುನಾವಣೆಗಳಲ್ಲಿ ಜಯ ಸಾಧಿಸುತ್ತಾ ಬಂದಿದ್ದಾರೆ. ಆದರೆ ದಿಗ್ವಿಜಯ ಸಿಂಗ್ ಅವರು ಕಮಲನಾಥ್ ಪ್ರಭಾವವನ್ನು ಮೊಟಕುಗೊಳಿಸುತ್ತಿದ್ದಾರೆ ಎನ್ನುವುದು ಹಲವರ ಅಭಿಪ್ರಾಯ. ಗೋವಾದಲ್ಲಿ ಏಕೈಕ ದೊಡ್ಡ ಪಕ್ಷವಾಗಿದ್ದರೂ, ಸರಕಾರ ರಚಿಸಲು ವಿಫಲವಾದ ಹಿನ್ನೆಲೆಯಲ್ಲಿ ಡಿಗ್ಗಿ ರಾಜ ವಿಫಲವಾಗಿರುವ ಹಿನ್ನೆಲೆಯಲ್ಲಿ, ಕಮಲನಾಥ್ ಅವರನ್ನು ರಾಜ್ಯ ಕಾಂಗ್ರೆಸ್ ಮುಖ್ಯಸ್ಥರಾಗಿ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಮರಳಿ ಗೂಡಿಗೆ!
ಉತ್ತರ ಪ್ರದೇಶದ ಸಿಎಂ ಗಾದಿಗೆ ನಡೆದ ರೇಸ್‌ನಲ್ಲಿ ಯೋಗಿ ಆದಿತ್ಯನಾಥ್ ವಿರುದ್ಧ ದೂರಸಂಪರ್ಕ ಖಾತೆ ಸಚಿವ ಮನೋಜ್ ಸಿನ್ಹಾ ಪರಾಜಿತರಾಗಿರಬಹುದು; ಆದರೆ ಅವರು ಅದೇ ಹಳೆಯ ಸಮಸ್ಯೆಗಳೊಂದಿಗೆ ಹಳೆಯ ಕೆಲಸಕ್ಕೆ ಮರಳಿದ್ದಾರೆ. ಕರೆ ಕಡಿತದ ಬಗ್ಗೆ ಅವರಿಗೆ ಹಾಗೂ ಅವರ ಕಚೇರಿಗೆ ದೂರುಗಳ ಮಹಾಪೂರವೇ ಹರಿದಿದೆ. ಸಂಸದರೂ ಸೇರಿದಂತೆ ಹಲವು ಮಂದಿ ರಾಜಕಾರಣಿಗಳಿಂದಲೂ ಇವರಿಗೆ ವಿವಿಧೆಡೆಗಳಲ್ಲಿ ಮೊಬೈಲ್ ಟವರ್ ಅಳವಡಿಕೆಗೆ ತಡೆ ಒಡ್ಡುವ ವಿಚಾರದಲ್ಲಿ ಮಧ್ಯ ಪ್ರವೇಶಿಸುವಂತೆ ಮನವಿಗಳು ಬರುತ್ತವೆ. ಆದಾಗ್ಯೂ ಸಚಿವಾಲಯ ದೇಶಾದ್ಯಂತ ಕಳೆದ 8-9 ತಿಂಗಳಲ್ಲಿ ದೇಶಾದ್ಯಂತ ಒಂದು ಲಕ್ಷ ಮೊಬೈಲ್ ಟವರ್‌ಗಳನ್ನು ನಿರ್ಮಿಸಲು ಯಶಸ್ವಿಯಾಗಿದೆ. ಆದರೂ ಸಮಸ್ಯೆ ಬಗೆಹರಿದಂತೆ ಕಾಣುವುದಿಲ್ಲ. ಆದ್ದರಿಂದ ಹೀಗೆ ದೂರು ನೀಡಲು ಬಂದವರ ಮನವೊಲಿಸುವಲ್ಲಿ ಅವರು ನಿರತರಾಗಿದ್ದಾರೆ. ಬಹುಶಃ ಲಕ್ನೋಗೆ ಹೋಗಿದ್ದರೆ ಹೇಗೆ ಜೀವನ ಬದಲಾಗುತ್ತಿತ್ತು ಎಂಬ ಕನಸು ಕಾಣುತ್ತಿದ್ದಾರೆ ಎನ್ನಲಾಗಿದೆ.