ತುಮಕೂರು ಕಾರಾಗೃಹಕ್ಕೆ ಶಶಿಕಲಾ ಸ್ಥಳಾಂತರ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ಬೆಂಗಳೂರು, ಎ.3: ಎಐಎಡಿಎಂಕೆ ನಾಯಕಿ ಶಶಿಕಲಾ ಅವರನ್ನು ಪರಪ್ಪನ ಅಗ್ರಹಾರ ಕಾರಾಗೃಹದಿಂದ ತುಮಕೂರು ಕಾರಾಗೃಹಕ್ಕೆ ಸ್ಥಳಾಂತರಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಸಂಬಂಧ ಶಶಿಕಲಾ ಅವರನ್ನು ತುಮಕೂರು ಮಹಿಳಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಬೇಕೆಂದು ಟ್ರಾಫಿಕ್ ರಾಮಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ, ಇಳವರಸಿ, ಸುಧಾಕರನ್ ಅವರನ್ನು ಭೇಟಿ ಮಾಡಲು ತಮಿಳುನಾಡು ಮುಖ್ಯಮಂತ್ರಿ, ಹಲವು ಸಚಿವರು ಹಾಗೂ ಎಐಎಡಿಎಂಕೆ ಮುಖಂಡರು ಬರುತ್ತಿದ್ದಾರೆ. ಅಲ್ಲದೆ, ಶಿಕ್ಷಿತ ಕೈದಿಯನ್ನು ಈ ರೀತಿ ಭೇಟಿ ಮಾಡುವುದು ಸಂವಿಧಾನ ವಿರೋಧಿ ಧೋರಣೆಯಾಗಿದೆ. ಹೀಗಾಗಿ, ಇವರನ್ನು ತುಮಕೂರಿನ ಮಹಿಳಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಹೊಸೂರಿಗೆ ಪರಪ್ಪನ ಅಗ್ರಹಾರ ಜೈಲು ಹತ್ತಿರವಾಗಿರುವುದರಿಂದ ಶಶಿಕಲಾ ಅವರನ್ನು ತಮಿಳುನಾಡಿನ ರಾಜಕೀಯ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಸಂದರ್ಶಿಸಲು ಬರುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ಸರಕಾರದ ಪರ ವಾದಿಸಿದ ವಕೀಲರು, ಕರ್ನಾಟಕ ಕಾರಾಗೃಹ ಕೈಪಿಡಿ ಪ್ರಕಾರವೇ ಎಐಎಡಿಎಂಕೆ ನಾಯಕಿ ಶಶಿಕಲಾ ಅವರನ್ನು ಸಂದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಇದರಿಂದ ಯಾವುದೇ ಕಾನೂನಿಗೆ ಧಕ್ಕೆಯಾಗಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಪೀಠವು ಶಶಿಕಲಾ ಅವರನ್ನು ತುಮಕೂರಿಗೆ ವರ್ಗಾಯಿಸುವ ಯಾವುದೇ ಬಲವಾದ ಅಂಶಗಳಿಲ್ಲ ಎಂದು ಅಭಿಪ್ರಾಯಿಸಿ ಅರ್ಜಿಯನ್ನು ವಜಾಗೊಳಿಸಿತು.