ತೆಲಂಗಾಣ,ಆಂಧ್ರಪ್ರದೇಶದಲ್ಲಿ ತೀವ್ರಗೊಂಡ ಲಾರಿ ಮುಷ್ಕರ
ಹೈದರಾಬಾದ್,ಎ.3: ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತೆಲಂಗಾಣ ಮತ್ತು ಆಂಧ್ರಪ್ರದೇಶಗಳ ಲಾರಿ ಮಾಲಕರು ನಡೆಸುತ್ತಿರುವ ಮುಷ್ಕರ ಐದನೇ ದಿನವಾದ ಸೊೀಮವಾರ ಇನ್ನಷ್ಟು ತೀವ್ರಗೊಂಡಿದೆ.
ತಮ್ಮ ಬೇಡಿಕೆಗಳತ್ತ ಸರಕಾರದ ಗಮನ ಸೆಳೆಯಲು ರ್ಯಾಲಿಗಳು,ಧರಣಿಗಳನ್ನು ನಡೆಸಿದ ಮುಷ್ಕರನಿರತರು ಹೆದ್ದಾರಿಯಲ್ಲೇ ಅಡುಗೆ ಕೂಡ ತಯಾರಿಸಿದರು.
ಮುಷ್ಕರದಿಂದಾಗಿ ಎರಡೂ ರಾಜ್ಯಗಳಲ್ಲಿ ಐದು ಲಕ್ಷಕ್ಕೂ ಅಧಿಕ ಲಾರಿಗಳು ಸ್ಥಗಿತಗೊಂಡಿದ್ದು, ಅಗತ್ಯ ವಸ್ತುಗಳ ಪೂರೈಕೆಯ ಮೇಲೆ ತೀವ್ರ ಪರಿಣಾಮವುಂಟಾಗಿದೆ. ಸರಕಾರಿ ಬಸ್‌ಗಳ ಬಳಕೆ ಸೇರಿದಂತೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲು ಸಾರಿಗೆ ಇಲಾಖೆಗಳು ಹೆಣಗಾಡುತ್ತಿವೆ.
ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಮಾತುಕತೆಗಳ ಫಲಿತಾಂಶವನ್ನು ನೋಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತೆಲಂಗಾಣ ಲಾರಿ ಮಾಲಕರ ಸಂಘದ ಕಾರ್ಯದರ್ಶಿ ದುರ್ಗಾ ಪ್ರಸಾದ್ ಅವರು ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯಮಟ್ಟದಲ್ಲಿ ಕೆಲವು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರಕಾರದಿಂದ ಮಾತುಕತೆಗೆ ಆಹ್ವಾನಕ್ಕಾಗಿ ಕಾಯುತ್ತಿದ್ದೇವೆ ಎಂದೂ ಅವರು ಹೇಳಿದರು.