ಅಂಬೇಡ್ಕರ್ ಹೇಳಿದ ಮಾಂಸಾಹಾರದ ಒಗಟು
ಮಾಂಸಾಹಾರ; ಈ ವಿಷಯದ ಬಗ್ಗೆ ಚರ್ಚೆ ಬೇಡವೆಂದರೂ ಅಂತಹ ಪರಿಸ್ಥಿತಿ ಉದ್ಭವಿಸುತ್ತಲೇ ಇದೆ. ಭಾರತದಲ್ಲಿ ಅವಿರತವಾಗಿರುವ ಸಸ್ಯಾಹಾರ-ಮಾಂಸಾಹಾರ ಅಂಶ ಆಧರಿತ ತಾರತಮ್ಯದ ಫಲವಿದು. ಈ ನಿಟ್ಟಿನಲ್ಲಿ ಮಾನವ ಸಹಜ ಇಷ್ಟ ಬಂದದ್ದನ್ನು ತಿನ್ನುವ ಹಕ್ಕಿನ ಪರ, ಸ್ವಾತಂತ್ರ್ಯದ ಪರ ದನಿ ಎತ್ತಲೇಬೇಕಿದೆ.
ಮಾಂಸಾಹಾರ; ವೈಯಕ್ತಿಕ ನಿಲುವುಗಳನ್ನು ಇಲ್ಲಿ ದಾಖಲಿಸುವುದಕ್ಕಿಂತ ಈ ದೇಶದ ಅಪ್ರತಿಮ ವಿಚಾರವಾದಿ ಬಾಬಾಸಾಹೇಬ್ ಅಂಬೇಡ್ಕರರ ಚಿಂತನೆಗಳನ್ನು ದಾಖಲಿಸುವುದು ಸೂಕ್ತ ಎನಿಸುತ್ತದೆ. ಯಾಕೆಂದರೆ ಹಾಲಿ ಉತ್ತರ ಪ್ರದೇಶದಲ್ಲಿ ಅಲ್ಲಿಯ ಹಿಂದುತ್ವವಾದಿ ಯೋಗಿ ಆದಿತ್ಯನಾಥ್ ಸರಕಾರ ರಾಜ್ಯದ ಎಲ್ಲ ಕಸಾಯಿಖಾನೆಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಅದೇ ಕೇಸರಿವಾದಿಗಳಿಗೆ ನೀವು ಅದೆಷ್ಟು ಮಾಂಸ ತಿಂದಿದ್ದೀರಿ ಎಂದು ಜ್ಞಾಪಿಸಿಕೊಡಬೇಕಿದೆ ಮತ್ತು ಅಂಬೇಡ್ಕರರ ಬರಹಗಳು ಈ ಕಾರಣಕ್ಕೆ ಪ್ರಸ್ತುತವಾಗುತ್ತವೆ.
ಅಂಬೇಡ್ಕರರು ತಮ್ಮ ಕೃತಿ ‘Riddles in Hinduism(ಹಿಂದೂಧರ್ಮದಲ್ಲಿನ ಒಗಟುಗಳು)’ನಲ್ಲಿ ಬರೆಯುತ್ತಾರೆ ‘‘(ಹಿಂದೂಗಳಲ್ಲಿ) ಕಂಡುಬಂದಿರುವ ಅತಿ ದೊಡ್ಡ ಪರಿವರ್ತನೆ ಎಂದರೆ ಆಹಾರ ಪದ್ಧತಿಯದ್ದಾಗಿದೆ. ನಿಜ, ಈಗಿನ ಹಿಂದೂಗಳು ತಮ್ಮ ಆಹಾರ ಪದ್ಧತಿಯ ಬಗ್ಗೆ ಬಹಳ ಎಚ್ಚರಿಕೆಯಿಂದ ಇರುವವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಹಾರಸೇವನೆಯ ಬಗ್ಗೆ ಹಿಂದೂಗಳಲ್ಲಿ ಎರಡು ಬಗೆಯ ನಿರ್ಬಂಧಗಳಿವೆ. ಅವುಗಳೆಂದರೆ, ಯಾವ ಹಿಂದುವೂ ಹಿಂದೂಯೇತರನಿಂದ ತಯಾರಿಸಿದ ಆಹಾರವನ್ನು ಸೇವಿಸುವುದಿಲ್ಲ. ಹಾಗೆಯೇ ಹಿಂದೂವೊಬ್ಬ ಬ್ರಾಹ್ಮಣ ಅಥವಾ ತನ್ನ ಜಾತಿಯವನನ್ನು ಹೊರತುಪಡಿಸಿ ಬೇರೆ ಯಾರೇ ಹಿಂದೂ ಆಹಾರ ತಯಾರಿಸಿದರೂ ತಿನ್ನುವುದಿಲ್ಲ. ಈ ದಿಸೆಯಲ್ಲಿ ಹಿಂದೂವೊಬ್ಬ ತಾನು ಯಾರ ಆಹಾರ ಸೇವಿಸಬೇಕು ಎಂಬ ಬಗ್ಗೆಯಷ್ಟೆ ಅಲ್ಲ, ಯಾವ ಆಹಾರ ತಿನ್ನಬೇಕು ಎಂಬುದರ ಬಗ್ಗೆಯೂ ನಿರ್ದಿಷ್ಟತೆ ಹೊಂದಿರುತ್ತಾನೆ. ಆದ್ದರಿಂದ ಆಹಾರ ಪದ್ಧತಿಯ ದೃಷ್ಟಿಯಿಂದ ಹಿಂದೂಗಳನ್ನು ಎರಡು ಪ್ರಮುಖ ಗುಂಪುಗಳನ್ನಾಗಿ ವಿಭಾಗಿಸಬಹುದು.
1.ಸಸ್ಯಾಹಾರಿಗಳು. 2.ಮಾಂಸಾಹಾರಿಗಳು.
ಮಾಂಸಾಹಾರಿಗಳನ್ನು ಮತ್ತೂ ಎರಡು ವಿಭಾಗಗಳಾಗಿ ವಿಭಜಿಸಬಹುದು.
1.ಎಲ್ಲ ರೀತಿಯ ಮಾಂಸ ಮತ್ತು ಮೀನನ್ನು ತಿನ್ನುವವರು. 2.ಮೀನನ್ನು ಮಾತ್ರ ತಿನ್ನುವವರು.
ಮುಂದುವರಿದು ಮಾಂಸ ತಿನ್ನುವವರನ್ನು ಈ ಕೆಳಗಿನಂತೆ ವಿಭಾಗಿಸಬಹುದು.
1.ಹಸುವಿನ ಮಾಂಸ ಬಿಟ್ಟು ಎಲ್ಲಾ ರೀತಿಯ ಮಾಂಸ ತಿನ್ನುವವರು.
2.ಹಸುವಿನ ಮಾಂಸವನ್ನೊಳಗೊಂಡಂತೆ ಎಲ್ಲ ರೀತಿಯ ಮಾಂಸ ತಿನ್ನುವವರು.
3.ಕೋಳಿ ಅಥವಾ ಹಸುವಿನ ಮಾಂಸ ಹೊರತುಪಡಿಸಿ ಇತರ ಮಾಂಸ ತಿನ್ನುವವರು.’’
ಹೀಗೆ ಅಂಬೇಡ್ಕರರು ಹಿಂದೂಗಳ ಮಾಂಸಾಹಾರದ ಬಗ್ಗೆ ವಿವರ ದಾಖಲಿಸುತ್ತಾರೆ.
ಮುಂದುವರಿದು ಅವರು ಹೇಳುತ್ತಾರೆ,‘‘ಆಹಾರ ಪದ್ಧತಿಯ ಆಧಾರದಲ್ಲಿ ಹೀಗೆ ಹಿಂದೂಗಳನ್ನು ವರ್ಗೀಕರಿಸುವ ಹಾದಿಯಲ್ಲಿ ನಾವು ಬ್ರಾಹ್ಮಣರನ್ನು ಮತ್ತೂ ಎರಡು ವರ್ಗಗಳಾಗಿ ವಿಂಗಡಿಸಬಹುದು.
1.ಪಂಚಗೌಡ. 2.ಪಂಚದ್ರಾವಿಡ. ಈ ಇಬ್ಬರಲ್ಲಿ ಪಂಚದ್ರಾವಿಡರು ಸಂಪೂರ್ಣ ಸಸ್ಯಾಹಾರಿಗಳು.
ಆದರೆ ಪಂಚಗೌಡರಲ್ಲಿ ಸಂಪೂರ್ಣ ಸಸ್ಯಾಹಾರಿಗಳಾದ ಗೌಡ ಸಾರಸ್ವತರನ್ನು ಹೊರತುಪಡಿಸಿ ಇತರರು ಮಾಂಸಾಹಾರಿಗಳು. ಅಂದಹಾಗೆ ಹಿಂದೂ ಸಮಾಜದ ಮತ್ತೊಂದು ತುದಿಯವರಾದ ಅಸ್ಪಶ್ಯರು ಸಂಪೂರ್ಣ ಮಾಂಸಾಹಾರಿಗಳು. ಹೇಗೆಂದರೆ ಅಸ್ಪಶ್ಯರು ಪಕ್ಷಿ ಮತ್ತು ಆಡಿನ ಮಾಂಸವಲ್ಲದೆ ಹಸುವಿನ ಮಾಂಸ ಅದು ಕುಯ್ದದ್ದಾಗಿರಲಿ ಅಥವಾ ಸತ್ತದ್ದಾಗಿರಲಿ ತಿನ್ನುತ್ತಾರೆ. ಈ ನಡುವೆ ಅಸ್ಪಶ್ಯರು ಮತ್ತು ಬ್ರಾಹ್ಮಣರ ನಡುವೆ ಬರುವ ಬ್ರಾಹ್ಮಣೇತರರು ಮಾಂಸ ತಿನ್ನುವುದರಲ್ಲಿ ವೈವಿಧ್ಯಮಯ ರೀತಿಯನ್ನು ಹೊಂದಿದ್ದಾರೆ. ಇವರಲ್ಲಿ ಕೆಲವರು ಬ್ರಾಹ್ಮಣರ ರೀತಿ ಸಸ್ಯಾಹಾರಿಗಳಾದರೆ ಇತರರು ಬ್ರಾಹ್ಮಣರ ರೀತಿಗೆ ವಿರುದ್ಧವಾಗಿ ಮಾಂಸಾಹಾರಿಗಳಾಗಿದ್ದಾರೆ. ಆದರೆ ಇವರೆಲ್ಲ ಒಂದು ವಿಷಯದಲ್ಲಿ ಸಾಮ್ಯತೆ ಹೊಂದಿದ್ದಾರೆ ಅದು ಇವರೆಲ್ಲ ಹಸುವಿನ ಮಾಂಸ ತಿನ್ನುುದರ ವಿರುದ್ಧವಿದ್ದಾರೆ ಎಂಬುದು’’.
ಮುಂದುವರಿದು ಅಂಬೇಡ್ಕರರು ಹೇಳುತ್ತಾರೆ ‘‘...ಅಂದಹಾಗೆ ಸಸ್ಯಾಹಾರಿ ಪದ್ಧತಿ ಭಾರತಕ್ಕೆ ಯಾವಾಗ ಬಂದಿತು? ಅಹಿಂಸೆ ಭಾರತದಲ್ಲಿ ಒಂದು ಸ್ಥಾಪಿತ ನಂಬಿಕೆಯಾದದ್ದು ಯಾವಾಗ? ಕೆಲವು ಹಿಂದೂಗಳು ಇಂತಹ ಪ್ರಶ್ನೆಗಳ ಋಜುತ್ವವನ್ನು ಅರ್ಥಮಾಡಿಕೊಳ್ಳುವುದಿಲ್ಲ ಬದಲಿಗೆ ಅವರು ಅಹಿಂಸೆ ಮತ್ತು ಸಸ್ಯಾಹಾರ ಭಾರತಕ್ಕೆ ಹೊಸದೇನಲ್ಲ ಎಂದು ಸುಖಾಸುಮ್ಮನೆ ಹೇಳುತ್ತಾರೆ. ಆದರೆ ವಾಸ್ತವ ಏನೆಂದರೆ ಈಗಿನ ಹಿಂದೂಗಳ ಪೂರ್ವಿಕರಾದ ಪ್ರಾಚೀನ ಆರ್ಯರು ಮಾಂಸಾಹಾರಿಗಳಾಗಿದ್ದಷ್ಟೆ ಅಲ್ಲ ಹಸುವಿನ ಮಾಂಸವನ್ನೂ ತಿನ್ನುತ್ತಿದ್ದರೆಂಬುದಕ್ಕೆ ಯಥೇಚ್ಚ ಸಾಕ್ಷಿಗಳಿವೆ! ಈ ಹಿನ್ನೆಲೆಯಲ್ಲಿ ಆರ್ಯರ ಮಾಂಸಾಹಾರದ ವಿಚಾರವನ್ನು ಬೆಂಬಲಿಸಲು ಸಾಕ್ಷಿಯಾಗಿ ಈ ಕೆಳಗಿನ ಅಂಶದತ್ತ ಗಮನಹರಿಸುವುದು ಸೂಕ್ತ ಏಕೆಂದರೆ ಅದು ವಿವಾದಾತೀತವಾಗಿದೆ... ಈ ನಿಟ್ಟಿನಲ್ಲಿ ಮಧುಪರ್ಕದ ವಿವರಣೆಯನ್ನು ತೆಗೆದುಕೊಳ್ಳುವುದಾದರೆ...’’
ಕಾನೂನಿನಲ್ಲಿ ಬ್ಯಾರಿಸ್ಟರ್ ಪದವಿ ಪುರಸ್ಕೃತ ಅಂಬೇಡ್ಕರರು ಹೀಗೆ ‘ಮಧುಪರ್ಕ’ ಎಂಬ ಸೂಕ್ತ ಸಾಕ್ಷಿ ಹೆಕ್ಕಿ ತೆಗೆದು ಮಾಂಸಾಹಾರ ಪ್ರಕರಣದಲ್ಲಿ ಹಿಂದೂಗಳನ್ನು ಪಾಟೀ ಸವಾಲಿಗೆ ಗುರಿಪಡಿಸುತ್ತಾರೆ. ಅಂಬೇಡ್ಕರರು ಹೇಳುತ್ತಾರೆ, ‘‘ಪ್ರಾಚೀನ ಆರ್ಯರಲ್ಲಿ ಅತಿಥಿಗಳು ಮನೆಗೆ ಬಂದಾಗ ಅವರನ್ನು ಸ್ವಾಗತಿಸಲು ‘ಮಧುಪರ್ಕ’ ಅರ್ಪಿಸುತ್ತಿದ್ದ ಒಂದು ಸ್ಥಾಪಿತ ಪದ್ಧತಿಯಿತ್ತು. ಇದರ ಪರಿಪೂರ್ಣ ವಿವರಣೆಯನ್ನು ನಾವು ವಿವಿಧ ಗೃಹ್ಯಸೂತ್ರಗಳಲ್ಲಿ ಸವಿವರವಾಗಿ ಕಾಣಬಹುದು. ಬಹುತೇಕ ಗೃಹ್ಯಸೂತ್ರಗಳ ಪ್ರಕಾರ ಮಧುಪರ್ಕ ಪಡೆಯಲು ಆರು ವ್ಯಕ್ತಿಗಳು ಅರ್ಹರಾಗಿದ್ದರು. ಅವರೆಂದರೆ 1.ಋತ್ವಿಜ ಅಥವಾ ಬಲಿಯನ್ನು ನೆರವೇರಿಸಲು ಅರ್ಹನಾದ ಬ್ರಾಹ್ಮಣ 2.ಆಚಾರ್ಯ ಅಥವಾ ಗುರು 3. ವರ 4.ರಾಜ 5.ಆಗ ತಾನೇ ಗುರುಕುಲದಲ್ಲಿ ಶಿಕ್ಷಣ ಮುಗಿಸಿ ಬಂದ ಸ್ನಾತಕ.
ಋತ್ವಿಜ, ರಾಜ ಮತ್ತು ಆಚಾರ್ಯರನ್ನು ಹೊರತುಪಡಿಸಿ ಇತರರಿಗೆ ವರ್ಷಕ್ಕೊಮ್ಮೆ ಮಧುಪರ್ಕ ಅರ್ಪಿಸಲಾಗುತ್ತಿತ್ತು. ಆದರೆ ಋತ್ವಿಜ, ರಾಜ ಮತ್ತು ಆಚಾರ್ಯರಿಗೆ ಅವರು ಮನೆಗೆ ಯಾವಾಗ ಬಂದರೂ ಮಧುಪರ್ಕವನ್ನು ಅರ್ಪಿಸಲಾಗುತ್ತಿತ್ತು. ಹೀಗೆ ಮಧುಪರ್ಕ ಅರ್ಪಿಸಲಾಗುತ್ತಿದ್ದ ಆ ಪದ್ಧತಿಯಲ್ಲಿ ಮೊದಲಿಗೆ ಅತಿಥಿಯ ಪಾದ ತೊಳೆಯಲಾಗುತ್ತಿತ್ತು. ನಂತರ ಮಧುಪರ್ಕದ ಅರ್ಪಣೆ, ತದನಂತರ ವೇದಘೋಷಣೆಗಳ ನಡುವೆ ಅತಿಥಿಗಳು ಅದನ್ನು ಸೇವಿಸುವುದಾಗಿತ್ತು. ಹಾಗಿದ್ದರೆ ‘ಮಧುಪರ್ಕ’ದಲ್ಲಿ ಅಂತಹದ್ದೇನಿತ್ತು? ಸಾಹಿತ್ಯಕವಾಗಿ ‘ಮಧುಪರ್ಕ’ ಎಂದರೆ ವ್ಯಕ್ತಿಯೋರ್ವನ ಅಂಗೈ ಮೇಲೆ ಜೇನು ತುಪ್ಪವನ್ನು ಸುರಿಯುವುದು ಅಥವಾ ಚಿಮುಕಿಸುವುದಾಗಿತ್ತು.
ಈ ನಿಟ್ಟಿನಲ್ಲಿ ಮೂಲದಲ್ಲಿ ಮಧುಪರ್ಕ ಹೀಗೆಯೇ ಇತ್ತು! ಆದರೆ ಸಮಯ ಕಳೆದಂತೆ ಅದರಲ್ಲಿ ಸೇರಿಸುವಂತಹ ಘಟಕ ಅಂಶಗಳು ಜೇನುತುಪ್ಪವನ್ನು ಮೀರಿ ಬೆಳೆಯುತ್ತಾ ಹೋದವು! ಒಂದು ಹಂತದಲ್ಲಿ ಅದು ಜೇನು, ಮೊಸರು ಮತ್ತು ಬೆಣ್ಣೆ ಹೀಗೆ ಮೂರು ಘಟಕಾಂಶಗಳನ್ನು ಒಳಗೊಂಡಿತ್ತು. ನಂತರ ಅದು ಜೇನು, ಮೊಸರು, ತುಪ್ಪ, ಯವ ಮತ್ತು ಬಾರ್ಲಿ ಹೀಗೆ 5 ಘಟಕಾಂಶಗಳನ್ನು ಒಳಗೊಂಡಿತು. ತದನಂತರದ ಕಾಲದಲ್ಲಿ ಅದು ಒಂಬತ್ತು ವಸ್ತುಗಳ ಮಿಶ್ರಣವಾಯಿತು. ಈ ಹಿನ್ನೆಲೆಯಲ್ಲಿ ಕೌಶಿಕ ಸೂತ್ರ ಮಧುಪರ್ಕ ಒಳಗೊಂಡಿದ್ದ ಆ ಒಂಬತ್ತು ವಸ್ತುಗಳ ವಿವರಣೆಯನ್ನು ಸ್ಪಷ್ಟವಾಗಿ ನೀಡುತ್ತದೆ. ಮುಂದುವರಿದು ಮಾನವ ಧರ್ಮಸೂತ್ರದ ಮತ್ತೊಂದು ಕಾಲ ಬಂತು.
ಅದು (ಮಾನವ ಧರ್ಮಸೂತ್ರ) ಹೇಳಿದ್ದೇನೆಂದರೆ ‘‘ವೇದ ಆದೇಶಿಸುತ್ತದೆ ಮಾಂಸವಿಲ್ಲದೆ ಮಧುಪರ್ಕವನ್ನು ತಯಾರಿಸಬಾರದು’’ ಎಂದು. ಈ ಹಿನ್ನೆಲೆಯಲ್ಲಿ ಅದು ಶಿಫಾರಸು ಮಾಡಿದ್ದೇನೆಂದರೆ ‘‘ಹಸು ಏನಾದರೂ ಹೊರಗಡೆ ಹೋಗಿದ್ದರೆ ಆಡಿನ ಮಾಂಸ ಅಥವಾ ಪಾಯಸವನ್ನು ಮಧುಪರ್ಕದಲ್ಲಿ ಅರ್ಪಿಸಬೇಕು’’. ಈ ಸಂದರ್ಭದಲ್ಲಿ ಹಿರಣ್ಯಕ ಗೃಹ್ಯಸೂತ್ರ ಹೇಳಿದ್ದು ‘‘ಬೇರೆ ಬಗೆಯ ಮಾಂಸವನ್ನು ಕೂಡ ಮಧುಪರ್ಕದಲ್ಲಿ ಅರ್ಪಿಸಬಹುದು’’ ಎಂದು. ಮುಂದುವರಿದು ಬಾದರಾಯಣ ಗೃಹ್ಯಸೂತ್ರ ಹೇಳಿದ್ದು ಹಸುವೇನಾದರೂ ತಪ್ಪಿಸಿಕೊಂಡು ಹೋಗಿದ್ದರೆ ಮಾಂಸರಹಿತವಾಗಿ ಮಧುಪರ್ಕ ಸಾಧ್ಯವಿಲ್ಲದಿದ್ದರಿಂದ ಆಡು ಅಥವಾ ಕುರಿಯ ಮಾಂಸ ಅಥವಾ ಜಿಂಕೆಯಂತಹ ಇನ್ಯಾವುದಾದರೂ ಕಾಡಿನ ಪ್ರಾಣಿಯ ಮಾಂಸವನ್ನು ಅರ್ಪಿಸಬಹುದು.
ಅಂದಹಾಗೆ ಮಾಂಸವನ್ನು ಅರ್ಪಿಸಲು ಯಾರಿಗಾದರೂ ಅಸಾಧ್ಯವಾದರೆ ಅಂತಹವರು ಧಾನ್ಯದ ಹಿಟ್ಟನ್ನು ಬೇಯಿಸಿ ಮಧುಪರ್ಕದಲ್ಲಿ ಅರ್ಪಿಸಬಹುದು. ಒಟ್ಟಾರೆ ಅಂತಿಮ ಹಂತದಲ್ಲಿ ಮಾಂಸ ಮಧುಪರ್ಕದ ಅತ್ಯಗತ್ಯ ಭಾಗವಾಯಿತು. ನಿಜ ಹೇಳಬೇಕೆಂದರೆ ಮತ್ತೂ ಮುಂದುವರಿದು ಕೆಲ ಗೃಹ್ಯಸೂತ್ರಗಳು ಯಾವ ಹಂತಕ್ಕೆ ತಮ್ಮ ಹೇಳಿಕೆಯನ್ನು ಕೊಂಡೊಯ್ದವೆಂದರೆ ‘‘ಮಾಂಸವಿಲ್ಲದ ಮಧುಪರ್ಕ ಸಾಧ್ಯವೇ ಇಲ್ಲ’’ ಮತ್ತು ಇದಕ್ಕೆ ಅವುಗಳು ಇಟ್ಟುಕೊಂಡ ಆಧಾರ ಋಗ್ವೇದದ ಒಂದು ಆಜ್ಞೆಯಾಗಿತ್ತು. ಅಂದಹಾಗೆ ಋಗ್ವೇದದ ಆ ಕಟ್ಟಾಜ್ಞೆ ಹೇಳಿದ್ದೇನೆಂದರೆ ‘‘ಮಾಂಸರಹಿತವಾಗಿ ಮಧುಪರ್ಕ ಮಾಡಬಾರದು!’’.
(Riddles in Hinduism by Babasaheb Ambedkar, Pp.112). ಹೌದು, ಅಂಬೇಡ್ಕರರ ಈ ಬರಹಗಳ ಮೂಲಕ ನಮಗೆ ಅರ್ಥವಾಗುವುದು ಮಾಂಸಾಹಾರ ಈಗಿನ ಹಿಂದೂಗಳ ಪ್ರಾಚೀನ ವಂಶಸ್ಥರಾದ ಆರ್ಯರ ಆಹಾರ ಪದ್ಧತಿಯ ಬಹುಮುಖ್ಯ ಭಾಗವಾಗಿತ್ತು ಎಂಬುದು. ಒಟ್ಟಾರೆ ಇತಿಹಾಸದ ವಾಸ್ತವ ಹೀಗಿರುವಾಗ ಸದ್ಯ ಹಿಂದುತ್ವವಾದಿಗಳು ಕಸಾಯಿಖಾನೆಗಳನ್ನು ಆ ಮೂಲಕ ಮಾಂಸಾಹಾರವನ್ನು ಬಂದ್ ಮಾಡುವುದರಲ್ಲಿ ಅರ್ಥವಾದರೂ ಏನಿದೆ? ಈ ನಿಟ್ಟಿನಲ್ಲಿ ಹಿಂದುತ್ವವಾದಿಗಳು ತಮ್ಮ ಆಹಾರಪದ್ಧತಿಯ ಇತಿಹಾಸವನ್ನು ಒಮ್ಮೆ ಅವಲೋಕಿಸಲಿ. ಆ ಮೂಲಕ ಇತರರ ಆಹಾರ ಪದ್ಧತಿಯನ್ನು ಗೌರವಿಸುವಂತಾಗಲಿ ಎಂಬುದೇ ಸದ್ಯದ ಕಳಕಳಿ.