ಬದುಕಿನ ಪಥ ಬದಲಾಯಿಸಿದ ಅಚಲ ನಿರ್ಧಾರ
ಉರ್ವಸ್ಟೋರ್ ಈಗ ನನಗೆ ತವರೂರು. ಕೋಟೆಕಾರು ಎನ್ನುವ ಊರು ನನಗೆ ಹೊಸತಲ್ಲ. ಯಾಕೆಂದರೆ ನನ್ನ ಅಪ್ಪನ ಹುಟ್ಟೂರು ಕೋಟೆಕಾರು ಗ್ರಾಮದ ಕೊಂಡಾಣ. ಉಳ್ಳಾಲ ರೈಲ್ವೆ ಸ್ಟೇಷನ್‌ನಿಂದ ಕೊಂಡಾಣಕ್ಕೆ ನಡೆದೇ ಹೋಗುವ ಅಂದಿನ ದಿನಗಳಲ್ಲಿ ಕೋಟೆಕಾರು ಕೊಂಡಾಣ ಎರಡೂ ಒಂದೇ ಆಗಿದ್ದ ಊರು. ಅಂದು ರೈಲು ದಾರಿ ಮಾತ್ರ ಇದ್ದುದು. ಸ್ವಾತಂತ್ರಪೂರ್ವ ಕಾಲದ್ದು. ಜೊತೆಗೆ ಮಂಗಳೂರು ಬಂದರಿಗೆ ವ್ಯಾಪಾರಕ್ಕಾಗಿ ಬರುವವರಿಗೆ ಇದ್ದುದು ದೋಣಿಯ ಪಯಣ. ಅಕ್ಕಿ, ಕರಿ ಮೆಣಸು, ಹರೇಕಳದ ಕೆಂಪು ಮೆಣಸು, ತರಕಾರಿಗಳೆಲ್ಲಾ ದೋಣಿಯ ಮೂಲಕವೇ ಮಂಗಳೂರಿನ ಪೇಟೆಯನ್ನು ತಲುಪುತ್ತಿತ್ತು. ನಾನು ಕೂಡಾ ಶಾಲೆಯ ಪ್ರವಾಸದಲ್ಲಿ ಈ ದೋಣಿಯ ಮೂಲಕವೇ ಉಳ್ಳಾಲದ ದರ್ಗಾ, ಉಳ್ಳಾಲ ಕಾಪಿಕಾಡಿನಲ್ಲಿದ್ದ ಗೇರು ಬೀಜ ಸಂಶೋಧನಾ ಕೇಂದ್ರ, ಸೋಮೇಶ್ವರದ ದೇವಸ್ಥಾನ, ರುದ್ರಶಿಲೆಯಿರುವ ಸಮುದ್ರ ತೀರ ನೋಡಿದ್ದೆ.
ಆದರೆ, ಊರಿಗೆ ಹೋಗುವಾಗಲೆಲ್ಲಾ ರೈಲು ಪ್ರಯಾಣವೇ. ಆಗ ನಿಜವಾಗಲೂ ಉಳ್ಳಾಲ, ಕೋಟೆಕಾರು, ಕೊಂಡಾಣಗಳೆಲ್ಲಾ ಯು.ಎಸ್.ಎ.ಯಷ್ಟೇ ದೂರ. ಈಗಲೂ ಈ ಪ್ರಯೋಗ ಇದೆ. ಅಂದರೆ ‘‘ಉಳ್ಳಾಲ ಸಂಕದ ಆಚೆಗೆ’’ ಎನ್ನುವುದು ಜನಪದರ ಪ್ರಯೋಗ. ಈಗ ನೇತ್ರಾವತಿಗೆ ಎರಡೆರಡು ಸಂಕ ಇದ್ದು ಕೋಟೆಕಾರು ಗ್ರಾಮ, ಕೊಣಾಜೆ ಗ್ರಾಮ, ತಲಪಾಡಿ ಗ್ರಾಮ, ಉಳ್ಳಾಲ ಗ್ರಾಮಗಳು ಮಾತ್ರವಲ್ಲ ಕೇರಳ ರಾಜ್ಯವೇ ಅದರಲ್ಲೂ ಕಾಸರಗೋಡು ಪ್ರಯಾಣದ ರೀತಿಯಲ್ಲಿ ಬಹಳ ಹತ್ತಿರವಾಗಿದೆ. ದಿನ ನಿತ್ಯ ಸಾವಿರಾರು ಜನರು ಮಂಗಳೂರಿಗೆ ಉದ್ಯೋಗಿಗಳಾಗಿ, ವ್ಯಾಪಾರಿಗಳಾಗಿ, ವಿದ್ಯಾರ್ಥಿಗಳಾಗಿ ಓಡಾಡುತ್ತಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಮಾತ್ರವಲ್ಲ, ನಿಟ್ಟೆ ವಿಶ್ವವಿದ್ಯಾನಿಲಯ, ಯೆನಪೊಯ ವಿಶ್ವವಿದ್ಯಾನಿಲಯಗಳ ಮೆಡಿಕಲ್ ಕಾಲೇಜುಗಳಲ್ಲದೆ, ಕಣಚ್ಚೂರು ಮೆಡಿಕಲ್ ಕಾಲೇಜು, ಅನೇಕ ಪಿಯು ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು ನಿರ್ಮಾಣಗೊಂಡು ಮಂಗಳೂರು ಪೇಟೆಯಿಂದಲೂ ಆ ಕಡೆಗೆ ಓಡಾಡುವ ಜನರು ಇಮ್ಮಡಿ ಸಂಖ್ಯೆಯಲ್ಲಿದ್ದಾರೆ. ಜೊತೆಗೆ ಆಸ್ಪತ್ರೆಗಳೂ ಇವೆ. ಇವೆಲ್ಲ ಇಂದು ಮಂಗಳೂರು ಎನ್ನುವ ಹೆಸರಿನೊಳಗೆ ಸೇರಿ ಹೋಗಿದೆ.
ಕೊಂಡಾಣದ ಕೃಷಿಕರ ತುಂಬು ಕುಟುಂಬದ ಮನೆಯಲ್ಲಿ ಹುಟ್ಟಿದ ನನ್ನ ಅಪ್ಪ ಪಣೀರು ಶಾಲೆಯಲ್ಲಿ ಪ್ರಾರಂಭದ ತರಗತಿಗಳನ್ನು ಮುಗಿಸಿ ಮುಂದೆ ಕೋಟೆಕಾರು ಶಾಲೆಯಲ್ಲಿ ಮುಲ್ಕಿ ಪರೀಕ್ಷೆ ಉತ್ತೀರ್ಣರಾಗಿ ಬೆಳ್ಮ ದೇರಳಕಟ್ಟೆಯ ಶಾಲೆ ಅಂದರೆ ನನ್ನ ದೊಡ್ಡಪ್ಪ ಕೊಂಡಾಣ ನಾರಾಯಣ ಮಾಸ್ಟ್ರ ಶಾಲೆಯಲ್ಲಿ ತರಬೇತಿ ಇಲ್ಲದ ಅಧ್ಯಾಪಕರಾಗಿ ಕೆಲಸ ಮಾಡಿ ಮುಂದೆ ಮಂಗಳೂರಲ್ಲಿ ಶಿಕ್ಷಕ ತರಬೇತಿ ಪಡೆದು ಮಂಗಳೂರಲ್ಲೇ ಅಧ್ಯಾಪಕರಾಗಿ ನಿವೃತ್ತಿ ಹೊಂದಿದವರು.
ಮಂಗಳೂರಲ್ಲೇ ಇದ್ದರೂ ವಾರದ ಕೊನೆಯಲ್ಲಿ ಊರಿಗೆ ಬಹಳ ವರ್ಷಗಳ ವರೆಗೆ ಹೋಗಿ ಬರುವ ಅಭ್ಯಾಸ ಇಟ್ಟುಕೊಂಡವರು. ಈ ಕಾರಣದಿಂದ ಕೊಂಡಾಣ ನನಗೂ ಹುಟ್ಟೂರೇ ಎನ್ನುವಷ್ಟು ಸಮೀಪ. ಜೊತೆಗೆ ನನ್ನ ಹೆಸರಲ್ಲೂ ಕೊಂಡಾಣ ಸೇರಿಕೊಂಡಿತ್ತು. ಉಳ್ಳಾಲ ರೈಲ್ವೆ ಸ್ಟೇಷನ್‌ನಿಂದ ಇಳಿದು ಕೊಂಡಾಣದ ಮನೆಗೆ ಹೋಗಲು ಹಲವು ದಾರಿಗಳು. ಬಹುಶಃ ಉದ್ದದ ರೈಲಿನಲ್ಲಿ ನಾವಿದ್ದ ಬೋಗಿಯಿಂದ ಇಳಿದಾಗ ಪೂರ್ವದಿಕ್ಕಿನಲ್ಲಿ ಯಾವುದು ಹತ್ತಿರದ ದಾರಿಯೋ ಆ ದಾರಿಯಲ್ಲಿ ಹೋಗುತ್ತಿದ್ದಿರಬೇಕು. ಅದು ಸೋಮೇಶ್ವರದ ತುದಿಯಿಂದ ಸ್ಟೆಲ್ಲಾ ಮೇರೀಸ್ ಶಾಲೆಯ ಪಕ್ಕದ ವರೆಗಿನ ಉದ್ದ. ಸೋಮೇಶ್ವರದಲ್ಲಿ ಇಳಿದರೆ ಅಮೃತ ಸೋಮೇಶ್ವರರ ಮನೆ, ಉಳ್ಳಾಲ ಮೋಹನ ಮಾಸ್ಟ್ರ ಮನೆಗಳನ್ನು ದಾಟಿ ಸುಂದರರಾಯರು, ರಮೇಶ್‌ರಾಯರು, ನಾಗೇಶ್‌ರಾಯರೆಂಬ ಸಹೋದರರ ಹಿರಿಯ ಮನೆ ದಾಟಿ ಹೋಗುತ್ತಿದ್ದ ದಾರಿ ಒಂದು. ಇವರಲ್ಲಿ ರಮೇಶ್‌ರಾಯರು ಅಪ್ಪನ ಸಹಪಾಠಿ ಹಾಗೂ ಸ್ನೇಹಿತರಾಗಿದ್ದರು.
ಅಪ್ಪ ಕಲಿತ ಶಾಲೆ ಕೋಟೆಕಾರು ಹಿರಿಯ ಪ್ರಾಥಮಿಕ ಶಾಲೆ ಅವರ ಕುಟುಂಬದವರ ಆಡಳಿತದ ಶಾಲೆಯಾಗಿತ್ತು. ಸ್ಟೆಲ್ಲಾ ಮೇರೀಸ್ ಶಾಲೆಯ ಎದುರಲ್ಲಿ ಇಳಿದರೆ ಕೋಟೆಕಾರು ಬೀರಿ ಜಂಕ್ಷನ್‌ಗೆ ಬಂದು ಅಲ್ಲಿಂದ ಕಾಟಾರ್ ಸಂಕ ಎಂಬಲ್ಲಿ ಮುಂದೆ ಸಾಗಿ ಹೋಗುವಾಗ ಸೇನರ ಮನೆ ಅಂದರೆ ಸತ್ಯಶಂಕರ ಬೊಳ್ಳಾವರ ಮನೆ ದಾಟಿ ಹೋಗುತ್ತಿದ್ದೆವು. ಹೀಗೆ ದಾಟಿ ಹೋಗುವಾಗ ಸಿಗುವ ಮನೆಗಳೆಲ್ಲಾ ಪರಿಚಿತ ಮನೆಗಳೇ. ಅವರಲ್ಲೆಲ್ಲಾ ಉಭಯ ಕುಶಲೋಪರಿಯ ಮಾತುಗಳನ್ನಾಡಿಯೇ ಮುಂದಿನ ನಡಿಗೆ. ಹಾಗೇ ಮುಂದೆ ಹೋದಾಗ ಮಾಡೂರಿನಲ್ಲಿ ಡಿಸೋಜರ ಬೇಕರಿಯಲ್ಲಿ ಒಂದಿಷ್ಟು ಹೊತ್ತು ಕುಳಿತು ದಣಿವಾರಿಸಿಕೊಂಡು, ಅವರು ನೀಡುತ್ತಿದ್ದ ಸೋಡಾ ಕುಡಿದು ಅವರ ಮನೆ ಮಂದಿಯಲ್ಲೂ ಮಾತನಾಡಿ ಮುಂದೆ ಗುಡ್ಡೆ ಏರಿ, ಬಯಲು, ತೋಡುಗಳನ್ನು ದಾಟಿದರೆ ಕೊಂಡಾಣ ಮನೆ ಬರುತ್ತಿತ್ತು. ಹೀಗೆ ಹೋಗುವಾಗ ಒಮ್ಮಿಮ್ಮೆ ಪಣೀರು ಚರ್ಚ್ ಬಳಿಯಿಂದಲೂ ಹೋಗುವುದಿತ್ತು. ಹೀಗೆ ದಾರಿ ನಡೆವಾಗ ಸಿಗುವ ಇನ್ನೆಷ್ಟೋ ಮನೆಗಳ ಮಂದಿಯಲ್ಲಿಯೂ ಮಾತನಾಡಿ ಮನೆ ಸೇರುವಾಗ ಬಹಳ ತಡವಾಗುತ್ತಿತ್ತು. ನಾವು ಮನೆ ಸೇರುವಷ್ಟರಲ್ಲಿ ಉಳಿದವರು ಯಾರಾದರೂ ನಮಗಿಂತ ಮೊದಲೇ ಆ ದಾರಿಯಲ್ಲಿ ಹೋದವರು ನಾವು ಬರುತ್ತಿರುವ ಸುದ್ದಿ ತಲುಪಿಸಿರುತ್ತಿದ್ದರು.
ನಾವು ಮನೆ ಸೇರಿದಾಗ ನಮ್ಮ ಅಜ್ಜ ತಮಾಷೆ ಮಾಡುವುದಿತ್ತು. ‘‘ಸಾಂತರ ಮನೆಯವರು ನೀವು ಬರುವ ಸುದ್ದಿ ಹೇಳಿ ಹೋದವರು ಊಟ ಮಾಡಿ ಮಲಗಿ ಆಯ್ತೋ ಏನೋ? ನಿನ್ನ ಕಟ್ಟೆ ಪೂಜೆ ಮುಗಿದು ಬರಲು ಇಷ್ಟು ಹೊತ್ತು ಬೇಕಾಯ್ತು?’’ ಎಂದು. ಹೌದು ನಡಿಗೆ ಚುರುಕಾದುದೇ. ಆದರೆ ದಾರಿಯಲ್ಲಿ ಸಿಗುವ ಒಬ್ಬರನ್ನೂ ಬಿಡದೆ ಮಾತನಾಡಿಸುವ ಸ್ವಭಾವ ನಮ್ಮ ಅಪ್ಪನದು. ಹಾಗೆಯೇ ಊರಿನ ಮಂದಿಯೂ, ಅದರಲ್ಲೂ ಹಿರಿಯರು ಅಪ್ಪನನ್ನು, ನಮ್ಮನ್ನು ಕಾಣುತ್ತಿದ್ದ ಪ್ರೀತಿ ವಿಶ್ವಾಸಗಳೇ ಹಾಗೆ. ಅವರಿಗೆಲ್ಲಾ ನಮ್ಮೂರಿನ ಹುಡುಗ, ಶಾಲೆಗೆ ಹೋಗುವಾಗಿನಿಂದ ನೋಡಿದ, ನಮ್ಮ ಕಣ್ಣೆದುರು ಬೆಳೆದ ಹುಡುಗ ಈಗ ಶಾಲಾ ಶಿಕ್ಷಕನಾಗಿ, ಹರಿದಾಸನಾಗಿ, ಯಕ್ಷಗಾನ ಅರ್ಥಧಾರಿಯಾಗಿ ಬೆಳೆದು, ಗೃಹಸ್ಥ್ಥನಾಗಿ ಮಡದಿ ಮಕ್ಕಳ ಜೊತೆಗೆ ಊರಿಗೆ ಬರುವುದನ್ನು ನೋಡಲು, ಅವನಲ್ಲಿ ಮಾತನಾಡಲು ಊರಿಗೇ ಊರೇ ಸಂಭ್ರಮಪಡುತ್ತಿತ್ತು. ಹೀಗೆ ಊರಿಗೆ ಹೊರಟಾಗ ಸಿಗುವ ಮಂದಿಯಲ್ಲಿ ಇರುವ ಆತ್ಮೀಯತೆ ಒಂದು ತೆರನಾದರೆ ಅಪ್ಪ ಊರಿಗೆ ಹೋಗುವಾಗ ಅಥವಾ ಹಿಂದಿರುಗುವಾಗ ವರ್ಷದಲ್ಲಿ ಒಂದೆರಡು ಬಾರಿಯಾದರೂ ಭೇಟಿ ಕೊಡಲೇಬೇಕಾದ ಮನೆಯೊಂದಿತ್ತು.
ಅದು ಅಮ್ಮೆಂಬಳ ಶಂಕರ ನಾರಾಯಣ ನಾವಡರ ಮನೆ. ಅಪ್ಪನ ಗುರುಗಳ ಮನೆ. ನಾವಡರು ಅಪ್ಪನ ಸ್ವಯಂ ಕಲಿಕೆಯಾಗಿದ್ದ ಕನ್ನಡ ವಿದ್ವಾನ್ ಪರೀಕ್ಷೆಗೆ ಮನೆ ಪಾಠ ಮಾಡುತ್ತಿದ್ದರು. ಅಪ್ಪನ ಜೊತೆಗೆ ಇನ್ನೊಬ್ಬರು ಉಚ್ಚಿಲದವರೂ ಆದ ರಾಮಚಂದ್ರ ಉಚ್ಚಿಲ್ ಕಲಿಯುತ್ತಿದ್ದರು. ಇವರು ‘ಚರಾ’ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದರು. ಮುಂಬೈಯಲ್ಲಿ ಮುಂದೆ ಉದ್ಯೋಗಿಯಾಗಿದ್ದರು. ಸಾಹಿತ್ಯ ಮತ್ತು ಯಕ್ಷಗಾನ ಅವರ ಆಸಕ್ತಿ ಹಾಗೂ ಸಂಶೋಧನೆಯ ವಿಷಯಗಳಾಗಿದ್ದವು. ನಾವಡರ ಮನೆ ‘ಸಾಹಿತ್ಯಾಂಜಲಿ’ಯಲ್ಲಿ ಕೆಲವೊಮ್ಮೆ ವಿಶೇಷ ಕಾರ್ಯಕ್ರಮಗಳು ನಡೆದಾಗ ನಾವು ಮನೆ ಮಂದಿಯೆಲ್ಲ ಸೇರಿದಂತೆಯೇ ಇನ್ನಿತರ ಸಾಹಿತಿಗಳೂ ಸೇರುತ್ತಿದ್ದರು. ಅವರಲ್ಲಿ ಊರವರೇ ಆದ ಅಮೃತ ಸೋಮೇಶ್ವರರು ಮತ್ತು ಜೇಂಕಳ ಶ್ರೀನಿವಾಸ ಭಟ್ಟರು ಪ್ರಮುಖರು. ನಾವಡರು ನನ್ನ ಕಾಲೇಜಿನ ಆಡಳಿತ ಮಂಡಳಿಯಾದ ಸಾರಸ್ವತ ವಿದ್ಯಾ ಸಂಸ್ಥೆಗೆ ಒಳಪಟ್ಟ ಆನಂದಾಶ್ರಮ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದರು. ಅಮೃತ ಸೋಮೇಶ್ವರರು ಆನಂದಾಶ್ರಮ ಶಾಲೆಯಲ್ಲಿ ಅವರ ವಿದ್ಯಾರ್ಥಿಯಾಗಿದ್ದರು. ನನ್ನ ಅಪ್ಪನಿಗೂ ಅಮೃತ ಸೋಮೇಶ್ವರರ ಬಗ್ಗೆ ವಿಶೇಷ ಅಭಿಮಾನ. ರೈಲು ಇಳಿದು ಅಡ್ಕದಲ್ಲಿ ಹೋಗುವುದಾದರೆ ಅಮೃತರ ಅಮ್ಮ, ಅಕ್ಕ ಕಮಲಾ ಟೀಚರಲ್ಲಿ ಮಾತನಾಡಿ ಹೋಗುವುದಿತ್ತು.
ಅಮೃತರ ತಂದೆ ಮುಂಬೈಯಲ್ಲಿ ಉದ್ಯೋಗಿಯಾಗಿದ್ದರು. ಅಲ್ಲೇ ಪಕ್ಕದಲ್ಲೇ ಇನ್ನೊಂದು ಮನೆ ಉಳ್ಳಾಲ ಮೋಹನ ಮಾಸ್ಟರದ್ದು. ಇವರು ಭರತನಾಟ್ಯದ ಪ್ರಸಿದ್ಧ ಗುರುಗಳಲ್ಲದೆ ಪ್ರಾಥಮಿಕ ಶಾಲೆಯ ಶಿಕ್ಷಕರೂ ಆಗಿದ್ದರು. ಅಪ್ಪ, ಮೋಹನ ಮಾಸ್ಟ್ರು ನಮ್ಮ ದೊಡ್ಡಪ್ಪನ ಬೆಳ್ಮ ಶಾಲೆಯಲ್ಲಿ ಸಹೋದ್ಯೋಗಿಗಳಾಗಿದ್ದರು. ಹೀಗೆಯೇ ಬೀರಿಯಿಂದ ಮುಂದೆ ಸಾಗುವಾಗ ಸೋವುರು, ಜೇಂಕಳದ ಊರಲ್ಲಿ ಜೇಂಕಳ ಮನೆಯ ಹಿರಿಯರು. ಅವರಲ್ಲಿ ಮೂವರು ಕಿರಿಯರಲ್ಲಿ ಹಿರಿಯವರು ಜೇಂಕಳ ಶ್ರೀನಿವಾಸ ಭಟ್ಟರು. ಅವರ ತಮ್ಮ ಕೃಷ್ಣ ಭಟ್ಟರು, ಇನ್ನೊಬ್ಬ ತಮ್ಮ ಡಾ.ನಾರಾಯಣ ಭಟ್ಟರು. ಇವರೆಲ್ಲ ಅಪ್ಪನ ಆತ್ಮೀಯರೇ. ನಾವಡರು, ಜೇಂಕಳ ಶ್ರೀನಿವಾಸ ಭಟ್ಟರು ಹಾಗೂ ಅಮೃತ ಸೋಮೇಶ್ವರರು ಸೇರಿ ಕೋಟೆಕಾರು ಸಾಹಿತ್ಯ ಸಂಘ ಎಂಬ ಸಂಸ್ಥೆ ಹುಟ್ಟು ಹಾಕಿದ್ದರು.
ಈ ಸಂಘದ ಆಶ್ರಯದಲ್ಲಿ ಕಾರ್ಯಕ್ರಮಗಳಾದಾಗ ನಾವೂ ಹೋದದ್ದು ಇತ್ತು. 1976ರಲ್ಲಿ ‘ಅಮ್ಮೆಂಬಳರ ಅರುವತ್ತು’ ಎಂಬ ಕಾರ್ಯಕ್ರಮದಲ್ಲಿ ನಾನೂ ಭಾವಗೀತೆ ಹಾಡಿದ್ದೆ. ಹೀಗೆ ಅಪ್ಪನಿಗೆ ಕೊಂಡಾಣ ಮಾತ್ರವಲ್ಲದೆ ತಾನು ಓಡಾಡಿದ ಕೋಟೆಕಾರು, ಮಾಡೂರು, ಉಚ್ಚಿಲ, ಸಂಕೊಳಿಗೆ ತಲಪಾಡಿ ಇಲ್ಲೆಲ್ಲಾ ಸಹಪಾಠಿಗಳು, ಅಭಿಮಾನಿಗಳು, ಶಿಷ್ಯರೂ ಇದ್ದರು. ಇನ್ನೊಂದು ಮನೆ ನಾವು ಭೇಟಿ ಮಾಡುತ್ತಿದ್ದುದು ಕೋಟೆಕಾರು ಭಂಡಾರ ಮನೆ. ಇಲ್ಲಿ ಅಪ್ಪನ ಸಹಪಾಠಿಯಾಗಿದ್ದವರು ಮುಂದೆ ಸನ್ಯಾಸಿಗಳಾಗಿ ಉತ್ತರದ ಹಿಮಾಲಯದಲ್ಲಿ ಇದ್ದರು ಎನ್ನುವ ಮಾತು ಕೇಳಿದ್ದೆವು. ಒಂದು ವರ್ಷ ಅವರು ಊರಿಗೆ ತನ್ನ ಮನೆಗೆ ಬಂದಿದ್ದರು. ಆ ವರ್ಷ ಅವರ ಮನೆಯಲ್ಲಿ ಅಪ್ಪನಿಂದ ಹರಿಕತೆ ಮಾಡಿಸಿದ್ದರು. ನಾವೂ ಅವರ ಮನೆಗೆ ಆ ಕಾರ್ಯಕ್ರಮಕ್ಕೆ ಹೋದವರು ಅಲ್ಲಿಯೇ ಒಂದೆರಡು ದಿನ ತಂಗಿದ್ದ ನೆನಪು. ಆ ಸನ್ಯಾಸಿಗಳ ಹೆಸರು ಸದಾನಂದ ಸರಸ್ವತಿ ಎಂದು. ಅವರೂ ನಮ್ಮ ಮನೆಗೆ ಬಂದು ಒಂದು ದಿನ ತಂಗಿದ್ದರು.
ಅವರು ನನ್ನ ಅಪ್ಪ, ಕರುಣಾಕರ ಉಚ್ಚಿಲ್, ಮಂಜಯ್ಯ ಮೇಲಾಂಟ ಇವರು ನಾಲ್ವರು ಕೋಟೆಕಾರು ಶಾಲೆಯಲ್ಲಿ ಓದುತ್ತಿದ್ದ ದಿನಗಳಲ್ಲಿ ಗಾಂಧೀಜಿಯವರನ್ನು ನೋಡಲು ಅಧ್ಯಾಪಕರೊಂದಿಗೆ ಮಂಗಳೂರಿಗೆ ನಡೆದೇ ಬಂದ ಕತೆಯನ್ನು ಅಪ್ಪ ಹೇಳಿದ್ದರು. ಮುಂದೆ ಕರುಣಾಕರ ಉಚ್ಚಿಲರು ಉಚ್ಚಿಲದಲ್ಲಿ ಬಂದು ನೆಲೆಸಿದ ಬಳಿಕ ಈ ವಿಷಯದ ಸತ್ಯಾಸತ್ಯತೆ ಇನ್ನಷ್ಟು ಸ್ಪಷ್ಟವಾಗಿ ತಿಳಿಯಿತು. ಅಪ್ಪ ಸ್ವದೇಶಿ ಚಳವಳಿಯ ಸತ್ಯಾಗ್ರಹಿಯಾಗಿ ಖಾದಿ ಬಟ್ಟೆ ಧರಿಸಲು ಪ್ರಾರಂಭಿಸಿದವರು ಜೀವನದುದ್ದಕ್ಕೂ ಪಾಲಿಸಿದರು. ಗಾಂಧೀ ಭಕ್ತರೇ ಆದ ಅಪ್ಪ ಕಾಂಗ್ರೆಸ್ ಕಾರ್ಯಕರ್ತರೂ ಆಗಿ ದುಡಿದಿದ್ದರು. ಆದರೆ ರಾಜಕೀಯದ ಪ್ರವೇಶ ಅವರಿಗೆ ಅವಕಾಶವಿದ್ದಾಗಲೂ ಇಷ್ಟಪಡದೆ ದೂರ ನಿಂತರು. ಕರುಣಾಕರ ಉಚ್ಚಿಲರು ಮುಂಬೈಯಲ್ಲೂ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗಿದ್ದಾರೆಂದು ತಿಳಿದಿದ್ದೇನೆ. ತಲಪಾಡಿಯಲ್ಲಿ ನಡೆದ ಸ್ವಾತಂತ್ರೋತ್ಸವದ ಸುವರ್ಣ ಸಮಾರಂಭದಲ್ಲಿ ತನ್ನ ಬಾಲ್ಯದ, ಯೌವ್ವನದ ದಿನಗಳಲ್ಲಿ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾದ ನೆನಪುಗಳನ್ನು ಹಂಚಿಕೊಂಡಾಗ ತನ್ನ ಸಹಪಾಠಿಗಳನ್ನು ನೆನಪಿಸಿಕೊಂಡರು. ಅದೇ ವೇದಿಕೆಯಲ್ಲಿದ್ದ ನಾನು ಅವರ ಸ್ನೇಹಿತನ ಮಗಳೆಂಬ ಪ್ರೀತಿಯನ್ನು ಕೊನೆಯವರೆಗೂ ಉಳಿಸಿಕೊಂಡರು. ನನ್ನ ಮಂಗಳೂರಿನ ಮನೆಗೆ ತನಗೆ ಸಾಧ್ಯವಾಗುವವರೆಗೆ ಬಂದು ಹೋಗುತ್ತಿದ್ದರು. ಮಂಗಳೂರಿನ ಗಾಂಧಿ ಪ್ರತಿಷ್ಠಾನ ಅವರ ಇರುವಿಕೆಯನ್ನು ಮಂಗಳೂರಿಗೆ ಪರಿಚಯಿಸಿತ್ತು.
ಹೀಗೆ ಕೊಂಡಾಣ ವಾಮನ ಮಾಸ್ಟ್ರು ಹರಿದಾಸರಾಗಿ, ಪುರಾಣ ವಾಚನಕಾರರಾಗಿ ಊರಿನ ಹಿರಿಯರಿಗೆ ನಮ್ಮ ಹುಡುಗ ಎಂದು, ಕಿರಿಯರಿಗೆ ಗೌರವದ ವ್ಯಕ್ತಿಯಾಗಿ ಆ ಊರಲ್ಲಿ ಇಲ್ಲದೆ ಇದ್ದರೂ ಚಿರಪರಿಚಿತರಾಗಿದ್ದರು. ಈಗ ನಾನು ಸೋವುರಿಗೆ ಸೊಸೆಯಾಗಿ, ವಾಮನ ನಂದಾವರರಿಗೆ ಮಡದಿಯಾದರೂ ಊರಿನವರಿಗೆ ಕೊಂಡಾಣ ವಾಮನ ಮಾಸ್ಟ್ರ ಮಗಳಾಗಿಯೇ ಗುರುತಿಸುವುದಕ್ಕೆ ಹಲವು ಹಿರಿಯರು, ಊರವರು ಇದ್ದು ನನಗೆ ಅದು ನನ್ನೂರೇ ಆಯಿತು. ಸೋವೂರಿನಲ್ಲಿ, ಕೃಷಿ ಕೂಲಿಕಾರರಾಗಿ ಬಂದಿದ್ದ ಮಾವನ ಕುಟುಂಬ ಅಲ್ಲಿ ದಿನಸಿ ಅಂಗಡಿಯ ನಾಯಕರ ಹಿತ್ತಲಲ್ಲಿ ಮನೆ ಮಾಡಿಕೊಂಡಿದ್ದರು. ಬಹುಶಃ ಗೇಣಿ ಎಂದು ಕೊಡುವುದಿತ್ತೋ ಇಲ್ಲವೋ ತಿಳಿದಿಲ್ಲ. ನಂದಾವರದಲ್ಲಿ ತಾಯಿ ಮನೆ ಇದ್ದ ವಾಮನ ನಂದಾವರರಿಗೆ ಅದು ಹುಟ್ಟೂರು. ತಂದೆ ಬಾಳೆಪುಣಿಯವರು. ಅಲ್ಲಿ ಗೇಣಿ ಒಕ್ಕಲಾಗಿದ್ದ ಅವರು ಭತ್ತ, ವೀಳ್ಯದೆಲೆ, ತರಕಾರಿಗಳ ಒಳ್ಳೆಯ ಕೃಷಿಕರಾಗಿದ್ದರು. ತಾನೇ ಕೈಯಾರೆ ಕಟ್ಟಿದ ಮನೆಯಿಂದ ತನ್ನ ಸೋದರಳಿಯಂದಿರ ಕಾರಣದಿಂದ ಉಟ್ಟ ಬಟ್ಟೆಯಲ್ಲಿ ಎಂಬಂತೆ ಹೊರಟು ಬಂದವರು. ‘‘ಕುಟುಂಬ ಸಾಕುವುದಕ್ಕೆ ರಸ್ತೆ ಕೆಲಸವನ್ನೂ ಮಾಡಿದ್ದೆ’’ ಎಂದು ನನ್ನಲ್ಲಿ ಹೇಳುತ್ತಿದ್ದರು. ಅವರು ದೂರದವರೇನಲ್ಲ.
ನನ್ನ ತಂದೆಯ ದಾಯಾದಿ ಸೋದರಿಯ ಗಂಡ ಅಂದರೆ ಭಾವನಿಗೆ ದಾಯಾದಿ ತಮ್ಮ ಆಗಿದ್ದವರು. ಈ ಹಿನ್ನೆಲೆಯಲ್ಲಿ ತನ್ನ ಅಣ್ಣನ ಬೆಳ್ಮದ ಮನೆಗೆ ಕೃಷಿ ಕೆಲಸಕ್ಕೆ ನೆರವು ನೀಡುತ್ತಿದ್ದರು. ಈ ಕಾರಣದಿಂದಲೇ ನನ್ನ ಅತ್ತಿಗೆ ಕೊಂಡಾಣದ ನಮ್ಮ ಒಂದು ಮನೆಯಲ್ಲಿದ್ದು ಬೀಡಿ ಕಟ್ಟಲು ಕಲಿಯಲು ಬಂದಿದ್ದರು ಎಂದೂ ಹೇಳುತ್ತಿದ್ದರು. ನಂದಾವರದ ಮನೆಯಲ್ಲಿದ್ದು ಕೃಷಿ, ದನ, ಎಮ್ಮೆಗಳ ಸಾಕಣೆ ಮಾಡುತ್ತಿದ್ದ ಅತ್ತಿಗೆ ಭವಿಷ್ಯದಲ್ಲಿ ಬೀಡಿ ಕಟ್ಟುವಂತಾಯಿತು. ಬೀಡಿ ಕಲಿತ ಅತ್ತಿಗೆ ದೊಡ್ಡ ಕೃಷಿ ಮನೆಯ ಸೊಸೆಯಾದರು. ತಾವೇ ಭವಿಷ್ಯವನ್ನು ರೂಪಿಸುವ ನಿರ್ಧಾರವನ್ನು ಹೆಣ್ಣಾಗಲೀ, ಗಂಡಾಗಲೀ ಸರಿಯಾದ ಸಮಯದಲ್ಲಿ ನಿರ್ಧರಿಸದಿದ್ದರೆ ಹೀಗೆಯೇ ಆಗುತ್ತದೆ. ಆದರೆ ಹೇಳುವುದು ನಮ್ಮ ಹಣೆಬರಹ ಎಂದು. ಸ್ವತಃ ನಾನೇ ನನ್ನ ಹಣೆಬರಹ ಎಂದು ಕೂತಿದ್ದರೆ ನನ್ನ ಭವಿಷ್ಯವೂ ಬ್ರಹ್ಮ ಬರೆದ ಹಣೆಬರಹವಾಗುತ್ತಿತ್ತೋ ಏನೋ? ಆದರೆ ನನ್ನ ಬದುಕಿನ ಭವಿಷ್ಯ ಬರಕೊಂಡ ಬಗ್ಗೆ ಹೇಳಿರುವೆನಲ್ಲಾ. ಆಗ ದೇವರೇ ಬೇರೆ ಬೇರೆಯವರ ರೂಪದಲ್ಲಿ ಬಂದು ಸಹಕರಿಸಿದ ನನ್ನ ಹಣೆಬರಹ ಬರೆಯಲು ಕಾರಣನೆಂದು ಹೇಳಿದರೆ ಆಸ್ತಿಕರಿಗೆ ಸಂತೋಷವಾದರೆ ನಿರೀಶ್ವರರಿಗೆ ಪ್ರಯತ್ನಕ್ಕೆ ಫಲವಿದೆ ಎನ್ನುವುದು ಸಾರ್ವಕಾಲಿಕ ಸತ್ಯ ಅನ್ನಿಸೀತು. ಈ ಮತು ನನಗೆ ಮಾತ್ರ ಅನ್ವಯಿಸುವಂತಹುದ್ದಲ್ಲ. ವಾಮನ ನಂದಾವರರೂ ಶಾಲೆ ಬಿಟ್ಟು ಎಮ್ಮೆ ಕೋಣ ಮಿಯಿಸುತ್ತಿದ್ದ ಹುಡುಗನಾಗಿ ಉಳಿಯಬೇಕಾದವರು ಶಾಲೆಗೆ ಹೋಗಲೇಬೇಕೆಂಬ ನಿರ್ಧಾರ ಮಾಡಿದಾಗ ಅವರ ಚಿಕ್ಕಮ್ಮ, ಅಪ್ಪ ಮುಂದೆ ಊರಿನ ಕೆಲವು ಹಿರಿಯರು ನೆರವಾಗದೆ ಇದ್ದರೆ ಅವರ ಹಣೆಬರಹ ಹೇಗಿರುತ್ತಿತ್ತು ಎಂದರೆ ಅವರ ಮಾವನ ಮಕ್ಕಳು ಇಂದು ಕೃಷಿಕರಾದರೂ ವಿದ್ಯೆಯ ಹಿರಿಮೆ ಪಡೆಯದಿರುವುದನ್ನು ನೋಡಿದಾಗ ಮಾವನ ಮನೆಯಿಂದ ಮಾವನಲ್ಲಿ ಹೇಳದೆ ತಂದೆ ಮನೆಗೆ ಬಂದುದು ಸಾಮಾನ್ಯ ಧೈರ್ಯವಲ್ಲ. ಅದು ಅವರ ಬದುಕಿನ ದೃಢ ನಿರ್ಧಾರ. ಆದ್ದರಿಂದಲೇ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಹಕ್ಕೂ ನಮ್ಮದು. ಅದನ್ನು ದಕ್ಕಿಸಿಕೊಳ್ಳಲು ಬೇಕಾದ ಪ್ರಯತ್ನದ ಕರ್ತವ್ಯವೂ ನಮ್ಮದೇ ಅಲ್ಲವೇ. ಈ ಕಾರಣಗಳಿಂದಲೇ ಕೋಟೆಕಾರಿನ ಪರಿಸರದಲ್ಲಿ ನಮ್ಮ ಕೊಂಡಾಣ ವಾಮನನ ಮಗಳು ನಮ್ಮ ವಾಮನ ನಂದಾವರನ ಮಡದಿಯಾಗಿ ಮತ್ತೆ ಕೋಟೆಕಾರಿನಲ್ಲಿ ನೆಲೆಯಾದುದು ಕೋಟೆಕಾರಿನ ಹಲವಾರು ಮಂದಿಗೆ ಪ್ರೀತಿಯ ಹಾಗೂ ಸಂತೋಷದ ವಿಷಯವಾಗಿತ್ತು. ಕೋಟೆಕಾರಿನ ಸಾಹಿತ್ಯ ಸಂಘದ ಕಾರ್ಯಕ್ರಮಗಳು ಸ್ವಲ್ಪ ಚುರುಕಾದುವು.