ರಕ್ತಸಿಕ್ತವಾಗುತ್ತಿರುವ ವೈದ್ಯ ಮತ್ತು ರೋಗಿಗಳ ಸಂಬಂಧ
ಪರಿಸ್ಥಿತಿ ಉಲ್ಬಣಗೊಂಡು ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಸಂಭವಿಸಿದಂತೆ ಬಿಕ್ಕಟಿನ ಪರಿಸ್ಥಿತಿ ಉಂಟಾದಾಗ ಮಾತ್ರ ಇಡಿಯಾದ ದೃಷ್ಟಿಕೋನವಿಲ್ಲದ ಕೆಲವು ಅಲ್ಪಕಾಲೀನ ಮತ್ತು ಬಿಡಿಬಿಡಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ಎಲ್ಲಿಯತನಕ ಆರೋಗ್ಯ ಸೇವೆಯ ಮೇಲೆ ಹೆಚ್ಚಿನ ಹಣಹೂಡಿಕೆ ಮಾಡಿ ಸಮರ್ಥವಾದ ಆರೋಗ್ಯ ಸೇವೆಯನ್ನು ಒದಗಿಸುವ ಮಟ್ಟಿಗೆ ಸಾರ್ವಜನಿಕ ಆಸ್ಪತ್ರೆಗಳನ್ನು ಬಲಿಷ್ಠಗೊಳಿಸುವುದಿಲ್ಲವೋ ಅಲ್ಲಿಯವರೆಗೆ ವೈದ್ಯ ಮತ್ತು ರೋಗಿಗಳ ನಡುವಿನ ಸಂಬಂಧಗಳ ಆರೋಗ್ಯ ಸುಧಾರಿಸುವುದಿಲ್ಲ.
ವೈದ್ಯರು ಆತಂಕದಲ್ಲಿದ್ದಾರೆ; ರೋಗಿಗಳು ದುಃಖದಲ್ಲಿದ್ದಾರೆ. ಇದೀಗ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆಚ್ಚೂಕಡಿಮೆ ಇದೇ ವಾತಾವರಣವೇ ಕಾಣಬರುತ್ತಿದೆ. ಮಹಾರಾಷ್ಟ್ರದಲ್ಲಂತೂ ಇತ್ತೀಚೆಗೆ ಐದು ವಿವಿಧ ಪ್ರಕರಣಗಳಲ್ಲಿ ರೋಗಿಯ ಬಗ್ಗೆ ನಿರ್ಲಕ್ಶ್ಯ ತೋರಿದರೆಂದು ಆರೋಪಿಸಿ ಅವರ ಸಂಬಂಧಿಕರು ಸಾರ್ವಜನಿಕ ಆಸ್ಪತ್ರೆಗಳ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಇದೇ ರೀತಿಯ ಪ್ರಕರಣಗಳು ದಿಲ್ಲಿ, ಸೂರತ್, ಅಹಮದಾಬಾದ್, ಬುಲಂದ ಶಹರ್ ಮತ್ತು ಚೆನ್ನೈಗಳಿಂದಲೂ ವರದಿಯಾಗಿದೆ. ಹಾಗೆ ನೋಡಿದರೆ, ವೈದ್ಯರ ಮೇಲೆ ಹಲ್ಲೆಯಾಗುವುದು ಭಾರತಕ್ಕೆ ವಿಶಿಷ್ಟವಾದ ವಿದ್ಯಮಾನವೇನಲ್ಲ. ಲ್ಯಾನ್ಸೆಟ್ ಮತ್ತು ಬ್ರಿಟಿಷ್ ಮೆಡಿಕಲ್ ಜರ್ನಲ್ ಎಂಬ ಪತ್ರಿಕೆಗಳು ಭಾರತ ಉಪಖಂಡದ ಎಲ್ಲಾ ದೇಶಗಳಲ್ಲೂ ಮತ್ತು ಚೀನಾದಲ್ಲೂ ವೈದ್ಯರ ಮೇಲೆ ಹಲ್ಲೆ ನಡೆಯುವ ಪ್ರಕರಣಗಳು ಹೆಚ್ಚುತ್ತಿವೆಯೆಂದು ವರದಿಮಾಡಿವೆ.
ಪ್ರಕರಣಗಳಲ್ಲಿ ಹಲವಾರು ಸಾಮಾನ್ಯ ಅಂಶಗಳಿವೆ. ಇಂಥ ಪ್ರಕರಣಗಳೆಲ್ಲವೂ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಗೆ ಅನುಗುಣವಾಗುವಷ್ಟು ಸಂಪನ್ಮೂಲ ಮತ್ತು ಸೌಲಭ್ಯಗಳಿಲ್ಲದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಂಭವಿಸುತ್ತಿವೆ. ಉದ್ವಿಗ್ನರಾಗಿರುವ ರೋಗಿಗಳ ಸಂಬಂಧಿಕರ ಜೊತೆ ತೋರಿಸಬೇಕಿರುವಷ್ಟು ಸಹಾನುಭೂತಿಯನ್ನು ತೋರಿಸಲಾಗದ ಮಟ್ಟಿಗೆ ಅವಧಿ ಮೀರಿ ದುಡಿದು ಹೈರಾಣಾಗಿದ್ದ ಕಿರಿಯ ವೈದ್ಯರ ಮೇಲೆ ಇಂತಹ ಹಲ್ಲೆಗಳು ನಡೆಯುತ್ತಿವೆ. ಅಖಿಲ ಭಾರತ ವೈದ್ಯಕೀಯ ಸಂಸ್ಥೆಯು 2015ರಲ್ಲಿ ನಡೆಸಿದ್ದ 500 ವೈದ್ಯರ ಅಧ್ಯಯನದಲ್ಲಿ ಶೇ.75ರಷ್ಟು ವೈದ್ಯರು ಇಂತಹ ಹಲ್ಲೆಗಳಿಗೆ ಅಥವಾ ಬೆದರಿಕೆಗಳಿಗೆ ಗುರಿಯಾಗಿರುವುದು ಬೆಳಕಿಗೆ ಬಂದಿತ್ತು.
ಒಂದು ಕಡೆ ವೈದ್ಯರು ಪಾಳಿಗಿಂತ ಹೆಚ್ಚು ದುಡಿದು ದಣಿದಿರುತ್ತಾರೆ. ಮತ್ತೊಂದು ಕಡೆ ರೋಗಿಗಳು ಮತ್ತವರ ಸಂಬಂಧಿಕರು ಸಜ್ಜನಿಕೆಯಿಲ್ಲದ ವೈದ್ಯರ ಕುರಿತು, ಸಹಕಾರ ನೀಡದ ಆಸ್ಪತ್ರೆ ಸಿಬ್ಬಂದಿಯ ಕುರಿತು, ರೋಗಪತ್ತೆ ಮಾಡಲು ಅತ್ಯಗತ್ಯವಾದ ಸೌಲಭ್ಯಗಳು ಮತ್ತು ಅತ್ಯವಶ್ಯಕವಾದ ಔಷಧಿಗಳು ಸಹ ಇಲ್ಲದಿರುವ ಬಗ್ಗೆ ಮತ್ತು ರೋಗಿಯ ಪರಿಸ್ಥಿತಿ ಮತ್ತು ಮುಂದೆ ತೆಗೆದುಕೊಳ್ಳಬೇಕಾದ ಜಾಗ್ರತೆ ಇತ್ಯಾದಿಗಳ ಬಗ್ಗೆ ಯಾವುದೇ ಮಾಹಿತಿಗಳನ್ನು ನೀಡದಿರುವ ಬಗ್ಗೆ ದೂರುಗಳ ಮಹಾಪೂರವನ್ನೇ ಹರಿಸುತ್ತಾರೆ. ಇವೆಲ್ಲವೂ ಒಟ್ಟು ಸೇರಿ ಅವರ ಆತಂಕವನ್ನು ಇಮ್ಮಡಿಗೊಳಿಸುತ್ತದೆ. ಇದರ ಜೊತೆಗೆ ಅಗತ್ಯವಿರುವ ಔಷಧಿಗಳನ್ನು ಮತ್ತು ಸೇವೆಗಳನ್ನು ಖಾಸಗಿಯವರಿಂದ ಪಡೆದುಕೊಳ್ಳುವಂತೆ ನೀಡಲ್ಪಡುವ ಸಲಹೆಗಳು ಸಹ ಅವರ ಹತಾಶೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ವೈದ್ಯರ ದೃಷ್ಟಿಕೋನದಿಂದ ನೋಡುವುದಾದರೆ ಆಸ್ಪತ್ರೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯರು ತುರ್ತು ಸೇವೆಯನ್ನು ಕೂಡಲೇ ಒದಗಿಸಬೇಕಾದ ಒತ್ತಡದಲ್ಲಿರುತ್ತಾರೆ. ಮತ್ತೊಂದು ಕಡೆ ರೋಗಿಯನ್ನು ಸುತ್ತುವರಿದಿರುವ ಅವರ ಸಂಬಂಧಿಕರು ಮತ್ತು ಸ್ನೇಹಿತರು ಪವಾಡವನ್ನು ನಿರೀಕ್ಷಿಸುತ್ತಿರುತ್ತಾರೆ. ಆದರೆ ಹಲ್ಲೆಯ ಪ್ರಕರಣಗಳಲ್ಲಿ ತಮ್ಮ ರೋಗಿಯನ್ನೇ ಮೊದಲು ಗಮನಿಸಬೇಕೆಂದು ಒತ್ತಡ ಹಾಕುವ ಸ್ಥಳೀಯ ಪುಡಾರಿಗಳೇ ವೈದ್ಯರ ಮೇಲೆ ದೂರು ಸಲ್ಲಿಸುವಲ್ಲಿ ಮುಂದಿರುತ್ತಾರೆ. ಇಂತಹ ಹಲ್ಲೆಗಳು ನಡೆಯುವ ಸಂದರ್ಭದಲ್ಲಿ ಕಿರಿಯ ವೈದ್ಯರು ಸೌಲಭ್ಯಗಳೇ ಇಲ್ಲದ ಆಸ್ಪತ್ರೆಗಳಲ್ಲಿ ಪಾಳಿಮೀರಿ ಬೆನ್ನುಮೂಳೆ ಮುರಿಯುವಷ್ಟು ಕಾಲ ದುಡಿದಿರುತ್ತಾರೆ. ಮುಂಬೈಯಲ್ಲಿ ಇಂಥಾ ಹಲ್ಲೆಗೆ ಗುರಿಯಾದ ವೈದ್ಯರೊಬ್ಬರು ಸತತ 36 ಗಂಟೆಗಳ ಕಾಲ ಪಾಳಿಮೀರಿ ಸೇವೆ ಸಲ್ಲಿಸಿದ್ದರು.
ಇಷ್ಟು ಸುದೀರ್ಘ ದುಡಿಮೆ ಮಾಡಿದ ನಂತರದಲ್ಲಿ ಅವರು ನಿಜವಾಗಿ ವಿಶ್ರಾಂತಿ ತೆಗೆದುಕೊಳ್ಳಲು ಸಾಧ್ಯವಾಗುವುದು ಯಾವುದೇ ಸೌಕರ್ಯಗಳಿಲ್ಲದ ಹಾಸ್ಟೆಲ್‌ಗಳಲ್ಲಿ. ವೈದ್ಯಕೀಯ ಆರೋಗ್ಯ ಸೇವೆಗಳ ಖಾಸಗೀಕರಣ ಮತ್ತು ವಾಣಿಜ್ಯೀಕರಣಗಳು ಹೆಚ್ಚುತ್ತಿದ್ದಂತೆ ಮತ್ತು ಹೆಚ್ಚಿನ ಶುಲ್ಕವನ್ನು ತೆರಲು ಸಾಧ್ಯವಿಲ್ಲದ ರೋಗಿಗಳ ಬಗ್ಗೆ ಖಾಸಗಿ ವೈದ್ಯರು ತೋರುವ ಸಂವೇದನಾಶೂನ್ಯತೆಗಳ ಬಗ್ಗೆ ಅಸಹಾಯಕ ಬಡರೋಗಿಗಳ ಕಥೆಗಳು ಪುಂಖಾನುಪುಂಖವಾಗಿ ಹೊರಬರುತ್ತಿದ್ದಂತೆ ವೈದ್ಯರೆಂದರೆ ಜೀವದಾತರೆಂಬ ಸಾರ್ವಜನಿಕರ ಅಭಿಪ್ರಾಯವೂ ಬದಲಾಗತೊಡಗಿದೆ. ಹೀಗಾಗಿ ದುರ್ಭರ ಸನ್ನಿವೇಶಗಳಲ್ಲಿ ತಮ್ಮ ಕೈಲಾಗುವುದೆಲ್ಲವನ್ನೂ ಮಾಡುವ ವೈದ್ಯರ ಬಗ್ಗೆಯೂ ಒಂದೇ ರೀತಿಯ ಅಭಿಪ್ರಾಯಗಳು ಅರಿವಿಲ್ಲದೆ ವ್ಯಕ್ತವಾಗುತ್ತದೆ. ಸಾರ್ವಜನಿಕ ಆಸ್ಪತ್ರೆಗಳೇ ರೋಗಿಗಳ ಮತ್ತು ಅವರ ಸಂಬಂಧಿಕರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ. ಏಕೆಂದರೆ ಬಹಳಷ್ಟು ಬಾರಿ ಖಾಸಗಿ ಆಸ್ಪತ್ರೆಗಳಲ್ಲಿ ರೋಗ ಉಲ್ಬಣಗೊಂಡ ನಂತರವೇ ಸಾರ್ವಜನಿಕ ಆಸ್ಪತ್ರೆಗಳಿಗೆ ಕರೆತರುತ್ತಾರೆ.
ಮತ್ತವರ ಕುಟುಂಬಗಳು ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕವನ್ನು ತೆತ್ತರೂ ಸಮರ್ಪಕ ಚಿಕಿತ್ಸೆ ದೊರೆಯದ ಬಗ್ಗೆ ವ್ಯಗ್ರರಾಗಿರುತ್ತಾರೆ. ವೈದ್ಯರನ್ನು ರಕ್ಷಿಸಲು ಮತ್ತು ಇಂತಹ ಹಿಂಸಾಚಾರವನ್ನು ತಡೆಗಟ್ಟಲು 14 ರಾಜ್ಯಗಳು ಕಾನೂನನ್ನು ಜಾರಿಗೊಳಿಸಿವೆ. ಆದರೂ ಅದರ ಅನುಷ್ಠಾನ ಮಾತ್ರ ಎಲ್ಲೂ ತೃಪ್ತಿಕರವಾಗಿಲ್ಲ. ಉದಾಹರಣೆಗೆ ಈ ಕುರಿತು ಮಹಾರಾಷ್ಟ್ರ ಸರಕಾರ ತಂದಿರುವ ಕಾಯ್ದೆಯು ವೈದ್ಯರ ಮೇಲೆ ನಡೆಯುವ ಹಲ್ಲೆಗಳನ್ನು ಜಾಮೀನು ರಹಿತ ಅಪರಾಧವೆಂದು ಪರಿಗಣಿಸಿ ಮೂರು ವರ್ಷಗಳ ಸೆರೆವಾಸ ಮತ್ತು ರೂ.50,000 ಜುಲ್ಮಾನೆಯ ಶಿಕ್ಷೆಯನ್ನು ವಿಧಿಸುತ್ತದೆ. ಅಷ್ಟುಮಾತ್ರವಲ್ಲ. ಆಸ್ತಿಪಾಸ್ತಿಗೆ ಉಂಟಾದ ಹಾನಿಯ ಎರಡು ಪಟ್ಟು ಹೆಚ್ಚು ಮೊತ್ತವನ್ನು ಅಪರಾಧಿಯಿಂದಲೇ ವಸೂಲಿ ಮಾಡುವುದಕ್ಕೂ ಆ ಕಾನೂನಿನಲ್ಲಿ ಅವಕಾಶವಿದೆ.
ಆದರೆ ಕಳೆದ ಮೂರು ವರ್ಷಗಳಲ್ಲಿ ಈ ಕಾಯ್ದೆಯನ್ವಯ 53 ಪ್ರಕರಣಗಳು ದಾಖಲಾಗಿದ್ದರೂ ಈವರೆಗೆ ಒಂದೇ ಒಂದು ಪ್ರಕರಣದಲ್ಲೂ ಶಿಕ್ಷೆಯಾಗಿಲ್ಲ. ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಪ್ರಕಾರ ಇತ್ತೀಚಿನ ಹಿಂಸಾಚಾರಗಳಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಜಾಮೀನು ದೊರೆತಿದೆ. ಕಾನೂನುಗಳು ಒಂದು ಕಡೆಯಿದ್ದರೆ, ಇಂಥಾ ಪ್ರಕರಣಗಳು ಸಂಭವಿಸಿದ ಕೂಡಲೇ ಹಲವಾರು ಆಸ್ಪತ್ರೆಗಳು ತಮ್ಮ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಅದು ಒಂದು ಅಲ್ಪಕಾಲೀನ ಬಿಡಿಬಿಡಿ ಕ್ರಮವಷ್ಟೇ ಆಗಬಹುದು. ಅದು ವೈದ್ಯರು ಮತ್ತು ಜನಸಮುದಾಯದ ನಡುವೆ ಅಂತರವನ್ನು ಹೆಚ್ಚಿಸಿ ತದ್ವಿರುದ್ಧ ಪರಿಣಾಮವನ್ನೇ ಉಂಟುಮಾಡಬಹುದು. ಸಹಾನುಭೂತಿಯುಳ್ಳ ಮತ್ತು ಸಂವಹನಾ ಕೌಶಲ್ಯವುಳ್ಳ ವೈದ್ಯರಿದ್ದ ಮಾತ್ರಕ್ಕೆ ಸಮಸ್ಯೆ ಬಗೆಹರಿಯುವುದಿಲ್ಲ.
ಸಾರ್ವಜನಿಕ ಆಸ್ಪತ್ರೆಗೆ ಎಡತಾಕುತ್ತಿರುವ ರೋಗಿಗಳ ಸಂಖ್ಯೆ ಬೃಹತ್ ಪ್ರಮಾಣದಲ್ಲಿ ಏರುತ್ತಿದೆ. ಹೀಗಾಗಿ ಈ ಸಮಸ್ಯೆಯು ಈಗಿರುವ ವೈದ್ಯಕೀಯ ಸೇವಾ ವ್ಯವಸ್ಥೆಯಲ್ಲಿ ಆಳವಾದ ರಚನಾತ್ಮಕ ಬದಲಾವಣೆಯನ್ನು ಆಗ್ರಹಿಸುತ್ತದೆ. ಭಾರತವು ಆರೋಗ್ಯ ಸೇವೆಗೆ ತನ್ನ ಬಜೆಟ್ಟಿನಲ್ಲಿ ಅತ್ಯಂತ ಕನಿಷ್ಠ ಮೊತ್ತವನ್ನು ಎತ್ತಿಡುತ್ತದೆ. ಅದೇರೀತಿ 7:1ರಷ್ಟಿರುವ ರೋಗಿ-ವೈದ್ಯರ ನಡುವಿನ ಅನುಪಾತವು ಸಹ ಅತ್ಯಂತ ಕಡಿಮೆಯಾಗಿದೆ. ಇದು ಮಹಾರಾಷ್ಟ್ರ ಮತ್ತು ಬಿಹಾರಗಳಲ್ಲಿ ಇನ್ನೂ ಕಡಿಮೆ. ಪರಿಸ್ಥಿತಿ ಉಲ್ಬಣಗೊಂಡು ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಸಂಭವಿಸಿದಂತೆ ಬಿಕ್ಕಟಿನ ಪರಿಸ್ಥಿತಿ ಉಂಟಾದಾಗ ಮಾತ್ರ ಇಡಿಯಾದ ದೃಷ್ಟಿಕೋನವಿಲ್ಲದ ಕೆಲವು ಅಲ್ಪಕಾಲೀನ ಮತ್ತು ಬಿಡಿಬಿಡಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಆದರೆ ಎಲ್ಲಿಯತನಕ ಆರೋಗ್ಯ ಸೇವೆಯ ಮೇಲೆ ಹೆಚ್ಚಿನ ಹಣಹೂಡಿಕೆ ಮಾಡಿ ಸಮರ್ಥವಾದ ಆರೋಗ್ಯ ಸೇವೆಯನ್ನು ಒದಗಿಸುವ ಮಟ್ಟಿಗೆ ಸಾರ್ವಜನಿಕ ಆಸ್ಪತ್ರೆಗಳನ್ನು ಬಲಿಷ್ಠಗೊಳಿಸುವುದಿಲ್ಲವೋ ಅಲ್ಲಿಯವರೆಗೆ ವೈದ್ಯ ಮತ್ತು ರೋಗಿಗಳ ನಡುವಿನ ಸಂಬಂಧಗಳ ಆರೋಗ್ಯ ಸುಧಾರಿಸುವುದಿಲ್ಲ.
ಕೃಪೆ: Economic and Political Weekly