ಹಿಂದೂ: ಸಂಸ್ಕೃತಿಯ ಅಂತರ್ವಿರೋಧಗಳ ನಡುವೆ ...
‘ಹಿಂದೂ’ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಬಾಲಚಂದ್ರ ನೇಮಾಜೆಯವರ ಬೃಹತ್ ಕಾದಂಬರಿ. ಸುಮಾರು 30 ವರ್ಷಗಳ ಸತತ ಸಾಧನೆಯಿಂದ ರೂಪುಗೊಂಡ ಕಾದಂಬರಿಯಿದು ಎಂದು ಸ್ವತಃ ನೇಮಾಡೆಯವರೇ ಹೇಳಿಕೊಂಡಿದ್ದಾರೆ. ಮರಾಠಿಯಲ್ಲಿ ಹನ್ನೊಂದು ಬಾರಿ ಪುನರ್‌ಮುದ್ರಣಗೊಂಡಿರುವ ಈ ಕೃತಿ ಹಿಂದಿಯಲ್ಲಿ ಒಂದೇ ವರ್ಷದಲ್ಲಿ ಮೂರು ಮುದ್ರಣ ಕಂಡಿದೆ ಎನ್ನುವುದೇ ಈ ಕಾದಂಬರಿಯ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ಇದೀಗ ಈ ಕಾದಂಬರಿಯನ್ನು ಚಂದ್ರಕಾಂತ ಪೋಕಳೆಯವರು ಕನ್ನಡಕ್ಕೆ ತಂದಿದ್ದಾರೆ. ಈ ಕಾದಂಬರಿ ಮಹಾರಾಷ್ಟ್ರ ಸಂಸ್ಕೃತಿಯನ್ನು ಪುನರಾವಲೋಕಿಸುತ್ತದೆ. 6ನೆ ಶತಮಾನದ ಗುಪ್ತರ ಕಾಲ ಹಿನ್ನೋಟದ ಜೊತೆಗೆ ಕಾದಂಬರಿ ತೆರೆದುಕೊಳ್ಳುತ್ತದೆ. ವೈದಿಕರು ನಿರ್ಮಿಸಿದ ಮಹಾರಾಷ್ಟ್ರ ಸಂಸ್ಕೃತಿ ಹೇಗೆ ತನ್ನೊಳಗೇ ಒಳ ಸಂಘರ್ಷದಲ್ಲಿ ತೊಡಗಿದೆ ಎನ್ನುವುದನ್ನೂ ಖಂಡೇರಾವ್ ಪಾತ್ರಗಳ ಮೂಲಕ ವಿವರಿಸುವ ಪ್ರಯತ್ನ ಮಾಡುತ್ತದೆ.
ಹಿಂದೂ ಅಂದರೆ ಏನು? ಅದೊಂದು ಧರ್ಮವೆ? ಸಮಾಜವೆ? ಅಥವಾ ವ್ಯವಸ್ಥೆಯೆ? ನೇಮಾಡೆಯವರ ಈ ಕಾದಂಬರಿ ಅದಾವುದನ್ನೂ ಒಪ್ಪುವುದಿಲ್ಲ. ಹಿಂದೂ ಧರ್ಮ ಅವ್ಯವಸ್ಥೆಯಿಂದಲೇ ನಿರ್ಮಾಣಗೊಂಡ ಅನಿವಾರ್ಯ ವ್ಯವಸ್ಥೆ ಎನ್ನುವುದನ್ನು ಹೇಳುವುದಕ್ಕೆ ಕಾದಂಬರಿ ಪ್ರಯತ್ನಿಸುತ್ತದೆ. ಕಥಾನಾಯಕ ಪುರಾತತ್ವ ಜ್ಞಾನವಿರುವ ಖಂಡೇರಾವ್ ಮೂಲಕ ಹಿಂದೂ ಎನ್ನುವ ಮಾನಸಿಕತೆಯನ್ನು ಕಾದಂಬರಿಕಾರ ಖಂಡರಿಸುವ ಪ್ರಯತ್ನವನ್ನು ಮಾಡುತ್ತಾನೆ. ವರ್ತಮಾನವನ್ನು ಕೇಂದ್ರವಾಗಿಟ್ಟು ಭೂತವನ್ನು ಉತ್ಖನನ ಮಾಡುವ ಹಲವು ಪಾತ್ರಗಳ ಮೂಲಕ ಹಿಂದೂ ಎನ್ನುವ ಸ್ಥಿತಿಯನ್ನು ಚರ್ಚಿಸಲಾಗಿದೆ. ಕೃಷಿಯನ್ನು ಕೇಂದ್ರವಾಗಿಟ್ಟು ಬೆಳೆದ ಸಂಸ್ಕೃತಿಯು ಹೇಗೆ ನಿಧಾನಕ್ಕೆ ಸಮಾಜದ ಏಳು ಬೀಳುಗಳಿಗೆ ಕಾರಣವಾಗುತ್ತದೆ ಎನ್ನುವುದರ ಕಡೆಗೂ ಕಾದಂಬರಿಕಾರ ಬೆಳಕು ಚೆಲ್ಲುತ್ತಾರೆ. ಭಾರತೀಯ ಸಮಾಜ ಜೀವನದಲ್ಲಿ ಕೃಷಿಯನ್ನು ವೈಭವೀಕರಿಸಲಾಗುತ್ತದೆ. ಆದರೆ ನೇಮಾಡೆ ಅದನ್ನು ವಾಸ್ತವ ಕಣ್ಣಿನಲ್ಲಿ ಚಿತ್ರಿಸಲು ಪ್ರಯತ್ನಿಸುತ್ತಾರೆ.
ರೈತಾಪಿ ಕುಟುಂಬದಲ್ಲಿರುವ ಮಹಿಳೆಯರ ವಾಸ್ತವ ಚಿತ್ರಣವು ಅತ್ಯಂತ ಮರ್ಮಭೇದಕವಾಗಿದೆ. ಬ್ರಾಹ್ಮಣೇತರರನ್ನು ಕೀಳರಿಮೆಯಲ್ಲಿ ಬದುಕುವಂತೆ ಮಾಡಿದ ಭಾಷೆಯ ರಾಜಕಾರಣವೂ ಇಲ್ಲಿ ಚರ್ಚೆಗೊಳಗಾಗಿದೆ. ಆರ್ಯ ಸಂಸ್ಕೃತಿಯಿಂದ ಶುರುವಾಗಿ ಇಂದಿನ ಹೊಸ ಬಂಡವಾಳ ಶಾಹಿಯವರೆಗೂ ಅದು ಹೇಗೆ ತನ್ನ ಪರಿಣಾಮವನ್ನು ಬೀರುತ್ತಲೇ ಬರುತ್ತಿದೆ ಎನ್ನುವುದನ್ನು ಹೇಳುವ ಪ್ರಯತ್ನವನ್ನೂ ಮಾಡುತ್ತಾರೆ. ಹಿಂದೂ ಪರಂಪರೆಯಲ್ಲಿ ಬಹುಜನ ಸಮಾಜದ ಸ್ಥಾನ, ಮಾನವೂ ಇಲ್ಲಿ ನಿಕಷಕ್ಕೊಡ್ಡುತ್ತವೆ. ಹಿಂದೂ ಕಾದಂಬರಿ ಒಂದು ರೀತಿಯಲ್ಲಿ ಸಾಂಸ್ಕೃತಿಕ ಬಂಡಾಯ ಎಂದು ಹಲವು ವಿಮರ್ಶಕರಿಂದ ಬಣ್ಣಿಸಲ್ಪಟ್ಟಿದೆ.
ಹಿಂದೂ ಎನ್ನುವುದನ್ನು ಹಲವು ಮಗ್ಗುಲುಗಳಲ್ಲಿ ವಿಶ್ಲೇಷಿಸುವ, ಅದರ ಅಂತರ್ವಿರೋಧಗಳನ್ನು ಪರೀಕ್ಷಿಸಿ ನೋಡುವ ಈ ಕಾದಂಬರಿಗೆ ಕಾದಂಬರಿಯೇತರ ಉದ್ದೇಶವೇ ಅಧಿಕವಿದೆ. ಆದುದರಿಂದಲೇ ಈ ಕಾದಂಬರಿಯನ್ನು ಓದುವುದಕ್ಕೂ ಒಂದು ತಯಾರಿಯ ಅಗತ್ಯವಿದೆ. ಈ ಬೃಹತ್ ಕಾದಂಬರಿಯನ್ನು ಅನುವಾದ ಮಾಡುವ ಸವಾಲನ್ನು ಕೈಗೆತ್ತಿಕೊಂಡ ಪೋಕಳೆ ಅವರನ್ನು ಅಭಿನಂದಿಸಬೇಕಾಗಿದೆ. ಮಹಾರಾಷ್ಟ್ರ ಸಂಸ್ಕೃತಿಯ ವಿವಿಧ ಮಗ್ಗುಲುಗಳ ಅರಿವು, ತಾತ್ವಿಕ ತಿಳುವಳಿಕೆ, ಪರಿಭಾಷೆಗಳನ್ನು ಕನ್ನಡಕ್ಕಿಳಿಸುವ ಸಾಹಸಗಳನ್ನೆಲ್ಲ ಅವರು ಯಶಸ್ವಿಯಾಗಿ ಸ್ವೀಕರಿಸಿದ್ದಾರೆ. ಈ ಕಾದಂಬರಿಯನ್ನು ಕನ್ನಡದ ಓದುಗರಿಗೆ ತಲುಪಿಸಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 608. ಮುಖಬೆಲೆ 390. ಆಸಕ್ತರು ಬೆಂಗಳೂರಿನ ದೂರವಾಣಿ 22392460ಯನ್ನು ಸಂಪರ್ಕಿಸಬಹುದು.