ಆಧಾರ್‌ನೊಂದಿಗೆ ಪಾನ್ ಜೋಡಣೆಗೆ ಈಗ ಸರಕಾರದಿಂದ ಸರಳ ಪರಿಹಾರ
ಹೊಸದಿಲ್ಲಿ, ಎ.9: ತಮ್ಮ ಹೆಸರುಗಳಲ್ಲಿಯ ವಿಭಿನ್ನ ಸ್ಪೆಲ್ಲಿಂಗ್‌ಗಳಿಂದಾಗಿ ತಮ್ಮ ಪಾನ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಜೋಡಿಸಲು ಸಮಸ್ಯೆಗಳನ್ನೆದುರಿಸುತ್ತಿರುವ ವ್ಯಕ್ತಿಗಳಿಗೆ ಸರಳ ಪರಿಹಾರವೊಂದನ್ನು ಸರಕಾರವು ಸೂಚಿಸಿದೆ. ಇಂತಹವರು ತಮ್ಮ ಪಾನ್ ಕಾರ್ಡ್‌ನ ಸ್ಕಾನ್ಡ್ ಪ್ರತಿಯನ್ನು ಅಪ್‌ಲೋಡ್ ಮಾಡಿದರೆ ಸಾಕಾಗುತ್ತದೆ. ಜೊತೆಗೆ ಎರಡೂ ದಾಖಲೆಗಳಲ್ಲಿ ಒಂದೇ ಜನ್ಮ ದಿನಾಂಕ ನಮೂದಿಸಲ್ಪಟ್ಟಿದ್ದರೆ ಒಂದು ಸಲದ ಪಾಸ್‌ವರ್ಡ್(ಒಟಿಪಿ) ಪಡೆದುಕೊಳ್ಳುವ ಮೂಲಕ ತೆರಿಗೆದಾತರು ಹೆಸರನ್ನು ಬದಲಿಸದೆ ಇ-ಫೈಲಿಂಗ್ ಪೋರ್ಟಲ್‌ನಿಂದ ಆಧಾರ್‌ಗೆ ಜೋಡಿಸುವ ಆಯ್ಕೆಯನ್ನು ಒದಗಿಸಲು ಆದಾಯ ತೆರಿಗೆ ಇಲಾಖೆಯು ಯೋಜಿಸುತ್ತಿದೆ.
ಪಾನ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಜೋಡಿಸುವುದನ್ನು ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ವ್ಯಕ್ತಿಗಳು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್ ಅಥವಾ ಎನ್‌ಎಸ್‌ಡಿಎಲ್‌ಗೆ ಲಾಗ್ ಆನ್ ಆಗಬಹುದಾಗಿದೆ. ಆದರೆ ಪಾನ್ ಮತ್ತು ಆಧಾರ್ ಕಾರ್ಡ್‌ಗಳಲ್ಲಿ ಹೆಸರುಗಳು ಭಿನ್ನವಾಗಿದ್ದರೆ ಜೋಡಣೆ ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಪಾನ್ ಕಾರ್ಡ್‌ನ ಸ್ಕಾನ್ಡ್ ಪ್ರತಿಯನ್ನು ಆಧಾರ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ಸರಕಾರವು ಅವಕಾಶ ಕಲ್ಪಿಸಿದೆ.