ಯುರೋಪಿನ ಪರಿವರ್ತನೆಯ ಕಾಲಘಟ್ಟಗಳನ್ನು ತೆರೆದಿಡುವ ಹಾಬ್ಸ್ಕಾಮ್
ಈ ಹೊತ್ತಿನ ಹೊತ್ತಿಗೆ
ಎರಿಕ್ ಜಾನ್ ಅರ್ನೆಸ್ಟ್ ಹಾಬ್ಸ್ಬಾಮ್ (1917-2012) ಇಪ್ಪತ್ತನೆಯ ಶತಮಾನದ ಪ್ರಮುಖ ಚಿಂತಕರಲ್ಲೊಬ್ಬರು. ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರಾಗಿದ್ದ ಹಾಬ್ಸ್ ಬಾಮ್ ಯುರೋಪಿನಲ್ಲಾದ ಪರಿವರ್ತನೆಗಳನ್ನು ಕುರಿತು ನಡೆಸಿದ ಚಿಂತನೆಗಳು ನಾಲ್ಕು ಸಂಪುಟಗಳಲ್ಲಿ ಪ್ರಕಟಗೊಂಡಿವೆ. ಈ ಸಂಪುಟಗಳ ವಿಚಾರಗಳನ್ನು ನಗರಗೆರೆ ರಮೇಶ್ ಸಂಗ್ರಹಿಸಿ, ನಿರೂಪಿಸುವ ಪ್ರಯತ್ನವನ್ನು ‘ಎರಿಕ್ ಹಾಬ್ಸ್ ಬಾಮ್-ಬಂಡವಾಳ ಯುಗ’ ಕೃತಿಯಲ್ಲಿ ಮಾಡಿದ್ದಾರೆ. ಜಾಗತಿಕ ಇತಿಹಾಸವನ್ನು ವಸ್ತು ನಿಷ್ಠವಾಗಿ ಅರ್ಥೈಸಿಕೊಳ್ಳಬಯಸುವವರಿಗೆ ಈ ಸರಣಿ ಅಗತ್ಯ ಒಳನೋಟಗಳನ್ನು ನೀಡುವುದರಲ್ಲಿ ಸಂಶಯವಿಲ್ಲ.
ಮೂರು ಭಾಗಗಳಲ್ಲಿ ಹಾಬ್ಸ್ ಬಾಮ್ ವಿಚಾರಗಳನ್ನು ಲೇಖಕರು ಮಂಡಿಸುತ್ತಾರೆ. ಮೊದಲ ಭಾಗವನ್ನು ಕ್ರಾಂತಿಕಾರಿ ಪೀಠಿಕೆಯಾಗಿ ಭಾವಿಸಿದ್ದಾರೆ. 1848ರ ಕಾಲಘಟ್ಟದಲ್ಲಿ ಫ್ರಾನ್ಸ್ ಸೇರಿದಂತೆ ಯುರೋಪಿನಾದ್ಯಂತ ಪಸರಿಸಿದ ಕ್ರಾಂತಿ ಮತ್ತು ಅದರ ಸೋಲು-ಗೆಲುವುಗಳ ಬಗ್ಗೆ ಈ ಭಾಗದಲ್ಲಿ ಚರ್ಚಿಸುತ್ತಾರೆ. ಈ ಕಾಲಘಟ್ಟ ವಸಂತವೊಂದರ ನಿರೀಕ್ಷೆಯ ಘಟ್ಟ ಎನ್ನುವುದನ್ನು ಅವರು ಹೇಳುತ್ತಾರೆ. ಯುರೋಪ್ ದೇಶಗಳಲ್ಲಿ ಕ್ರಾಂತಿಕಾರಿ ಘಟನೆಗಳೇ ನಡೆಯದಿರುತ್ತಿದ್ದರೆ ಖಂಡದ ಚರಿತ್ರೆ ಬೇರೆಯೇ ದಾರಿ ಹಿಡಿಯುತ್ತಿತ್ತು ಎಂದು ಅವರು ಭಾವಿಸುತ್ತಾರೆ.
ಭಾಗ ಎರಡರಲ್ಲಿ ಯುರೋಪ್ ಹೇಗೆ ಹೊಸ ಸನ್ನಿವೇಶಕ್ಕೆ ಮುಖಾಮುಖಿಯಾಯಿತು ಎನ್ನುವುದನ್ನು ತೆರೆದಿಡುತ್ತಾರೆ. ಘರ್ಷಣೆ, ಯುದ್ಧ, ಬಂಡಾಯ, ಕ್ರಾಂತಿ, ಆಕ್ರಮಣ, ಹುಟ್ಟಿಕೊಂಡ ಪ್ರಜಾತಾಂತ್ರಿಕ ಶಕ್ತಿಗಳು, ಸಂತ್ರಸ್ತರು, ಫಲಾನುಭವಿಗಳು ಇವೆಲ್ಲವುಗಳ ಮೂಲಕ ಹೊಸ ದಿಕ್ಕಿನ ಕಡೆಗೆ ಸಮಾಜದ ಪಯಣವನ್ನು ಅವರು ತೆರೆದಿಡುತ್ತಾರೆ. ಮೂರನೆ ಅಧ್ಯಾಯದಲ್ಲಿ ಪರಿಣಾಮಗಳನ್ನು ವಿಶ್ಲೇಷಿಸುತ್ತಾರೆ. ಕ್ರಾಂತಿಯ ಸೋಲು, ಉದಾರವಾದದ ಗೆಲುವು, ಆರ್ಥಿಕ ಕುಸಿತ ಇವೆಲ್ಲವುಗಳನ್ನೂ ಕಟ್ಟಿಕೊಡುತ್ತಾ ಅಂತಿಮವಾಗಿ ನವಸಾಮ್ರಾಜ್ಯಶಾಹಿಯ ಉಗಮವನ್ನು ಕೃತಿ ಹೇಳುತ್ತದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 290. ಮುಖಬೆಲೆ 150 ರೂಪಾಯಿ. ಆಸಕ್ತರು ಬೆಂಗಳೂರಿನ 23183311 ದೂರವಾಣಿಯನ್ನು ಸಂಪರ್ಕಿಸಬಹುದು.