ರೌಡಿಶೀಟರ್‌ನ ಕೊಲೆ
ಬೆಂಗಳೂರು, ಎ.10: ಆಟೊದಲ್ಲಿ ಮಲಗಿದ್ದ ರೌಡಿಶೀಟರ್‌ನೊಬ್ಬನನ್ನು ಮಾರಕಾಸ್ತ್ರಗಳಿಂದ ಇರಿದು ಕೊಲೆಗೈದಿರುವ ಘಟನೆ ಇಲ್ಲಿನ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಮಾಗಡಿ ರಸ್ತೆ ನಿವಾಸಿ ರಮೇಶ್ ಯಾನೆ ಡುಮ್ಮ ರಮೇಶ್(30) ಕೊಲೆಯಾಗಿರುವ ರೌಡಿಶೀಟರ್ ಎಂದು ಪೊಲೀಸರು ಗುರುತಿಸಿದ್ದಾರೆ. ರವಿವಾರ ಕೆ.ಆರ್.ಪುರದ ದೇವಸಂದ್ರ ಸಮೀಪದ ರಾಜೀವ್‌ನಗರದಲ್ಲಿ ವಾಸವಿದ್ದ ತಾಯಿಯನ್ನು ನೋಡಲು ರಮೇಶ್ ಬಂದಿದ್ದ. ನಂತರ ರಾತ್ರಿ ಮದ್ಯ ಸೇವಿಸಿ ಇಲ್ಲಿನ ಐಟಿಐ ಗೇಟ್‌ಮುಂಭಾಗ ನಿಲ್ಲಿಸಿದ್ದ ಆಟೊದಲ್ಲಿ ಮಲಗಿದ್ದಾನೆ. ಪೊಲೀಸರು ಈತನನ್ನು ಕಂಡು ಮನೆಗೆ ಹೋಗುವಂತೆ ಸೂಚಿಸಿ ಹೋಗಿದ್ದಾರೆ.ಆದರೂ ಆತ ಆಟೊದಲ್ಲಿ ಮಲಗಿದ್ದು, ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದೇಹದ ಭಾಗಗಳಿಗೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ರಾತ್ರಿ 1:30ರ ವೇಳೆ ಅಲ್ಲಿಗೆ ಬಂದ ಗಸ್ತು ಪೋಲೀಸರು ಆಟೊದಿಂದ ರಕ್ತ ಸೋರುತ್ತಿರುವುದನ್ನು ಕಂಡು ಹೊಯ್ಸಳ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಹೊಯ್ಸಳ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಕೊಲೆಯಾಗಿರುವುದು ಸಾಬೀತಾಗಿದೆ. ರೌಡಿಶೀಟರ್ ರಮೇಶ್‌ನನ್ನು ಯಾರು ಕೊಲೆ ಮಾಡಿದ್ದಾರೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಹಳೇ ದ್ವೇಷದಲ್ಲಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರಕರಣ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಕೆ.ಆರ್.ಪುರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.