ರೋಗ ಪೀಡಿತ ಕಿದ್ವಾಯಿ ಆಸ್ಪತ್ರೆ : ಸಚಿವರ ನಿರ್ಲಕ್ಷ್ಯ
ಅರಾಜಕತೆ-ಅವ್ಯವಹಾರದ ಶಂಕೆ
ದಕ್ಷಿಣ ಭಾರತದ ಪ್ರಮುಖ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಎನಿಸಿಕೊಂಡಿರುವ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯೇ ಈಗ ರೋಗಗ್ರಸ್ತವಾಗಿರುವ ಶಂಕೆ ಮೂಡಿಸುತ್ತಿದೆ.
ಪ್ರತೀ ವರ್ಷ ಲಕ್ಷಾಂತರ ಜನರಿಗೆ ಚಿಕಿತ್ಸೆ ನೀಡುವ ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಕೋಟ್ಯಂತರ ರೂಪಾಯಿ ಅನುದಾನ ಪಡೆಯುತ್ತಿದೆ. ಸಂಸ್ಥೆಯ ಆಡಳಿತ ನಿರ್ವಹಣೆ, ನೇಮಕಾತಿ, ಖರ್ಚು-ವೆಚ್ಚಗಳು, ಕಟ್ಟಡ ನಿರ್ಮಾಣ, ಯಂತ್ರೋಪಕರಣಗಳ ಖರೀದಿ, ಔಷಧ ಮಾರಾಟ ಇವೇ ಮುಂತಾದ ಪ್ರತಿಯೊಂದು ವಿಷಯಕ್ಕೂ ನಿಯಮಾವಳಿಗಳಿದ್ದು, ಕಿದ್ವಾಯಿ ಸಂಸ್ಥೆ ಕೇಂದ್ರ-ರಾಜ್ಯ ಸರಕಾರಗಳೆರಡಕ್ಕೂ ಉತ್ತರದಾಯಿತ್ವ ಹೊಂದಿದೆ. ಸರಕಾರದ ಎಲ್ಲ ಕಾನೂನು ನಿಯಮಗಳು ಕಿದ್ವಾಯಿ ಆಸ್ಪತ್ರೆಯ ವ್ಯವಹಾರಗಳಿಗೂ ಅನ್ವಯವಾಗುತ್ತವೆ. ಆದರೆ ಆಡಳಿತ ನಿರ್ವಹಣೆ, ಖರೀದಿ, ಆಂತರಿಕ ಆಡಿಟ್ ವಿಚಾರಗಳಿಗೆ ಸಂಬಂಧಿಸಿದಂತೆ ಕಿದ್ವಾಯಿ ಆಸ್ಪತ್ರೆಯಲ್ಲಿ ಹಲವು ಏರುಪೇರುಗಳು ಕಂಡುಬಂದಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.
ಸಂಸ್ಥೆಯ ಹಾಲಿ ನಿರ್ದೇಶಕರಾದ ಡಾ. ಕೆ.ಬಿ. ಲಿಂಗೇಗೌಡರ ವಿರುದ್ಧವೂ ಸೇರಿದಂತೆ ಒಟ್ಟಾರೆ 12 ಪ್ರಕರಣಗಳು ಈ ಹಿಂದಿನ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿದ್ದು ತನಿಖೆಯ ಹಂತದಲ್ಲಿದ್ದವು. ಸಂಸ್ಥೆಯ ದುರಾಡಳಿತದ ಬಗ್ಗೆ ತನಿಖೆ ನಡೆಸಲು ಸರಕಾರ ಟಿ.ಎಂ.ಎಚ್. ಕುಮಾರ್ ನೇತೃತ್ವದ ಸಮಿತಿಯೊಂದನ್ನು ನೇಮಿಸಿತ್ತು. 2013ರ ಜೂನ್‌ನಲ್ಲಿ ಕುಮಾರ್ ಸಮಿತಿಯು ವರದಿ ನೀಡಿದ್ದರೂ ಪತ್ತೆಯಾದ ಲೋಪದೋಷಗಳ ಬಗ್ಗೆ ರಾಜ್ಯ ಸರಕಾರ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಕಂಡುಬಂದಿದೆ.
ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ವಿಧಾನಸಭಾ ಅಧಿವೇಶನದಲ್ಲೇ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ನೀಡಿದ್ದ ಭರವಸೆಯು ಕೇವಲ ಭರವಸೆಯಾಗಿಯೇ ಉಳಿದಿರುವುದು ಕಂಡು ಬಂದಿದೆ.
ಸಂಸ್ಥೆಯ ಈ ಹಿಂದಿನ ನಿರ್ದೇಶಕರಾಗಿದ್ದ ಡಾ. ವಿಜಯ ಕುಮಾರ್‌ರ ವಿರುದ್ಧ 30 ಕೋಟಿ ರೂಪಾಯಿಗಳ ಅನುದಾನ ದುರುಪಯೋಗ ಸೇರಿದಂತೆ ಹಲವು ಅಕ್ರಮಗಳ ಬಗ್ಗೆ ಕುಮಾರ್ ಸಮಿತಿಯ ವರದಿಗಳಿದ್ದಾಗಲೂ ಅವರ ಮೇಲೆ ಕ್ರಮ ಕೈಗೊಳ್ಳುವ ಬದಲಾಗಿ ಸ್ವಯಂ ನಿವೃತ್ತಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಇತ್ತೀಚಿಗೆ ಕಿದ್ವಾಯಿ ಸಂಸ್ಥೆಗೆ ವಿವಿಧ ಶ್ರೇಣಿಗಳ ನಾಲ್ಕು ಹೈ ಎನರ್ಜಿ ಲೀನಿಯರ್ ಆಕ್ಸಲರೇಟರ್ ಉಪಕರಣಗಳ ಖರೀದಿಗಾಗಿ ಜಾಗತಿಕ ಟೆಂಡರ್ ಕರೆಯಲಾಗಿದ್ದು, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಕೆಲವೊಂದು ಆದೇಶಗಳನ್ನು ಮೀರಿ ಒಂದು ಖಾಸಗಿ ಕಂಪೆನಿಗೆ ಸರಬರಾಜು ಆದೇಶ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ.
ಟೆಂಡರ್ ಪ್ರಕ್ರಿಯೆಯಲ್ಲಿ ಮೊದಲಿಗೆ ತಾಂತ್ರಿಕ ಬಿಡ್ ಅನ್ನು ತೆರೆದು ಅರ್ಹರನ್ನು ಪರಿಗಣಿಸಿ ನಂತರ ದರಪಟ್ಟಿಯ ಬಿಡ್ ತೆರೆಯಬೇಕೆಂಬ ಮೂಲಭೂತ ನಿಯಮವನ್ನೇ ಉಲ್ಲಂಘಿಸಲಾಗಿದೆ ಎಂಬ ವಿಷಯ ಈಗ ವಿವಾದದ ರೂಪ ತಾಳಿದೆ.
ಸದರಿ ಯಂತ್ರೋಪಕರಣಗಳ ಕಾರ್ಯಕ್ಷಮತೆ ಬಗ್ಗೆ ಖಚಿತ ಪಡಿಸಿಕೊಳ್ಳಲು ಮಹಾರಾಷ್ಟ್ರದ ಪೂನಾ ಆಸ್ಪತ್ರೆ ಹಾಗೂ ಆದಿತ್ಯ ಬಿರ್ಲಾ ಆಸ್ಪತ್ರೆಗಳಿಗೆ ಪರಿಣಿತರ ತಂಡವೊಂದನ್ನು ಕಳುಹಿಸಬೇಕೆಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ದಿನಾಂಕ 14.1.2016ರಂದು ನೀಡಿದ್ದ ಆದೇಶವನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಅಲ್ಲದೆ ಸರಬರಾಜಿಗೆ ಆಯ್ಕೆಯಾಗಿರುವ ಖಾಸಗಿ ಸಂಸ್ಥೆಯ ದರಗಳು ಮಾರುಕಟ್ಟೆಯ ದರಗಳಿಗಿಂತ 36 ಕೋಟಿ ರೂ.ಯಷ್ಟು ಹೆಚ್ಚಾಗಿದೆ ಎಂಬ ವಿಚಾರವೂ ಈಗ ದೂರಿನ ರೂಪತಾಳಿ ವೈದ್ಯಕೀಯ ಶಿಕ್ಷಣ ಇಲಾಖೆಯ ಮೆಟ್ಟಿಲೇರಿದೆ.
ಕಿದ್ವಾಯಿ ಆಸ್ಪತ್ರೆಯಲ್ಲಿ ಸಿಬ್ಬಂದಿ ನೇಮಕ, ಭಡ್ತಿ ವಿಚಾರದಲ್ಲಿ ರೋಸ್ಟರ್ ನಿಯಮಗಳ ಉಲ್ಲಂಘನೆ ಬಗ್ಗೆ ಆಂತರಿಕ ಆಡಿಟ್ ನಡೆಸದಿರುವ ಬಗ್ಗೆ, ಕಟ್ಟಡ ನಿರ್ಮಾಣ, ವಾಹನ ಖರೀದಿಗಳ ಬಗ್ಗೆಯೂ ನಿಯಮಾವಳಿಗಳನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ಅಸಂಖ್ಯ ದೂರುಗಳು ಇಲಾಖೆಯ ಮೇಲಧಿಕಾರಿಗಳಿಗೆ ತಲುಪಿದ್ದರೂ ಇದುವರೆವಿಗೂ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳದೆ ಇರುವುದು ಕಂಡುಬರುತ್ತಿದೆ. ಕರ್ನಾಟಕದ ಪ್ರಮುಖ ಹಾಗೂ ಜನೋಪಯೋಗಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವೆನಿಸಿಕೊಂಡಿರುವ ಕಿದ್ವಾಯಿ ಸ್ಮಾರಕ ಆಸ್ಪತ್ರೆಯ ಸಮಸ್ಯೆಗಳನ್ನು ಪರಿಹರಿಸಿ ಸರಿದಾರಿಗೆ ತರಲು ಸರಕಾರ ಈಗಲಾದರೂ ಗಮನ ನೀಡುವುದೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿದೆ.
ರಫಿ ಅಹ್ಮದ್ ಕಿದ್ವಾಯಿ ಕೊಡುಗೆ
1973ರಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯ ಮೂಲಕರ್ತೃ ರಫಿ ಅಹ್ಮ್ಮದ್ ಕಿದ್ವಾಯಿ.
ಮುಂಬೈ ಪ್ರಾಂತದ ರಾಜ್ಯಪಾಲರಾಗಿದ್ದ ರಫಿಯವರು ಹೊಸೂರು ರಸ್ತೆಯಲ್ಲಿದ್ದ ತಮ್ಮ ಒಡೆತನದ 20 ಎಕರೆ ಜಮೀನು ಹಾಗೂ ಒಂದು ಲಕ್ಷ ರೂಪಾಯಿ ದೇಣಿಗೆಯನ್ನು ಈ ಆಸ್ಪತ್ರೆ ನಿರ್ಮಾಣಕ್ಕಾಗಿ ಅಂದಿನ ಮೈಸೂರು ಸರಕಾರಕ್ಕೆ ದಾನ ನೀಡಿದ್ದರು.
ಉತ್ತರ ಪ್ರದೇಶದವರಾದ ರಫಿ ಕಿದ್ವಾಯಿ ಸ್ವಾತಂತ್ರ ಹೋರಾಟಗಾರ ಹಾಗೂ ಸಮಾಜವಾದಿಯಾಗಿದ್ದರು. ನೆಹರೂ ಸರಕಾರದಲ್ಲಿ ಪ್ರಸಾರ ಖಾತೆ ಸಚಿವರೂ ಆಗಿದ್ದರು.