ನಿರಂಜನ ಸಾಹಿತ್ಯ
ಕನ್ನಡದ ಆಧುನಿಕ ಸಾಹಿತ್ಯದಲ್ಲಿ ಅನೇಕರಿಗೆ ಸಿಕ್ಕಬೇಕಾದ ಗೌರವಾದರಗಳು ಸಿಕ್ಕಿಲ್ಲವೆಂಬ ಮಾತಿದೆ. ಇದು ಸತ್ಯವೆಂಬಂತೆ ಕೆಲವೇ ಸಾಹಿತಿಗಳ ಸುತ್ತ ರಂಗವಲ್ಲಿ ಹಾಕುವ ವಿಮರ್ಶೆಯ ದಂಡೇ ಇದೆ. ಹೀಗೆ ಮನ್ನಣೆ ಪಡೆದ ಸಾಹಿತಿಗಳೂ ದೊಡ್ಡವರೇ. ಆದರೆ ಅವರಲ್ಲನೇಕರು ‘ಮಿಸುಕಲಾರೆವು ಚಕ್ರಭಂಡಾರಿಸಿತು ಮುನ್ನಿನ ಜೌವನದ ಬಲ ಮುಸುಳಿತಾವುಂಡಾಡಿಭಟ್ಟರು’ ಎಂದು ಹೇಳುವಂತಿದ್ದರೂ ಕೇಳದೆ ಅವರ ಸುತ್ತಲೇ ಗಿರಕಿ ಹೊಡೆವ ಲೇಖನಗಳು, ಕೃತಿಗಳನೇಕ. ಬರೆಯುವ ಆಯ್ಕೆ ಅವರವರದಾದರೂ ಕನಿಷ್ಠ ನ್ಯಾಯಪರತೆಯಿಲ್ಲದಿದ್ದರೆ ಈ ವಿಮರ್ಶೆಗಳು ಕಾಲದ ಸುಳಿಯಲ್ಲಿ ಸಿಕ್ಕು ತರಗೆಲೆಗಳಂತೆ ಮಾಯವಾದರೆ ಅಚ್ಚರಿಯಿಲ್ಲ.
ಮೊನ್ನೆ ಸಾಹಿತಿ ನಿರಂಜನರ ಕುರಿತು ದಿಲ್ಲಿಯ ಕರ್ನಾಟಕ ಸಂಘ ಮತ್ತು ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇವು ಜಂಟಿಯಾಗಿ ದಿಲ್ಲಿಯಲ್ಲಿ ನಡೆಸಿದ ಒಂದು ವಿಚಾರ ಸಂಕಿರಣದಲ್ಲಿ ಭಾಷಣಕಾರನಾಗಿ ಭಾಗವಹಿಸುವ ಸಂದರ್ಭ ನನಗೆ ಸಿಕ್ಕಿತು. ಈ ನೆಪದಲ್ಲಿ ನಿರಂಜನರ ಒಟ್ಟು ಸಾಹಿತ್ಯವನ್ನು ಒಮ್ಮೆ ಮರುಶೋಧಿಸುವ ಅವಕಾಶವು ದಕ್ಕಿತು. ಮಾತ್ರವಲ್ಲ ಮತ್ತೆ ರೋಮಾಂಚಿತನಾಗುವ ಅದೃಷ್ಟವೂ ಲಭಿಸಿತು. ಇದಕ್ಕೆ ಕಾರಣಗಳು ಹಲವಾರು:
ಕನ್ನಡದ ಆಧುನಿಕ ಸಾಹಿತ್ಯದಲ್ಲಿ ಅನೇಕರಿಗೆ ಸಿಕ್ಕಬೇಕಾದ ಗೌರವಾದರಗಳು ಸಿಕ್ಕಿಲ್ಲವೆಂಬ ಮಾತಿದೆ. ಇದು ಸತ್ಯವೆಂಬಂತೆ ಕೆಲವೇ ಸಾಹಿತಿಗಳ ಸುತ್ತ ರಂಗವಲ್ಲಿ ಹಾಕುವ ವಿಮರ್ಶೆಯ ದಂಡೇ ಇದೆ. ಹೀಗೆ ಮನ್ನಣೆ ಪಡೆದ ಸಾಹಿತಿಗಳೂ ದೊಡ್ಡವರೇ. ಆದರೆ ಅವರಲ್ಲನೇಕರು ‘ಮಿಸುಕಲಾರೆವು ಚಕ್ರಭಂಡಾರಿಸಿತು ಮುನ್ನಿನ ಜೌವನದ ಬಲ ಮುಸುಳಿತಾವುಂಡಾಡಿಭಟ್ಟರು’ ಎಂದು ಹೇಳುವಂತಿದ್ದರೂ ಕೇಳದೆ ಅವರ ಸುತ್ತಲೇ ಗಿರಕಿ ಹೊಡೆವ ಲೇಖನಗಳು, ಕೃತಿಗಳನೇಕ. ಬರೆಯುವ ಆಯ್ಕೆ ಅವರವರದಾದರೂ ಕನಿಷ್ಠ ನ್ಯಾಯಪರತೆಯಿಲ್ಲದಿದ್ದರೆ ಈ ವಿಮರ್ಶೆಗಳು ಕಾಲದ ಸುಳಿಯಲ್ಲಿ ಸಿಕ್ಕು ತರಗೆಲೆಗಳಂತೆ ಮಾಯವಾದರೆ ಅಚ್ಚರಿಯಿಲ್ಲ. ಈ ಬಗ್ಗೆ ಅಡಿಗರ ದೊಡ್ಡವರ ಸಹವಾಸ ಕವಿತೆ ಸಾಕಷ್ಟು ಹೇಳಿದೆ: ‘ದೊಡ್ಡವರ ಸಹವಾಸ ಸಾಕೋ ಸಾಕು ಈ ದೇಶಕ್ಕೆ: ಉದ್ದಕ್ಕು ಅವರ ಉದ್ದುರುಟು ಮಾತೇ’. ಎಂದು ಅರಂಭವಾಗುವ ಕವಿತೆಯು ‘ಜನ್ಮದಿನ, ಪುಣ್ಯ ತಿಥಿ, ಶತಮಾನೋತ್ಸವದ ವಿಜೃಂಭಣೆ ವರ್ಷವಿಡಿ; ಆಲಸಿಗರ ಭಾರೀ ಮೆರವಣಿಗೆ’ ಎನ್ನುತ್ತದೆ. ಅಡಿಗರನ್ನು ನೆನಪಿಸುವ ಮಂದಿ ಅವರ ಈ ಸಾಲುಗಳನ್ನು ಮತ್ತು ಮುಂದೆ ಬರುವ ‘ಯಾವಾಗಲೋ ಬಂದು ಬಡಿವುಲ್ಕೆಗಳಿಗಾಗಿ ಲಕ್ಷ ನಕ್ಷತ್ರ ಕಣ್ಮುಚ್ಚಬೇಕೆ? ಸೂರ್ಯ ಅಡಗಿದ ಮೇಲೆ, ಚಂದ್ರನಿಲ್ಲದ ವೇಳೆ ಎಂದೆಂದಿಗೂ ಕೊನೆಗೆ ಮಿನುಗು ಬೆಳಕೇ’. ಎಂಬ ಸಾಲುಗಳೊಂದಿಗೆ ಮುಗಿಯುವ ಈ ಕವಿತೆಯನ್ನು ಗಮನಿಸಿದಂತಿಲ್ಲ. ಇಷ್ಟೇ ಅಲ್ಲ, ಅಡಿಗರ ‘ಬಿ.ಎಂ.ಶ್ರೀ -ಅವರಿಗೆ’ ಎಂಬ ಕವಿತೆಯ ‘ದೊಡ್ಡವರು ನೀವು. ನಾವೇನು ಕುಬ್ಜರಲ್ಲ’ ಎಂಬುದರ ಅರ್ಥವನ್ನೂ ಭಾವವನ್ನೂ ವಿಚಾರವನ್ನೂ ಹೀರಿದಂತಿಲ್ಲ. ಈಗ ನಡೆಯುತ್ತಿರುವ ಅಡಿಗ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಈ ವಿಚಾರ ನೆನಪಿಗೆ ಬಂದದ್ದು ಹೌದು.
***
ನಿರಂಜನರೆಂದು ಸಾಹಿತ್ಯ ಲೋಕ ಗುರುತಿಸಿದ ಕುಳ್ಕುಂದ ಶಿವರಾಯರು (1924-1992) ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸುಬ್ರಹ್ಮಣ್ಯದಲ್ಲಿರುವ ಕುಳ್ಕುಂದದವರು. ಕುಳ್ಕುಂದವು ಜಾನುವಾರು ಜಾತ್ರೆಗೆ ಬಹಳ ಪ್ರಸಿದ್ಧವಾದದ್ದು. ಸುಬ್ರಹ್ಮಣ್ಯವು ತನ್ನ ದೇವಾಲಯಕ್ಕೆ ಕರಾವಳಿಯ ಈ ಭಾಗದಲ್ಲಿ ಖ್ಯಾತಿವೆತ್ತ ಕ್ಷೇತ್ರ. ಈಚೆಗೆ ಸುಬ್ರಹ್ಮಣ್ಯದ ದೇವಾಲಯ ಗಳಿಕೆಯಲ್ಲಿ ವಿಕ್ರಮವನ್ನು ಸಾಧಿಸಿದ ಅನಂತರ ಸುಬ್ರಹ್ಮಣ್ಯವು ಭಾರೀ ಜನಾಕರ್ಷಕ ತೀರ್ಥಕ್ಷೇತ್ರವಾಗಿದೆ. ಕುಳ್ಕುಂದ ಶಿವರಾಯರು ಕಡು ಬಡತನದ ಬಾಲ್ಯವನ್ನು ಈ ಕುಳ್ಕುಂದದಲ್ಲಿ ಕಳೆದು ಮುಂದೆ ಕಾವಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದು ಆನಂತರ ಸುಳ್ಯದಲ್ಲಿ 7ನೆ ತರಗತಿಯ ವರೆಗೂ ಓದಿದರು. ಅವರ ತಾಯಿ ಒಂದರ್ಥದಲ್ಲಿ ಬಹಿಷ್ಕೃತೆಯಾದರೂ ಸ್ವಾಭಿಮಾನದಲ್ಲಿ ಬದುಕಿದವರು. ಸುಳ್ಯದಲ್ಲಿ ಕ್ಯಾಂಟೀನ್ ನಡೆಸಿ ತಾನೂ ಬದುಕಿ ಮಗನನ್ನು ಸಲಹಿದರು. ಆಗ ಕೊಡಗಿನಿಂದ ಬರುತ್ತಿದ್ದ ಎತ್ತಿನ ಗಾಡಿಗಳಲ್ಲಿ ತುಂಬಿ ಬರುತ್ತಿದ್ದ ಕಾಫಿ ಬೇಳೆಗಳಲ್ಲಿ ಕೆಲವಾದರೂ ರಸ್ತೆಗಳಲ್ಲಿ ಚೆಲ್ಲುತ್ತಿದ್ದುವಂತೆ. ಅವನ್ನು ಬಾಲಕ ಶಿವರಾಯ ಹೆಕ್ಕಿ ಅಮ್ಮನಿಗೆ ತಂದುಕೊಡುತ್ತಿದ್ದರಂತೆ ಮತ್ತು ಅದನ್ನು ಅಮ್ಮ ಹುರಿದು ಹುಡಿಮಾಡಿ ಕಾಫಿ ಮಾಡಿ ಮಾರುತ್ತಿದ್ದರಂತೆ. (ಈ ಮಾಹಿತಿ ನೀಡಿದ ಡಾ. ಎಚ್.ಎಮ್.ಕುಮಾರಸ್ವಾಮಿಯವರಿಗೆ ನಾನು ಋಣಿ.) 8ನೆ ತರಗತಿಗೆ ಹೋಗಲು ಬೇಕಾದ ಹಣಕಾಸಿನ ಪೂರೈಕೆಯಾಗದಾಗ ಶಿವರಾಯ ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರಕ್ಕೆ ಹೋಗಿ ಅಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ಪಡೆದರು. ಜೊತೆಗೆ ಸ್ವಾತಂತ್ರ್ಯ ಹೋರಾಟದ ರುಚಿ ಸವಿದರು. ಭೂಗತ ನಾಯಕರ ಸಂಪರ್ಕ ಸಾಧಿಸಿದರು. ಎಡಪಂಥದ ತತ್ವಗಳಿಗೆ ಮನಸೋತರು. ಅಲ್ಲಿ ಮೆಟ್ರಿಕ್ ಪಾಸಾಗಿ (ಪ್ರಥಮ ದರ್ಜೆಯಲ್ಲಿ ಪಾಸಾದರೂ ಪ್ರತಿಭಟನಾರ್ಥವಾಗಿ ತೇರ್ಗಡೆ ಪ್ರಮಾಣಪತ್ರವನ್ನು ನಿರಾಕರಿಸಿದರು.) ಮುಂದೆ ಮಂಗಳೂರಿನಲ್ಲಿ ಕಡೆಂಗೋಡ್ಲು ಶಂಕರಭಟ್ಟರ ಸಾರಥ್ಯದ ‘ರಾಷ್ಟ್ರಬಂಧು’ ಪತ್ರಿಕೆಯಲ್ಲಿ ಉಪಸಂಪಾದಕರಾಗಿ, ನಗರ ಪ್ರತಿನಿಧಿಯಾಗಿ ದುಡಿದರು. ಹೀಗೆ ಆರಂಭವಾದ ಅವರ ಪತ್ರಿಕೋದ್ಯಮ ಅವರನ್ನು ಮುಂದೆ ಬೆಂಗಳೂರು, ಮೈಸೂರು, ಧಾರವಾಡ ಹೀಗೆ ಕರ್ನಾಟಕದಾದ್ಯಂತ ಸುತ್ತಿಸಿತು. ಪ್ರಜಾಮತ, ಜನಶಕ್ತಿ, ಸಂಯುಕ್ತ ಕರ್ನಾಟಕ, ಉಷಾ, ತಾಯಿನಾಡು, ಜನವಾಣಿ, ನವಭಾರತ ಹೀಗೆ ಎಲ್ಲ ಕಡೆ ದುಡಿಮೆ. ಅನೇಕ ಅಂಕಣಗಳೊಂದಿಗೆ ಜನಪ್ರಿಯತೆ. ಜೊತೆಯಲ್ಲಿ ಅನೇಕ ಸಾಹಿತ್ಯ ಸಂಘಟನೆಗಳಲ್ಲಿ ಭಾಗೀದಾರ. 19ನೆ ಹರೆಯದಲ್ಲೇ ಅನಕೃ ಅವರೊಂದಿಗೆ ಪ್ರಗತಿಶೀಲತೆಯ ಹರಿಕಾರತ್ವ. 1948-50ರ ಅವಧಿಯಲ್ಲಿ ಎಡ ಪಕ್ಷಗಳ ವಿರುದ್ಧ ಸರಕಾರದ ದಬ್ಬಾಳಿಕೆಯಿಂದಾಗಿ ಭೂಗತ ಜೀವನ. ಅಂತೂ ಮೈ-ಮನಸ್ಸೆಲ್ಲ ಕೆಂಬಣ್ಣ.
ನಂತರದ ಅವಧಿಯಲ್ಲಿ ಶಿವರಾಯರು ಪಕ್ಷರಾಜಕೀಯ ಚಟುವಟಿಕೆಗಳನ್ನು ಕಳಚಿಕೊಂಡು ಸಾಹಿತ್ಯದ ಕಾಯಕವನ್ನು ಮುಂದುವರಿಸಿ ನಿರಂಜನರಾದರು. ಆದರೂ ಹಳೆಯ ಬಾಕಿ ತೀರಿಸುವಂತೆ ಬಂಧನಕ್ಕೊಳಗಾದ್ದುಂಟು. 13ನೆಯ ವಯಸ್ಸಿನಲ್ಲಿ ಮೊದಲ ಕಥೆ ಮೋಹಜಾಲ ಪ್ರಕಟವಾದರೂ ಮೊದಲ ಕತಹಸಂಕಲನ ಪ್ರಕಟವಾದದ್ದು 1953ರಲ್ಲಿ. ಮೊದಲ ಕಾದಂಬರಿ ವಿಮೋಚನೆ ಅದೇ ವರ್ಷ ಪ್ರಕಟ. ಅಲ್ಲಿಂದ ಅವಿರತವಾಗಿ ನಿರಂಜನರ ಲೇಖನಿ ಹರಿಯಿತು. ಬನಶಂಕರಿ, ಸೌಭಾಗ್ಯ, ಅಭಯ, ದೂರದ ನಕ್ಷತ್ರ, ಪಾಲಿಗೆ ಬಂದ ಪಂಚಾಮೃತ, ಏಕಾಂಗಿನಿ, ಚಿರಸ್ಮರಣೆ, ಕೊನೇ ನಮಸ್ಕಾರ, ಕಲ್ಯಾಣಸ್ವಾಮಿ, ಸ್ವಾಮಿ ಅಪರಂಪಾರ ಮುಂತಾದ ಅನೇಕ ಜನಪ್ರಿಯ ಕಾದಂಬರಿಗಳೊಂದಿಗೆ ಗಾರ್ಕಿಯ ತಾಯಿ ಸಹಿತ ಅನೇಕ ಅನುವಾದಗಳೂ ಪ್ರಕಟವಾದವು. ನಿರಂಜನರ ಕೃತಿಗಳ ಪಟ್ಟಿ ಬಹಳ ಉದ್ದವಿದೆ. ಅದಿಲ್ಲಿ ಅಪ್ರಸ್ತುತ. ಈ ನಡುವೆ ಡಾ. ವೆಂಕಟಲಕ್ಷ್ಮೀ ನಿರಂಜನರನ್ನು ಮದುವೆಯಾಗಿ ಅನುಪಮಾ ನಿರಂಜನರಾದರು. ಮುಂದೆ ಈ ದಂಪತಿ ಕನ್ನಡ ಸಾಹಿತ್ಯದ ಅಪೂರ್ವ ಸಾರಸ್ವತ ಜೋಡಿಯಾದರು. ನಿರಂಜನರು 1969-74ರ ಅವಧಿಯಲ್ಲಿ ಕಿರಿಯರ ವಿಶ್ವಕೋಶ ‘ಜ್ಞಾನ ಗಂಗೋತ್ರಿ’ಯ ಪ್ರಧಾನ ಸಂಪಾದಕತ್ವವನ್ನು ವಹಿಸಿಕೊಂಡರು. ಆ ಹೊತ್ತಿಗಾಗಲೇ ನಿರಂಜನರು ಕನ್ನಡ ಸಾಹಿತ್ಯದಲ್ಲಿ ಪ್ರಗತಿಶೀಲವೆಂಬ ಹೆಸರಿನ ಒಂದು ವಿಶಿಷ್ಟ ಸಾಹಿತ್ಯ ಪಂಥದ ಪ್ರಮುಖರಾಗಿ ಗುರುತಿಸಿಕೊಂಡಿದ್ದರೂ ಅತ್ಯಂತ ಜನಪ್ರಿಯ ಮತ್ತು ಉತ್ತಮ ಬರಹಗಾರರಾಗಿದ್ದರು. ಯಾವುದೇ ಅಕಾಡಮಿಕ್ ಶಿಕ್ಷಣವಿಲ್ಲದೆ, ಯಾವ ಶಿಫಾರಸು ಪತ್ರವಿಲ್ಲದೆ, ಸಾಹಿತ್ಯದ ಕುರಿತು ನಿರ್ಭೀತಿಯಿಂದ ತಮ್ಮ ಅಭಿಪ್ರಾಯಗಳನ್ನು ಸೋದಾಹರಣವಾಗಿ ಹೇಳಬಲ್ಲವರಾಗಿದ್ದರು. ನಿರಂಜನರ ಹೊರತಾಗಿ 20ನೆ ಶತಮಾನದ 5ರಿಂದ 7ನೆ ದಶಕಗಳನ್ನು ಕಲ್ಪಿಸುವುದೂ ಅಸಾಧ್ಯವೆಂಬಷ್ಟು ವೈಚಾರಿಕ ಸಮೃದ್ಧಿಯನ್ನು ಹೊಂದಿದ್ದರು. 1971ರಲ್ಲಿ ಅವರು ಪಾರ್ಶ್ವವಾಯುವಿಗೆ ತುತ್ತಾದರೂ ವಿಶ್ವಕೋಶದ ಬೆನ್ನುಹತ್ತಿ ಗೆದ್ದರು. ಮುಂದೆ ಪ್ರಗತಿಪಂಥದ ಸಂಸ್ಥಾಪನಾ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಮುನ್ನಡೆಸಿ ಮರುವರ್ಷ ತನ್ನ ಮುಂದಾಳತ್ವವನ್ನು ಇತರರ ಹೆಗಲಿಗೆ ಒಪ್ಪಿಸಿ ಸಕ್ರಿಯತೆಯಿಂದ ಹೊರಬಂದರು. 1976ರಲ್ಲಿ ಮೃತ್ಯುಂಜಯ ಎಂಬ ಬೃಹತ್ ಕಾದಂಬರಿಯ ರಚನೆ. ಆರೋಗ್ಯಭಾಗ್ಯ ವಂಚಿತರಾಗಿಯೂ ‘ವಿಶ್ವಕತಹಕೋಶ’ವನ್ನು ಹೊರತಂದರು. ಬ್ರಿಟನ್ ಮತ್ತು ಅಮೆರಿಕ ಅಲ್ಲದೆ ಮೂರನೆಯ ದೇಶವೊಂದರಲ್ಲಿ ಸಾಹಿತ್ಯವಿರಬಹುದೆಂಬ ನಂಬಿಕೆಯನ್ನು ಅಲ್ಲಗಳೆಯುವಂತಿದ್ದ ಸವೆದ ಹಾದಿಯನ್ನು ಬಿಟ್ಟು ಹಂಗೇರಿ ಮುಂತಾದ ಪುಟ್ಟದೇಶ-ಭಾಷೆಗಳ ಕತೆಗಳನ್ನು ಕನ್ನಡಿಸಿದರು. ಕನ್ನಡ ಅನುವಾದ ಸಾಹಿತ್ಯದಲ್ಲಿ ಇದೊಂದು ದಾಖಲೆ. ನಿರಂಜನರ ಕಥೆ-ಕಾದಂಬರಿಗಳು ಕನ್ನಡ ಆಧುನಿಕ ಸಾಹಿತ್ಯದಲ್ಲಿ ಉಲ್ಲೇಖಗೊಳ್ಳ ಲೇಬೇಕಾದ ಮತ್ತು ವೌಲ್ಯನಿರ್ಣಯಗೊಳ್ಳಲೇಬೇಕಾದ ಸಾಹಿತ್ಯವಾಗಿದ್ದರೂ ಅವರ ಸಾಧನೆಗೆ ಸರಿಸಮನಾದ ತೌಲನಿಕ ಅಧ್ಯಯನ ನಡೆಯದಿರುವುದು ಸೋಜಿಗದ ವಿಚಾರ. ಅವರ ಬದುಕು-ಬರೆಹ ಇವೆರಡೂ ಕ್ರಾಂತಿಕಾರಕವೇ. ಯಾವ ಹಂತದಲ್ಲೂ ಸೋಲನ್ನೊಪ್ಪದ ವ್ಯಕ್ತಿತ್ವ. ಈ ವೌಲ್ಯಕ್ಕೆ ‘ಚಿರಸ್ಮರಣೆ’, ‘ಕಲ್ಯಾಣಸ್ವಾಮಿ’, ‘ಸ್ವಾಮಿ ಅಪರಂಪಾರ’, ‘ಮೃತ್ಯುಂಜಯ’ ಇವೇ ಮೊದಲಾದ ಕೃತಿಗಳನ್ನು ಉದಾಹರಿಸಬಹುದು.
‘ಚಿರಸ್ಮರಣೆ’ ಕಾದಂಬರಿ ನೀಲೇಶ್ವರದ ಸಮೀಪದ ಕಯ್ಯೂರಿನ ಪುಟ್ಟ ಕ್ರಾಂತಿಯ ವಿರಾಟ್ ದರ್ಶನ. ಆ ಕ್ರಾಂತಿ ನಡೆದದ್ದು 1940-41ರ ಅವಧಿಯಲ್ಲಿ. ಅದು ಎಲ್ಲ ಸ್ವಾತಂತ್ರ್ಯ ಹೋರಾಟಗಳಿಂದ ಭಿನ್ನವಾದದ್ದು. ಊಳಿಗಮಾನ್ಯ ಜಮೀನ್ದಾರಿ ಪದ್ಧತಿಯ ಕ್ರೂರ ಉರುಳಿನಿಂದ ಪಾರಾಗಲು ರೈತರನ್ನು, ದುಡಿಮೆಗಾರರನ್ನು ಒಂದುಗೂಡಿಸುವ ಹುಮ್ಮಸ್ಸಿನ ಚಟುವಟಿಕೆ ಹೇಗೆ ಈ ಭೂಮಾಲಕರಿಗೆ ಒತ್ತಾಸೆಯಾಗಿ ನಿಂತ ಪ್ರಭುತ್ವದ ವಿರುದ್ಧದ ಕ್ರಾಂತಿಯ, ಸೆಣಸಿನ ಸ್ವರೂಪವಾಗಿ ಬದಲಾಗುತ್ತದೆಯೆಂಬುದಕ್ಕೆ ಈ ಕಾದಂಬರಿ ಮಹತ್ತರ ದೃಷ್ಟಿಕೋನವನ್ನೊದಗಿಸುತ್ತದೆ. ಇದು ಕನ್ನಡದಲ್ಲೇ ಅನೇಕ ಮರುಮುದ್ರಣಗಳನ್ನು ಕಂಡಿತಲ್ಲದೆ ಮಲೆಯಾಳ, ಮರಾಠಿ, ತೆಲುಗು, ತಮಿಳು, ಇಂಗ್ಲಿಷ್ ಮುಂತಾದ ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ. ಚಿರಸ್ಮರಣೆ ಕಾದಂಬರಿಯ ಕೊನೆಯಲ್ಲಿ ಈ ವಾಕ್ಯಗಳಿವೆೆ: ‘ಕಯ್ಯೂರಿನ ಆ ರಾತ್ರಿ ದೀರ್ಘವಾಗಿತ್ತು. ಆದರೂ ಸಾವಕಾಶವಾಗಿ ಕತ್ತಲು ಕರಗಿ ಬೆಳಕು ಹರಿಯಿತು’. ಮೃತ್ಯುಂಜಯ ಕಾದಂಬರಿಯ ಕೊನೆಯಲ್ಲೂ ಇದನ್ನೇ ಹೋಲುವ ‘ಕತ್ತಲಾದ ಮೇಲೆ ಬೆಳಕು ಹರೀತದೆ. ಇದು ಸಾಮಾನ್ಯ ಅಂತ ತೋರುವ ಅಸಾಮಾನ್ಯ ವಿಷಯ. ನೆನಪಿಡಿ’ ಎಂಬ ವಾಕ್ಯಗಳಿವೆ. ಇವೆರಡೂ ಭಾಷೆಯ ಮಿತಿಗಳಲ್ಲ; ವಿನ್ಯಾಸದ ವ್ಯಾಪ್ತಿಗಳು. ನಿರಂಜನರು ಬರೆದ ಎಲ್ಲ ಕೃತಿಗಳಲ್ಲೂ ಸಾಮಾನ್ಯರೇ ಅಸಾಮಾನ್ಯರಾಗುತ್ತಾರೆ. ಎಲ್ಲವೂ ಮತ್ತು ಎಲ್ಲರೂ ಸರಿಯೆಂಬ ಸುಖಭಾವದ ಸಂಪ್ರದಾಯ ಅವರದಲ್ಲ. ಆದರೆ ಒಳ್ಳೆಯದಾಗುತ್ತದೆ ಎಂಬ ನಿಲುವು ಅವರಲ್ಲಿ ಪ್ರತಿಫಲಿಸುತ್ತದೆ. ಸಾಮಾಜಿಕ ಆಯಾಮಗಳನ್ನು ಪರಿಶೋಧಿಸುವಾಗಲೂ ಅವರಲ್ಲಿ ವಾಸ್ತವತೆಯ ಕಲ್ಪನೆಯಿದ್ದು ಅವರು ಪ್ರಗತಿಶೀಲರೇ ಆಗಿದ್ದ ಅನಕೃ ಅವರಿಂದ ಹೇಗೆ ಮತ್ತು ಏಕೆ ಭಿನ್ನರಾದರೆಂಬುದೂ ಗೊತ್ತಾಗುತ್ತದೆ. ಚರಿತ್ರೆಯ ಕುರಿತ ಅವರ ದೃಷ್ಟಿಕೋನ ಇಂದಿನ ಸಬಾಲ್ಟರನ್ ದೃಷ್ಟಿಯ ಸಂಸ್ಕೃತಿಶೋಧನೆಯನ್ನು ಅಂದೇ ಬಿಚ್ಚಿಟ್ಟಿತ್ತು. ಅವರು ಹೇಳುವಂತೆ ‘‘ಇತಿಹಾಸವೆನ್ನುವುದು ರಾಜರಾಣಿಯರ ಕಥೆ, ಎಂಬ ಸಾಮಾನ್ಯ ಕಲ್ಪನೆಯೊಂದುಂಟು. ಅದು ಸರಿಯಲ್ಲ. ಒಬ್ಬ ರಾಜ ಇನ್ನೊಬ್ಬ ರಾಜನ ಮೇಲೆ ಸಾರಿದ ಯುದ್ಧ, ಒಬ್ಬನನ್ನು ಪದಚ್ಯುತಗೊಳಿಸಲು ಮತ್ತೊಬ್ಬ ನಡೆಸಿದ ಯತ್ನ, ಕುಟಿಲ ಕಾರಸ್ಥಾನಗಳು, ‘ವಿಶಿಷ್ಟ’ರೆನಿಸಿದ ಆ ವ್ಯಕ್ತಿಗಳ ಸುಖ ದುಃಖ-ಬರಿಯ ಈ ವಿವರ ಇತಿಹಾಸವೆನಿಸದು. ಕಾಲಕಾಲಕ್ಕೂ ಬದಲಾಗುತ್ತ ಬಂದ ಬದುಕು, ಆಗಿನ ಕಾಲಧರ್ಮ, ಅದರಿಂದ ಪ್ರಭಾವಿತರಾದ ಜನರ ರೀತಿನೀತಿಗಳು, ಆ ಸಾಮಾಜಿಕ ವ್ಯವಸ್ಥೆಯ ಪ್ರಮುಖ ಶಕ್ತಿಗಳು-ಇವು ಇತಿಹಾಸವನ್ನು ರೂಪಿಸುವ ಮುಖ್ಯ ಅಂಶಗಳು. ಸಾಮ್ರಾಜ್ಯಗಳು ಎದ್ದವು, ಬಿದ್ದವು, ಆ ಉತ್ಕರ್ಷ ಅಧಃಪತನಗಳಿಗೆ ಒಬ್ಬ ರಾಜ ಇಲ್ಲವೆ ರಾಣಿ ಮಾತ್ರ ಕಾರಣ ಎನ್ನುವುದು ಸರಿಯಾಗದು. ಆ ಸೃಷ್ಟಿಯ-ಲಯದ ಹಿಂದೆ ಆಯಾ ಜನಾಂಗಗಳ ಕಥೆ ಇದೆ. ಆ ಘಟನೆಗಳ ಹಿಂದೆ ಜನಜೀವನದ-ಸಂಸ್ಕೃತಿಯ- ಸಾಹಿತ್ಯದ ಪ್ರೇರಕ ಶಕ್ತಿಗಳಿವೆ.’’
‘ನಿರಂಜನ’ ಅಂದರೆ ಕಳಂಕರಹಿತ ಎಂದು ಪ್ರತಿಪದಾರ್ಥ. ನಿರಂಜನರೂ ಹಾಗೆಯೇ. ಅವರ ಸಾಹಿತ್ಯದ ಅಧ್ಯಯನಕ್ಕೆ ಅವರ ಜನ್ಮ ಶತಮಾನೋತ್ಸವಕ್ಕೆ ಸರಕಾರ, ವಿಶ್ವವಿದ್ಯಾನಿಲಯ, ಅಕಾಡಮಿಗಳ ಪ್ರಾಯೋಜಿತ ಕಾರ್ಯಕ್ರಮಗಳ ಅಗತ್ಯವಿಲ್ಲ. ಅವರು ಸದಾ ಚಿರಸ್ಮರಣೀಯರು. ಪ್ರಶಸ್ತಿಗಳ ಹಿಂದೆ ಬೀಳದೆ, ಸಾವಿಗೆ ಭಯಪಡದೆ ಬದುಕಿದ್ದಕ್ಕೇ ಅವರು ಮೃತ್ಯುಂಜಯನೂ ಹೌದು.