ಕಾರ್ಮಿಕರ ಬಂಧನ: 24 ಗಂಟೆಯೊಳಗೆ ಬಿಡುಗಡೆಗೆ ಎಸ್.ಡಿ.ಪಿ.ಐ. ಒತ್ತಾಯ
ಬೆಂಗಳೂರು, ಎ.13: ತುಂಗಾಭದ್ರಾ ವಲಯ ಬಡ ಕೂಲಿ ಕಾರ್ಮಿಕರು ತಮ್ಮ ನ್ಯಾಯಸಮ್ಮತವಾದ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಮುನಿರಾಬಾದ್‌ನಿಂದ ಬೆಂಗಳೂರು ವಿಧಾನಸೌಧಕ್ಕೆ ಕಾಲ್ನಡಿಗೆ ಮೂಲಕ ಜಾಥಾ ನಡೆಸುತ್ತಿದ್ದ ಸಂದರ್ಭ ಸುಮಾರು ಒಂದು ಸಾವಿರ ಕಾರ್ಮಿಕರನ್ನು ಬಂಧಿಸಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕರ್ನಾಟಕ ರಾಜ್ಯ ಸಮಿತಿ ಖಂಡಿಸಿದೆ.
ತುಂಗಾಭದ್ರಾ ವಲಯ ಬಡ ಕೂಲಿ ಕಾರ್ಮಿಕರು ಮಾರ್ಚ್ 17ರಿಂದ ಮುನಿರಾಬಾದ್ ಸಿ.ಇ ಕಚೇರಿ ಮುಂಭಾಗ ತಮ್ಮ ಹಕ್ಕುಗಳಿಗಾಗಿ ಮುಷ್ಕರ ನಡೆಸಿದ್ದು, ಮುಷ್ಕರಕ್ಕೆ ಸ್ಪಂದಿಸದ ಸರಕಾರದ ಕ್ರಮವನ್ನು ವಿರೋಧಿಸಿ ಮುನಿರಾಬಾದ್‌ನಿಂದ ಸುಮಾರು 287 ಕಿ.ಮೀ. ಉರಿಬಿಸಿಲಿನಲ್ಲಿ ಕಾಲ್ನಿಡಿಗೆ ಜಾಥಾ ನಡೆಸಿದ್ದರು. ಆದರೆ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದವರನ್ನು ಬಂಧಿಸಿರುವುದು ಖಂಡನೀಯ ಎಂದು ಎಸ್.ಡಿ.ಪಿ.ಐ. ಹೇಳಿದೆ.
24 ಗಂಟೆಯೊಳಗೆ ಕೂಲಿಕಾರ್ಮಿಕರನ್ನು ಬಿಡುಗಡೆ ಮಾಡದೇ ಇದ್ದಲ್ಲಿ ರಾಜ್ಯದ ಎಲ್ಲಾ ಜನಪರ ಹೋರಾಟಗಾರರೊಂದಿಗೆ ಭೇದ-ಬಾವ ಮರೆತು ರಾಜ್ಯಾದ್ಯಂತ ‘ಸರಕಾರ್ ಹಠಾವೋ’ ಎಂಬ ಚಳವಳಿಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.