ಭಾವ ಬಂಧುರ: ವ್ಯಕ್ತಿ, ವ್ಯಕ್ತಿತ್ವದಾಚೆಗೆ ಆವರಿಸಿಕೊಳ್ಳುವ ಬರಹಗಳು
ಈ ಹೊತ್ತಿನ ಹೊತ್ತಿಗೆ
ವ್ಯಕ್ತಿ, ವ್ಯಕ್ತಿತ್ವ ಮತ್ತು ಅದರಿಂದ ರೂಪುಗೊಳ್ಳುವ ಸಮಾಜ ಇವು ಮೂರನ್ನು ಒಟ್ಟಂದದಲ್ಲಿ ಹಿಡಿದಿಡುವ ಪ್ರಯತ್ನವನ್ನು ತಮ್ಮ ‘ಭಾವ ಬಂಧುರ’ ಬಿಡಿ ಲೇಖನಗಳ ಸಂಗ್ರಹದಲ್ಲಿ ತಿಲಕನಾಥ ಮಂಜೇಶ್ವರ ಮಾಡುತ್ತಾರೆ. ಸಂದರ್ಶನ, ವ್ಯಕ್ತಿ ಪರಿಚಯ, ಕೃತಿಪರಿಚಯ ಇವೆಲ್ಲವೂ ಒಂದು ಸಮಾನ ಭಾವ ಬಂಧುರವನ್ನು ನಮ್ಮಿಳಗೆ ನಿರ್ಮಿಸುತ್ತದೆ. ರಾಮನಗರದ ಗ್ರಾಮೀಣ ಕಲಾವಿದರ ಜಾನಪದ ಲೋಕವನ್ನು ಪರಿಚಯಿಸುವ ಲೇಖಕ, ನಾಗೇಗೌಡರ ಕನಸು ನನಸಾಗುವ ರೀತಿಯನ್ನು ಕುತೂಹಲಕರವಾಗಿ ನಿರೂಪಿಸುತ್ತಾರೆ. ಜೊತೆಗೆ, ಜಾನಪದ ಬದುಕಿನ ಕುರಿತಂತೆ ರಾಜಕೀಯ ನಾಯಕರ ಮತ್ತು ಸಮಾಜದ ಅಸ್ಪಶ್ಯತೆಯ ಕುರಿತಂತೆಯೂ ಅವರು ಗಮನ ಸೆಳೆಯುತ್ತಾರೆ. ಇದರ ಜೊತೆಗೆ ನಾಗೇಗೌಡರ ಅಪರೂಪದ ಸಂದರ್ಶನ, ಜಾನಪದ ಜಗತ್ತಿನ ಕುತೂಹಲಕಾರಿ ವಿಷಯಗಳನ್ನು ಹೊರಗೆಡಹುತ್ತದೆ. ಉಡುಪಿ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರವನ್ನು ವಿವರಿಸುತ್ತಾ, ಅದರ ಹಿಂದಿರುವ ಶಿವರಾಮ ಕಾರಂತ, ಕುಶಿಯಂತಹ ಮಹನೀಯರ ಬಗ್ಗೆ ಬರೆಯುತ್ತಾರೆ. ಹೇಗೆ ಆ ಸಂಸ್ಥೆ ಕಲಾವಿದರಿಗೆ ವೇದಿಕೆಯಾಗಿ ಪ್ರೋತ್ಸಾಹಿಸಿತು ಎನ್ನುವುದನ್ನು ಹೇಳುತ್ತಾರೆ. ಇದರ ಜೊತೆಗೇ ಕು.ಶಿ. ಹರಿದಾಸ ಭಟ್ ಅವರ ಮಹತ್ವದ ಸಂದರ್ಶನವನ್ನೂ ಮಾಡಿ ಲೇಖನವನ್ನು ಪರಿಪೂರ್ಣವಾಗಿಸುತ್ತಾರೆ. ತಮಿಳುನಾಡಿನ ಜಾನಪದ ಕಲೆ ತೆರಕೂತ್ತ್, ವಿದೂಷಕ ಶ್ರೇಷ್ಠ ಮಿಜಾರ್ ಅಣ್ಣಪ್ಪ, ಕಿನ್ನರಿ ಜೋಗಿ ಬಿ. ವಿ. ಕಾರಂತ, ರಂಗಭೂಮಿ ಕಲಾವಿದೆ ಚಿಂದೋಡಿ ಲೀಲಾ, ಗಿನ್ನೆಸ್ ದಾಖಲೆ ಸೇರಿದ ಸುರಭಿ ಥಿಯೇಟರ್, ಪರಮೇಶ್ವರ ಭಟ್...ಹೀಗೆ ಇವರು ಕಟ್ಟಿಕೊಡುವ ವ್ಯಕ್ತಿತ್ವಗಳು ವ್ಯಕ್ತಿಚಿತ್ರದಾಚೆಗೆ ನಮ್ಮನ್ನು ಆವರಿಸಿಕೊಳ್ಳುತ್ತದೆ. ತಿಲಕನಾಥ ಮಂಜೇಶ್ವರ ತಮ್ಮ ಪ್ರತಿ ಲೇಖನಗಳಲ್ಲೂ ವರದಿಗಾರನ ಸಣ್ಣದೊಂದು ಅಂತರವನ್ನು ಕಾಪಾಡಿಕೊಂಡೇ ಬರೆಯುತ್ತಾರೆ. ಇದೇ ಸಂದರ್ಭದಲ್ಲಿ ಬರಹ ವರದಿಗಾರಿಕೆಯಾಗದಂತೆ, ಸೃಜನಶೀಲತೆಯ ಸೂಕ್ಷ್ಮತೆಯನ್ನು ಉಳಿಸಿಕೊಂಡಿದ್ದಾರೆ. ಚಾರುಮತಿ ಪ್ರಕಾಶನ ಬೆಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 264. ಮುಖಬೆಲೆ 150 ರೂಪಾಯಿ.