ಹೊಸ ಮಾಹಿತಿ ಹಕ್ಕು ಕರಡು ಮಸೂದೆ :ಅರ್ಜಿದಾರರಿಗೆ ಹೆಚ್ಚು ಅಪಾಯ
ಇತ್ತೀಚಿನ ದಿನಗಳಲ್ಲಿ ಆರ್ಟಿಐ ಅರ್ಜಿದಾರರ ಮೇಲೆ ನಡೆದ ದಾಳಿಗಳು ಗಂಭೀರ ಸ್ವರೂಪದ್ದಾಗಿದ್ದವು. ಈ ದಾಳಿಗಳಲ್ಲಿ 56 ಜನರು ಮೃತಪಟ್ಟಿದ್ದರೆ, 157 ದೈಹಿಕ ಹಲ್ಲೆಗಳಾಗಿದ್ದವು ಮತ್ತು 160 ಬೆದರಿಕೆ ಮತ್ತು ಕಿರುಕುಳಗಳಾಗಿದ್ದವು.ಇವುಗಳಲ್ಲಿ ಕೆಲವು ಪ್ರಕರಣಗಳಲ್ಲಿ ವ್ಯಕ್ತಿಯು ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳೂ ನಡೆದಿವೆ.
ಮಾಹಿತಿ ಹಕ್ಕು ಕಾಯ್ದೆ 2005ನ್ನು ಅನುಷ್ಠಾನಗೊಳಿಸಲು ಭಾರತ ಸರಕಾರದ ಖಾಸಗಿ ಮತ್ತು ತರಬೇತಿ ಇಲಾಖೆ ಹೊರಡಿಸಿರುವ ಹೊಸ ಕರಡು ಮಸೂದೆಗಳ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತರು ಸಂತುಷ್ಟವಾಗಿಲ್ಲ. ಮೇಲ್ಮನವಿದಾರ ಬರಹರೂಪದಲ್ಲಿ ವಿನಂತಿಸಿದರೆ ಮನವಿಯನ್ನು ಹಿಂಪಡೆಯಲು ಅನುಮತಿ ನೀಡುವ ಅಧಿಕಾರವನ್ನು ಕೇಂದ್ರ ಮಾಹಿತಿ ಆಯೋಗಕ್ಕೆ (ಸಿಐಸಿ) ನೀಡುವ ಪ್ರಸ್ತಾಪ ಹೊಸ ಕರಡು ಮಸೂದೆಯಲ್ಲಿದೆ. ಮತ್ತು ಬಾಕಿಯುಳಿದ ಮನವಿಗಳ ವಿಚಾರಣಾ ಪ್ರಕ್ರಿಯೆ ಮೇಲ್ಮನವಿದಾರ ಸಾವಿಗೀಡಾದಲ್ಲಿ ತಾನಾಗಿಯೇ ಕೊನೆಗೊಳ್ಳಲಿದೆ ಎಂದು ಅದರಲ್ಲಿ ತಿಳಿಸಲಾಗಿದೆ. ಇದು ಭವಿಷ್ಯದಲ್ಲಿ ಅರ್ಜಿದಾರರನ್ನು ಹೆಚ್ಚಿನ ಅಪಾಯಕ್ಕೆ ತಳ್ಳಬಹುದು ಎಂಬ ಭಯವನ್ನು ಮಾಹಿತಿ ಹಕ್ಕು ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ವಿವಿಧ ವ್ಯಕ್ತಿಗಳ ಜೊತೆ ಸುದೀರ್ಘ ಕಾಲ ಸಮಾಲೋಚನೆ ನಡೆಸಿದ ನಂತರ ಆರ್ಟಿಐ ನಿಯಮಗಳಿಗೆ ಕೊನೆಯದಾಗಿ 2012ರಲ್ಲಿ ತಿದ್ದುಪಡಿ ತರಲಾಯಿತು. ಸದ್ಯ ಆರ್ಟಿಐ ಕರಡು ನಿಯಮಗಳಲ್ಲಿ ಬದಲಾವಣೆ ಅಥವಾ ಇನ್ನಿತರ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಲು ಜನರ ಮುಂದೆ ಇಟ್ಟಿರುವುದು ಸಾರ್ವಜನಿಕ ಸಲಹೆಗಳನ್ನು ಕೇಳುವ ಸಂಪ್ರದಾಯದ ಮುಂದುವರಿದ ಭಾಗ ಎಂದು ತಿಳಿಸುವ ಕಾಮನ್ವೆಲ್ತ್ ಮಾನವಹಕ್ಕು ಅಭಿಯಾನದ (ಸಿಎಚ್ಆರ್ಐ) ಕಾರ್ಯಕರ್ತ ವೆಂಕಟೇಶ್ ನಾಯಕ್, ಕರಡು ನಿಯಮ 12ರಲ್ಲಿ ಮನವಿಯನ್ನು ಹಿಂಪಡೆಯುವ ಅಥವಾ ಸಾವು ಸಂಭವಿಸಿದ ಸಂದರ್ಭದಲ್ಲಿ ಕೈಬಿಡುವ ಅವಕಾಶವನ್ನು ನೀಡಿರುವುದು ಅರ್ಜಿದಾರರ ಪಾಲಿಗೆ ಖಂಡಿತವಾಗಿಯೂ ಸಮಸ್ಯೆಯನ್ನು ತಂದೊಡ್ಡುವಂತಹ ಬೆಳವಣಿಗೆಯಾಗಿದೆ.
‘‘2011ರಲ್ಲೂ ಇಲಾಖೆಯು ಇಂಥದ್ದೇ ನಿಯಮವನ್ನು ಪ್ರಸ್ತಾಪಿಸಿದಾಗ ನಾಗರಿಕ ಸಮಾಜ ಅದನ್ನು ಖಂಡತುಂಡವಾಗಿ ವಿರೋಧಿಸಿತ್ತು. ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಗಳನ್ನು ಕೇಳಿದಾಗ ಅವರ ಮೇಲೆ ನಡೆದ ಮಾರಣಾಂತಿಕ ದಾಳಿಗಳ ಮಾಧ್ಯಮ ವರದಿಗಳನ್ನು ಕಾರ್ಯಕರ್ತರು ಬೆಳಕಿಗೆ ತರಲು ಸಾಧ್ಯವಾದ ಕಾರಣ ಈ ಎರಡೂ ಮಸೂದೆಗಳನ್ನು ಕೈಬಿಡಲಾಗಿತ್ತು. ಯುಪಿ ಆರ್ಟಿಐ ಕಾನೂನು 2015ರಿಂದ ಪ್ರೇರಣೆ ಪಡೆದು ಈ ಕರಡು ನಿಯಮಗಳನ್ನು ಪುನರ್ಪರಿಚಯಿಸಲಾುತ್ತಿದೆ’’ ಎಂದವರು ಹೇಳುತ್ತಾರೆ.
ಆರ್ಟಿಐ ಕಾರ್ಯಕರ್ತರ, ಬಳಕೆದಾರರ ಮೇಲೆ ಒತ್ತಡ
ವಿವಿಧ ಸಾರ್ವಜನಿಕ ಇಲಾಖೆಗಳಲ್ಲಿ ನಡೆಯುವ ಭಷ್ಟಾಚಾರ ಮತ್ತು ತಪ್ಪುಕೆಲಸಗಳನ್ನು ಬಯಲಿಗೆಳೆಯುವ ಸಲುವಾಗಿ ಮಾಹಿತಿಗಳನ್ನು ಕೇಳಿದ ಸಾರ್ವಜನಿಕರ ಮೇಲೆ 375ಕ್ಕೂ ಅಧಿಕ ದಾಖಲಾದ ದಾಳಿಗಳ ಉದಾಹರಣೆಗಳು ಇರುವಾಗ, ‘‘ಕಾನೂನಾತ್ಮಕವಾಗಿ ಮನವಿಗಳನ್ನು ಹಿಂಪಡೆಯಲು ಅನುಮತಿ ನೀಡುವ’’ ಮೂಲಕ ಪ್ರಸ್ತಾಪಿತ ನಿಯಮವು ‘‘ಆರ್ಟಿಐ ಬಳಕೆದಾರರು ಸಿಐಸಿ ಮುಂದೆ ತಮ್ಮ ಮನವಿಯನ್ನು ಹಿಂಪಡೆಯುವಂತೆ ಒತ್ತಡ ಹೇರಲು ಸ್ಥಾಪಿತ ಹಿತಾಸಕ್ತಿಗಳಿಗೆ’’ ಮತ್ತಷ್ಟು ಧೈರ್ಯ ತುಂಬುತ್ತದೆ ಎಂದು ನಾಯಕ್ ಹೇಳುತ್ತಾರೆ.
ಇತ್ತೀಚಿನ ದಿನಗಳಲ್ಲಿ ಆರ್ಟಿಐ ಅರ್ಜಿದಾರರ ಮೇಲೆ ನಡೆದ ದಾಳಿಗಳು ಗಂಭೀರ ಸ್ವರೂಪದ್ದಾಗಿದ್ದವು ಎಂದು ನಾಯಕ್ ಹೇಳುತ್ತಾರೆ. ಈ ದಾಳಿಗಳಲ್ಲಿ 56 ಜನರು ಮೃತಪಟ್ಟಿದ್ದರೆ, 157 ದೈಹಿಕ ಹಲ್ಲೆಗಳಾಗಿದ್ದವು ಮತ್ತು 160 ಬೆದರಿಕೆ ಮತ್ತು ಕಿರುಕುಳಗಳಾಗಿದ್ದವು. ಇವುಗಳಲ್ಲಿ ಕೆಲವು ಪ್ರಕರಣಗಳಲ್ಲಿ ವ್ಯಕ್ತಿಯು ಭಯದಿಂದ ಆತ್ಮಹತ್ಯೆ ವಾಡಿಕೊಂಡಿರುವ ಘಟನೆಗಳೂ ನಡೆದಿವೆ.
‘‘ಈ ಪ್ರಸ್ತಾಪಿತ ಮಸೂದೆ ಕೇಂದ್ರದಲ್ಲಿ ಕಾನೂನಾಗಿ ಬದಲಾದರೆ ಬಹುತೇಕ ಇತರ ರಾಜ್ಯಗಳು ಕೂಡಾ ಇದೇ ಮಾದರಿಯ ತಿದ್ದುಪಡಿಗಳನ್ನು ಮಾಡುವ ಮೂಲಕ ಅರಿವಿಲ್ಲದೆಯೇ ಆರ್ಟಿಐ ಬಳಕೆದಾರರ ಭದ್ರತೆ ಮತ್ತು ಜೀವನವನ್ನು ಹಾಳುಗೆಡವಲಿದ್ದಾರೆ. ಗುಟ್ಟುರಟ್ಟುದಾರರ ರಕ್ಷಣಾ ಕಾಯ್ದೆ 2011 ಇನ್ನೂ ಶೈತ್ಯಾಗಾರದಲ್ಲೇ ಇರುವಾಗ ಮತ್ತು ದೇಶದ ಎಲ್ಲಾ ಗುಟ್ಟುರಟ್ಟುದಾರರನ್ನು ಪರಿಣಾಮಕಾರಿಯಾಗಿ ವಿರೋಧಿಸುವ ತಿರೋಗಾಮಿ ತಿದ್ದುಪಡಿಯನ್ನು ಅನುಮೋದಿಸುವ ಮತ್ತು ಅಧಿಕೃತ ರಹಸ್ಯ ಕಾಯ್ದೆ 1923ರ ಅಡಿಯಲ್ಲಿ ದೇಶದಲ್ಲಿರುವ ಕೆಲವು ಧೈರ್ಯವಂತ ಗುಟ್ಟುರಟ್ಟುದಾರರನ್ನು ಶಿಕ್ಷಿಸಲು ಅನುಮತಿ ನೀಡುವ ಸಲುವಾಗಿ ಸಂಸತ್ನಲ್ಲಿ ಕರೆನೀಡಿರುವಾಗ ಆರ್ಟಿಐಗೆ ತಂದಿರುವ ಈ ತಿದ್ದುಪಡಿಗಳಿಗೆ ಅನುಮತಿ ನೀಡಲು ಯಾವುದೇ ಕಾರಣಕ್ಕೂ ಬಿಡಬಾರದು’’ ಎಂದು ನಾಯಕ್ ಹೇಳುತ್ತಾರೆ.
ಈ ಮಸೂದೆಯು ಕಾನೂನಾಗದಂತೆ ತಡೆಯಲು ಮತ್ತೊಂದು ಕಾರಣ ವಿದೆ ಎಂದು ನಾಯಕ್ ತಮ್ಮ ಮಾತು ಮುಂದು ವರಿಸುತ್ತಾರೆ, ‘‘ಭಾರತ ಸರಕಾರ ವರ್ಸಸ್ ನಮಿತಾ ಶರ್ಮಾ (2013) ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು, ಪಕ್ಷಗಳ ಅಧಿಕಾರವನ್ನು ನಿರ್ಧರಿಸಲು ಆರ್ಟಿಐ ಮನವಿಗಳು ಮತ್ತು ದೂರುಗಳು ನಾಗರಿಕ ಅಥವಾ ಕ್ರಿಮಿನಲ್ ಸ್ವರೂಪದ ತಕಾರಾರುಗಳಲ್ಲ ಎಂಬ ಸಿಎಚ್ಆರ್ಐಯ ವಾದ ವನ್ನು ಪುರಸ್ಕರಿಸಿತ್ತು’’ ಎಂದು ತಿಳಿಸುತ್ತಾರೆ.
ಆರ್ಟಿಐ ಕಾನೂನಿನಡಿ ಸ್ಥಾಪನೆಗೊಂಡಿರುವ ಮಾಹಿತಿ ಆಯೋಗಗಳು ಕೇವಲ ಆಡಳಿತ ಮಂಡಳಿಗಳೇ ಹೊರತು ನ್ಯಾಯಾಂಗ ಮೇಲುಸ್ತುವಾರಿಯ ಮಂಡಳಿಗಳಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸೂಚಿಸಿತ್ತು ಎಂದು ನಾಯಕ್ ತಿಳಿಸುತ್ತಾರೆ. ‘‘ಹಾಗಾಗಿ ಆರ್ಟಿಐ ಮನವಿ ಮತ್ತು ದೂರುಗಳನ್ನು ಈ ನೆಲೆಯಲ್ಲಿ ಅರ್ಥಮಾಡಿಕೊಂಡರೆ ಮೇಲ್ಮನವಿದಾರನ ಸಾವು ಸಂಭವಿಸಿದಾಗ ಆ ಮನವಿಯು ಕೊನೆಯಾಗುವುದಕ್ಕೆ ಯಾವುದೇ ಕಾರಣಗಳು ಉಳಿಯುವುದಿಲ್ಲ. ಬದಲಿಗೆ ಸಿಐಸಿಯು ಈ ಪ್ರಕರಣವನ್ನು ಮುಂದುವರಿಸಿ ಆರ್ಟಿಐ ಕಾನೂನಿನ ಪ್ರಕಾರ ತೀರ್ಪನ್ನು ನೀಡಬೇಕು’’ ಎಂದವರು ಹೇಳುತ್ತಾರೆ. ಈ ಕಾನೂನನ್ನು ಮುಂದುವರಿಸುವುದರಿಂದ ಆರ್ಟಿಐ ಬಳಕೆದಾರರ ಮೇಲೆ ಮತ್ತಷ್ಟು ದಾಳಿಗಳು ನಡೆದು ಅವರನ್ನು ವೌನವಾಗಿಸಲು ಮತ್ತು ಸಿಐಸಿ ಮುಂದೆ ಪ್ರಕರಣವನ್ನು ಕೊನೆಗೊಳಿಸಲು ಪ್ರಚೋದನೆ ನೀಡಿದಂತಾಗುತ್ತದೆ ಎಂದು ನಾಯಕ್ ಎಚ್ಚರಿಸುತ್ತಾರೆ.
ಶೇ.60ಕ್ಕಿಂತಲೂ ಅಧಿಕ ಕಾನೂನುಗಳು ಭೂತಕಾಲದ ಬಳುವಳಿ
ಈ ಮಸೂದೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಶೇ.60-65ರಷ್ಟು ಅಂಶವು 2012ರ ಆರ್ಟಿಐ ಕಾನೂನಿಲ್ಲಿದ್ದ ಅಂಶವನ್ನೇ ಮರುಕಳಿಸಲಾಗಿದೆ ಮತ್ತು ಕೆಲವು ಹೊಸ ಅಂಶಗಳು ಆರ್ಟಿಐ ಕಾನೂನಿನ ಪ್ರಮುಖ ನಿಬಂಧನೆಗಳನ್ನು ಅನುಷ್ಠಾನಗೊಳಿಸುವ ರೀತಿಯನ್ನು ಸ್ಪಷ್ಟಪಡಿಸುವ ಕಾರಣ ಶ್ಲಾಘನೆಗೆ ಅರ್ಹವಾಗಿವೆ. 2012ರ ನಿಯಮಾವಳಿಗಳಲ್ಲಿ ಕಾಣೆಯಾಗಿದ್ದ, ಸಾರ್ವಜನಿಕ ಇಲಾಖೆಗಳು ಸಿಐಸಿಯ ಆದೇಶ ಮತ್ತು ಸೂಚನೆಗಳನ್ನು ಪಾಲಿಸದ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಪ್ರಸ್ತಾಪವನ್ನು ಈ ಬಾರಿಯ ನಿಯಮಾವಳಿಗಳಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂಬುದನ್ನು ನಾಯಕ್ ಬೊಟ್ಟು ಮಾಡುತ್ತಾರೆ. ಅಂಥಾ ಸಂದರ್ಭಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿರುವ ಪ್ರಕರಣಗಳನ್ನು ಸಿಐಸಿಯ ಉನ್ನತ ಪೀಠದ ಮುಂದೆ ಇಡಲಾಗುವುದು.
ನೂತನ ಕರಡು ಮಸೂದೆಯಲ್ಲಿ ಕೆಲವೊಂದು ಉತ್ತಮ ಅಂಶಗಳೂ ಇವೆ ಎಂದು ತಿಳಿಸುವ ನಾಯಕ್ ಅದರಲ್ಲಿ ಹಲವಾರು ಸಮಸ್ಯೆ ತಂದೊಡ್ಡುವ ಅಂಶಗಳೂ ಇವೆ ಎಂಬುದನ್ನು ಹೇಳಲು ಮರೆಯುವುದಿಲ್ಲ.
‘‘ಮೊದಲಿಗೆ ಹೇಳುವುದಾದರೆ ಈ ಕಾನೂನುಗಳನ್ನು ರೂಪಿಸುವ ಪ್ರಕ್ರಿಯೆಯೇ ಅಧಿಕಾರಿವರ್ಗದಿಂದ ನಾಗರಿಕಸ್ನೇಹಿಯಾಗಿ ಬದಲಾಗಿಲ್ಲ. ಕೆಲವೊಂದು ಪ್ರಸ್ತಾಪಗಳು ಅತಿಯಾಗಿ ಅಧಿಕಾರಿವರ್ಗದಿಂದ ಪ್ರೇರಿತವಾಗಿದ್ದು 2015ರಿಂದ ಉತ್ತರ ಪ್ರದೇಶದಲ್ಲಿ ಸೂಚಿಸಲಾಗಿರುವ ಆರ್ಟಿಐ ಕಾನೂನಿನಂತೆ ನಾಗರಿಕರ ವಿರುದ್ಧವಾಗಿದೆ. ಉತ್ತರ ಪ್ರದೇಶ ರಾಜ್ಯ ಮಾಹಿತಿ ಆಯೋಗದಿಂದ ಆರ್ಟಿಐ ಕಾನೂನು ಅನುಷ್ಠಾನಕ್ಕೆ ಬಂದ ಕಳೆದ 13 ವರ್ಷಗಳಿಂದ ಒಂದು ಬಾರಿಯೂ ವಾರ್ಷಿಕ ವರದಿಯನ್ನು ಮುದ್ರಿಸಲು ಸಾಧ್ಯವಾಗಿಲ್ಲ. 2017ರ ಫೆಬ್ರವರಿ ವೇಳೆಗೆ ಯುಪಿಸಿಐಸಿ ಮುಂದೆ 48,000 ಮನವಿಗಳು ಮತ್ತು ದೂರುಗಳು ಬಾಕಿಯುಳಿದಿವೆ. ಹಾಗಾಗಿ ಉತ್ತರ ಪ್ರದೇಶವು ಆರ್ಟಿಐ ಅನುಷ್ಠಾನದಲ್ಲಿ ಭಾರತದ ಇತರ ರಾಜ್ಯಗಳಿಗೆ ಮಾದರಿಯಾಗಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಳ್ಳಬಹುದು’’ ಎಂದು ನಾಯಕ್ ಹೇಳುತ್ತಾರೆ.
ಹೊಸ ನೀತಿಗಳಿಂದ ಮನವಿ ಪ್ರಕ್ರಿಯೆ ಇನ್ನಷ್ಟು ಜಠಿಲ
ಹೊಸ ಕಡರು ನಿಯಮಗಳು ಮನವಿ ಮತ್ತು ದೂರುಗಳ ಪ್ರಕ್ರಿಯೆಯನ್ನು ನ್ಯಾಯಾಲಯದ ಸಂಕೀರ್ಣ ಪ್ರಕ್ರಿಯೆಯನ್ನಾಗಿ ಬದಲಾಯಿಸಿರುವ ಕಾರಣಕ್ಕೆ ನಾಯಕ್ ಅದನ್ನು ಟೀಕಿಸುತ್ತಾರೆ. ಕರಡು ಮಸೂದೆ 8(1)(ಗಿಐಐಐ),(ಐಗಿ) ಮತ್ತು ಕರಡು ಮಸೂದೆ 13(1)(ಗಿಐಐ) ಮತ್ತು (3) ಪ್ರಕಾರ ಮೇಲ್ಮನವಿದಾರರು ಎಲ್ಲಾ ದಾಖಲೆಗಳ ಪೂರ್ವಪ್ರತಿಯನ್ನು ಒದಗಿಸುವ ಅಗತ್ಯವಿದ್ದು ಸಾರ್ವಜನಿಕ ಇಲಾಖೆಗೆ ಲಿಖಿತವಾಗಿ ಸಲ್ಲಿಸಬೇಕಾಗಿದೆ ಮತ್ತು ಈ ಹಿಂದೆ ಮನವಿ ಅಥವಾ ದೂರು ದಾಖಲಿಸುವ ವೇಳೆ ಹೀಗೆ ಮಾಡಿದ್ದೀರಿ ಎಂಬುದಕ್ಕೆ ಸಾಕ್ಷಿಯನ್ನು ಲಗತ್ತಿಸಬೇಕು. ಈ ಪ್ರಕ್ರಿಯೆಯು ನ್ಯಾಯಾಲಯದಲ್ಲಿ ಅನುಸರಿಸಲಾಗುತ್ತದೆ ಮತ್ತು ಸಿಐಸಿಗೆ ಸರಿಹೊಂದುವುದಿಲ್ಲ ಎಂದು ಹೇಳುವ ನಾಯಕ್ ದೂರು/ಮನವಿಯ ಪ್ರತಿಯನ್ನು ಸಂಬಂಧಪಟ್ಟ ಸಾರ್ವಜನಿಕ ಇಲಾಖೆಗೆ ಏಕಕಾಲದಲ್ಲಿ ಅಥವಾ ಸಿಐಸಿಗೆ ಸಲ್ಲಿಸಿದ ನಂತರ ವರ್ಗಾಯಿಸಬೇಕು ಎಂಬುದನ್ನು ಈ ಮಸೂದೆಯು ಸೂಕ್ತವಾಗಿ ತಿಳಿಸಬೇಕು ಎಂದು ಆಗ್ರಹಿಸುತ್ತಾರೆ.
ದೂರು ಪ್ರಕರಣಗಳಲ್ಲೂ ಆರ್ಟಿಐ ಅರ್ಜಿಯನ್ನು ಸಲ್ಲಿಸಬೇಕಾದುದನ್ನು ಕಡ್ಡಾಯ ಮಾಡುವ ಪ್ರಸ್ತಾಪವನ್ನು ಹೊಂದಿರುವ ಕಾರಣಕ್ಕೂ ಹೊಸ ಕರಡು ಮಸೂದೆಯನ್ನು ಆರ್ಟಿಐ ಕಾರ್ಯಕರ್ತರು ವಿರೋಧಿಸುತ್ತಿದ್ದಾರೆ. ಸಿಐಸಿಯು ಕೇವಲ ಆಡಳಿತ ಮಂಡಳಿಯಾಗಿದ್ದರೂ ಅನುಸರಣೆ ಮಾಡಲ್ಪಡದ ಪ್ರಕಣಗಳನ್ನು ಇತರ ಆಯುಕ್ತರ ಪೀಠದ ಮುಂದೆ ತರಬಹುದಾದ ನಿಬಂಧನೆಯನ್ನು ರೂಪಿಸಿರುವ ಮತ್ತು ದೂರುಗಳು ಹಾಗೂ ಮೇಲ್ಮನವಿಗಳ ಮೇಲೆ ವಿಚಾರಣೆಯ ಬಗ್ಗೆ ನೋಟಿಸ್ ಜಾರಿ ಮಾಡಲು ಸಮಯಾವಕಾಶ ನಿಗದಿಪಡಿಸದಿರುವ ಕಾರಣ ನಿಯೋಜಿಸಲ್ಪಟ್ಟಿರುವ ಅಧಿಕಾರಿಯ ಹೊರತಾಗಿ ಇತರ ಯಾರು ಕೂಡಾ ಪ್ರಥಮ ಮನವಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದು ಈ ಕಾನೂನು ತಿಳಿಸುತ್ತದೆ.
ಮಸೂದೆ 4ರಂತೆ ಈಗಲೂ ಕೂಡಾ ಡಿಸ್ಕ್ ಮತ್ತು ಪ್ಲಾಪಿ ರೂಪದಲ್ಲಿ ಪಡೆಯುವಂತಹ ಮಾಹಿತಿಗಳಿಗೆ ಈಗಲೂ ಶುಲ್ಕ ನಿಗದಿಪಡಿಸಲಾಗಿದೆ, ಈ ಎರಡೂ ಈಗ ಹಳೆಯದ್ದಾಗಿವೆ. ‘‘ಈಗ ಮಾಹಿತಿಯನ್ನು ವಿದ್ಯುನ್ಮಾನ ರೂಪಗಳಾದ ಇಮೇಲ್, ಪ್ಲ್ಯಾಶ್ ಡ್ರೈವ್ ಅಥವಾ ಸಿಡಿ/ಡಿವಿಡಿ ರೂಪಗಳಲ್ಲೂ ಒದಗಿಸಬಹುದು ಎಂಬುದನ್ನು ಇಲಾಖೆ ಅರಿತುಕೊಳ್ಳಬೇಕು’’ ಎಂದು ನಾಯಕ್ ಹೇಳುತ್ತಾರೆ. ನೇರವಾಗಿ ಪ್ರಧಾನ ಮಂತ್ರಿಯವರ ಅಡಿಯಲ್ಲೇ ಬರುವ ಇಲಾಖೆ ಡಿಜಿಟಲೀಕರಣದ ಪರಿಣಾಮಕ್ಕೆ ಯಾಕೆ ಒಳಗಾಗಿಲ್ಲ ಎಂಬ ಬಗ್ಗೆ ನಾಯಕ್ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.