ಮಣಿಪುರದಲ್ಲಿ ಬಿಜೆಪಿಗೆ ಆಘಾತ: ಮುಖ್ಯಮಂತ್ರಿಯನ್ನು ವಿರೋಧಿಸಿ ಆರೋಗ್ಯ ಸಚಿವ ರಾಜೀನಾಮೆ !
►ಸಂಪುಟದಲ್ಲಿ ಭುಗಿಲೆದ್ದ ಭಿನ್ನಮತ
►ಮುಖ್ಯಮಂತ್ರಿ ಬಿರೇನ್ ದಿಲ್ಲಿಗೆ ದೌಡು
ಹೊಸದಿಲ್ಲಿ,ಎ.15: ಮಣಿಪುರದ ಬಿಜೆಪಿ ನೇತೃತ್ವದ ಮೈತ್ರಿ ಸರಕಾರದಲ್ಲಿ ಅಧಿಕಾರಕ್ಕೇರಿದ ಒಂದೇ ತಿಂಗಳಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಆರೋಗ್ಯ ಸಚಿವ ಎಲ್.ಜಯೇಂತ್‌ಕುಮಾರ್ ಶನಿವಾರ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ತನ್ನ ಖಾತೆಗಳ ವ್ಯವಹಾರದಲ್ಲಿ ಮುಖ್ಯಮಂತ್ರಿ ಎನ್.ಬಿರೇನ್‌ಸಿಂಗ್ ಅವರ ‘ಅನಪೇಕ್ಷಣೀಯ’ ಹಸ್ತಕ್ಷೇಪವನ್ನು ಪ್ರತಿಭಟಿಸಿ ಸಚಿವ ಸ್ಥಾನವನ್ನು ತ್ಯಜಿಸುತ್ತಿರುವುದಾಗಿ ಅವರು ಘೋಷಿಸಿದ್ದಾರೆ.
ಎಲ್.ಜಯಂತ್‌ಕುಮಾರ್ ಅವರ ರಾಜೀನಾಮೆಯ ಹಿನ್ನೆಲೆಯಲ್ಲಿ ಮೈತ್ರಿಕೂಟ ಸರಕಾರದಲ್ಲಿ ಭುಗಿಲೆದ್ದಿರುವ ಭಿನ್ನಮತವನ್ನು ಶಮನಗೊಳಿಸುವ ಪ್ರಯತ್ನವಾಗಿ ಮುಖ್ಯಮಂತ್ರಿ ಬಿರೇನ್‌ಸಿಂಗ್ ದಿಲ್ಲಿಗೆ ದೌಡಾಯಿಸಿದ್ದು, ಬಿಜೆಪಿ ವರಿಷ್ಠರ ಜೊತೆ ಮಾತುಕತೆ ನಡೆಸಿದ್ದಾರೆ.ಜಯಂತ್‌ಕುಮಾರ್ ಶುಕ್ರವಾರ ಸಂಜೆ ಮುಖ್ಯಮಂತ್ರಿಯವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ತನ್ನ ರಾಜೀನಾಮೆಯನ್ನು ಸಲ್ಲಿಸಿದ್ದರು.
ಮುಖ್ಯಮಂತ್ರಿ ಬಿರೇನ್ ಅವರು ಸಿಬ್ಬಂದಿ ಖಾತೆಯ ಉಸ್ತುವಾರಿಯನ್ನೂ ಹೊಂದಿರುವುದರಿಂದ ಅವರು ಜಯೇಂತ್ ಕುಮಾರ್ ಜೊತೆ ಸಮಾಲೋಚಿಸದೆಯೇ ಆರೋಗ್ಯ ಇಲಾಖೆಯ ನಿರ್ದೇಶಕ ಒಕ್ರಂ ಇಬೊಮ್ಚಾ ಅವರನ್ನು ಅಮಾನತುಗೊಳಿಸಿದ್ದರು.
ಇಬೊಮ್ಚಾ ವಿರುದ್ಧ ಯಾವುದೇ ನಿರ್ದಿಷ್ಟ ಆರೋಪಗಳು ಇಲ್ಲವಾದರೂ, ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿದೆಯೆಂದು ಅಮಾನತು ಆದೇಶ ಪತ್ರದಲ್ಲಿ ತಿಳಿಸಲಾಗಿದೆ. ಇಬೊಮ್ಚಾ ಅವರು, ಹಿಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಒಕ್ರಂ ಇಬೋಬಿ ಸಿಂಗ್ ಅವರ ನಿಕಟ ಸಂಬಂಧಿಯಾಗಿದ್ದಾರೆ.
ನ್ಯಾಶನಲ್‌ಪೀಪಲ್ಸ್ ಪಾರ್ಟಿ (ಎನ್‌ಪಿಪಿ)ಯ ನಾಲ್ವರು ಶಾಸಕರಲ್ಲೊಬ್ಬರಾದ ಜಯೇಂತ್ ಕುಮಾರ್ ಅವರು ಮಾರ್ಚ್ 15ರಂದು ಬಿಜೆಪಿ ನೇತೃತ್ವವ ಸರಕಾರ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಸಂಪುಟಕ್ಕೆ ಸೇರ್ಪಡೆಗೊಂಡಿದ್ದರು. ಅವರು ಆರೋಗ್ಯ ಇಲಾಖೆಯ ಜೊತೆಗೆ ಇತರ ಮೂರು ಮಹತ್ವದ ಖಾತೆಗಳನ್ನೂ ನಿರ್ವಹಿಸುತ್ತಿದ್ದಾರೆ.
ತನ್ನನ್ನು ಸಂಪುಟದಲ್ಲಿ ಸೇರ್ಪಡೆಗೊಳಿಸಿದ್ದಕ್ಕಾಗಿ ಮುಖ.್ಮಮಂತ್ರಿಯವರಿಗೆ ಕೃತಜ್ಞತೆ ಅರ್ಪಿಸುವುದಾಗಿ ಜಯೇಂತ್‌ಕುಮಾರ್ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಆದರೆ ತನ್ನ ಖಾತೆಯಲ್ಲಿ ನಡೆಯುತ್ತಿರುವ ಹಸ್ತಕ್ಷೇಪದಿಂದಾಗಿ ತನ್ನ ಆಶಯಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲವೆಂದು ಅವರು ಹೇಳಿದ್ದಾರೆ. ಬಿರೇನ್ ಸರಕಾರದಲ್ಲಿ ಭಿನ್ನಮತ ತೀವ್ರವಾಗಿ ಹೊಗೆಯಾಡುತ್ತಿದ್ದು, ಎನ್‌ಪಿಪಿಯ ಕೆಲವು ಸಚಿವರು ಕೂಡಾ ತಮಗೆ ನೀಡಲಾಗಿರುವ ಖಾತೆಗಳ ಬಗ್ಗೆ ಅಸಂತುಷ್ಟರಾಗಿದ್ದಾರೆಂದು ಮೂಲಗಳು ತಿಳಿಸಿವೆ.
ಮಾಜಿ ಪೊಲೀಸ್ ಮಹಾನಿರ್ದೇಶಕರಾದ ಎನ್‌ಪಿಪಿ ಶಾಸಕ ಉಪಮುಖ್ಯಮಂತ್ರಿ ವೈ.ಜೋಯ್‌ಕುಮಾರ್, ಗೃಹಖಾತೆಯ ಮೇಲೆ ಕಣ್ಣಿರಿಸಿದ್ದರು. ಆದರೆ ಬಿರೇನ್ ಗೃಹಖಾತೆಯನ್ನು ತನ್ನ ಬಳಿಯೇ ಇರಿಸಿಕೊಂಡಿದ್ದಾರೆ.
60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಬಿಜೆಪಿ 21 ಸ್ಥಾನಗಳನ್ನು ಹೊಂದಿದ್ದು, ಎನ್‌ಪಿಪಿಯ ಹಾಗೂ ನಾಗಾಪೀಪಲ್ಸ್‌ಫ್ರಂಟ್‌ನ ತಲಾ ನಾಲ್ವರು ಶಾಸಕರು, ತಲಾ ಓರ್ವ ಎಲ್‌ಜೆಪಿ ಹಾಗೂ ಇಬ್ಬರು ಪಕ್ಷೇತರರ ಬೆಂಬಲದೊಂದಿಗೆ ಅದು ಸರಕಾರ ರಚಿಸಿದೆ.