ಮೌನದ ಕುತಂತ್ರ
ವ್ಯಾಪಂ ಹಗರಣದಲ್ಲಿ ಕಂಡುಬರುವ ಶಿಕ್ಷಾಭೀತಿ ಇಲ್ಲದಿರುವಿಕೆ ಮತ್ತು ಸಿನಿಕತನಗಳು ಕಂಗೆಡಿಸುವಂತಿದೆ
ಸದಾ ಹಗರಣಗಳ ಮತ್ತು ಭ್ರಷ್ಟಾಚಾರಗಳ ಸುದ್ದಿಗೆ ಬಕಾಸುರ ಹಸಿವಿನಿಂದ ಕಾಯುವ ಮಾಧ್ಯಮಗಳು ವ್ಯಾಪಂ ಹಗರಣ ಎಂದೇ ಕುಖ್ಯಾತಿ ಪಡೆದ ಮಧ್ಯಪ್ರದೇಶದ ವೃತ್ತಿ ತರಬೇತಿ ಇಲಾಖೆಯ ನೋಂದಾವಣೆ ಮತ್ತು ನೇಮಕಾತಿ ಹಗರಣದ ಹಿಂದೆ ಯಾಕೆ ಬೀಳಲಿಲ್ಲ ಎನ್ನುವುದು ಮಾತ್ರ ಯಾವ ವಿವರಣೆಗೂ ದಕ್ಕುತ್ತಿಲ್ಲ. ಆ ಹಗರಣದ ಬೃಹತ್ ಸ್ವರೂಪವು 2013ರ ವೇಳೆಗೆ ಬಯಲಿಗೆ ಬಂದ ನಂತರದಲ್ಲಿ 45ಕ್ಕೂ ಹೆಚ್ಚು ಸಾಕ್ಷಿಗಳು ಮತ್ತು ಆರೋಪಿಗಳು ನಿಗೂಢ ರೀತಿಯಲ್ಲಿ ಸತ್ತಿದ್ದಾರೆ.
ಅಷ್ಟು ಮಾತ್ರವಲ್ಲದೆ ಆ ರಾಜ್ಯದ ಮುಖ್ಯಮಂತ್ರಿಗಳನ್ನೂ ಒಳಗೊಂಡಂತೆ ಅವರ ಸಂಪುಟ ಸಹೋದ್ಯೋಗಿಗಳು ಹಾಗೂ ಅವರ ಒಡನಾಡಿಗಳನ್ನೂ ಸೇರಿದಂತೆ 2,000ಕ್ಕೂ ಹೆಚ್ಚು ಜನರ ಮೇಲೆ ತನಿಖೆಗಳು ನಡೆಯುತ್ತಿವೆ ಅಥವಾ ಗುರುತರ ಆರೋಪವನ್ನು ಹೊರಿಸಲಾಗಿದೆ. ಈ ಪ್ರಕ್ರಿಯೆಯ ಮೂಲಕವೇ ವೈದ್ಯಕೀಯ ಶಿಕ್ಷಣವನ್ನೂ ಒಳಗೊಂಡಂತೆ ಇನ್ನಿತರ ಹಲವಾರು ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆದಿದ್ದ ಸಾವಿರಾರು ಯುವಕರ ವೃತ್ತಿಪರ ಭವಿಷ್ಯವನ್ನು ಮತ್ತು ಬದುಕನ್ನೇ ಹಾಳುಮಾಡಿದೆ. ಆದರೂ ಇಂಥಾ ಒಂದು ಬೃಹತ್ ಹಗರಣದ ಬಗ್ಗೆ ಕುಂಟುತ್ತಾ ನಡೆದಿರುವ ವಿಚಾರಣೆಯಿಂದ ಯಾವ ರಾಷ್ಟ್ರೀ ಮಾಧ್ಯಮಗಳೂ ನಿರ್ಣಾಯಕ ಉತ್ತರಗಳನ್ನು ಆಗ್ರಹಿಸುವ ಉತ್ಸುಕತೆಯನ್ನು ತೋರುತ್ತಿಲ್ಲ.
ಈ ಹಗರಣದಿಂದಾಗಿ ಸಾರ್ವಜನಿಕರು ವೈದ್ಯರ ಮೇಲಿಟ್ಟಿದ್ದ ವಿಶ್ವಾಸವನ್ನೇ ಕಳೆದುಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಇತರ ಹಲವಾರು ಪ್ರಕರಣಗಳ ಭಾರದಿಂದಾಗಿ ನ್ಯಾಯಾಲಯವೂ ಸಹ ಕಾಲಮಿತಿಯೊಳಗೆ ಹಗರಣದ ತನಿಖೆ ಮುಕ್ತಾಯವಾಗುವಂತೆ ನೋಡಿಕೊಳ್ಳುವ ಮುಂದೊಡಗನ್ನು ತೆಗೆದುಕೊಳ್ಳುತ್ತಿಲ್ಲ. ಅಷ್ಟು ಮಾತ್ರವಲ್ಲ, ಇತ್ತೀಚೆಗೆ ಸಾರ್ವಜನಿಕ ಲೇಖಾಯುಕ್ತರು (ಕಾಂಪ್ಟ್ರೋಲರ್ ಆ್ಯಂಡ್ ಆಡಿಟರ್ ಜನರಲ್- ಸಿಎಜಿ) ಕೂಡಾ ಈ ಪ್ರಕರಣದಲ್ಲಿ ತುಂಬಾ ವ್ಯವಸ್ಥಿತವಾಗಿ ಕಾನೂನುಗಳ ಉಲ್ಲಂಘನೆ ಮಾಡಿರುವ ಬಗ್ಗೆ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರವನ್ನು ಹೀಗೆಳೆಯಲು ಸದಾ ತುದಿಗಾಲ ಮೇಲೆ ನಿಲ್ಲುವ ಅಧಿಕಾರರೂಢ ಬಿಜೆಪಿ ತನ್ನದೇ ಸರಕಾರದ ಮೇಲೆ ಬಂದಿರುವ ಈ ಆರೋಪದ ಬಗ್ಗೆ ಮಾತ್ರ ಯೋಜಿತ ವೌನವನ್ನು ಪಾಲಿಸುತ್ತಿದೆ.
ಸಿಎಜಿ ವರದಿಯನ್ನು ಕಳೆದ ಮಾರ್ಚ್ನಲ್ಲಿ ಮಧ್ಯಪ್ರದೇಶದ ವಿಧಾನಮಂಡಲದಲ್ಲಿ ಮಂಡಿಸಲಾಯಿತು. ಈ ಹಗರಣವು ಬಯಲಿಗೆ ಬಂದ ನಂತರವೂ ವೃತ್ತಿಪರ ಶಿಕ್ಷಣದ ಪರೀಕ್ಷಾ ಮಂಡಳಿ (ವ್ಯಾವಸಾಯಿಕ್ ಪರೀಕ್ಷಾ ಮಂಡಲ್-ವ್ಯಾಪಂ)ಯು ತಾನು ನಡೆಸಿದ ಪ್ರವೇಶ ಪರೀಕ್ಷೆಗಳಿಗೆ ಸಬಂಧಪಟ್ಟಂತೆ ಯಾವುದೇ ನಿಯಂತ್ರಣಾ ನಿಯಮಗಳ ಚೌಕಟ್ಟನ್ನು ರೂಪಿಸದೆ ಪ್ರವೇಶ ಮತ್ತು ನೇಮಕಾತಿಗಳನ್ನು ಬಯಸಿದ ಸಾವಿರಾರು ಆಕಾಂಕ್ಷಿಗಳ ಭವಿಷ್ಯವನ್ನು ಹಾಳುಮಾಡಿದೆ ಎಂದು ಆ ವರದಿ ನೇರವಾಗಿ ಹೇಳಿದೆ.
ಅಲ್ಲದೆ ಅಭ್ಯರ್ಥಿಯನ್ನು ಸರಕಾರದ ಸೇವೆಗೆ ನೇಮಕಾತಿ ಮಾಡಿಕೊಳ್ಳಲು ಎಷ್ಟು ಪರೀಕ್ಷೆಗಳನ್ನು ಪಾಸು ಮಾಡಬೇಕೆಂಬ ಬಗ್ಗೆಯೂ ಯಾವುದೇ ದತ್ತಾಂಶಗಳ ದಾಖಲೆಯನ್ನು ಮಂಡಳಿಯು ಪಾಲಿಸುತ್ತಿಲ್ಲ. ಇದೂ ಸಹ ಪ್ರವೇಶ ಮತ್ತು ನೇಮಕಾತಿ ವಿಚಾರದಲ್ಲಿ ಮಂಡಳಿಯು ಅಪಾರದರ್ಶಕವಾಗಿದೆಯೆಂಬುದನ್ನು ತೋರಿಸುತ್ತದೆ ಮತ್ತು ಅದು ಮಂಡಳಿಯ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ ಎಂದೂ ಆ ವರದಿಯಲ್ಲಿ ಹೇಳಲಾಗಿದೆ.
ಎಲ್ಲಕ್ಕಿಂತ ಹೀನಾಯ ಸಂಗತಿಯೆಂದರೆ ಉಳಿದ ಎಲ್ಲಾ ವಿಷಯಗಳಲ್ಲಿ ಸಿಎಜಿಯು ಒಂದು ಸರಕಾರಿ ನಿಯಂತ್ರಿತ ಸಂಸ್ಥೆಯೇ ಆಗಿದ್ದರೂ ಸಿಎಜಿಯು ಸರಕಾರಿ ಸಂಸ್ಥೆಯಲ್ಲವೆಂಬ ನೆಪವೊಡ್ಡಿ ಅದರ ಪರಿಶೀಲನೆಗೆ ವ್ಯಾಪಂ ಹಗರಣದ ಕಡತಗಳನ್ನು ಸರಕಾರ ಒದಗಿಸಿಲ್ಲ. ಅಧಿಕೃತವಾದ ರಾಜ್ಯ ಸಿಬ್ಬಂದಿ ಆಯ್ಕೆ ಅಯೋಗವನ್ನು ಬದಿಗೆ ಸರಿಸಿದ ಸರಕಾರವು ವ್ಯಾಪಂ ಮೂಲಕವೇ ಎಲ್ಲಾ ನೇಮಕಾತಿಗಳನ್ನು ಮಾಡಿತಲ್ಲದೆ ಅದರ ಅಧ್ಯಕ್ಷ, ನಿರ್ದೇಶಕರು ಮತ್ತು ನಿಯಂತ್ರಕರನ್ನು ಸರಕಾರದ ಸಿಬ್ಬಂದಿಯಿಂದಲೇ ಆಯ್ಕೆ ಮಾಡಿತೆಂದು ಸಿಎಜಿ ವರದಿಯು ಹೇಳಿದೆ.
ವ್ಯಾಪಂ ನಲ್ಲಿ ಹಲವಾರು ಪಟ್ಟಭದ್ರ ಹಿತಾಸಕ್ತಿಗಳು ಆಳವಾಗಿ ಬೇರೂರಿವೆಯೆಂದೂ, ಹಲವು ವಿಧಾನಗಳಲ್ಲಿ ಹಲವಾರು ಅಕ್ರಮಗಳು ನಡೆಯುತ್ತಿದೆಯೆಂದೂ 2009ರಿಂದಲೇ ಹಲವಾರು ಭ್ರಷ್ಟಾಚಾರ ವಿರೋಧಿಗಳು ಸಾರ್ವಜನಿಕರ ಗಮನ ಸೆಳೆಯಲು ಯತ್ನಿಸಿದ್ದರು. ಈ ಅಕ್ರಮಗಳು ಹಲವು ರೀತಿಯಲ್ಲಿದ್ದವು. ನಕಲಿ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡುವುದು, ತಮಗೆ ಬೇಕಾದ ಅಭ್ಯರ್ಥಿಗಳಿಗೆ ಪೂರ್ವಭಾವಿಯಾಗಿ ಉತ್ತರಗಳ ಸೋರಿಕೆ, ಉತ್ತರ ಪತ್ರಿಕೆಗಳನ್ನೇ ತಿದ್ದಿಬಿಡುವುದು ಮತ್ತು ಉತ್ತಮ ಅಭ್ಯರ್ಥಿಯಿಂದ ಉತ್ತರಗಳನ್ನು ನಕಲು ಮಾಡಲು ಅವಕಾಶ ಮಾಡಿಕೊಡುವುದು ಇತ್ಯಾದಿ. ಇವುಗಳ ಬಗ್ಗೆ ಮೊದಲು ಪೊಲೀಸರಿಂದ, ನಂತರ ವಿಶೇಷ ಪರಿಶೋಧನಾ ಪಡೆಯಿಂದ ಮತ್ತು ಈಗ ಕೇಂದ್ರ ತನಿಖಾ ದಳ (ಸಿಬಿಐ)ರಿಂದ ನಡೆಯುತ್ತಿರುವ ತನಿಖೆಗಳು ಹಲವಾರು ಪ್ರಶ್ನೆಗಳನ್ನು ಮತ್ತು ಆರೋಪಗಳನ್ನು ಹೊರಿಸಿವೆ.
ಅದೇನೇ ಇದ್ದರೂ ಈ ಹಗರಣದ ಹಿಂದಿನ ನಿಜವಾದ ರೂವಾರಿಗಳ ಬಗ್ಗೆ ಹೆಚ್ಚೇನೂ ಮಾಹಿತಿಗಳು ದೊರಕಿಲ್ಲ. ಸಿಬಿಐ ತನಿಖೆಯು ವಿಳಂಬ ಮತ್ತು ನಿಗೂಢತನದ ಆರೋಪಗಳನ್ನು ಎದುರಿಸುತ್ತಿದೆ. ಈ ಭ್ರಷ್ಟಾಚಾರವನ್ನು ಬಯಲಿಗೆಳೆದವರು ಹೆಸರಿಸಿರುವ ಆರೋಪಿಗಳಲ್ಲಿ ಸಾಕ್ಷಾತ್ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮತ್ತು ಬಿಜೆಪಿಯ ಓರ್ವ ಖ್ಯಾತ ಬಿಜೆಪಿ ನಾಯಕ ಸೇರಿದ್ದಾರೆ. ಶಿವರಾಜ್ ಸಿಂಗ್ ಮತ್ತವರ ಮಡದಿಯ ಮೇಲೆ ಇದೇರೀತಿಯ ಆರೋಪ ಹೊರಿಸಿದ್ದ ಕಾಂಗ್ರೆಸ್ ನಾಯಕರೊಬ್ಬರ ಮೇಲೆ ಮುಖ್ಯಮಂತ್ರಿಗಳು ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ.
ನಿರೀಕ್ಷಿಸಿದ ಹಾಗೆ ಈ ಪ್ರಕರಣದಲ್ಲಿ ಪ್ರಮುಖವಾಗಿ ಬಂಧಿತರಾಗಿರುವವರು ಪರೀಕ್ಷೆಗಳಿಗೆ ಹಾಜರಾಗುವಾಗ ಅಥವಾ ಕೆಲಸಕ್ಕೆ ನೇಮಕಾತಿಗೊಳ್ಳುವಾಗ ಭ್ರಷ್ಟಾಚಾರದ ಪಲವನ್ನುಂಡ ಅಭ್ಯರ್ಥಿಗಳು, ಅವರ ಪೋಷಕರು ಮತ್ತು ನಡುವಿನ ದಲ್ಲಾಳಿಗಳು ಮಾತ್ರ. ದೊಡ್ಡ ಸಂಖ್ಯೆಯ ಕಾಂಟ್ರಾಕ್ಟ್ ಉಪಾಧ್ಯಾಯರುಗಳನ್ನೂ ಒಳಗೊಂಡಂತೆ ಸರಕಾರಿ ನೌಕರಿಯನ್ನು ಪಡೆಯಲು ಮತ್ತು ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಅಭ್ಯರ್ಥಿಗೆ ಇರಬೇಕಾದ ಅರ್ಹತೆಯನ್ನು ಸರಕಾರ ರದ್ದುಪಡಿಸಿದೆ.
ಹೀಗೆ ಬದುಕಿನ ಅಭದ್ರತೆ ಮತ್ತು ಆತಂಕಗಳನ್ನು ನೀಗಿಕೊಳ್ಳಲು ಅತ್ಯುತ್ತಮ ಮಾರ್ಗವಾಗಿರುವ ಸರಕಾರಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳುವ ಸಲುವಾಗಿ ವ್ಯವಸ್ಥೆಯೇ ಭ್ರಷ್ಟಗೊಳಿಸಿಟ್ಟಿರುವ ಪ್ರಕ್ರಿಯೆಗಳ ಲಾಭವನ್ನು ಪಡೆದುಕೊಳ್ಳುವ ಮಾರ್ಗ ಹಿಡಿದ ಹತಾಶ ಬಲಿಪಶುಗಳನ್ನೇ ಮತ್ತಷ್ಟು ಬಲಿಪಶುಗಳನ್ನಾಗಿಸಲಾಗಿದೆ. ಶಿಕ್ಷಣ ತಜ್ಞರ ಪ್ರಕಾರ ವ್ಯಾಪಂ ಹಗರಣವು ಕೇವಲ ಪರೀಕ್ಷಾ ಸಂಬಂಧೀ ಹಗರಣವಲ್ಲ. ಬದಲಿಗೆ ಅದೊಂದು ಪ್ರಭುತ್ವದ ಬೆಂಬಲದೊಂದಿಗೆ ನಡೆಯುತ್ತಿರುವ ವ್ಯವಸ್ಥಿತ ವಂಚನೆಯಾಗಿದ್ದು ಒಂದು ಸೇವಾ ಉದ್ಯಮವೇ ಆಗಿಬಿಟ್ಟಿದೆ. ಇದು ಶಿಕ್ಷಣ ಕ್ಶೇತ್ರವನ್ನು ಉದ್ದೇಶಪೂರ್ವಕವಾಗಿಯೇ ಹಂತಹಂತವಾಗಿ ದುರ್ಬಲಗೊಳಿಸಿ ಅದರಲ್ಲಿ ಖಾಸಗಿ ಕುಳಗಳಿಗೆ ದೊಡ್ಡ ಪಾತ್ರವನ್ನು ಕಲ್ಪಿಸಿಕೊಟ್ಟಿದ್ದರ ನೇರ ಪರಿಣಾಮವೂ ಆಗಿದೆ.
ಈ ಹಗರಣವನ್ನು ಗಂಭೀರವಾಗಿ ಪರಿಗಣಿಸಿ ತೀವ್ರವಾಗಿ ತನಿಖೆ ನಡೆಸುತ್ತಿದ್ದ ದಿಲ್ಲಿ ಮೂಲದ ಟೆಲಿವಿಷನ್ ಪತ್ರಕರ್ತರೊಬ್ಬರ ಕೊಲೆಯಾದ ನಂತರದಲ್ಲಿ ಮಾತ್ರ ರಾಷ್ಟ್ರೀಯ ಮಾಧ್ಯಮಗಳು ಈ ಹಗರಣವನ್ನು ಗಂಭೀರವಾಗಿ ಪರಿಗಣಿಸಿದವು. ಇದರ ಬಗ್ಗೆ ವಿವರವಾದ ತನಿಖಾ ವರದಿಯನ್ನು ಪ್ರಕಟಿಸಿದ ನಿಯತಕಾಲಿಕವೊಂದು ಪತ್ರಕರ್ತರ ಮತ್ತು ನ್ಯಾಯಾಧೀಶರ ವಸತಿ ಸಹಕಾರ ಸಂಘವು ಸರಕಾರದಿಂದ ಅತ್ಯಂತ ಕಡಿಮೆ ಬೆಲೆಗೆ ಭೂಮಿಯನ್ನು ಪಡೆದುಕೊಂಡಿದ್ದನ್ನು ಪ್ರಸ್ತಾಪಿಸಿತ್ತು ಮತ್ತು ಪ್ರಾಯಶಃ ಅದುವೇ ಈ ಹಗರಣವನ್ನು ವರದಿ ಮಾಡುವಲ್ಲಿ ಸ್ಥಳೀಯ ಪತ್ರಕರ್ತರ ಅನಾಸಕ್ತಿಗೆ ಕಾರಣವಿರಬಹುದೆಂದೂ ಸೂಚಿಸಿತ್ತು. ಹಗರಣಕ್ಕೆ ಸಂಬಂಧಪಟ್ಟಂತೆ ಆಗಿರುವ 45 ಕೊಲೆಗಳ ಬಗ್ಗೆ (ಅಧಿಕೃತ ವರದಿಯ ಪ್ರಕಾರ 25) ಮಾಧ್ಯಮಗಳು ವರದಿ ಮಾಡಿದರೂ ತನಿಖೆಯನ್ನು ಮುಂದುವರಿಸಲಿಲ್ಲ. ಎಲ್ಲೆಡೆ ಆಗುವಂತೆ ಇಲ್ಲಿಯೂ ಮಾಧ್ಯಮದ ವರದಿಗಳು ಅಧಿಕಾರರೂಢ ಬಿಜೆಪಿ ಮತ್ತು ವಿರೋಧಪಕ್ಷವಾದ ಕಾಂಗ್ರೆಸ್ ಗಳ ನಡುವೆ ನಡೆಯುತ್ತಿದ್ದ ಆರೋಪ-ಪ್ರತ್ಯಾರೋಪಗಳ ಮೇಲೆ ಕೇಂದ್ರೀಕರಿಸಿವಿಯೇ ವಿನಃ ಸಿಎಜಿ ಎತ್ತಿರುವ ಮೂಲಭೂತ ಪ್ರಶ್ನ್ನೆಗಳ ಬಗ್ಗೆಯಲ್ಲ.
ಈ ಹಗರಣ ಹೊರಗೆ ಬಂದು 8 ವರ್ಷಗಳಾದವು. ಈ ಭ್ರಷ್ಟಾಚಾರವನ್ನು ಬಯಲಿಗೆಳೆದ ಪ್ರಮುಖ ಕೂಗೆಚ್ಚರಿಕೆದಾರ (ವಿಸಲ್ ಬ್ಲೋಯರ್) ಮತ್ತು ಇತರ ಸಾಕ್ಷಿಗಳು ಈಗಲೂ ಜೀವಭಯದಲ್ಲಿ ಬದುಕುತ್ತಿದ್ದಾರೆ. ಅರೋಪಿತರು ಸಣ್ಣಪುಟ್ಟ ಮಿಕಗಳು ಮಾತ್ರವೇ ಆಗಿದ್ದಾರೆ. ಒಂದೆಡೆ ಸಾವಿರಾರು ಯುವಜನರ ಭವಿಷ್ಯ ಅತಂತ್ರವಾಗಿದ್ದರೆ ಮತ್ತೊಂದೆಡೆ ಹಗರಣದ ತನಿಖೆ ಚುಕ್ಕಾಣಿಯಿಲ್ಲದ ನಾವೆಯಂತಾಗಿದೆ. ನಾಗರಿಕ ಸಮಾಜವೂ ಸಹ ಅಪರಾಧಿಗಳಿಗೆ ಸೂಕ್ತ ಶಿಕ್ಷೆಯಾಗುವಂತೆ ಒತ್ತಡ ಹಾಕಲು ವಿಫಲವಾಗಿದೆ. ಭಾರತದ ರಾಜಕಾರಣವನ್ನು ಸಿನಿಕ ಬೇಜವಾಬ್ದಾರಿತನ ಮತ್ತು ತಪ್ಪಿಗೆ ಶಿಕ್ಷೆಯಾಗುತ್ತದೆಂಬ ಭೀತಿಯೂ ಸಹ ಇಲ್ಲದಿರುವ ಧೋರಣೆಗಳೇ ಆಳುತ್ತಿವೆಯೆಂಬುದನ್ನು ಪ್ರಾಯಶಃ ಇತ್ತೀಚೆಗೆ ನಡೆದ ಇನ್ಯಾವುದೇ ಹಗರಣಕ್ಕಿಂತ ಈ ವ್ಯಾಪಂ ಹಗರಣವು ಇನ್ನಷ್ಟು ಸ್ಪಷ್ಟವಾಗಿ ಬಯಲಿಗೆಳೆದಿದೆ.
ಕೃಪೆ: Economic and Political Weekly