ಸಂಬಂಧಗಳು ನಿರ್ಣಯಗಳು
ತಂದೆ ತಾಯಿಗಳ ನಡುವೆಯೂ ಇಂತಹ ಸಂಘರ್ಷ ನಡೆಯುವುದುಂಟು. ತಂದೆ ಪ್ರಭಾವಶಾಲಿಯಾಗಿದ್ದರೆ ತಾಯಿ ಮತ್ತು ಮಗುವಿನ ಒಪ್ಪಿಗೆ ಅಥವಾ ಅಭಿಪ್ರಾಯಗಳನ್ನು ಪರಿಗಣಿಸಲ್ಪಟ್ಟಿರುವುದಿಲ್ಲ. ಅವರಿಬ್ಬರೂ ಅವನ ನಿರ್ಣಯಕ್ಕೆ ಬದ್ಧವಾಗಬೇಕಾಗಿರುತ್ತದೆ. ಕೆಲವೊಮ್ಮೆ ಇವರು ಅವನೊಂದಿಗೇ ಚಲಿಸಬೇಕಾದ ಸನ್ನಿವೇಶಗಳು ಒದಗಿಬಂದು ಅನಿವಾರ್ಯವಾಗಿ ತೀರ್ಮಾನಗಳನ್ನು ಅನುಮೋದಿಸಬೇಕಾಗುತ್ತದೆ.
ಹಟವಾದಿ ನಿರ್ಣಯಕ್ಕೆ ಕಾರಣ
ಆ ಒಬ್ಬ ಯುವಕನ ವರ್ತನೆ ಮತ್ತು ತೆಗೆದುಕೊಳ್ಳುವ ನಿರ್ಣಯಗಳ ಬಗ್ಗೆ ಅವನ ತಂದೆ ತಾಯಿ ಇಬ್ಬರೂ ಗಾಬರಿಗೊಂಡಿದ್ದರು. ಅಲ್ಲದೇ ಅವನು ತಾನು ಹೇಳುವುದನ್ನು ಚಂಡಶಾಸನದಂತೆ ನಡೆಯಲೇಬೇಕೆಂದು ಉಗ್ರವಾಗಿ ಘೋಷಿಸುತ್ತಿದ್ದ. ಅವನು ತೆಗೆದುಕೊಳ್ಳುವ ಯಾವುದೇ ನಿರ್ಣಯವೂ ಅವನ ತಂದೆ ತಾಯಿಯರಿಗೆ ಒಪ್ಪಿತವಾಗುವುದಿರಲಿ, ಗಣನೆಗೂ ತೆಗೆದುಕೊಳ್ಳುತ್ತಿರಲಿಲ್ಲ. ತಾನು ಹೇಳುವುದೇ ಆಗಬೇಕು ಎಂದು ಹಟ ಹಿಡಿಯುತ್ತಿದ್ದ. ಆಗಲಿಲ್ಲವೆಂದರೆ ಅವರನ್ನು ತೊರೆಯುತ್ತೇನೆ ಎಂದು ಹೇಳುತ್ತಿದ್ದ. ಅವನ ತಂದೆ ಮತ್ತು ತಾಯಿ ಆ ಯುವಕನ ಮನವೊಲಿಸಲು ಯತ್ನಿಸಿ ಎಂದು ನನ್ನ ಕೇಳಿದರು. ಅವರ ಪ್ರಕಾರ ಅವನು ಅವರನ್ನು ತೊರೆಯಲೂಬಾರದು ಮತ್ತು ತನ್ನ ನಿರ್ಣಯಗಳನ್ನು ಬದಲಿಸಬೇಕು. ಅವನ ಪ್ರಕಾರ ಅವನು ನಿರ್ಣಯವನ್ನು ಬದಲಿಸುವುದಿಲ್ಲ. ತನ್ನ ನಿರ್ಣಯವನ್ನು ಒಪ್ಪದಿದ್ದರೆ ಅವರು ತನ್ನೊಡನೆ ಇರುವುದು ಬೇಡ ಅಥವಾ ನಾನು ಅವರೊಡನೆ ಇರುವುದಿಲ್ಲ.
ಇಂತಹ ಸ್ಥಿತಿಯಲ್ಲಿ ತಾಯಿಯು ನನ್ನೊಡನೆ ಮಾತಾಡುತ್ತಾ ಒಂದು ವಿಷಯವನ್ನು ನನ್ನ ಗಮನಕ್ಕೆ ತಂದರು, ಅವನು ಈಗ ವರ್ತಿಸುವ ರೀತಿ ಮತ್ತು ಮಾತಾಡುವ ಕೆಲವು ಪದಗಳು ಕೆಲವು ವರ್ಷಗಳ ಹಿಂದೆ ಮರಣಿಸಿದ ಆಕೆಯ ಅತ್ತೆಯನ್ನು ಅಂದರೆ ಆ ಯುವಕನ ಅಜ್ಜಿಯನ್ನು ನೆನಪಿಸುತ್ತದೆ ಎಂದು.
ಕೇಸ್ ಸ್ಟಡಿ ಮಾಡಿದಾಗ ಒಂದು ಅಂಶ ಬೆಳಕಿಗೆ ಬಂತು.
ಈ ಯುವಕನ ತಂದೆ ತಾಯಿಯರು ಯಾವುದೋ ವಿಷಯಕ್ಕೆ ತಮ್ಮತಮ್ಮಲ್ಲಿ ಜಗಳವಾಡುತ್ತಿದ್ದರು. ಹಾಗೆ ಜಗಳವಾಡುವಾಗ ಮನೆ ಬದಲಿಸುವ ಅಥವಾ ಏರಿಯಾ ಬದಲಿಸುವ ನಿರ್ಣಯಗಳಿಂದ ಹಿಡಿದು ಅಂದು ಬೆಳಗ್ಗೆ ಮನೆಯಲ್ಲಿ ಕಾಫಿ ಮಾಡುವ, ತಿಂಡಿ ಮಾಡುವ, ಅಡುಗೆ ಮಾಡುವ ವಿಷಯಗಳೂ ಕೂಡ ಅವರ ಜಗಳದ ಮೇಲೆ ಅವಲಂಬಿತವಾಗಿರುತ್ತಿತ್ತು. ಹಾಗೆಯೇ ಅವರ ಹಟ ಸಾಧನೆಯ ನಿರ್ಣಯದ ಮೇಲೆ ಅವಲಂಬಿತವಾಗಿರುತ್ತಿತ್ತು. ಇಬ್ಬರೂ ವಿಚ್ಛೇದನಕ್ಕೆ ಪ್ರಯತ್ನಿಸುತ್ತಲೇ ಇದ್ದು ಅದಾಗಲಿಲ್ಲ ಮತ್ತು ಹಾಗೆಯೇ ಕಿತ್ತಾಡಿಕೊಂಡೇ ಬದುಕಿಬಿಟ್ಟರು ಎನ್ನುವುದು ಮತ್ತೊಂದು ಸಂಗತಿ.
ಆದರೆ ಆಗ ಆ ನಿತ್ಯ ನಡೆಯುತ್ತಿದ್ದ ಗಂಡ ಹೆಂಡತಿಯ ಜಗಳದಲ್ಲಿ ಮನೆಯಲ್ಲಿ ಸದ್ದಡಗಿ ಹೋಗಿದ್ದು ಗಂಡನ ವೃದ್ಧ ಮತ್ತು ವಿಧವೆ ತಾಯಿ ಹಾಗೂ ಅವರ ಸಣ್ಣ ವಯಸ್ಸಿನ ಒಬ್ಬನೇ ಮಗ. ಇವರಿಬ್ಬರೂ ನಡೆಯುವ ಜಗಳದ ಭರಾಟೆಯಲ್ಲಿ ಬೆಳಗಿನ ಹಾಲು ಅಥವಾ ಕಾಫಿ ಕುಡಿಯಲಾಗುತ್ತಿರಲಿಲ್ಲ. ತಿಂಡಿ ಸರಿಯಾಗಿ ಆಗುತ್ತಿರಲಿಲ್ಲ. ಮಗು ಶಾಲೆಗೆ ಸರಿಯಾದ ಸಮಯಕ್ಕೆ ಹೋಗಲಾಗುತ್ತಿರಲಿಲ್ಲ. ಮನೆಯಲ್ಲಿ ತಿಂಡಿಯ ಸಿದ್ಧತೆ ಮಾಡದೇ ದಾರಿಯಲ್ಲಿ ಹೋಟೆಲ್ನಲ್ಲಿ ಏನೋ ಒಂದು ತಿಂದು ಮತ್ತು ಅದನ್ನೇ ಬುತ್ತಿಯನ್ನಾಗಿ ಹೊತ್ತು ಹೋಗಬೇಕಿತ್ತು. ಇನ್ನು ಸಂಜೆ ಮನೆಗೆ ಬಂದರೆ ಅಪ್ಪ ಅಮ್ಮನಿಗೆ ಹೊಡೆದಿರುವುದು, ಅಮ್ಮ ಒಂದೇ ಉಸುರಿನಲ್ಲಿ ಅವನ ತಪ್ಪುಗಳನ್ನು ಇತರರ ಜೊತೆಗೆ ನ್ಯಾಯ ಒಪ್ಪಿಸುವುದು ಇತ್ಯಾದಿ.
ನೀನು ಈ ಗಲಾಟೆಗಳಿಗೆಲ್ಲಾ ಕಾರಣ ಎಂದು ಆರೋಪ ಪ್ರತ್ಯಾರೋಪಗಳ ನಡುವೆ ವೃದ್ಧೆಯನ್ನೂ ಮತ್ತು ಮಗುವನ್ನೂ ಮಧ್ಯೆ ಎಳೆದು ತರುತ್ತಿದ್ದರು ಬೇಕಾದರೆ ಇವರನ್ನೇ ಕೇಳಿ ಎಂದು. ಈ ವೃದ್ಧೆ ಮತ್ತು ಮಗು ಯಾರ ಪರವಾಗಿಯೂ ಅಥವಾ ವಿರೋಧವಾಗಿಯೂ ತಮ್ಮ ಅಭಿಪ್ರಾಯಗಳನ್ನು ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ವಾಸ್ತವವಾಗಿ ಜಗಳದ ಕಾರಣಗಳಲ್ಲಿ ಗಂಡ ಹೆಂಡತಿ ಇಬ್ಬರೂ ಘನವಾಗಿ ಸಮಪಾಲನ್ನು ಹೊಂದಿರುತ್ತಿದ್ದರು.
ಇಂತಹ ಕೌಟುಂಬಿಕ ವಾತಾವರಣ ಬರಿಯ ಜಗಳದಲ್ಲಿ ಮಾತ್ರವಲ್ಲ, ಮಿತಿ ಮೀರಿದ ವ್ಯವಹಾರಗಳಲ್ಲಿ ಮುಳುಗಿಹೋಗಿರುವ ಪೋಷಕರ ಮನೆಗಳಲ್ಲಿಯೂ ಕೂಡ ಉಂಟಾಗುತ್ತದೆ. ಸತತವಾಗಿ ವ್ಯಾಪಾರ, ವ್ಯವಹಾರ, ರಾಜಕೀಯ ವಿದ್ಯಮಾನಗಳು, ಇತರೇ ಚಟುವಟಿಕೆಗಳು ನಡೆಯುತ್ತಿರುವಂತಹ ಕುಟುಂಬದಲ್ಲಿ ಅಭಿಪ್ರಾಯಗಳನ್ನು ಮಂಡಿಸುವ, ನಿರ್ಣಯಗಳನ್ನು ತೆಗೆದುಕೊಳ್ಳುವ ಅವಕಾಶ ಅಥವಾ ಅಧಿಕಾರಗಳನ್ನು ವೃದ್ಧರಿಂದ ಮತ್ತು ಮಕ್ಕಳಿಂದ ಕಸಿದಿರಲಾಗಿರುತ್ತದೆ. ಅವರ ಯಾವುದೇ ರೀತಿಯ ಭಾಗವಹಿಸುವಿಕೆಯಿರದೇ, ಸಮ್ಮತಿಗಳನ್ನು ಪರಿಗಣಿಸದೇ ಪರಿಣಾಮಕಾರಿಯಾಗಿ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳ ತೀರ್ಮಾನಕ್ಕೆ ಒಳಗಾಗಬೇಕಾಗುತ್ತದೆ.
ತಂದೆ ತಾಯಿಗಳ ನಡುವೆಯೂ ಇಂತಹ ಸಂಘರ್ಷ ನಡೆಯುವುದುಂಟು. ತಂದೆ ಪ್ರಭಾವಶಾಲಿಯಾಗಿದ್ದರೆ ತಾಯಿ ಮತ್ತು ಮಗುವಿನ ಒಪ್ಪಿಗೆ ಅಥವಾ ಅಭಿಪ್ರಾಯಗಳನ್ನು ಪರಿಗಣಿಸಲ್ಪಟ್ಟಿರುವುದಿಲ್ಲ. ಅವರಿಬ್ಬರೂ ಅವನ ನಿರ್ಣಯಕ್ಕೆ ಬದ್ಧವಾಗಬೇಕಾಗಿರುತ್ತದೆ. ಕೆಲವೊಮ್ಮೆ ಇವರು ಅವನೊಂದಿಗೇ ಚಲಿಸಬೇಕಾದ ಸನ್ನಿವೇಶಗಳು ಒದಗಿಬಂದು ಅನಿವಾರ್ಯವಾಗಿ ತೀರ್ಮಾನಗಳನ್ನು ಅನುಮೋದಿಸಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ತಾಯಿ ಮತ್ತು ಮಗನ ನಡುವೆ ಉಂಟಾಗುವ ತಳಮಳಗಳು, ತೊಳಲಾಟಗಳು ಬರುಬರುತ್ತಾ ವೃದ್ಧೆಯಾಗುತ್ತಾ ಬರುವ ತಾಯಿಯಲ್ಲಿ ಧ್ವನಿಸದೇ ಹೋದರೂ ಮುಂದೆ ಮಗುವು ಯುವಕನಾಗುತ್ತಾ, ವಯಸ್ಕನಾಗುತ್ತಾ ಬರುವಾಗ ಅವನ ನಿರ್ಣಯಗಳಲ್ಲಿ, ನಿಲುವುಗಳಲ್ಲಿ ಧ್ವನಿಸುತ್ತದೆ. ಹೀಗೂ ಹೇಳಬಹುದು; ಅವನ ವರ್ತನೆಗಳಲ್ಲಿ ಪ್ರತೀಕಾರಗಳನ್ನು ತೀರಿಸಿಕೊಳ್ಳಬಹುದು.
ಪಾತ್ರ ಚಕ್ರ
ಅನಾಟಮಿ ಆಫ್ ಸೈಕಿಯಾಟ್ರಿಕ್ ಅಡ್ಮಿನಿಸ್ಟ್ರೇಶನ್ ಲೇಖಕರಾದ ಮಿಲ್ಟನ್ ಗ್ರೀನ್ಬಾಟ್ ಹೇಳುವಂತೆ ಮೊದಲಿಗೆ ನಾವು ನಮ್ಮ ಪೋಷಕರಿಗೆ ಮಕ್ಕಳು, ನಂತರ ನಮ್ಮ ಮಕ್ಕಳಿಗೆ ಪೋಷಕರು, ತದನಂತರ ನಮ್ಮ ಪೋಷಕರಿಗೆ ಪೋಷಕರು, ಕೊನೆಗೆ ನಮ್ಮ ಮಕ್ಕಳಿಗೆ ನಾವು ಮಕ್ಕಳು.
ಒಂದು ಕುಟುಂಬದಲ್ಲಿ ಸಾಮಾನ್ಯವಾಗಿರುವ ಸಂಬಂಧಗಳ ಪಾತ್ರ ಚಕ್ರವಿದು. ಕೆಲವರಷ್ಟೇ ಇದರಿಂದ ತಪ್ಪಿಸಿಕೊಳ್ಳುವರು. ಕೌಟುಂಬಿಕ ಸಂಬಂಧವನ್ನು ಸಾಮಾನ್ಯ ವಾಗಿ ಉಳಿಸಿಕೊಳ್ಳುವವರು ಇದರಿಂದ ಅತೀತರಾಗುವುದಿಲ್ಲ.
ಆದರೆ ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ, ಪ್ರಾರಂಭದ ಹಂತದ ಮಕ್ಕಳು, ಅದೇ ಪೋಷಕರ ಪಾಲನೆ ಪೋಷಣೆಗೆ ಒಳಗಾಗುವ ಮೊದಲ ಹಂತದಲ್ಲಿ ಮುಂದಿನ ಹಂತಗಳನ್ನು ಎದುರಿಸುತ್ತೇವೆಂದು ಅವರಿಗೆ ಗೊತ್ತಿರು ವುದಿಲ್ಲ. ಆದರೆ ಪೋಷಕರಿಗೆ ಈ ಚಕ್ರದ ನಾಲ್ಕೂ ಆಯಾಮಗಳನ್ನು ಗಮನಿಸ ಬಹುದಾದ ಸಾಮರ್ಥ್ಯವೂ ಮತ್ತು ಅನುಭವ ದರ್ಶನವೂ ಇರುತ್ತದೆ. ಆದರೆ ಬಹಳಷ್ಟು ಪೋಷಕರು ಅದನ್ನು ಮರೆತಿರುತ್ತಾರೆ.
ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಮಕ್ಕಳನ್ನು ಪಾಲಿಸುವಾಗ ಶಿಶುವಿನ ಮನೋವಿಜ್ಞಾನದ ಕಡೆಗೆ ಗಮನವನ್ನೇ ಕೊಡುವುದಿಲ್ಲ. ಅದರಲ್ಲಿ ಭಾರತಕ್ಕೆ ಮತ್ತು ಇತರ ಏಶ್ಯಾದ ದೇಶಗಳಿಗೆ ಅಗ್ರಸ್ಥಾನ.
ಅಸಹಾಯಕ ವೃದ್ಧರು ಮತ್ತು ಮಕ್ಕಳು
ಬಹಳಷ್ಟು ಕುಟುಂಬಗಳಲ್ಲಿ ವಯಸ್ಸಾದವರನ್ನು ಮತ್ತು ಮಕ್ಕಳನ್ನು ನಿರ್ಲಕ್ಷಿಸುತ್ತಾರೆ. ಅದು ಎಷ್ಟರ ಮಟ್ಟಿಗೆ ಆಗುತ್ತದೆ ಎಂದರೆ, ಮನೆಯಲ್ಲಿ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳಬೇಕೆಂದರೆ ದುಡಿಯುವವರು ಮತ್ತು ಗಟ್ಟಿಮುಟ್ಟಾಗಿರುವ ಯುವಕ ಯುವತಿಯರು ಮಾತ್ರವೇ ಪಾಲುದಾರರಾಗಿರುತ್ತಾರೆ. ಹೊರತಾಗಿ ತೀರ ವಯಸ್ಸಾದವರು ಮತ್ತು ಮಕ್ಕಳು ಯಾವುದೇ ಗುರುತರವಾದಂತಹ ನಿರ್ಣಯ ತೆಗೆದುಕೊಳ್ಳುವಂತಹ ಸಂದರ್ಭಗಳಲ್ಲಿ ಪರಿಗಣಿಸಲ್ಪಡುವುದಿಲ್ಲ. ಹೀಗಾಗಿಯೇ ಹಲವು ಕುಟುಂಬಗಳಲ್ಲಿ ವೃದ್ಧರೂ ಮತ್ತು ಮಕ್ಕಳು ಒಗ್ಗೂಡುತ್ತಾರೆ.
ಅವರದೊಂದು ಒಕ್ಕೂಟ ರಚನೆಯಾಗುತ್ತದೆ. ಆದರೆ ಮುಂದೆ ಮಕ್ಕಳಿಗೆ ಬೆಳೆದಂತೆ ಅವರ ಸ್ಥಾನ ಮಾನಗಳು ಬದಲಾಗುವ ಸಾಧ್ಯತೆಗಳಿರುತ್ತವೆ. ಏಕೆಂದರೆ ಇದೇ ಮಕ್ಕಳು ಯುವಜನರಾಗುತ್ತಾರೆ. ಆದರೆ ವೃದ್ಧರದು ಮತ್ತಷ್ಟು ಕ್ಷೀಣಿಸುತ್ತದೆ. ಇನ್ನು ಆಸ್ತಿ ಅಥವಾ ಇನ್ನಾವುದೇ ವಿಷಯ ಅಥವಾ ವಸ್ತುವಿನ ವೃದ್ಧರು ಸಹಿ ಹಾಕುವಷ್ಟು ಸ್ವಾಮಿತ್ವವನ್ನು ಹೊಂದಿಲ್ಲದೇ ಇದ್ದರಂತೂ ಅವರು ಏತಕ್ಕೂ ಬೇಡ ಎನ್ನುವಂತಹ ಸ್ಥಿತಿಯಲ್ಲಿ ಇರುತ್ತಾರೆ. ಮಕ್ಕಳು ಕೂಡ ಇಂತಹುದೇ ಸ್ಥಿತಿಯಲ್ಲಿರುವ ಕಾರಣದಿಂದ ಹಲವು ಸಂದರ್ಭಗಳಲ್ಲಿ ಗಮನಕ್ಕೆ ಒಳಗಾಗುವುದಿಲ್ಲ. ದುಡಿಯುವವರ ಮತ್ತು ದೊಡ್ಡ ದನಿಯವರ ನಿರ್ಣಯಕ್ಕೆ ಮಕ್ಕಳೂ ಮತ್ತು ವೃದ್ಧರೂ ಮಣಿಯಬೇಕಾಗುತ್ತದೆ.
ಇಂತಹ ಸನ್ನಿವೇಶಗಳು ಮಕ್ಕಳ ಮೇಲೆ ಬಹಳ ಗಂಭೀರವಾದಂತಹ ಪರಿಣಾಮಗಳನ್ನು ಬೀರುತ್ತದೆ.
1.ಮಕ್ಕಳು ನಿರ್ಣಯಗಳನ್ನು ತೆಗೆದುಕೊಳ್ಳುವುದರಲ್ಲಿ ಹಿಂದುಳಿಯಬಹುದು.
2.ಮುಂದೆ ಕಠೋರ ನಿರ್ಣಯಗಳನ್ನು ತೆಗೆದುಕೊಳ್ಳಬಹುದು. ಅಂದರೆ ಅವರು ನೋಡುತ್ತಿದ್ದ ತೀರ್ಮಾನ ತೆಗೆದುಕೊಳ್ಳುವವರ ವಿರುದ್ಧವಾಗಿ ಸೇಡಿನ ರೀತಿಯ ನಿರ್ಣುಗಳನ್ನು ತೆಗೆದುಕೊಳ್ಳುವುದು.
3.ತಾವು ಅಸಹಾಯಕರಾಗಿರುವಾಗ ತಮ್ಮ ಜೊತೆಗೆ ಒಕ್ಕೂಟವನ್ನು ರಚಿಸಿಕೊಂಡಿದ್ದ ವೃದ್ಧರು ಅಥವಾ ಇನ್ನಾವುದೇ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿದ್ದು ಅವರ ಮನಸ್ಥಿತಿಗೆ ತಕ್ಕಂತಹ ನಿರ್ಣುಗಳನ್ನು ತೆಗೆದುಕೊಳ್ಳುವುದು.
4.ನಿರ್ಣಯಗಳನ್ನು ತೆಗೆದುಕೊಳ್ಳಲು ಜಿಗುಪ್ಸೆ ಬಂದು ತಮ್ಮ ಕೌಟುಂಬಿಕ ವಾತಾವರಣವನ್ನು ತಿರಸ್ಕರಿಸುವಂತೆ ವರ್ತಿಸಬಹುದು.
5.ವ್ಯಕ್ತಿಗತವಾದಂತಹ ತಮ್ಮ ನಿರ್ಣಯಗಳಿಗೆ ತಮ್ಮ ಮನೆಯಲ್ಲಿ ಬೆಲೆಯಿಲ್ಲ ಎಂದು ಅನ್ನಿಸುತ್ತಲಿರುವುದರಿಂದ ಹೊರಗೆ ಖಡಾಖಂಡಿತವಾಗಿ ನಿರ್ಣಯಗಳನ್ನು ಮಂಡಿಸುವುದು. ಹಾಗೂ ಅದರ ಸಾಧಕ ಮತ್ತು ಬಾಧಕಗಳನ್ನು ಗಮನಿಸದೇ ಅದನ್ನೇ ಸಾಧಿಸಲು ಯತ್ನಿಸುವುದು. ಹಟ ಹಿಡಿಯುವುದು.
6.ತೆಗೆದುಕೊಳ್ಳುವ ನಿರ್ಣಯಗಳು ಪ್ರತೀಕಾರ ಅಥವಾ ಹಟ ಸಾಧನೆಯ ರೀತಿಯಲ್ಲಿಯೇ ಇದ್ದು ಸೂಕ್ಷತೆ ಮತ್ತು ್ರಜ್ಞೆಯಿಂದ ಕೂಡಿಲ್ಲದೇ ಇರುವುದು.
ಹೀಗೆ ಹಲವು ರೀತಿಯಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾ ಅವರು ತೆಗೆದುಕೊಳ್ಳುವ ನಿರ್ಣಯಗಳು ವಸ್ತುನಿಷ್ಠವಾಗಿರದೇ ತಮ್ಮ ಬಾಲ್ಯದಲ್ಲಿ ಆಗಿರುವಂತಹ ಪ್ರಭಾವಗಳಿಗೆ ಸಿಕ್ಕಿ ಪೂರ್ವಾಗ್ರಹ ಪೀಡಿತವಾಗಿರುತ್ತದೆ. ಆದರೆ ಅವು ಸಾಮಾನ್ಯವಾಗಿ ಅವರಂತೆಯೇ ನಿರ್ಲಕ್ಷ್ಯಕ್ಕೆ ಒಳಗಾ ವೃದ್ಧರದಂತೆಯೇ ಆಗಿರುತ್ತದೆ.
ಕ್ಷಮೆ ಮತ್ತು ಶಿಕ್ಷೆಗಳ ನಡುವೆ
ಸಾಹಿತಿ ಆಸ್ಕರ್ ವೈಲ್ಡ್ ಹೇಳುವಂತೆ ಪ್ರಾರಂಭದಲ್ಲಿ ಮಕ್ಕಳು ಪೋಷಕರನ್ನು ಪ್ರೀತಿಸುವರು, ಬೆಳೆದಂತೆ ತೀರ್ಪುಗಳನ್ನು ಕೊಡುವರು, ಕೆಲವು ಸಲ ಕ್ಷಮಿಸುವರು. ಮಕ್ಕಳು ತಾವು ಬೆಳೆದಂತೆ ತಮ್ಮ ಪೋಷಕರನ್ನು ಕ್ಷಮಿಸಬೇಕೋ ಅಥವಾ ಶಿಕ್ಷಿಸಬೇಕೋ ಎನ್ನುವುದೂ ಕೂಡಾ ಅವರು ತಮ್ಮ ಬಾಲ್ಯದಲ್ಲಿ ಕ್ಷಮೆಗೊಳಗಾಗಿರುತ್ತಾರೋ ಅಥವಾ ಶಿಕ್ಷೆಗಳಿಗೊಳಗಾಗಿರುತ್ತಾರೋ ಎನ್ನುವುದರ ಮೇಲೆಯೇ ಾಮಾನ್ಯವಾಗಿ ಅವಲಂಬಿತವಾಗಿರುತ್ತದೆ.
ಒಂದು ಕಾಲೇಜಿಗೆ ಸಿನೆಮಾ ರಸಗ್ರಹಣ ಶಿಬಿರದ ನಿರ್ದೇಶಕನಾಗಿ ಹೋಗಿದ್ದೆ. ಅಲ್ಲಿ ಒಬ್ಬಳು ಯುವತಿ ತನಗೆ ಎಂತಹ ಸಿನೆಮಾ ಬೇಕೆಂದು ಹೇಳುವಾಗ ಭಾವೋದ್ರೇಕಕ್ಕೆ ಒಳಗಾಗಿದ್ದಳು. ಪ್ರೇಮ ಕಥೆಗಳಿರುವ ಸಿನೆಮಾ ಬೇಡ. ಭಕ್ತಿ ಪ್ರಧಾನವಾದ ಸಿನೆಮಾ ಅಥವಾ ಕೌಟುಂಬಿಕ ಸಿನೆಮಾಗಳು ಬೇಕೆಂದು ಒತ್ತಾಯ ಪೂರ್ವಕವಾಗಿ ಹೇಳುತ್ತಿದ್ದಳು. ಶಿಬಿರದಲ್ಲಿ ಪಾಲ್ಗೊಂಡಿದ್ದ ಇತರ ಅಭ್ಯರ್ಥಿಗಳ ಸಿನೆಮಾ ಅಭಿರುಚಿಗಳನ್ನು ಖಂಡಿಸಿ ಮಾತಾಡುತ್ತಿದ್ದಳು. ಇತರರು ಪ್ರೇಮ ಕಥೆಗಳು ಬೇಕು ಎಂದಾಗ ಅಂತಹ ಕಥೆಗಳು ವ್ಯರ್ಥ, ಅಪ್ರಸ್ತುತ, ಉತ್ಪ್ರೇಕ್ಷೆ ಮತ್ತು ಅನಗತ್ಯ ಎಂದು ಗಟ್ಟಿ ದನಿಯಲ್ಲಿ ವಾದಿಸಿದಳು. ಜಗಳಕ್ಕೆ ಬೀಳುವಂತೆ ಗಟ್ಟಿ ದನಿಯಲ್ಲಿ ಇತರರ ಅಭಿರುಚಿಯನ್ನು ಖಂಡಿಸಿದಳು.
ಶಿಬಿರ ಮುಗಿದು ಔಪಚಾರಿಕ ಮಾತುಗಳೆಲ್ಲಾ ಮುಗಿದ ಮೇಲೆ ನಾನು ಹೊರಗೆ ಪಾರ್ಕಿಂಗ್ಗೆ ಬಂದು ನನ್ನ ಗಾಡಿಯನ್ನು ತೆಗೆದುಕೊಳ್ಳುವಾಗ ಆ ಯುವತಿಯನ್ನು ಕಂಡೆ. ಈಗಾಗಲೇ ಅವಳ ವರ್ತನೆಯಲ್ಲಿ ಅಸಹಜತೆಯನ್ನು ಮತ್ತು ಅವಳಿಗೆ ವಿಶೇಷವಾದ ಗಮನ ನೀಡುವ ಅಗತ್ಯತೆಯನ್ನು ಗುರುತಿಸಿದ್ದೆ. ಅವಳನ್ನು ಕರೆದು ಎಷ್ಟೋ ವರ್ಷಗಳಿಂದ ಪರಿಚಯವಿರುವಂತೆ, ‘‘ಏ ದಡ್ಡಿ, ನೀನು ಹೇಳುವುದು ಸರಿ, ಆದರೆ, ಹಾಗ್ಯಾಗೆ ಉದ್ರೇಕಗೊಳ್ಳುತ್ತೀಯಾ? ಇತರರ ಮೇಲೆ ಕೋಪಗೊಳ್ಳುತ್ತೀಯಾ?’’ ಎಂದು ನವುರಾಗಿ ಅವಳ ಕೆನ್ನೆಗೆ ಹೊಡೆು, ಗಲ್ಲವನ್ನು ಹಿಡಿದು ಅಲುಗಾಡಿಸಿದೆ.ಅವಳು ಮಾತಾಡು್ತಾ ಮಾತಾಡುತ್ತಾ ಅಳಲಾರಂಭಿಸಿದಳು.
ಮನೆಯಲ್ಲಿಯೂ ಅವಳು ಹಾಗೆಯೇ ಆಡುತ್ತಾಳಂತೆ. ತನ್ನ ತಂದೆ ತಾಯಿಯರ ಮೇಲೂ ಹೀಗೇ ಜಗಳಕ್ಕೆ ಬೀಳುತ್ತಾಳಂತೆ. ಮಾತಾಡುತ್ತಾ ಅವಳನ್ನು ಬಾಲ್ಯಕ್ಕೆ ಕರೆದುಕೊಂಡು ಹೋದೆ.
ಅವಳ ತಂದೆ ತಾಯಿಗಳಿಬ್ಬರೂ ಸರಕಾರಿ ನೌಕರಿಯಲ್ಲಿದ್ದರು. ತಮ್ಮದೇ ಆದಂತಹ ಧೋರಣೆಗಳಿಂದ ಜಗಳವಾಡಿಕೊಳ್ಳುತ್ತಿದ್ದರು. ಹಾಗೆಯೇ ಗಟ್ಟಿಯಾಗಿ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಇಬ್ಬರೂ ತಮಗಿಷ್ಟವಾದಂತಹ ಚಾನೆಲ್ಗಳನ್ನು ಹಾಕಿಕೊಳ್ಳುತ್ತಿದ್ದರು. ಪ್ರೇಮಕಥೆಗಳಿರುವಂತಹ ಚಿತ್ರಗಳನ್ನು ನೋಡುತ್ತಿದ್ದರು. ಆದರೆ ಇವರಿಬ್ಬರಲ್ಲಿ ಯಾವ ಪ್ರೇಮವೂ ಇರಲಿಲ್ಲ. ಈ ಮಗುವಿನ ಅಜ್ಜಿ ಕೌಟುಂಬಿಕ ಚಿತ್ರ ಅಥವಾ ಭಕ್ತಿಪ್ರಧಾನವಾದ ಚಿತ್ರವನ್ನೋ, ಧಾರಾವಾಹಿಯನ್ನೋ ನೋಡುತ್ತಿದ್ದರೆ ಮಗ ಮತ್ತು ಸೊಸೆ ಬಂದ ಕೂಡಲೇ ರಿಮೋಟನ್ನು ಅವರ ಕೈಗೆ ವರ್ಗಾಯಿಸಬೇಕಾಗಿತ್ತು.
ನಿರ್ದಾಕ್ಷಿಣ್ಯವಾಗಿ ಅವರು ಚಾನೆಲ್ ಬದಲಿಸಿ ತಮಗೆ ಬೇಕಾದ ಸಿನೆಮಾ ನೋಡುತ್ತಿದ್ದರು. ಎಷ್ಟೋ ಬಾರಿ ಅಜ್ಜಿ ತನ್ನ ಮೆಚ್ಚಿನ ಚಿತ್ರವನ್ನು, ಧಾರಾವಾಹಿಯನ್ನು ಪೂರ್ತಿ ನೋಡಲು ಸಾಧ್ಯವಾಗುತ್ತಿರಲಿಲ್ಲ. ಅವರ ಎದುರು ಹೇಳಲಾರದವರು ತನ್ನ ಮೊಮ್ಮಗಳ ಕಿವಿಗೆ ಬೀಳುವಂತೆ ಗೊಣಗಿಕೊಳ್ಳುತ್ತಿದ್ದರು. ಈಗ ಅವಳ ಅಜ್ಜಿ ಇಲ್ಲ. ಮರಣಿಸಿ ವರ್ಷಗಳೇ ಕಳೆದಿವೆ. ಆದರೆ ಅಜ್ಜಿಯ ಕೋಪ, ದುಃಖ, ಹತಾಶೆಗಳು ಮೊಮ್ಮಗಳಲ್ಲಿ ಜೀವಂತವಾಗಿವೆ. ಅವಳು ತನ್ನ ತಂದೆ ತಾಯಿಯರನ್ನು ಕ್ಷಮಿಸಿಲ್ಲ.