ಮಾಮೂನ್ ಅಖ್ತರ್: ಗುಣಮಟ್ಟದ ಶಿಕ್ಷಣಕ್ಕೆ ದಣಿವರಿಯದ ಚಳವಳಿ
ಮಾಮೂನ್ 12ನೆ ತರಗತಿವರೆಗಿನ ಶಿಕ್ಷಣವನ್ನು ಉರ್ದು ಮಾಧ್ಯಮದಲ್ಲೇ ಪಡೆದರೂ, ಇಂಗ್ಲಿಷ್ ಎನ್ನುವುದು ಯಶಸ್ಸಿನ ಕೀಲಿಗೈ ಎಂಬುದನ್ನು ಅವರು ಮನಗಂಡಿದ್ದರು. ಇದೇ ಕಾರಣಕ್ಕೆ ತಾವು ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದಾಗಲೇ ‘ಸಮರಿತಾನ್ ಹೆಲ್ಪ್ ಮಿಷನ್’ ಎಂಬ ಸಂಸ್ಥೆ ಹುಟ್ಟುಹಾಕಿದರು. ಸುತ್ತಮುತ್ತಲ ಮಂದಿಗೆ ಸಂಜೆಯ ವೇಳೆ ಟ್ಯೂಷನ್ ನೀಡುವ ಕೇಂದ್ರವನ್ನು ಆರಂಭಿಸಿ, ಮಕ್ಕಳಿಗೆ ಇಂಗ್ಲಿಷ್ ಬೋಧಿಸಲು ಆರಂಭಿಸಿದರು. ಸೋರುವ ಛಾವಣಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಿ, 2003ರಲ್ಲಿ ಈ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಿದರು. ಸ್ಥಳೀಯ ಯುವಕರ ನೆರವಿನೊಂದಿಗೆ ಈ ಟ್ಯುಟೋರಿಯಲ್ ಕೇಂದ್ರ, ಮೂರು ಪಾಳಿಗಳಲ್ಲಿ ಕಾರ್ಯ ನಿರ್ವಹಿಸುವ ಶಾಲೆಯಾಗಿ ಮಾರ್ಪಟ್ಟಿತು.
ಬಾಲ್ಯದಲ್ಲಿ ತಮಗೆ ಕೈ ತಪ್ಪಿದ್ದನ್ನು ಈ ಪೂರ್ವ ಮೆಟ್ರೊನಗರದ ಪುಟ್ಟ ಮಕ್ಕಳಿಗೆ ನೀಡಲೇಬೇಕು ಎಂಬ ಬದ್ಧತೆ ಕೋಲ್ಕತಾದ ಮಾಮೂನ್ ಅಖ್ತರ್ ಇವರದು. ಗುಣಮಟ್ಟದ ಶಿಕ್ಷಣದ ಪುನರ್ ಪ್ರಚೋದನೆಯಿಂದ ಇವರಿಗೆ ವೈಯಕ್ತಿಕವಾಗಿ ಯಾವ ಲಾಭವೂ ಇಲ್ಲ. ದುಬಾರಿ ಶಾಲೆಯಲ್ಲಿ ಗುಣಮಟ್ಟದ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಕೈಗೆಟಕುವುದು ಅಸಾಧ್ಯ ಎಂಬ ಕಾರಣದಿಂದ ಶಾಲೆ ಬಿಟ್ಟಿದ್ದ ಮಾಮೂನ್, ಬಡಮಕ್ಕಳಿಗಾಗಿಯೇ ಗುಣಮಟ್ಟದ ಶಿಕ್ಷಣ ನೀಡಲು ಶಾಲೆಯೊಂದನ್ನು ತೆರೆಯುವ ದೃಢಸಂಕಲ್ಪಕೈಗೊಂಡವರು. ಸುಮಾರು ಎರಡು ದಶಕಗಳ ಬಳಿಕ, ಇವರು ಈಗ ಮೂರು ಶಾಲೆಗಳನ್ನು ತೆರೆದಿದ್ದಾರೆ. ಸುಮಾರು 4 ಸಾವಿರ ಮಕ್ಕಳು ಇದೀಗ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ತಮ್ಮ ಬಾಲ್ಯದಲ್ಲಿ ತಮಗೆ ಗಗನ ಕುಸುಮ ಎನಿಸಿದ್ದ ಗುಣಮಟ್ಟದ ಶಿಕ್ಷಣವನ್ನು ಇತರ ಬಡ ಮಕ್ಕಳಿಗಾದರೂ ನೀಡಲೇಬೇಕು ಎಂಬ ಅದಮ್ಯ ಇಚ್ಛೆ ಅವರದ್ದು.
ಮಾಮೂನ್ ಅವರ ಶಾಲೆಗಳು ಇರುವುದು ಹೌರಾ ಜಿಲ್ಲೆಯ ಅಪರಾಧ ಕೃತ್ಯಗಳಿಗೆ ಹೆಸರಾದ ಟಿಕಿಯಾಪಾಡದಲ್ಲಿ. ಮಕ್ಕಳು ಶಾಲೆಯಲ್ಲಿ ಇರಬೇಕಾದ ವಯಸ್ಸಿನಲ್ಲಿ ಬೀದಿಯಲ್ಲಿ ಆಟವಾಡಿಕೊಂಡು, ಹೊಡೆದಾಡಿಕೊಂಡು ಇರುವ ಪರಿಸ್ಥಿತಿ. ವಿಧವೆಯರು, ವಿಚ್ಛೇದಿತ ಮಹಿಳೆಯರು ಅಪರಾಧಿಗಳ ಗ್ಯಾಂಗ್‌ನಿಂದ ಕಳ್ಳಸಾಗಣೆಯಾಗುತ್ತಿರುವುದು ಇಲ್ಲಿ ಮಾಮೂಲಿ. ಶಿಕ್ಷಣ ಹಾಗೂ ಕೌಶಲದ ಕೊರತೆಯಿಂದಾಗಿ ಯುವಕರು ಉದ್ಯೋಗದ ಕಡೆ ನೋಡುವಂತೆಯೇ ಇಲ್ಲ. ಮಾಮೂನ್ ಕೂಡಾ ಹೀಗೆ ದೊಡ್ಡ ಕುಟುಂಬದಲ್ಲಿ ಬೆಳೆದವರು. ದುಬಾರಿ ಎಂಬ ಕಾರಣಕ್ಕೆ ಇಂಗ್ಲಿಷ್ ಮಾಧ್ಯಮ ಶಾಲೆಯಿಂದ ಬಿಡಿಸಿ, ತಂದೆ ಸ್ಥಳೀಯ ಉರ್ದು ಮಾಧ್ಯಮ ಶಾಲೆಗೆ ಸೇರಿಸಿದ್ದರು. ಇದು ಒಳ್ಳೆಯ ಶಿಕ್ಷಣ ಹಾಗೂ ಉತ್ತಮ ಗುಣಮಟ್ಟದ ಜೀವನದ ಅಗತ್ಯತೆಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿತು. ಇಡೀ ಪ್ರದೇಶದ ಮಕ್ಕಳ ಭವಿಷ್ಯವನ್ನೇ ಬದಲಾಯಿಸಬೇಕು ಎಂಬ ಸಂಕಲ್ಪಅವರಲ್ಲಿ ಮೊಳಕೆಯೊಡೆಯಿತು.
ಮಾಮೂನ್ 12ನೆ ತರಗತಿವರೆಗಿನ ಶಿಕ್ಷಣವನ್ನು ಉರ್ದು ಮಾಧ್ಯಮದಲ್ಲೇ ಪಡೆದರೂ, ಇಂಗ್ಲಿಷ್ ಎನ್ನುವುದು ಯಶಸ್ಸಿನ ಕೀಲಿಗೈ ಎಂಬುದನ್ನು ಅವರು ಮನಗಂಡಿದ್ದರು. ಇದೇ ಕಾರಣಕ್ಕೆ ತಾವು ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದಾಗಲೇ ‘ಸಮರಿತಾನ್ ಹೆಲ್ಪ್ ಮಿಷನ್’ ಎಂಬ ಸಂಸ್ಥೆ ಹುಟ್ಟುಹಾಕಿದರು. ಸುತ್ತಮುತ್ತಲ ಮಂದಿಗೆ ಸಂಜೆಯ ವೇಳೆ ಟ್ಯೂಷನ್ ನೀಡುವ ಕೇಂದ್ರವನ್ನು ಆರಂಭಿಸಿ, ಮಕ್ಕಳಿಗೆ ಇಂಗ್ಲಿಷ್ ಬೋಧಿಸಲು ಆರಂಭಿಸಿದರು. ಸೋರುವ ಛಾವಣಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಿ, 2003ರಲ್ಲಿ ಈ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಿದರು. ಸ್ಥಳೀಯ ಯುವಕರ ನೆರವಿನೊಂದಿಗೆ ಈ ಟ್ಯುಟೋರಿಯಲ್ ಕೇಂದ್ರ, ಮೂರು ಪಾಳಿಗಳಲ್ಲಿ ಕಾರ್ಯ ನಿರ್ವಹಿಸುವ ಶಾಲೆಯಾಗಿ ಮಾರ್ಪಟ್ಟಿತು. ಇವರ ಅದಮ್ಯ ಉತ್ಸಾಹ ಹಾಗೂ ಬದ್ಧತೆಯನ್ನು ಕಂಡ ಅಮೆರಿಕನ್ ಕಾನ್ಸುಲೇಟ್ ಲೀ ಅಲ್ಲಿಸನ್ ಸಿಬ್ಲಿ ಅವರ ಪತ್ನಿ ನೀಡಿದ 10 ಸಾವಿರ ರೂಪಾಯಿ ದೇಣಿಗೆ, ಇವರ ಛಲಕ್ಕೆ ಸ್ಫೂರ್ತಿ ನೀಡಿತು.
ಮಹತ್ವದ ತಿರುವು
ಇವರ ಶಿಕ್ಷಣ ಕ್ರಾಂತಿಗೆ 2007ರಲ್ಲಿ ಮಹತ್ವದ ತಿರುವು ಸಿಕ್ಕಿತು. ಸಾರ್ವಜನಿಕರಿಂದ ಸಂಗ್ರಹಿಸಿದ 7 ಲಕ್ಷ ರೂಪಾಯಿ ದೇಣಿಗೆಯಲ್ಲಿ, 2000 ಚದರ ಅಡಿ ನಿವೇಶನವನ್ನು ಟಿಕಿಯಾಪಾಡದಲ್ಲಿ ಖರೀದಿಸಿ, ಕಟ್ಟಡ ಕಟ್ಟಿದರು. 2008ರಲ್ಲಿ ಇದು ಪೂರ್ಣಗೊಂಡು ಕಿಂಡರ್‌ಗಾರ್ಟನ್‌ನಿಂದ ಮೂರನೆ ತರಗತಿವರೆಗಿನ ಶಾಲೆ ಆರಂಭವಾಯಿತು. ಪ್ರತೀ ವರ್ಷ ಉನ್ನತೀಕರಿಸಿ, ಕಳೆದ ವರ್ಷ ಇದು ಮೆಟ್ರಿಕ್ಯುಲೇಶನ್ ಶಾಲೆಯಾಗಿದೆ. ಈಗ ಸಂಸ್ಥೆಯಲ್ಲಿ 40 ಶಿಕ್ಷಕರು ಬೋಧಿಸುತ್ತಿದ್ದು, ಸ್ಮಾರ್ಟ್ ಸಮವಸ್ತ್ರದೊಂದಿಗೆ, ಬೆನ್ನಿಗೆ ಚೀಲ ಹಾಕಿಕೊಂಡು ಮಕ್ಕಳು ಶಾಲೆಗೆ ಬರುತ್ತಿದ್ದಾರೆ.
ಇವರ ಮುಂದಿನ ಗುರಿ, ಮಹಿಳೆಯರನ್ನು ಕ್ರಿಮಿನಲ್ ಗ್ಯಾಂಗ್‌ಗಳಿಂದ ರಕ್ಷಿಸುವುದು. ಇದಕ್ಕಾಗಿ ಮಹಿಳೆಯರಿಗೆ ವೃತ್ತಿಪರ ಕೌಶಲ ಹೇಳಿಕೊಡುವುದು. ಇದೀಗ ಶಾಲೆ ಸ್ಥಳಾಂತರಗೊಂಡು ಖಾಲಿ ಉಳಿದಿರುವ ಹಳೆಯ ಕಟ್ಟಡದಲ್ಲಿ ಮಹಿಳೆಯರಿಗಾಗಿ ಟೈಲರಿಂಗ್ ತರಬೇತಿ ಆರಂಭಿಸಲಾಗಿದೆ. ಇದಕ್ಕಾಗಿಯೇ 20 ಅತ್ಯಾಧುನಿಕ ಜಪಾನಿ ಝೂಕಿ ಯಂತ್ರಗಳನ್ನು ಖರೀದಿಸಿದ್ದಾರೆ. 120 ಮಹಿಳೆಯರಿಗೆ ಈಗಾಗಲೇ ಇಲ್ಲಿ ತರಬೇತಿ ದೊರಕಿದೆ. ಕೊಲ್ಕತಾದ ಮಕ್ಕಳ ಉಡುಪುಗಳ ಉದ್ಯಮದಲ್ಲಿ ಇದೀಗ ಈ ಮಹಿಳೆಯರು ಉದ್ಯೋಗ ಪಡೆದಿದ್ದಾರೆ.
ಬೆಲ್ಲಿಯಸ್ ಎಸ್ಟೇಟ್
2014ರಲ್ಲಿ ಎರಡು ಎಕರೆ ವಿಶಾಲವಾದ ಬೆಲ್ಲಿಯಸ್ ಎಸ್ಟೇಟ್ ಸ್ವಾಧೀನಪಡಿಸಿಕೊಳ್ಳುವ ಮೂಲಕ ತನ್ನ ಕನಸು ಸಾಕಾರಗೊಳ್ಳುವ ನಿಟ್ಟಿನಲ್ಲಿ ದೈತ್ಯ ಹೆಜ್ಜೆ ಇಟ್ಟರು. ಹಿಂದೆ ಈ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾಲೆ ಕ್ರಮೇಣ ಮುಚ್ಚಿಹೋಗಿತ್ತು. ಮಾಮೂನ್ ಅವರ ಈ ಕಾರ್ಯ, ಅಪರಾಧವನ್ನು ತೊಡೆದುಹಾಕುವಲ್ಲಿ ಗಣನೀಯ ಕೊಡುಗೆ ನೀಡುತ್ತಿದೆ ಎನ್ನುವುದನ್ನು ಹೌರಾ ಪೊಲೀಸರು ಕಂಡುಕೊಂಡರು. ಈ ಎಸ್ಟೇಟ್ ಸ್ವಾಧೀನಕ್ಕೆ ಪಡೆದು ಶಾಲೆಗೆ ಮರುಹುಟ್ಟು ನೀಡುವಲ್ಲಿ ನೆರವಾದರು. ಹೊಸ ಶಾಲೆಗೆ ‘ರೆಬೆಕ್ಕಾ ಬೆಲ್ಲಿಯಸ್ ಇಂಗ್ಲಿಷ್ ಸಂಸ್ಥೆ’ ಎಂಬ ಮರುನಾಮಕರಣ ಮಾಡಿದರು. ಈ ಶಾಲೆಯಲ್ಲಿ ಇದೀಗ 1,600 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಬಹುತೇಕ ಮಂದಿ ಕೊಳೆಗೇರಿಯಿಂದ ಬಂದವರು. ಈ ಶಾಲೆ ಈಗ ಸೆಕೆಂಡರಿ ಶಿಕ್ಷಣ ಮಂಡಳಿಯಿಂದ ಮಾನ್ಯತೆ ಪಡೆಯುವ ಹಂತದಲ್ಲಿದೆ. ಕಳೆದ ತಿಂಗಳು ಸಮಾಜಸೇವೆ ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ಆಗಮಿಸಿದ್ದ ಮಾಮೂನ್, ಪ್ರತೀ ಬಡಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಕೈಗೆಟುಕಬೇಕು ಎಂಬ ಕಾರಣಕ್ಕೆ 50 ರೂಪಾಯಿ ಶುಲ್ಕ ನಿಗದಿಪಡಿಸಿದ್ದೇನೆ ಎಂದು ‘ವಾರ್ತಾಭಾರತಿ’ಗೆ ತಿಳಿಸಿದ್ದರು.
ಆ್ಯಂಬುಲೆನ್ಸ್ ಸೇವೆ
ಮಾಮೂನ್ ಅವರ ‘ಸಮರಿತಾನ್ ಹೆಲ್ಪ್‌ಮಿಷನ್’ ಆ್ಯಂಬುಲೆನ್ಸ್ಸ್ ಸೇವೆ ಹಾಗೂ ಕ್ರೀಡಾ ಅಕಾಡಮಿಯನ್ನೂ ನಿರ್ವಹಿಸುತ್ತಿದೆ. ಇದೀಗ ಎಸ್ಟೇಟ್ ಜಾಗ ಇವರ ಸ್ವಾಧೀನಕ್ಕೆ ಬಂದಿರುವುದರಿಂದ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಆರಂಭಿಸುವ ಚಿಂತನೆ ನಡೆಸಿದ್ದಾರೆ. ಈ ಎಲ್ಲ ಚಟುವಟಿಕೆಗಳಿಗೆ ತಗಲುವ ಖರ್ಚು ವೆಚ್ಚಗಳನ್ನು ಸರಿದೂಗಿಸುವ ಸಲುವಾಗಿ ತಿಂಗಳಿಗೆ 70 ಲಕ್ಷ ರೂಪಾಯಿ ದೇಣಿಗೆ ಕ್ರೋಡೀಕರಿಸುತ್ತಾರೆ. ಇಷ್ಟಾಗಿಯೂ ಈ ವಿನಮ್ರ, ಪ್ರೀತಿಪಾತ್ರ ವ್ಯಕ್ತಿಯ ಅದಮ್ಯ ಉತ್ಸಾಹ ಬತ್ತಿಲ್ಲ. ಈ ಅಗಾಧ ಸಾಧನೆಯ ಹಾದಿಗೆ ಯಾವುದೂ ಅಡ್ಡಬಂದಿಲ್ಲ.
ಎಲ್ಲ ಸಮುದಾಯಗಳ, ಧರ್ಮಗಳ ಮಂದಿ ಮಾಮೂನ್ ಅವರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಾರೆ. ಸಿಬ್ಲೆ ಅವರ ಪತ್ನಿ ಯಹೂದಿ ಮಹಿಳೆ. ರಮೇಶ್ ಕಚೋಲಿಯಾ ಮುಂಬೈನ ದಾನಿ. ಅವರ ಬಹಳಷ್ಟು ಮಂದಿ ಹಿಂದೂ ಸ್ನೇಹಿತರು ಇವರ ಸೇವೆಗೆ ನಿರಂತರವಾಗಿ ದೇಣಿಗೆ ನೀಡುತ್ತಾ ಬಂದಿದ್ದಾರೆ. ದಿಲ್ಲಿಯ ಮತ್ತೊಬ್ಬ ದಾನಿ ಮಧು ದುಸಾದ್ ಇವರ ಸಂಸ್ಥೆಗೆ ಭೇಟಿ ನೀಡಿ ಒಂದು ಕೋಟಿ ರೂಪಾಯಿ ದೇಣಿಗೆ ಚೆಕ್ ನೀಡಿದ್ದಾರೆ. ‘‘ಈ ದೇಣಿಗೆಯ ಮೊತ್ತವನ್ನು ನೋಡಿದಾಗ ನನ್ನ ಕಣ್ಣುಗಳನ್ನು ನಾನೇ ನಂಬಲಾಗದೆ ಈ ದೇಣಿಗೆಯನ್ನು ನಮ್ಮ ಟ್ರಸ್ಟ್‌ಗೆ ನೀಡುತ್ತಿದ್ದೀರಾ’’ ಎಂದು ಅಚ್ಚರಿಯಿಂದ ಪ್ರಶ್ನಿಸಿದ್ದೆ ಎಂದು ಮಾಮೂನ್ ಹೇಳುತ್ತಾರೆ. ಆರಂಭಿಕ ವರ್ಷಗಳಲ್ಲಿ ಅಮೆರಿಕನ್ ಫೆಡರೇಶನ್ ಆಫ್ ಮುಸ್ಲಿಂ ಇಂಡಿಯನ್ ಕೂಡಾ ಇವರ ಸಾಹಸಕ್ಕೆ ಕೈಜೋಡಿಸಿದೆ.
ಲೇಖಕರ ಇ-ಮೇಲ್: maqsiraj@gmail.com