ಸೋನು ನಿಗಮ್ ರ ನಿದ್ದೆ ಕೆಡಿಸಬಹುದಾದ ಇನ್ನಷ್ಟು ಸಂಗತಿಗಳು...!
ಒಂದು ನಿಮಿಷದ ಅಝಾನ್ ತನ್ನ ಮುಂಜಾವಿನ ನಿದ್ದೆಯನ್ನು ಕೆಡಿಸಿತು ಎಂದು ಹರಿಹಾಯುವ ಸೋನು ನಿಗಮ್‌ನಂತಹ ಸಹೃದಯ ಕಲಾವಿದನಿಗೆ ನಮ್ಮ ಗಂಗಾನದಿಯ ಮೇಲೆ, ನದಿ ಕೊಳ್ಳಗಳ ಮೇಲೆ, ನಗರಗಳ ರಸ್ತೆಗಳ ಮಧ್ಯೆ, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿದಿನ ಹೇರಲ್ಪಡುತ್ತಿರುವ ಬಲವಂತದ ಧಾರ್ಮಿಕತೆ ಯಾಕೆ ಕಾಣಿಸುತ್ತಿಲ್ಲ?
ಚುನಾವಣಾ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಪಕ್ಕದ ಮಸೀದಿಯಿಂದ ಅಝಾನ್ ಕೇಳಿಬಂದಾಗ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣವನ್ನು ಕೆಲ ಹೊತ್ತು ನಿಲ್ಲಿಸಿ ಮೌನವಾದ ಘಟನೆ, ಕಳೆದ ವರ್ಷ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿ ಕಂಗೊಳಿಸಿತು. 2016ರ ಮಾರ್ಚ್ ನಲ್ಲಿ ಪಶ್ಚಿಮಬಂಗಾಳದ ಕ್ಷೇತ್ರವೊಂದರಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಸಂದರ್ಭದಲ್ಲಿ ಇದು ನಡೆಯಿತು. ಹೀಗೆ ಮೌನವಹಿಸಿ ತನ್ನ ಔದಾರ್ಯವನ್ನು ಮೆರೆದ ಪ್ರಧಾನಿ ಮೋದಿ ಬಳಿಕ ‘‘ನಮ್ಮಿಂದಾಗಿ ಯಾರದೇ ಪ್ರಾರ್ಥನೆಗೆ ತೊಂದರೆಯಾಗಬಾರದು, ಅದಕ್ಕಾಗಿ ನಾನು ಕೆಲ ಕ್ಷಣ ಮೌನವಾದೆ’’ ಎಂದು ಸಭೆಯಲ್ಲಿ ನೀಡಿದ ಹೇಳಿಕೆಯೂ ಅತಿರಂಜಿತವಾಗಿ ಮಾಧ್ಯಮಗಳಲ್ಲಿ ಪ್ರಕಟವಾಯಿತು.
ಬಹಳಷ್ಟು ಅಲ್ಪಸಂಖ್ಯಾತರೂ ಮೋದಿಯ ಔದಾರ್ಯಕ್ಕೆ ಗದ್ಗದಿತರಾದರು. ಮೋದಿ ಇಂತಹದೊಂದು ವೌನದ ಕೊಡುಗೆಯನ್ನು ಕೊಟ್ಟಿರುವ ಹೊತ್ತಿನಲ್ಲಿ, ದೇಶಾದ್ಯಂತ ಮುಸ್ಲಿಮರು ಭಯಭೀತ ವಾತಾವರಣದಲ್ಲಿ ಕಳೆಯುತ್ತಿದ್ದರು. ಹಲವೆಡೆ ಗೋಮಾಂಸ, ಲವ್‌ಜಿಹಾದ್ ಕಾರಣಕ್ಕಾಗಿ ಮುಸ್ಲಿಮರ ಮೇಲೆ ಹಲ್ಲೆಗಳು ನಡೆಯುತ್ತಿದ್ದವು.
ದೇಶದ ಮುಸ್ಲಿಮರಿಗೆ ಮೋದಿಯ ಮೌನಕ್ಕಿಂತ, ಮಾತಿನ ಆವಶ್ಯಕತೆ ಅತೀ ಹೆಚ್ಚಿತ್ತು. ಅಝಾನ್‌ನ ಸಂದರ್ಭದಲ್ಲಿ ಅವರು ಭಾಷಣ ಮಾಡಿದರೂ ಈ ದೇಶದ ಮುಸ್ಲಿಮರ ಬದುಕಿ ನಲ್ಲಿ ಯಾವ ವ್ಯತ್ಯಾಸವೂ ಆಗುತ್ತಿರಲಿಲ್ಲ. ಆದರೆ, ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಪ್ರಧಾನಿಯಾಗಿ ನರೇಂದ್ರ ಮೋದಿ ಸ್ಪಷ್ಟವಾಗಿ ಮಾತನಾಡುವುದು ಈ ದೇಶದ ಮುಸ್ಲಿಮರ ಆವಶ್ಯಕತೆಯಾಗಿತ್ತು.
ಕನಿಷ್ಠ ಮುಸ್ಲಿಮರ ಮೇಲೆ ನಡೆಯುವ ದೌರ್ಜನ್ಯ, ಹತ್ಯೆಗಳ ವಿರುದ್ಧ ಅವರು ಒಂದು ನಿಮಿಷದ ಶೋಕ ವೌನವನ್ನು ಆಚರಿಸಿದ್ದಿದ್ದರೂ ಅದು ಅರ್ಥಪೂರ್ಣವಾಗಿ ಬಿಡುತ್ತಿತ್ತು. ಇದಕ್ಕೆ ಬದಲಾಗಿ, ಅಝಾನ್ ಸಂದರ್ಭದಲ್ಲಿ ತನ್ನ ಚುನಾವಣಾ ಭಾಷಣವನ್ನು ಒಂದು ನಿಮಿಷ ನಿಲ್ಲಿಸಿ, ಅದನ್ನೇ ಈ ದೇಶದ ಮುಸ್ಲಿಮರಿಗೆ ತಾನು ಮಾಡಿದ ಬಹುದೊಡ್ಡ ಔದಾರ್ಯ ಎಂದು ಬಿಂಬಿಸಿಕೊಳ್ಳುವುದು ಒಂದು ರಾಜಕೀಯ ತಂತ್ರವೇ ಹೊರತು ಇನ್ನೇನೂ ಅಲ್ಲ. ಇದೇ ಸಂದರ್ಭದಲ್ಲಿ ಈ ವೌನ ಹಲವರ ಟೀಕೆಗೂ ಒಳಗಾಯಿತು. ಈ ಹಿಂದೆ ಜಾತ್ಯತೀತ ಪಕ್ಷವೆಂದು ಕರೆಸಿಕೊಂಡ ಕಾಂಗ್ರೆಸ್, ದಳ ಇತ್ಯಾದಿ ಪಕ್ಷಗಳ ನೇತಾರರೂ ಇಂತಹ ಮೌನದ ಮೂಲಕ ಈ ದೇಶದ ಮುಸ್ಲಿಮರನ್ನು ಭಾವನಾತ್ಮಕವಾಗಿ ಶೋಷಿಸುತ್ತಾ, ವಂಚಿಸುತ್ತಾ ಬಂದಿದ್ದಾರೆ.
ಧ್ವನಿವರ್ಧಕಗಳ ಮೂಲಕ ಅಝಾನ್ ನೀಡುವ ಕುರಿತಂತೆ ಬಿಜೆಪಿ ಸಂಘಪರಿವಾರ ನಿರಂತರವಾಗಿ ವ್ಯಕ್ತಪಡಿಸುತ್ತಾ ಬಂದಿರುವ ಟೀಕೆಯ ಹಿನ್ನೆಲೆಯಲ್ಲಿ, ಮೋದಿಯ ಮೌನ ಮುಸ್ಲಿಮರ ಪಾಲಿಗೆ ಬಹುದೊಡ್ಡ ಔದಾರ್ಯವಾಗಿ ಕಂಡಿತು. ಪ್ರತಿ ದಿನ ಐದು ಬಾರಿ ಧ್ವನಿವರ್ಧಕಗಳ ಮೂಲಕ ಅಝಾನ್ ನೀಡಿ, ಇತರ ಧರ್ಮೀಯರ ಮೇಲೆ ಮುಸ್ಲಿಮರು ತಮ್ಮ ನಂಬಿಕೆಯನ್ನು ಹೇರುತ್ತಿದ್ದಾರೆ ಎನ್ನುವುದು ಸಂಘಪರಿವಾರದ ಕೆಲ ನಾಯಕರ ಆಕ್ಷೇಪ.
ಕೆಲವರು ಅಝಾನ್ ವಿರುದ್ಧ ಶಬ್ದ ಮಾಲಿನ್ಯವನ್ನು ಗುರಾಣಿಯಾಗಿ ಬಳಸುತ್ತಿದ್ದಾರೆ. ಈ ಧ್ವನಿವರ್ಧಕಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಹಲವರು ಹಲವು ಬಾರಿ ಬೀದಿಗಿಳಿದಿದ್ದಾರೆ. ಇದೀಗ ಆ ಸಾಲಿಗೆ ಖ್ಯಾತ ಗಾಯಕ ಸೋನು ನಿಗಮ್ ತಮ್ಮ ಧ್ವನಿಯನ್ನು ಸೇರಿಸಿದ್ದಾರೆ. ಅಝಾನ್ ತನ್ನನ್ನು ಮುಂಜಾನೆಯ ನಿದ್ದೆಯಿಂದ ಎಬ್ಬಿಸುತ್ತದೆ ಎನ್ನುವುದು ಅವರ ಆರೋಪ. ಇಂತಹ ಬಲವಂತದ ಧಾರ್ಮಿಕತೆ ಎಂದು ಅಂತ್ಯಗೊಳ್ಳುತ್ತದೆ ಎಂದು ಆತ ಆರ್ತವಾಗಿ ಪ್ರಶ್ನಿಸಿದ್ದಾರೆ.
ಅವರ ಈ ಪ್ರಶ್ನೆಯನ್ನು ನಾವು ಸಾರಾಸಗಟಾಗಿ ತಿರಸ್ಕರಿಸುವಂತೆ ಖಂಡಿತಾ ಇಲ್ಲ. ಯಾಕೆಂದರೆ ಯಾವ ಧರ್ಮಕ್ಕೂ ತನ್ನ ನಂಬಿಕೆಯನ್ನು ಇನ್ನೊಬ್ಬರ ಮೇಲೆ ಹೇರುವ, ಅಥವಾ ತನ್ನ ನಂಬಿಕೆಗಾಗಿ ಇನ್ನೊಬ್ಬರು ತನ್ನ ನಿದ್ದೆಯನ್ನು ತ್ಯಾಗ ಮಾಡಬೇಕು ಎಂದು ಬಯಸುವ ಅಧಿಕಾರ ಇಲ್ಲ. ಬಹುಶಃ ಸೋನು ನಿಗಮ್‌ಗೆ ಮುಂಜಾನೆ ಬೇಗ ಏಳುವ ಅಭ್ಯಾಸವಿಲ್ಲದೇ ಇರುವುದರಿಂದ ಇದು ಅವರಿಗೆ ಕಿರಿಕಿರಿ ಅನ್ನಿಸಿರಬಹುದು ಮತ್ತು ಇದೊಂದು ‘ಗೂಂಡಾಗಿರಿ’ ಎಂದೂ ಕಾಡಿರಬಹುದು.
ಒಂದನ್ನು ಪ್ರಧಾನಿ ಮೋದಿ ಮತ್ತು ಸೋನು ನಿಗಮ್ ತಿಳಿದುಕೊಳ್ಳಬೇಕಾಗಿದೆ. ಅಝಾನ್ ಎನ್ನುವುದು ಪ್ರಾರ್ಥನೆಗಾಗಿ ಬನ್ನಿರಿ ಎಂದು ಜನರಿಗೆ ನೀಡುವ ಕರೆಯೇ ಹೊರತು, ದೇವರಿಗೆ ಸಲ್ಲಿಸುವ ಪ್ರಾರ್ಥನೆಯಲ್ಲ. ಈ ಅಝಾನ್ ಹೆಚ್ಚೆಂದರೆ ಒಂದು ನಿಮಿಷವನ್ನು ತೆಗೆದುಕೊಳ್ಳಬಹುದು. ತುಸು ಹೆಚ್ಚು ಅಥವಾ ಕಡಿಮೆ. ದಿನದ ಐದು ಹೊತ್ತು ಅಂದರೆ ದಿನಕ್ಕೆ ಐದು ನಿಮಿಷಗಳು. ಧ್ವನಿವರ್ಧಕ ಇಲ್ಲದ ಅದೆಷ್ಟೋ ಮಸೀದಿಗಳಲ್ಲೂ ಅಝಾನ್ ನೀಡಲಾಗುತ್ತದೆ.
ನಾಲ್ಕೈದು ದಶಕಗಳ ಹಿಂದೆ ಮಸೀದಿಗೆ ವಿದ್ಯುತ್ ಸಂಪರ್ಕವೇ ಆಗಿರದ ಕಾರಣದಿಂದ, ಧ್ವನಿವರ್ಧಕ ಬಳಕೆಯೇ ಇರಲಿಲ್ಲ. ಹೆಚ್ಚು ಜನರಿಗೆ ಈ ಕರೆ ತಲುಪಲಿ, ಮಸೀದಿಗೆ ಆಗಮಿಸಲಿ ಎಂಬ ಕಾರಣಕ್ಕಾಗಿ ಮಾತ್ರ ಧ್ವನಿವರ್ಧಕಗಳನ್ನು ಬಳಸಲಾಗುತ್ತದೆಯೇ ಹೊರತು, ದೇವರಿಗೆ ಕೇಳಿಸಲಿ ಎನ್ನುವ ಕಾರಣಕ್ಕಾಗಿಯೂ ಅಲ್ಲ. ಕೆಲವೊಮ್ಮೆ ನಗರ ಪ್ರದೇಶಗಳಲ್ಲಿ ಎರಡೆರಡು ಮಸೀದಿಗಳು ಹತ್ತಿರವಿದ್ದಾಗ, ಲೌಡ್ ಸ್ಪೀಕರ್‌ಗಳು ಪರಸ್ಪರ ಅಪ್ಪಳಿಸುವ ಧ್ವನಿಯಲ್ಲಿ ಅಝಾನ್ ನೀಡಿದರೆ ಮುಸ್ಲಿಮೇತರರಿಗೆ ಮಾತ್ರವಲ್ಲ, ಕೆಲ ಮುಸ್ಲಿಮರಿಗೇ ಅದು ಅಸಹನೀಯ ಅನ್ನಿಸಿದರೆ ಅದರಲ್ಲಿ ಅತಿಶಯವೇನೂ ಇಲ್ಲ.
ಆದರೆ ಭಾರತ ಶಬ್ದ ಮಾಲಿನ್ಯದ ಸಮಸ್ಯೆ ಕೇವಲ ಮಸೀದಿಯ ಧ್ವನಿವರ್ಧಕ ಒಂದಕ್ಕಷ್ಟೇ ತಳಕು ಹಾಕಿಕೊಂಡಿದೆಯೆಂದಾಗಿದ್ದರೆ ಅದನ್ನು ಯಾವ ದಾಕ್ಷಿಣ್ಯವೂ ಇಲ್ಲದೆ ಕಾನೂನು ಮೂಲಕ ನಿಲ್ಲಿಸುವುದು ಸಾಧ್ಯವಿತ್ತು. ಧಾರ್ಮಿಕ ಹೆಸರಿನಲ್ಲಿ ಅಝಾನ್ ಒಂದೇ ಸಾರ್ವಜನಿಕರ ನೆಮ್ಮದಿ ಕೆಡಿಸುತ್ತಿರುವುದು ನಿಜ ಎಂದಾದರೆ ಬಹುಶಃ ಮುಸ್ಲಿಮರೇ ಒಂದಾಗಿ ಅದಕ್ಕೆ ನಿಯಂತ್ರಣ ಹೇರುತ್ತಿದ್ದರು.
ಮಸೀದಿಯ ಆವರಣಕ್ಕಷ್ಟೇ ಸೀಮಿತವಾಗುವ ಸ್ಪೀಕರ್‌ಗಳನ್ನು ಬಳಸುವ ಅಥವಾ ಪರ್ಯಾಯ ಇನ್ನಿತರ ವ್ಯವಸ್ಥೆ ಗಳನ್ನು ಮಾಡಿಕೊಳ್ಳುವ ಅವಕಾಶ ಅವರಿಗಿದೆ. ಯಾಕೆಂದರೆ ‘ಧ್ವನಿವರ್ಧಕ’ ಧರ್ಮದ ಭಾಗವಾಗಿ ಅಳವಡಿಕೆಯಾಗಿರುವುದು ಅಲ್ಲ. ಜನರ ಅಗತ್ಯಕ್ಕಾಗಿ ಅಳವಡಿಕೆಯಾಗಿರುವುದು. ಈ ದೇಶದ ಸಮಸ್ಯೆಯೇನೆಂದರೆ, ಮಸೀದಿಯ ಧ್ವನಿವರ್ಧಕಕ್ಕೆ ಅನ್ವಯವಾಗುವ ಕಾನೂನು, ಇತರ ಧರ್ಮೀಯರ ಧ್ವನಿವರ್ಧಕಗಳಿಗೂ ಅನ್ವಯವಾಗುತ್ತದೆ. ಇಂದು ಮಸೀದಿಯ ಧ್ವನಿವರ್ಧಕಕ್ಕೆ ಕಡಿವಾಣ ಹಾಕಲು ಹೊರಟವರು, ಈ ಉಳಿದ ಧ್ವನಿವರ್ಧಕಗಳ ಬಗ್ಗೆ ಅದೇ ನಿಲುವನ್ನು ತಾಳಿದ್ದಾರೆಯೇ ಎಂಬ ಪ್ರಶ್ನೆಯನ್ನು ಮುಂದಿಟ್ಟರೆ, ದೊಡ್ಡದೊಂದು ಮೌನ ನಮಗೆ ಉತ್ತರವಾಗಿ ದೊರಕುತ್ತದೆ.
ಈ ದೇಶದ ಬಹುತೇಕ ವೈದಿಕ ಆಚರಣೆಗಳು, ಹಬ್ಬಗಳು ಸಾರ್ವಜನಿಕ ಗದ್ದಲದ ಮೂಲಕವೇ ಅಭಿವ್ಯಕ್ತಿಗೊಳ್ಳುತ್ತಾ ಬರುತ್ತಿವೆ ಮತ್ತು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಈ ಭಯಾನಕ ಶಬ್ದ ಮಾಲಿನ್ಯ ಮತ್ತು ಬರ್ಬರ ಪರಿಸರ ಮಾಲಿನ್ಯಗಳ ವಿರುದ್ಧ ಕಾನೂನು ಕಣ್ಣಿದ್ದೂ ಕುರುಡನಂತೆ ವರ್ತಿಸುತ್ತಾ ಬಂದಿದೆ. ‘ವರ್ಷಕ್ಕೊಮ್ಮೆ ಬರುವ ಹಬ್ಬ ತಾನೆ’ ಎಂಬ ಸಮಜಾಯಿಷಿಯನ್ನು ನೀಡಿ ಇವುಗಳನ್ನು ಸಮರ್ಥಿಸಲಾಗುತ್ತದೆ. ಆದರೆ ಈ ದೇಶದಲ್ಲಿ ವರ್ಷಕ್ಕೊಮ್ಮೆ ಬರುವ ಹಬ್ಬ, ಆಚರಣೆಗಳ ಪಟ್ಟಿಯನ್ನು ನಾವು ಮಾಡಿದರೆ, ಪ್ರತಿದಿನದ ಸಮಸ್ಯೆಯಾಗಿ ಈ ದೇಶವನ್ನು ಕಾಡುತ್ತಿರುವುದು ಗಮನಕ್ಕೆ ಬರುತ್ತದೆ.
ಒಂದು ವಾರದಿಂದ ಒಂದು ತಿಂಗಳ ಕಾಲ, ಧ್ವನಿವರ್ಧಕಗಳ ಅಬ್ಬರಗಳ ಮೂಲಕವೇ ಆಚರಿಸಲ್ಪಡುವ ಸಾರ್ವಜನಿಕ ಗಣೇಶ ಹಬ್ಬ, ನವರಾತ್ರಿ, ದಸರಾ, ಅವುಗಳ ಬೃಹತ್ ವಿಸರ್ಜನಾ ಮೆರವಣಿಗೆಗಳು, ವಾರಗಳ ಕಾಲ ನಡೆಯುವ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಶಬರಿಮಲೆಯ ಗದ್ದಲ, ರಸ್ತೆಯ ಮಧ್ಯದಲ್ಲೇ ಆಚರಿಸಲ್ಪಡುವ ಗೋವಿಂದ ಆಚರಣೆ, ನಾಗಮಂಡಲ ಉತ್ಸವ, ರಾತ್ರಿಯಿಡೀ ಊರನ್ನು ಕಾಡುವ ಚಂಡೆ, ಜಾಗಟೆಗಳು, ದೀಪಾವಳಿಯ ಹೆಸರಲ್ಲಿ ತಿಂಗಳು ಪೂರ್ತಿ ವೃದ್ಧರು, ರೋಗಿಗಳು, ಮಕ್ಕಳ ಎದೆ ನಡುಗಿಸುವ ಸುಡುಮದ್ದುಗಳು, ಆ ಉತ್ಸವ ಈ ಉತ್ಸವ ಎಂದು ಲೌಡ್ ಸ್ಪೀಕರ್‌ಗಳಲ್ಲಿ ಮೊಳಗುವ ಭಜನೆಗಳು ....ಹೀಗೆ ಈ ದೇಶದ ಜನರು ತಮ್ಮ ಪ್ರತೀ ರಾತ್ರಿಗಳನ್ನು ಇನ್ನೊಬ್ಬರ ಧರ್ಮ, ಆಚರಣೆ, ನಂಬಿಕೆ, ಉತ್ಸವದ ಹೆಸರಿನಲ್ಲಿ ತೆರುತ್ತಾ ಬರುತ್ತಿದ್ದಾರೆ. ಹಬ್ಬ, ಆಚರಣೆಯ ಹೆಸರಿನಲ್ಲಿ ಇಡೀ ರಾತ್ರಿ ವಿಜೃಂಭಿಸುವುದು ಲೌಡ್ ಸ್ಪೀಕರ್‌ಗಳು ಮಾತ್ರ.
ಅಷ್ಟೇ ಅಲ್ಲ, ಈ ಎಲ್ಲ ಹಬ್ಬಗಳ ಹೊತ್ತಿನಲ್ಲಿ ರಸ್ತೆಗಳು ಅಘೋಷಿತ ಬಂದ್ ಆಗಿರುತ್ತವೆ. ಇವೆಲ್ಲವುಗಳನ್ನು ಈ ದೇಶದ ಜನರು ಸಹನೆಯಿಂದಲೇ ಸ್ವೀಕರಿಸುತ್ತಾ ಬಂದಿದ್ದಾರೆ. ಇವನ್ನು ಧಾರ್ಮಿಕತೆಯ ಹೇರಿಕೆಯಾಗಿ ಯಾರೂ ಭಾವಿಸಿಲ್ಲ. ಹೀಗಿರುವಾಗ, ಒಂದು ನಿಮಿಷದ ಅಝಾನ್ ಮಾತ್ರ ಧಾರ್ಮಿಕ ಹೇರಿಕೆಯಾಗಿ ಭಾಸವಾಗುತ್ತದೆಯಾಟದರೆ ಆ ಹೇಳಿಕೆಯಲ್ಲಿ ರಾಜಕೀಯ ಕಾರಣಗಳನ್ನು ಹುಡುಕಿದರೆ ಅದು ಶ್ರೀಸಾಮಾನ್ಯನ ತಪ್ಪೆ?
ಈ ದೇಶದ ಸಾರ್ವಜನಿಕ ಹಬ್ಬ ಆಚರಣೆಗಳು, ಬರೀ ಶಬ್ದ ಮಾಲಿನ್ಯ, ರಸ್ತೆ ತಡೆಗಳಿಗಷ್ಟೇ ಸೀಮಿತವಾಗಿಲ್ಲ ಎನ್ನುವುದನ್ನೂ ನಾವು ಗಮನಿಸಬೇಕಾಗಿದೆ. ಸಾರ್ವಜನಿಕ ಗಣೇಶೋತ್ಸವ ಸಂಭ್ರಮಗಳು ಮುಗಿದ ಬೆನ್ನಿಗೇ ಈ ದೇಶದ ಸಾವಿರಾರು ಕೆರೆಗಳು, ನದಿಗಳು, ಇವುಗಳ ಜೊತೆಗೆ ಸಮುದ್ರ ಹೊಲಸೆದ್ದು ಹೋಗುತ್ತವೆ. ಲಕ್ಷಾಂತರ ಮೀನುಗಳು ರಾಸಾಯನಿಕ ಕಾರಣಗಳಿಂದ ಸಾಯುತ್ತವೆ.
ವಿಗ್ರಹ ವಿಸರ್ಜನೆಯಿಂದ ಸಂಪೂರ್ಣ ಮುಚ್ಚಿ ಹೋಗಿರುವ ಕೆರೆಗಳನ್ನು ಶುಚೀಕರಿಸುವುದಕ್ಕಾಗಿಯೇ ಹಲವು ಕೋಟಿ ರೂಪಾಯಿಗಳನ್ನು ಸರಕಾರಗಳು ವೆಚ್ಚ ಮಾಡುತ್ತವೆ. ಈ ವೆಚ್ಚ ಇತರ ಧರ್ಮೀಯರ ಮೇಲಿನ ಹೇರಿಕೆಯೇ ಅಲ್ಲವೇ? ಸೋನು ನಿಗಮ್ ಅವರ ನಿದ್ದೆ ಈ ಕಾರಣದಿಂದ ಯಾವತ್ತೂ ಹರಣವಾಗಿಲ್ಲವೇಕೆ? ತನ್ನ ನಿದ್ದೆಯ ಹಾಗೆಯೇ, ಈ ನಾಡಿನ ಕೆರೆ, ಕೊಳ್ಳ, ನದಿ ಕೂಡ ಮಹತ್ವದ್ದು ಎಂದು ಯಾಕೆ ಅವರಿಗೆ ಅನ್ನಿಸಿಲ್ಲ? ಈ ಬಗ್ಗೆ ಟ್ವಿಟರ್‌ನಲ್ಲಿ ಯಾಕೆ ಒಂದು ಸಾಲೂ ಉಲ್ಲೇಖಿಸಿಲ್ಲ? ಇವೆಲ್ಲ ಪಕ್ಕಕ್ಕಿರಲಿ. ಈ ದೇಶದ ಆತ್ಮವಾಗಿರುವ ಗಂಗಾನದಿ ಸಂಪೂರ್ಣ ಕೆಟ್ಟು ನಿಂತಿದೆ. ಅವುಗಳನ್ನು ಶುದ್ಧೀಕರಿಸುವುದಕ್ಕಾಗಿಯೇ ಲಕ್ಷಾಂತರ ಕೋಟಿ ಹಣವನ್ನು ನೀರಿಗೆ ಸುರಿಯಲಾಗುತ್ತಿದೆ. ಆದರೂ ಅದು ಶುದ್ಧಗೊಳ್ಳುವುದು ಅನುಮಾನ ಎಂದು ಪರಿಸರ ತಜ್ಞರು ಹೇಳುತ್ತಿದ್ದಾರೆ.
ಗಂಗಾನದಿ ಹೊಲಸೆದ್ದು ಹೋಗಲು ಬಹುತೇಕ ಕಾರಣ ಅದರ ದಡದಲ್ಲಿರುವ ನೂರಾರು ಧಾರ್ಮಿಕ ಕ್ಷೇತ್ರಗಳು. ಪ್ರತೀ ದಿನ ಶವ ಸಂಸ್ಕಾರದ ಹೆಸರಿನಲ್ಲಿ ನೂರಾರು ಹೆಣಗಳು ಗಂಗೆಯಲ್ಲಿ ತೇಲುತ್ತವೆ. ಪೂಜೆ ಮುಗಿಸಿದ ಬಳಿಕದ ಅವಶೇಷಗಳು ಗಂಗೆಯ ಒಡಲನ್ನು ಸೇರುತ್ತವೆ. ಗಂಗೆ ಈ ದೇಶದ ವೈದಿಕರ ಆಸ್ತಿಯಲ್ಲ. ಕೃಷಿಯನ್ನು ಅವಲಂಬಿಸಿದ ದೇಶದ ಸರ್ವ ರೈತರ ಆಸ್ತಿ. ಗಂಗಾನದಿಯನ್ನು ಶುಚಿಗೊಳಿಸುವ ಕಾರ್ಯ ಯಶಸ್ವಿಯಾಗಬೇಕಾದರೆ ಆ ದಡದಲ್ಲಿರುವ ನೂರಾರು ಧಾರ್ಮಿಕ ಕ್ಷೇತ್ರಗಳನ್ನು ಎತ್ತಂಗಡಿ ಮಾಡುವುದು ಅನಿವಾರ್ಯವಾಗಿದೆ.
ಒಂದು ನಿಮಿಷದ ಅಝಾನ್ ತನ್ನ ಮುಂಜಾವಿನ ನಿದ್ದೆಯನ್ನು ಕೆಡಿಸಿತು ಎಂದು ಹರಿಹಾಯುವ ಸೋನು ನಿಗಮ್‌ನಂತಹ ಸಹೃದಯ ಕಲಾವಿದನಿಗೆ ನಮ್ಮ ಗಂಗಾನದಿಯ ಮೇಲೆ, ನದಿ ಕೊಳ್ಳಗಳ ಮೇಲೆ, ನಗರಗಳ ರಸ್ತೆಗಳ ಮಧ್ಯೆ, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿದಿನ ಹೇರಲ್ಪಡುತ್ತಿರುವ ಬಲವಂತದ ಧಾರ್ಮಿಕತೆ ಯಾಕೆ ಕಾಣಿಸುತ್ತಿಲ್ಲ? ಮಸೀದಿಗಳ ಧ್ವನಿವರ್ಧಕಗಳನ್ನು ಕಿತ್ತು ಹಾಕಬಹುದು. ನಾಳೆ ಅವರೆಲ್ಲ ಧ್ವನಿವರ್ಧಕಗಳಿಲ್ಲದೆಯೇ ಅಝಾನ್ ನೀಡಲು ಒಪ್ಪಬಹುದು. ಆದರೆ ಇದೇ ಸಂದರ್ಭದಲ್ಲಿ ಬ್ರಹ್ಮಾಂಡ ಮಾಲಿನ್ಯಗಳನ್ನೇ, ಎದೆ ನಡುಗಿಸುವ ಸದ್ದುಗಳನ್ನೇ ಸಂಸ್ಕೃತಿ, ಸಂಪ್ರದಾಯ, ಧಾರ್ಮಿಕತೆ, ಉತ್ಸವ ಎಂದು ದೇಶದ ಬಹುಸಂಖ್ಯಾತರ ಮೇಲೆ ಹೇರುತ್ತಿರುವ ಈ ಎಲ್ಲ ಆಚರಣೆಗಳೂ ಹಿಂದೆಗೆಯಲ್ಪಡುವುದೇ? ಹಾಗೆ ಎಲ್ಲ ಬಲವಂತದ ಧಾರ್ಮಿಕತೆಗೆ ಕಡಿವಾಣ ಬಿದ್ದಾಗ ಮಾತ್ರ ಸೋನು ನಿಗಮ್ ಮುಂಜಾನೆ ಸುಖವಾಗಿ ನಿದ್ದೆ ಮಾಡಬಹುದೇನೋ?
ಕೊನೆಯ ಮಾತು. ಗೋವು ನಮ್ಮ ದೇವತೆ ಎಂದು ಹೇಳಿ, ಈ ದೇಶದ ಬಹುಸಂಖ್ಯಾತರ ಆಹಾರದ ಮೇಲೆಯೇ ದಾಳಿ ನಡೆಯುತ್ತಿದೆ. ಅಮಾಯಕರನ್ನು ನಡು ರಸ್ತೆಯಲ್ಲಿ ಗೋರಕ್ಷಕರ ವೇಷದಲ್ಲಿರುವ ರೌಡಿಗಳು, ದುಷ್ಕರ್ಮಿಗಳು ಥಳಿಸಿ ಕೊಂದು ಹಾಕುತ್ತಿದ್ದಾರೆ. ಸಾಕುವುದಕ್ಕೆಂದು ತನ್ನ ಮನೆಗೆ ದನ ಸಾಗಿಸುತ್ತಿದ್ದ ಪೆಹ್ಲೂಖಾನ್ ಎಂಬ ರೈತನನ್ನು ಬರ್ಬರವಾಗಿ ಥಳಿಸಿ ದುಷ್ಕರ್ಮಿಗಳು ಸಾಯಿಸಿದರು. ಈ ಸಂದರ್ಭದಲ್ಲಿ ಯಾಕೆ ನಮ್ಮ ಸೋನು ನಿಗಮ್ ಅವರ ನಿದ್ದೆ ಕೆಡಲಿಲ್ಲ.
ಯಾಕೆ ಅದು ಬಲವಂತದ ಧಾರ್ಮಿಕತೆ, ಗೂಂಡಾಗಿರಿ ಎಂದು ಅವರಿಗೆ ಅನ್ನಿಸಲಿಲ್ಲ? ನಿಜಕ್ಕೂ ಇಡೀ ದೇಶ ನಿದ್ದೆ ಗೆಟ್ಟು ಕೂತಿರುವುದು ಮಸೀದಿಯ ಮಿನಾರದಲ್ಲಿರುವ ಧ್ವನಿವರ್ಧಕಗಳಿಂದ ಮಾತ್ರ ಎಂದು ಸೋನು ನಿಗಮ್‌ಗೆ ಈಗಲೂ ಅನ್ನಿಸುತ್ತಿದೆಯೇ? ತಮ್ಮ ಮಧುರ ಹಾಡುಗಳಿಂದ ಲಕ್ಷಾಂತರ ಜನರ ನಿದ್ದೆಕೆಡಿಸಿರುವ ಸೋನುನಿಗಮ್ ಒಮ್ಮೆ ನಿದ್ದೆಯಿಂದ ಎಚ್ಚೆತ್ತು ಕುಳಿತು ಆತ್ಮಾವಲೋಕನ ಮಾಡಬೇಕಾಗಿದೆ.