varthabharthi


ನನ್ನೂರು ನನ್ನ ಜನ

ವಿದ್ಯೆಯಿಂದ ಯೋಗ್ಯತೆ

ವಾರ್ತಾ ಭಾರತಿ : 19 Apr, 2017
ಚಂದ್ರಕಲಾ ನಂದಾವರ

ಕೋಟೆಕಾರಿನಲ್ಲಿ ಸಾಹೇಬರ ಬಿಡಾರದ ನಮ್ಮ ವಾಸ್ತವ್ಯ ನಮ್ಮ ಮನೆಮಂದಿಗೆಲ್ಲಾ ತುಂಬಾ ಸಂತಸವನ್ನೇ ನೀಡಿತ್ತು. ಈ ಮನೆಯ ಹಿಂಬದಿಯ ಅರ್ಧಭಾಗದಲ್ಲಿ ಹೊಸ ಸಂಸಾರ ನಮ್ಮಂತೆಯೇ ಬಾಡಿಗೆಗೆ ಬಂದರು. ಸಣ್ಣ ವಯಸ್ಸಿನ ದಂಪತಿಗೆ ಚಿಕ್ಕ ಹೆಣ್ಣು ಮಕ್ಕಳಿದ್ದರೆಂಬ ನೆನಪು. ಚಿಕ್ಕದು ಹಾಲು ಕುಡಿದ ಹಸುಳೆಯೇ. ಮಲೆಯಾಳ ಮಾತಿನ ಅವರೊಂದಿಗೆ ನನ್ನ ಮಾತು ಕನ್ನಡದಲ್ಲಿಯೇ. ಅವರು ಮಕ್ಕಳೊಂದಿಗೆ ಮಲೆಯಾಳ ಮಾತನಾಡುವುದನ್ನು ಕೇಳಿ ಮಲೆಯಾಳ ಕಲಿಯುವ ಅವಕಾಶ ಉದ್ಯೋಗಿಯಾದ ನನಗೆ ಸಿಗಲಿಲ್ಲವೆಂದರೂ ಸರಿಯೆ.

ಮನೆಯ ಅಂಗಳದಿಂದ ಎದುರಿಗೆ ಒಂದು ಕಾಲು ದಾರಿಯೂ ಹೌದು, ಮಳೆಗಾಲದಲ್ಲಿ ನೀರು ಹರಿಯುವ ದಾರಿಯೂ ಅದೇ. ಈ ದಾರಿಯಲ್ಲಿ ಮಾಡೂರು, ಸೋವೂರು, ಕೋಟೆಕಾರುಗಳಿಂದ ಸೋಮೇಶ್ವರ, ಅಡ್ಕ ಉಳ್ಳಾಲಗಳಿಗೆ ಬರುವ ಜನ ಬರುತ್ತಿದ್ದರೆ, ಹಿಂದಿರುಗುವಾಗಲೂ ಇದೇ ದಾರಿಯ ನಡಿಗೆ ಅವರ ಬಸ್ಸಿನ ಖರ್ಚು ಉಳಿಸುತ್ತಿತ್ತು. ಉಳಿದಂತೆ ಊರಿನೊಳಗೆ ಕೃಷಿ ಕಾರ್ಮಿಕರಾಗಿ ದುಡಿಯುವ ಗಂಡಸರು, ಹೆಂಗಸರೂ ಈ ದಾರಿಯಲ್ಲಿ ಮಳೆಗಾಲದ ಹೊತ್ತಿನಲ್ಲೂ ನಡೆದಾಡುವ ಅಭ್ಯಾಸವುಳ್ಳವರು. ಕೆಲವರು ಅಪರೂಪದ ದಾರಿಗರಾಗಿದ್ದರು. ಆದರೆ ಈ ದಾರಿ ಹಳ್ಳಿಯ ಜನರನ್ನು ಬೆಸೆಯುವ ಸೇತುವೆಯಾಗಿತ್ತು. ಹಿರಿಯರಾದ ಮಾವ, ಅತ್ತೆಗೆ ಇವರಲ್ಲಿ ಅನೇಕರು ಮಾತಿಗೆ ಜೊತೆಯಾಗುತ್ತಿದ್ದರು. ನಮ್ಮ ಜಗಲಿಯಲ್ಲಿ ಒಂದಷ್ಟು ಕೂತು ದಣಿವಾರಿಸಿಕೊಂಡು, ಎಲೆಅಡಿಕೆ ಮೆಲ್ಲುತ್ತಾ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದುದರಿಂದ ಅವರಿಗೆ ತಮ್ಮ ಹಳೆಯ ಮನೆಯಲ್ಲಿದ್ದಂತೆಯೇ ಖುಷಿಯಾಗುತ್ತಿತ್ತು. ಹಾಗೆಯೇ ಸೋವೂರಿನಲ್ಲಿ ಅವರು ಬಿಟ್ಟು ಬಂದ ಮನೆಯಂಗಳದಲ್ಲಿ ಅವರು ನೆಟ್ಟು ಬಿಟ್ಟು ಬಂದ ಹಲಸಿನ ಮರ ಕಾಯಿ ಬಿಟ್ಟದ್ದು, ಹಣ್ಣು ಆದದ್ದು ಸುದ್ದಿ ಸಿಗುತ್ತಿತ್ತು.

ಆಗ ಮಾವ ಆ ದಾರಿಯಿಂದಲೇ ನಡೆದುಹೋಗಿ ಹಲಸಿನ ಹಣ್ಣು ಕಿತ್ತು ತಂದು ಮನೆಯಲ್ಲಿ ಹಲಸಿನ ಹಬ್ಬವೇ ನಡೆಯುತ್ತಿತ್ತು. ಸುತ್ತಲಿನ ಮಂದಿಗೂ ನೀಡಬೇಕು ಎಂದರೆ ಎಲ್ಲರೂ ತಮ್ಮ ಹಿತ್ತಲಲ್ಲಿ ಹಲಸಿನ ಮರ ಇರುವವರೇ. ಆದರೆ ಅಗತ್ಯವಿದ್ದವರು ಪಡೆದುಕೊಳ್ಳುತ್ತಿದ್ದರು. ನಾನು ತಿಳಿಯದ ಒಂದು ವಿಷಯವನ್ನು ಇಲ್ಲಿ ನೋಡಿದೆ. ಆ ವರ್ಷ ಬಹಳಷ್ಟು ಹಲಸಿನ ಹಣ್ಣುಗಳು ಆಗಿರಬೇಕು. ನನ್ನ ಮಾವ ಹಲಸಿನ ಬೀಜಗಳನ್ನು ಚಾವಡಿಯ ಒಂದು ಮೂಲೆಯಲ್ಲಿ ರಾಶಿ ಹಾಕಿ ಅದಕ್ಕೆ ಕೆಂಪುಮಣ್ಣು ಮೆತ್ತಿ ಅದನ್ನು ಉಳಿಸಿಕೊಂಡಿದ್ದರು. ನನ್ನ ಎತ್ತರಕ್ಕಿಂತಲೂ ಎತ್ತರವಾಗಿದ್ದ ಆ ಮಣ್ಣಿನ ಗೂಡು ದೂರದಲ್ಲಿ ಹುತ್ತದಂತೆ ಕಾಣುತ್ತಿತ್ತು. ಹಲಸಿನ ಕಾಯಿ, ಹಣ್ಣುಗಳ ಕಾಲ ಮುಗಿದ ಮೇಲೆ ಮನೆಯಡುಗೆಯಲ್ಲಿ ಇತರ ತರಕಾರಿಗಳೊಂದಿಗೆ ಈ ಹಲಸಿನ ಬೀಜಗಳ ಉಪಯೋಗವಾಗುತ್ತಿತ್ತು. ಇತರರಿಗೂ ಸಿಗುತ್ತಿತ್ತು. ಹಾಗೆಯೇ ನೀರಲ್ಲಿ ಹಾಕಿಟ್ಟ ಹಲಸಿನ ಸೊಳೆಗಳ ಪಲ್ಯವೂ, ಗಸಿಯೂ ಇರುತ್ತಿತ್ತು. ಅತ್ತೆ, ಮಾವ, ಮುಂದಿನ ವರ್ಷದಲ್ಲೂ ಸೋವೂರಿನ ನಾಯಕರ ಹಿತ್ತಲಲ್ಲಿದ್ದ ಈ ಮರಗಳ ಮೇಲಿನ ಹಕ್ಕನ್ನು ಚಲಾಯಿಸಿದ್ದರು.

ನನಗೆ ಮಾತ್ರ ಇದು ಸರಿಯಲ್ಲ ಅನ್ನಿಸುತ್ತಿದ್ದು ಒಂದೆರಡು ಬಾರಿ ಹೇಳಿದ್ದರೂ ಹಳ್ಳಿಯ ಮಂದಿಗೆ ಅಂತಹ ನ್ಯಾಯದ ಅರಿವು ಇಲ್ಲ ಎನ್ನುವುದಕ್ಕಿಂತ ಧಣಿಗಳಾಗಲಿ, ಒಕ್ಕಲಾಗಲಿ ಅದು ಸಹಜವೆಂಬಂತೆ ವರ್ತಿಸಿದ್ದು ಹಳ್ಳಿಯ ಸಮಾಜದ ಸಹಜ ಸ್ವಭಾವ ಎಂದು ತಿಳಿದುಕೊಂಡೆ. ಯಾಕೆಂದರೆ ಹಳ್ಳಿಯ ಬದುಕಿನಲ್ಲಿ ಹಿತ್ತಲಿಗೆ ಕಾಂಪೌಂಡು ಇರುತ್ತಿರಲಿಲ್ಲ. ಯಾರ್ಯಾರದೋ ತೋಟ, ಗದ್ದೆ, ಗುಡ್ಡಗಳನ್ನು ದಾಟಿ ತಮ್ಮ ತಮ್ಮ ಮನೆಯಂಗಳ ತಲುಪುವಾಗ ದಾರಿಯಲ್ಲಿ ಸಿಕ್ಕಿದ ಕಾಯಿ, ಹಣ್ಣುಗಳು ಅವರೊಂದಿಗೆ ಮನೆ ತಲುಪುತ್ತಿತ್ತು. ಗೋಡೆ ಕಟ್ಟಲು ಶುರುವಾದುದು ಪಟ್ಟಣದ ಶಿಕ್ಷಣದ ನಾಗರಿಕತೆಯ ಕುರುಹಾಗಿದ್ದು, ಅದು ಇನ್ನೂ ಅಲ್ಲಿಗೆ ತಲುಪಿರಲಿಲ್ಲ. ಪೇಟೆ ಎಂದು ಕರೆಸುವಲ್ಲಿ ರಸ್ತೆಯ ಬದಿಗೆ ಕಾಂಪೌಂಡು ಬರಲಾರಂಭಿಸಿತ್ತು.

 ನಮ್ಮ ಮನೆಯಂಗಳದ ಕಾಲು ದಾರಿಯ ಎದುರಿಗೆ ಅಂದರೆ ನಮ್ಮ ಮನೆ ಎದುರಿಗೆ ಸಾಹೇಬರ ಮನೆಯೇ ಇದ್ದು, ಅವರು ಉರ್ದು ಮಿಶ್ರಿತ ಹಿಂದಿ ಮಾತನಾಡುತ್ತಿದ್ದರು. ಮನೆಯಲ್ಲಿ ಕೋಳಿ ಆಡುಗಳೊಂದಿಗೆ ನನ್ನ ನಾದಿನಿಯಂತೆ ಮದುವೆ ವಯಸ್ಸಿನ ಇಬ್ಬರು ಹುಡುಗಿಯರು ನೂರ್ ಜಹಾನ್ ಮತ್ತು ಜುಲೇಖಾ ಹಾಗೂ ಅವರ ತಮ್ಮ ಮುಹಮ್ಮದ್ ತಮ್ಮ ವಿಧವೆ ತಾಯಿಯೊಂದಿಗೆ ಇದ್ದರು. ತಲೆಯ ಮೇಲೆ ಸೆರೆಗೆಳೆದುಕೊಳ್ಳುತ್ತಿದ್ದರೂ ಅದು ಯಾರಲ್ಲಾದರೂ ಮಾತನಾಡುವಾಗ. ಹಿತ್ತಲಲ್ಲಿ ಕೆಲಸ ಮಾಡುತ್ತಿದ್ದಾಗ ಅವರು ಸೆರಗು ಸೊಂಟಕ್ಕೆ ಕಟ್ಟಿಕೊಳ್ಳುತ್ತಿದ್ದರು. ಈ ತಾಯಿಯ ಹಿರಿಯ ಮಗಳಿಗೆ ಮದುವೆಯಾಗಿತ್ತು. ಹಿರಿಯ ಮಗ ವಿದೇಶದಲ್ಲಿ ಕೆಲಸಕ್ಕೆ ಸೇರಿ ಕೊಂಡಿದ್ದರು. ಆದರೆ ಮನೆ, ಹಿತ್ತಿಲು ನೋಡಿದರೆ ದುಡಿದು ತಿನ್ನುವ ಈ ಮನೆಗೆ ಶ್ರೀಮಂತಿಕೆಯ ನೆರಳೂ ಬಿದ್ದಿರಲಿಲ್ಲ. ಈ ಇಬ್ಬರು ಹೆಣ್ಣು ಮಕ್ಕಳು ಬೀಡಿ ಕಟ್ಟುತ್ತಿದ್ದರು. ಇದನ್ನು ನೋಡಿದ ನನ್ನ ನಾದಿನಿಯೂ ತಾನು ಕೆಲವು ತಿಂಗಳಿನಿಂದ ಬಿಟ್ಟಿದ್ದ ಬೀಡಿ ಕಟ್ಟುವಿಕೆಯನ್ನು ಮತ್ತೆ ರೂಢಿಸಿಕೊಂಡಳು.

ಆಕೆ ಬೀಡಿ ಕಟ್ಟುವುದನ್ನು ಬಿಟ್ಟಿದ್ದು ಅಣ್ಣ ಅತ್ತಿಗೆಯರ ಮಾನಕ್ಕೆ ಕುಂದಾಗಬಹುದು ಎಂಬ ಕಾರಣಕ್ಕೆ. ಆದರೆ ನನಗೆ ದುಡಿದು ತಿನ್ನುವ ಹೆಣ್ಣು ಮಕ್ಕಳನ್ನು ಕೀಳಾಗಿ ಕಾಣುವ ಸ್ವಭಾವ ಇಲ್ಲದ್ದನ್ನು ಗಮನಿಸಿದ ಆಕೆ ತನ್ನ ಖರ್ಚಿಗೆ ಎನ್ನುವ ಕಾರಣಕ್ಕೆ ಮತ್ತು ಜತೆಗೆ ಬೀಡಿ ಕಟ್ಟುವುದಕ್ಕೆ ಜತೆಗಾರರು ಸಿಕ್ಕಿದುದರಿಂದ ಅದನ್ನು ಮುಂದುವರಿಸಿದಳು. ಆಗೆಲ್ಲಾ ಹಳ್ಳಿಯಲ್ಲಿ ಹೆಣ್ಣು ಮಕ್ಕಳು ಬೀಡಿ ಕಟ್ಟುತ್ತಿದ್ದರೂ ಅದನ್ನು ಕೊಂಡೊಯ್ಯುತ್ತಿದ್ದುದು ಮನೆಯ ಗಂಡಸರು. ಆದರೂ ಈ ಹೆಣ್ಣು ಮಕ್ಕಳಿಗೆ ತಮ್ಮದೇ ಆದ ದುಡಿಮೆಯನ್ನು ಹಣವನ್ನಾಗಿಸುವ ಸಾಮರ್ಥ್ಯ ದೊರಕಿತ್ತು. ಕೃಷಿ ಸಂಬಂಧಿ ಕೆಲಸಗಳಿಗೆ ಹೋಗುತ್ತಿದ್ದವರಿಗೆ ಅಲ್ಲಿ ಕಾಫಿ ತಿಂಡಿ ಊಟದ ಜತೆಗೆ ಅಕ್ಕಿಯೋ, ಭತ್ತವೋ ಅಥವಾ ತರಕಾರಿಗಳು ಸಂಪಾದನೆಯಾಗುತ್ತಿದ್ದುದರಿಂದ ನಮ್ಮ ಹೆಣ್ಣು ಮಕ್ಕಳಿಗೆ ಬೀಡಿಕಟ್ಟುವಿಕೆ ಆಕರ್ಷಣೆಯಾದುದು ಇದೇ ಕಾರಣಕ್ಕೆ. ಅಪ್ಪನೋ, ಅಣ್ಣನೋ, ತಮ್ಮನೋ, ಇಲ್ಲ ಗಂಡನೋ ಬೀಡಿ ಒಯ್ದುಕೊಟ್ಟು ಎಲೆ ಹಾಗೂ ಹೊಗೆಸೊಪ್ಪಿನ ಪುಡಿಯನ್ನು ಲೆಕ್ಕಾಚಾರದೊಂದಿಗೆ ಇವರ ಗಳಿಕೆಯನ್ನು ತಂದರೂ ತಮಗೆ ಬೇಕಾದ ಬಟ್ಟೆಕೊಳ್ಳುವುದಕ್ಕೆ, ಅಪರೂಪಕ್ಕೆ ಸಿನೆಮಾ ನೋಡುವ ಅವಕಾಶ ನೀಡಿದುದು ಈ ಬೀಡಿ ಉದ್ಯಮ.

ಹೀಗೆ ನಿಧಾನವಾಗಿ ಹಳ್ಳಿಯಲ್ಲೂ ಶ್ರಮ, ಹಣವಾಗಿ ಮಾರ್ಪಾಡುಗೊಳ್ಳುವ ಪ್ರಕ್ರಿಯೆ ಮುಂದೆ ಎಲ್ಲ ಕ್ಷೇತ್ರದಲ್ಲೂ ಬರುವಂತಾಯಿತು ಎನ್ನುವುದು ನಿಜವಾದಂತೆಯೇ ಮುಂದಿನ ಒಂದೆರಡು ಪೀಳಿಗೆ ಬರುವಷ್ಟರಲ್ಲೇ ಹಳ್ಳಿಯಲ್ಲಿ ಕೃಷಿ ಸಂಬಂಧಿ ಕೆಲಸಗಳಿಗೆ ಆಳುಗಳಿಲ್ಲ ಎಂದರದೂ ಸತ್ಯ. ಇದು ಹೆಣ್ಣಿನ ಆರ್ಥಿಕ ಸಬಲೀಕರಣಕ್ಕೆ ಕಾರಣವಾದಂತೆಯೇ ಆಕೆಗೂ ಒಂದು ಅಸ್ಮಿತೆಯನ್ನು ಪ್ರದರ್ಶಿಸುವುದಕ್ಕೆ ಅವಕಾಶ ನೀಡಿತೆನ್ನುವುದು ಸರಿ. ಆದರೆ ಕೃಷಿಯ ಬದುಕಿನಲ್ಲಿ ಹೆಣ್ಣಿಗಿದ್ದ ಅಸ್ಮಿತೆಯ ಗಾಢತೆಯನ್ನು ಮತ್ತು ಗೌರವವನ್ನು ಕಳೆದುಕೊಂಡಿತೆನ್ನುವುದು ಇಂದಿನ ವರ್ತಮಾನದ ಸತ್ಯ.

ನಮ್ಮ ಮನೆ ಎದುರಿನ ಕಾಲುದಾರಿಯಲ್ಲಿ ಹೋಗುತ್ತಿದ್ದವರಲ್ಲಿ ನಾರಾಯಣ ಆಚಾರಿ ಒಬ್ಬರು. ಅವರು ನಮ್ಮ ಮನೆಗೆ ಮರದ ಎರಡು ಬೆಂಚು, ಮದುವೆಯ ಸಂದರ್ಭಕ್ಕೆ ಮರದ ಎರಡು ಕುರ್ಚಿಗಳನ್ನು ತಯಾರಿಸಿ ಕೊಟ್ಟವರು. ನಾನೀಗ ಅದೇ ಕುರ್ಚಿಯಲ್ಲಿ ಕುಳಿದುಕೊಂಡು ಬರೆಯುತ್ತಿದ್ದೇನೆ ಎನ್ನುವ ಖುಷಿ ನನ್ನದು. ಅವರ ಅಣ್ಣ ನನ್ನ ಅಪ್ಪನಿಗೆ ಆತ್ಮೀಯರಾಗಿದ್ದ ಹಿರಿಯ ಸ್ನೇಹಿತರಲ್ಲಿ ಒಬ್ಬರು. ಅವರು ಅವರ ಸಮುದಾಯದಲ್ಲಿ ಆ ಕಾಲದ ಗೌರವಾನ್ವಿತ ಹಿರಿಯರು. ಅವರಿಗೆ ಮಂಗಳೂರಿನಲ್ಲಿ ಕೆಥೊಲಿಕ್ ಬಿಲ್ಡಿಂಗ್ ಪಕ್ಕದ ಬಿಲ್ಡಿಂಗ್‌ನಲ್ಲಿ ಸಣ್ಣ ಚಿನ್ನದಂಗಡಿ ಇತ್ತು. ಅದಕ್ಕೆ ಸ್ವಸ್ತಿಕ್ ಜ್ಯುವೆಲ್ಲರ್ಸ್‌ ಎಂದು ಹೆಸರಿತ್ತು. ಬೋರ್ಡು ನೋಡಿದ ನೆನಪಿಲ್ಲ. ಅಮ್ಮನಿಗೆ ಅಪ್ಪ ಮದುವೆಯ ಕರಿಮಣಿಸರ ಮಾಡಿಸಿದ್ದು ಅವರಿಂದಲೇ. ಆಗಾಗ ಅದು ಕಡಿದು ಹೋದಾಗಲೂ ಮತ್ತೆ ಅದನ್ನು ಜಾಗ್ರತೆಯಾಗಿ ಪುನಃ ಪೋಣಿಸಿ ಕೊಡುತ್ತಿದ್ದವರೂ ಅವರೇ. ಅಮ್ಮನಿಗೆ ಅಪ್ಪ ಸ್ವಸ್ತಿಕ್ ಲಿಂಗಪ್ಪ ಆಚಾರಿಯವರಿಂದ ಚಿನ್ನ ಮಾಡಿಸುವ ಯೋಗ ಬರುವಾಗ ಅವರು ಇರಲಿಲ್ಲ. ನನಗೆ ನನ್ನ ತಂಗಿಗೆ, ತಮ್ಮನಿಗೆ ಕಿವಿ ಚುಚ್ಚಿ ಬಿಳಿಕಲ್ಲಿನ, ನೀಲಿಕಲ್ಲಿನ ಸಣ್ಣ ಸಣ್ಣ ಕುಡುಕಗಳನ್ನು ಮಾಡಿಕೊಟ್ಟವರು ಅವರೇ. ಅವರನ್ನು ಅವರ ಹೆಸರು ಹಿಡಿದು ಮಾಮ ಎನ್ನುತ್ತಿದ್ದೆವು.

ಅವರು ಯಕ್ಷಗಾನ ಆಸಕ್ತರು. ಖಾದಿಬಟ್ಟೆ ಧರಿಸುತ್ತಿದ್ದರು. ಗಾಂಧಿ ಟೋಪಿಯನ್ನೂ ಇಟ್ಟುಕೊಳ್ಳುತ್ತಿದ್ದರೆಂಬ ನೆನಪು. ಬಹಳ ಸಜ್ಜನ ಹಾಗೂ ಪ್ರೀತಿಯನ್ನು ತೋರುತ್ತಿದ್ದವರು. ಅವರ ಒಬ್ಬ ಮಗ ಬಾಲಕೃಷ್ಣ ಎನ್ನುವವರು ನಂದಾವರರ ಆನಂದಾಶ್ರಮದ ಸಹಪಾಠಿ. ಅವರು ನಮ್ಮ ಮದುವೆಗೆ ಕೊಟ್ಟ ಮರದ ಹಲಗೆಯಲ್ಲಿ ಬಿಡಿಸಿದ ವರ್ಣಚಿತ್ರ ಈಗಲೂ ನಮ್ಮಿಂದಿಗೆ ಇದೆ. ಅವರ ಬದುಕು ದುರಂತವಾದುದು ಅವರ ಮನೆಮಂದಿಯಂತೆ ನಮಗೂ ದುಃಖ ತಂದ ವಿಚಾರ. ಅವರ ಇನ್ನೊಬ್ಬ ಮಗ ನಾವು ನೆಲ್ಲಿಸ್ಥಳ ಕೋಟೆಕಾರಿಗೆ ಬಂದಾಗ ನೆಲ್ಲಿಸ್ಥಳ ಕಾಳಿಕಾಂಬ ದೇವಸ್ಥಾನದ ಅರ್ಚಕರಾಗಿದ್ದರು. ಅವರ ಒಬ್ಬ ಮಗಳು ಗುಣವತಿಯ ಮಕ್ಕಳು ನನ್ನ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು ಆ ಸಂದರ್ಭದಲ್ಲಿ ಅವರ ತಂದೆಯವರನ್ನು ಇಬ್ಬರೂ ನೆನಪಿಸಿಕೊಳ್ಳುತ್ತಿದ್ದೆವು. ನೆಲ್ಲಿಸ್ಥಳ ದೇವಸ್ಥಾನದ ವ್ಯವಸ್ಥಾಪಕ ಮುಖ್ಯಸ್ಥರಲ್ಲಿ ಒಬ್ಬರಾಗಿದ್ದವರು ಗೋಪಾಲಾಚಾರಿಯವರು. ಅವರು ಡೈಮಂಡ್ ಕಟ್ಟಿಂಗಲ್ಲಿ ಪ್ರಸಿದ್ಧರಾಗಿದ್ದರು.

ಯಕ್ಷಗಾನ ಅರ್ಥಧಾರಿಗಳಾಗಿದ್ದ ಅವರೂ ಅಪ್ಪನ ಸ್ನೇಹಿತರ ವಲಯದ ಆತ್ಮೀಯರು. ಅವರು ಮಂಗಳೂರಲ್ಲಿ ಇದ್ದರೂ ದೇವಸ್ಥಾನದಲ್ಲಿ ವಿಶೇಷ ದಿನಗಳ ಸಂದರ್ಭಗಳಲ್ಲಿ ದಂಪತಿ ಸಮೇತ ಬರುತ್ತಿದ್ದರು. ಅವರು ಬರುತ್ತಿದ್ದಾರೆ ಎಂದಾದರೆ ನನಗೆ ವಿಷಯ ತಿಳಿಸಿ ನಾವೂ ಬರುವಂತೆ ಒತ್ತಾಯಿಸುತ್ತಿದ್ದರು. ನಾವೂ ಹೋಗುವುದು ಅವರಿಗೆ ಸಂಭ್ರಮವಾಗಿತ್ತು. ಅವರ ಮಗ ಸತೀಶನೂ ನನ್ನ ವಿದ್ಯಾರ್ಥಿಯಾಗಿದ್ದು ಒಳ್ಳೆಯ ತಬಲ ವಾದಕನಾಗಿದ್ದು ಕಲಾವಿದನಾಗಿ ಕಾರ್ಯಕ್ರಮಗಳಲ್ಲಿ ಈಗಲೂ ಭಾಗವಹಿಸುತ್ತಿದ್ದಾನೆ.

ಕೋಟೆಕಾರಿಗೆ ಸೊಸೆಯಾಗಿ, ನಂದಾವರರ ಮಡದಿಯಾಗುವುದಕ್ಕೆ ಮುಖ್ಯ ಕಾರಣರಾದವರು ನನ್ನ ಅಪ್ಪನ ಗುರುಗಳೂ, ನಂದಾವರರ ಗುರುಗಳೂ ಆದ ಅಮ್ಮೆಂಬಳ ಶಂಕರನಾರಾಯಣ ನಾವಡರಂತೆ, ಜೇಂಕಳ ಶ್ರೀನಿವಾಸಭಟ್ಟರು ಹಾಗೂ ಅಮೃತ ಸೋಮೇಶ್ವರರೂ ಕಾರಣರು. ಅದೇ ಕಾರಣಗಳಿಂದಾಗಿ ಅಪ್ಪನ ಮಗಳಾಗಿ, ನಂದಾವರರ ಮಡದಿಯಾಗಿ ಇಕ್ಕಡೆಯ ಸ್ನೇಹ ಆತ್ಮೀಯತೆಗಳಿಂದ ನವದಂಪತಿ ಅವರ ಮನೆಗೆ ಹೋಗಿ ಸಿಹಿಯೂಟ ಮಾಡಿದಂತೆ ಮುಂದೆಯೂ ಆ ಮೂರು ಮನೆಗಳು ನಾವು ಹೋಗಿ ಬರುವ ಮನೆಗಳಾಗಿ ಉಳಿದುವು. ಇದೇ ಸಂದರ್ಭದಲ್ಲಿ ಅಪ್ಪನ ಸಹಪಾಠಿಯಾಗಿದ್ದ ಕೋಟೆಕಾರು ಶಾಲೆಯ ಮೆನೇಜರ್‌ರಾಗಿದ್ದ ನಿವೃತ್ತ ಮುಖ್ಯೋಪಾಧ್ಯಾಯ ರಮೇಶ್‌ರಾಯರು ನಮ್ಮಿಬ್ಬರನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿದ್ದರು.

ಹರಿದಾಸರ ಮಗಳೆಂಬ ಕಾರಣಕ್ಕೆ ನನಗೆ ಹಾಡು, ಶ್ಲೋಕಗಳೆಲ್ಲ ಬರುತ್ತವೆಯೋ ಎಂಬುದರ ಪರೀಕ್ಷೆಯೆಂದಲ್ಲದೆ ಇದ್ದರೂ ಹಾಡಿಸಿಕೊಂಡು ಕೇಳಿ ಸಂತೋಷಪಟ್ಟರು. ತನ್ನ ಗೆಳೆಯ ಮಗಳಿಗೆ ಚೆನ್ನಾಗಿ ಸಂಸ್ಕಾರ ಕೊಟ್ಟಿದ್ದಾನೆ ಎಂದು ನಿವೃತ್ತ ಅಧ್ಯಾಪಿಕೆಯಾಗಿದ್ದ ತನ್ನ ಹೆಂಡತಿಯೊಂದಿಗೆ ಹೇಳಿ ಶಿಫಾರಸು ಕೊಟ್ಟರು. ನನ್ನ ಮನೆಯ ಸಾಹಿತ್ಯಿಕ, ಸಾಂಸ್ಕೃತಿಕ ಹಿನ್ನೆಲೆಯ ಬಗೆಗೆ ಗೌರವ ಇದ್ದ ನನಗೆ ಸಂತೋಷವೇ ಆಯಿತು. ಅವರ ಮಗ ವಿವೇಕ ಮುಂದೆ ನನ್ನ ಕಾಲೇಜಿನಲ್ಲಿ ನನ್ನ ವಿದ್ಯಾರ್ಥಿಯಾಗಿ ಸೇರಿಕೊಂಡ. ಅವರ ಸೋದರ ಸೊಸೆ ಗಾಯತ್ರಿಯೂ ನನ್ನ ವಿದ್ಯಾರ್ಥಿನಿಯಾಗಿದ್ದಳು. ಆಗೆಲ್ಲಾ ರಮೇಶರಾಯರು ಕಾಲೇಜಿಗೆ ಬಂದ ಸಂದರ್ಭದಲ್ಲಿ ನನ್ನನ್ನು ಪ್ರೀತಿ, ಗೌರವದಿಂದ ಕಾಣುತ್ತಿದ್ದರು. ವಿದ್ಯೆಯಿಂದ ಯೋಗ್ಯತೆ ನನ್ನ ತಂದೆಗೆ, ನನಗೆ ಹಾಗೂ ನನ್ನ ಪತಿಗೂ ಸಿಕ್ಕಿದೆ. ಆ ಮೂಲಕ ಕೋಟೆಕಾರಿನಲ್ಲಿ ಗೌರವವೂ ಸಿಕ್ಕಿದೆ. ಹೌದು ವಿದ್ಯೆಯ ಗೌರವದೊಂದಿಗೆ ವಿನಯವನ್ನೂ ನೀಡಬೇಕಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)