‘ಮೋದಿ ಸಂಚು’ ಆರೋಪದಲ್ಲಿ ಸತ್ಯವಿರಬಹುದು ಎಂದ ಬಿಜೆಪಿ ನಾಯಕ ಕಟಿಯಾರ್
ಬಾಬರಿ ಮಸೀದಿ ಪ್ರಕರಣದಲ್ಲಿ ಸಿಲುಕಿದ ಅಡ್ವಾಣಿ
ಹೊಸದಿಲ್ಲಿ, ಎ.20: ಬಿಜೆಪಿಯ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅವರನ್ನು ರಾಷ್ಟ್ರಪತಿ ಹುದ್ದೆಯ ಸ್ಪರ್ಧೆಯಿಂದ ಹೊರಹಾಕಲು ಪ್ರಧಾನಮಂತ್ರಿ ನರೇಂದ್ರ ಮೋದಿ ‘ಸಂಚು’ ರೂಪಿಸಿ ಅಡ್ವಾಣಿ ವಿರುದ್ಧ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಗೆ ಮರು ಜೀವ ನೀಡಿದ್ದಾರೆಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮಾಡಿರುವ ಆರೋಪದಲ್ಲಿ ‘ಸತ್ಯವಿರಬಹುದು’ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ವಿನಯ್ ಕಟಿಯಾರ್ ಹೇಳಿದ್ದಾರೆ.
‘‘ಲಾಲು ಹೇಳಿಕೆಯಲ್ಲಿ ಸತ್ಯವಿರಬಹುದು. ನನಗೆ ಸರಿಯಾಗಿ ಏನೂ ಗೊತ್ತಿಲ್ಲ’’ ಎಂದು ಸುದ್ದಿಸಂಸ್ಥೆಗೆ ಕಟಿಯಾರ್ ತಿಳಿಸಿದ್ದಾರೆ.
ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಆಂಗ್ಲ ವಾಹಿನಿಗೆ ಪ್ರತಿಕ್ರಿಯೆ ನೀಡಿರುವ ಕಟಿಯಾರ್,‘‘ಬಿಜೆಪಿ ನಾಯಕರ ವಿರುದ್ಧ ಮೊಕದ್ದಮೆಗಳು ಹುರುಳಿಲ್ಲದ್ದು. ವಿಚಾರಣೆ ಎದುರಿಸುವವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಬಾಬರಿ ಮಸೀದಿ ಪ್ರಕರಣಕ್ಕೆ ಮರುಜೀವ ನೀಡಿರುವ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಈ ಪ್ರಕರಣದಲ್ಲಿ ಸಿಬಿಐ ಕಾನೂನು ಕ್ರಮಕೈಗೊಳ್ಳಲಿದೆ. ಸಿಬಿಐ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹಿಡಿತದಲ್ಲಿದೆ. ಸರಕಾರ ಹೇಳಿದಂತೆಯೇ ಸಿಬಿಐ ನಡೆದುಕೊಳ್ಳುತ್ತದೆ ಎಂಬ ವಿಚಾರ ಎಲ್ಲರಿಗೂ ಗೊತ್ತಿದೆ ಎಂದು ಯಾದವ್ ಹೇಳಿದ್ದಾರೆ.
ಬುಧವಾರ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಕ್ರಿಮಿನಲ್ ಸಂಚು ರೂಪಿಸದ ಆರೋಪದಲ್ಲಿ ಅಡ್ವಾಣಿ, ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಹಾಗೂ ಕೇಂದ್ರ ಸಚಿವೆ ಉಮಾಭಾರತಿ ಹಾಗೂ ಕರಸೇವಕರ ವಿರುದ್ಧ ಜಂಟಿ ವಿಚಾರಣೆ ನಡೆಸುವುದಕ್ಕೆ ಅನುಮತಿ ನೀಡಿತ್ತು.