40 ವರ್ಷಗಳ ನಂತರ... ಅರಸು ನೆನಪು
ಅಂದು, 1977ರಲ್ಲಿ ದೇವರಾಜ ಅರಸರಿಗೆ ಸೃಷ್ಟಿಯಾಗಿದ್ದ ಸಂದರ್ಭವೇ ಇಂದು, 40 ವರ್ಷಗಳ ನಂತರ, 2017ರಲ್ಲಿ ಸಿದ್ದರಾಮಯ್ಯರಿಗೆ ಸೃಷ್ಟಿಯಾಗಿದೆ. ಅಂದು 1978ರಲ್ಲಿ, ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ದೇವರಾಜ ಅರಸರ ಮುತ್ಸದ್ದಿತನ, ಸಾಮಾಜಿಕ ನ್ಯಾಯ ಪರಿಪಾಲನೆ, ಚಾಣಾಕ್ಷ ರಾಜಕೀಯ ನಡೆಯ ಮೂಲಕ 149 ಸ್ಥಾನಗಳನ್ನು ಗೆದ್ದಿದ್ದರು. ಇಂದು 2018ರಲ್ಲಿ, ಕರ್ನಾಟಕದ ಕಾಂಗ್ರೆಸ್ನಲ್ಲಿ ಇಂಥದ್ದನ್ನು ನಿರೀಕ್ಷಿಸಲು ಸಾಧ್ಯವೇ?
ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಇದು ದಿಲ್ಲಿಯ ಬಿಜೆಪಿ ವರಿಷ್ಠರನ್ನು ಕಂಗೆಡಿಸಿದೆ. ಭುವನೇಶ್ವರದಲ್ಲಿ ನಡೆದ ಬಿಜೆಪಿಯ ಕಾರ್ಯಕಾರಿಣಿಯಲ್ಲಿ ಮುಂಬರುವ ರಾಜ್ಯಗಳ ಚುನಾವಣೆಯನ್ನು ಎದುರಿಸಲು ಬೇಕಾದ ತಂತ್ರಗಳ ಬಗ್ಗೆಯೇ ಹೆಚ್ಚು ಚರ್ಚಿಸಲಾಗಿದೆ. ಅದರಲ್ಲೂ 2018ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂದು ಪ್ರಧಾನಿ ಮೋದಿ ಫರ್ಮಾನು ಹೊರಡಿಸಿದ್ದಾರೆ. ಕರ್ನಾಟಕಕ್ಕಾಗಿಯೇ ವಿಶೇಷವಾಗಿ ಸಿದ್ಧ ಮಾಡಿರುವ ಮೋದಿ ಅಹಿಂದವೆಂಬ ಅಸ್ತ್ರವನ್ನು ಪ್ರಯೋಗಿಸಲು ಅಮಿತ್ ಶಾ ಅಮಿತೋತ್ಸಾಹದಲ್ಲಿದ್ದಾರೆ. ಇತ್ತ ಕಾಂಗ್ರೆಸ್ ಪಾಳಯದಲ್ಲಿ ಗೆದ್ದವರಲ್ಲಿರಬೇಕಾದ ಸಂಯಮ ಮರೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆತ್ಮವಿಶ್ವಾಸ ಅತಿಯಾಗಿ, ಮುಂದಿನ ಚುನಾವಣೆಗೂ ನನ್ನದೇ ಸಾರಥ್ಯ ಎಂದಿದ್ದಾರೆ. ಸಾಮೂಹಿಕ ನಾಯಕತ್ವಕ್ಕೆ ಸಂದ ಜಯ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅಪಸ್ವರವೆತ್ತಿದ್ದಾರೆ. ಒಕ್ಕಲಿಗರು- ಲಿಂಗಾಯತರು ಎದ್ದುನಿಂತು ಕೆಪಿಸಿಸಿ ಅಧ್ಯಕ್ಷ ಗಾದಿಗೆ ಪೈಪೋಟಿ ಶುರು ಮಾಡಿದ್ದಾರೆ. ಮತ್ತೆ ದಲಿತ ಮುಖ್ಯಮಂತ್ರಿ ಹಿನ್ನೆಲೆಗೆ ಸರಿದಿದೆ.
ರಾಜ್ಯದ ಸದ್ಯದ ರಾಜಕಾರಣವನ್ನು, ಉಪಚುನಾವಣೆ ಯಿಂದಾದ ಬದಲಾದ ಸ್ಥಿತಿಯನ್ನು ಸ್ಥೂಲವಾಗಿ ಅವಲೋಕಿಸಿದರೆ, ನಲವತ್ತು ವರ್ಷಗಳ ಹಿಂದಿನ ರಾಜ್ಯದ ರಾಜಕಾರಣ ಹೆಚ್ಚೂ ಕಡಿಮೆ ಹೀಗೆಯೇ ಇದ್ದುದನ್ನು ಹಿರಿಯ ರಾಜಕಾರಣಿಗಳು ನೆನಪು ಮಾಡಿಕೊಳ್ಳುತ್ತಾರೆ. ನಲವತ್ತು ವರ್ಷಗಳ ಹಿಂದೆ, 1977ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. 2017ರಲ್ಲಿ, ಸದ್ಯಕ್ಕೆ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿ ದ್ದುದು ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷ, ಇಂದು ನರೇಂದ್ರ ಮೋದಿ ನಾಯಕತ್ವದ ಭಾರತೀಯ ಜನತಾ ಪಕ್ಷ. 1975ರಲ್ಲಿ ಇಂದಿರಾ ಗಾಂಧಿ ಕರಾಳ ಶಾಸನದ ಮೂಲಕ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರು. ಸ್ವತಂತ್ರ ಭಾರತದಲ್ಲಿ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸಿದ್ದರು. ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ತಂದಿದ್ದರು. ಅಂದಿನ ಅವರ ಆ ಸರ್ವಾಧಿಕಾರಿ ವರ್ತನೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಕಾಂಗ್ರೆಸ್ ವಿರೋಧಿ ಅಲೆ ಸೃಷ್ಟಿಗೆ ಕಾರಣವಾಗಿತ್ತು. ಕಾಂಗ್ರೆಸ್ಸಿನ ವಂಶಪಾರಂಪರ್ಯ ಆಳ್ವಿಕೆಯನ್ನು ವಿರೋಧಿಸುತ್ತಿದ್ದ ವಿರೋಧಪಕ್ಷಗಳನ್ನು ಒಗ್ಗೂಡಿಸಿತ್ತು. ಅದಕ್ಕೆ ಪೂರಕವಾಗಿ ದೇಶದ ಜನತೆಯೂ ಬದಲಾವಣೆ ಬಯಸಿತ್ತು. ಇದೆಲ್ಲದರ ಒಟ್ಟು ಮೊತ್ತದಂತೆ, 1977ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೆಲ ಕಚ್ಚಿ, ಜನತಾ ಪಕ್ಷ ಜಯಭೇರಿ ಬಾರಿಸಿತ್ತು. ರಾಯ್ಬರೇಲಿಯಲ್ಲಿ ಸ್ವತಃ ಇಂದಿರಾಗಾಂಧಿಯವರೇ ಸೋತು, ನೆಲಮುನಿದು ತಿರಸ್ಕರಿಸಿದ ನಾಯಕಿಯ ಪಟ್ಟ ಹೊತ್ತುಕೊಂಡಿದ್ದರು. ಭವಿಷ್ಯ ಭಾರತದ ಮುಂದಾಳು ಎಂದು ಬಿಂಬಿತವಾಗಿದ್ದ ಮಗ ಸಂಜಯ ಗಾಂಧಿ ಸೋತು ಸುಮ್ಮನೆ ಕೂತಿದ್ದರು. ಅಷ್ಟೇ ಅಲ್ಲ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳನ್ನು ಹೊರತುಪಡಿಸಿ, ಮಿಕ್ಕೆಲ್ಲ ರಾಜ್ಯಗಳಲ್ಲಿ ಜನತಾ ಪಕ್ಷ ಗೆದ್ದು ಕೇಂದ್ರದಲ್ಲಿ ಅಧಿಕಾರ ಹಿಡಿದಿತ್ತು. ದಿಲ್ಲಿ ಗದ್ದುಗೆಯನ್ನು ಹಿಡಿದ ಜನತಾ ಪಕ್ಷದ ನಾಯಕರು, ಸಹಜವಾಗಿಯೇ ಇಡೀ ದೇಶವನ್ನೇ ಗೆದ್ದಂತೆ ಬೀಗುತ್ತಿದ್ದರು. ಆದರೆ ಆಂಧ್ರ-ಕರ್ನಾಟಕ ರಾಜ್ಯಗಳು ಕೊಂಚ ಕಸಿವಿಸಿ ಸೃಷ್ಟಿಸಿದ್ದವು. ಈ ಕಸಿವಿಸಿಗೆ ಕರ್ನಾಟಕದ ಜನತಾ ಪಕ್ಷದ ನಾಯಕರು ಗಾಳಿಯೂದಿ, ಅರಸರ ಚುನಾಯಿತ ಸರಕಾರವನ್ನು ಕಿತ್ತೊಗೆಯಲು ಇನ್ನಿಲ್ಲದ ತಂತ್ರಕ್ಕೆ ಕೈಹಾಕಿದ್ದರು. ಹಾಗಾಗಿ ಅವರ ದೃಷ್ಟಿ ಕರ್ನಾಟಕದತ್ತ ನೆಟ್ಟಿತ್ತು.
ಆ ಸಂದರ್ಭದಲ್ಲಿ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ದುರದೃಷ್ಟಕರ ಸಂಗತಿ ಎಂದರೆ, 4 ವರ್ಷ ಪೂರೈಸಿ 5ನೆ ವರ್ಷಕ್ಕೆ ಕಾಲಿಟ್ಟು ತಮ್ಮ ಕ್ರಾಂತಿಕಾರಿ ಕಾಯ್ದೆಗಳು, ಜನಪರ ಕಾರ್ಯಕ್ರಮಗಳಿಂದ ಅರಸು ಜನಪ್ರಿಯ ಮುಖ್ಯಮಂತ್ರಿ ಎನಿಸಿಕೊಂಡಿದ್ದರೂ, ಪಕ್ಷದೊಳಗೇ ಭಿನ್ನಮತ ಭುಗಿಲೆದ್ದಿತ್ತು. ಸಣ್ಣ ಸಮುದಾಯದಿಂದ ಬಂದ ಅರಸರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಮೇಲ್ಜಾತಿ ನಾಯಕರು ಒಳಗೊಳಗೇ ಒಂದಾಗಿದ್ದರು.
ಎಸ್.ಎಂ.ಕೃಷ್ಣರಂತಹ ವಿದ್ಯಾವಂತ ಯುವಕರನ್ನು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಕ್ಯಾಬಿನೆಟ್ ಸಚಿವ ಸ್ಥಾನ ನೀಡಿದ್ದ ದೇವರಾಜ ಅರಸರೇ ಬೆಚ್ಚಿ ಬೀಳುವಂತೆ, ರಾಜೀನಾಮೆ ಕೊಟ್ಟು ಕಷ್ಟ ಕೊಟ್ಟಿದ್ದರು. ಅಷ್ಟೇ ಅಲ್ಲ, ಮಂಡ್ಯದಲ್ಲಿ ಸರಕಾರದ ವಿರುದ್ಧ ಶುರುವಾದ ವರುಣಾ ನಾಲೆ ಹೋರಾಟದೊಂದಿಗೆ ಗುರುತಿಸಿಕೊಂಡರು. ಅರಸರ ಸಂಪುಟದಲ್ಲಿ ಮಂತ್ರಿಯಾಗಿದ್ದಕ್ಕೆ ಒಂದು ದಿನದ ಪಶ್ಚಾತ್ತಾಪ ಉಪವಾಸವನ್ನು ಮಾಡಿದರು. ಅಂದರೆ ಅರಸರ ಸರಕಾರದ ವಿರುದ್ಧ ಒಕ್ಕಲಿಗರು ಒಂದಾಗಿ ಸಿಡಿದೇಳಲು ವರುಣಾ ಒಂದು ನೆಪವಾಯಿತು. ಅದಕ್ಕೆ ಮತ್ತೊಬ್ಬ ಸಂಪುಟದರ್ಜೆ ಸಚಿವ ಹುಚ್ಚಮಾಸ್ತಿಗೌಡರೂ ಕೈಜೋಡಿಸಿದರು.
ಮತ್ತೊಂದು ಕಡೆಯಿಂದ ಲಿಂಗಾಯತ ಕೋಮಿನ ಕೆ.ಎಚ್. ಪಾಟೀಲ್, ಮಂತ್ರಿ ಸ್ಥಾನ ತೊರೆದು, ಕಾಂಗ್ರೆಸ್ ಬಿಟ್ಟು, ಅರಸರ ವಿರುದ್ಧ ಬೀದಿಗಿಳಿದು ತೊಡೆ ತಟ್ಟಿದ್ದರು. ಅಂದರೆ ಮೇಲ್ಜಾತಿ ಜನರೆಲ್ಲ ಒಂದಾದರು. ಕೆ.ಎಚ್.ಪಾಟೀಲರ ಮುಂದಾಳತ್ವದ ‘ರೆಡ್ಡಿ ಕಾಂಗ್ರೆಸ್’ ರಚಿಸಿ, ಕಾಂಗ್ರೆಸ್ ಸರಕಾರಕ್ಕೆ ಸಂಚಕಾರ ತಂದಿದ್ದರು. ಪಕ್ಷದೊಳಗಿದ್ದ ಪ್ರಕ್ಷುಬ್ಧ ಪರಿಸ್ಥಿತಿಯ ಲಾಭ ಪಡೆಯಲು ಹವಣಿಸಿದ್ದ ಅಂದಿನ ವಿರೋಧ ಪಕ್ಷದ ನಾಯಕರಾದ ಎಚ್.ಡಿ. ದೇವೇಗೌಡ, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್ ಎದ್ದು ನಿಂತಿದ್ದರು. ಸಿಕ್ಕ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಲು ಕೇಂದ್ರ ಸರಕಾರದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದರು. ದೇವರಾಜ ಅರಸರ ಭ್ರಷ್ಟಾಚಾರವನ್ನು ತನಿಖೆಗೊಳಪಡಿಸಲು ಗ್ರೋವರ್ ಆಯೋಗ ರಚನೆಯಾಗುವಂತೆ ನೋಡಿಕೊಂಡಿದ್ದರು. ಆ ಮೂಲಕ ಅವರ ನೈತಿಕ ಸ್ಥೈರ್ಯ ಕುಗ್ಗಿಸಿದ್ದರು. ಇದು ಸಾಲದು ಎಂದು, ದೇವರಾಜ ಅರಸರಿಂದ ಸಿಡಿದು ಕಾಂಗ್ರೆಸ್ಸಿನಿಂದ ಹೊರಬಂದಿದ್ದ 60 ಶಾಸಕರು ಸಹಿ ಸಂಗ್ರಹಿಸಿ, ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಹಿ ಮಾಡಿ, ರಾಜ್ಯಪಾಲರಿಗೆ ಪತ್ರ ಕೊಟ್ಟು ಮನವಿ ಮಾಡಿಕೊಂಡಿದ್ದರು. ಇದೇ ಸೂಕ್ತ ಸಮಯವೆಂದು ಭಾವಿಸಿದ ಜನತಾ ಪಕ್ಷದ ಮುಖಂಡರು, ಕೇಂದ್ರ ಸರಕಾರವನ್ನು ಬಳಸಿಕೊಂಡು, ರಾಜ್ಯಪಾಲರ ಮೇಲೆ ಒತ್ತಡ ಹೇರಿ, ಮುಖ್ಯಮಂತ್ರಿ ದೇವರಾಜ ಅರಸರಿಗೆ ವಿಶ್ವಾಸಮತಕ್ಕೂ ಅವಕಾಶ ಕೊಡದಂತೆ ರಾಜ್ಯದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ನೋಡಿಕೊಂಡರು. ಸಣ್ಣ ಸಮುದಾಯದಿಂದ ಬಂದ ದೇವರಾಜ ಅರಸರನ್ನು ಬಗ್ಗುಬಡಿಯಲು ಶಾಸಕ-ಮಂತ್ರಿಗಳ ಬಂಡಾಯ, ರೆಡ್ಡಿ ಕಾಂಗ್ರೆಸ್ ರಚನೆ; ಕರ್ನಾಟಕವನ್ನು ಕಾಂಗ್ರೆಸ್ನಿಂದ ಮುಕ್ತಗೊಳಿಸಲು ಭ್ರಷ್ಟಾಚಾರದ ಆರೋಪ, ಆಯೋಗ ನೇಮಕ, ರಾಜ್ಯಪಾಲರ ಆಳ್ವಿಕೆ. ಅರಸರ ಬಹುಮತದ ಸರಕಾರ 5 ವರ್ಷ ಪೂರೈಸುವಲ್ಲಿ ಇಷ್ಟೆಲ್ಲ ಇಕ್ಕಟ್ಟುಗಳಿಗೆ ಸಿಕ್ಕಿಹಾಕಿಕೊಂಡಿತ್ತು. ಅಂತಹ ಸ್ಥಿತಿಯಲ್ಲಿ ಚುನಾವಣೆ ಎದುರಾಗಿತ್ತು.
ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷ ಬಹಳ ದೊಡ್ಡ ರಾಜ್ಯವಾದ ಉತ್ತರ ಪ್ರದೇಶವನ್ನು ಗೆದ್ದು ಉನ್ಮಾದದಲ್ಲಿ ತೇಲುತ್ತಿದೆ. ಕರ್ನಾಟಕದತ್ತ ಕಣ್ಣು ನೆಟ್ಟಿದೆ. 2018ರ ಚುನಾವಣೆಯನ್ನು ಗೆಲ್ಲಲು ಇಂದಿನಿಂದಲೇ ತಯಾರಿ ನಡೆಸಿದೆ. ಆ ತಯಾರಿಗೆ ಉಪಚುನಾವಣೆಯ ಸೋಲು ಸೇಡಿಗೆ ದಾರಿ ಮಾಡಿಕೊಟ್ಟಿದೆ. ಭುವನೇಶ್ವರದ ಕಾರ್ಯಕಾರಿಣಿಯಲ್ಲೂ ಕರ್ನಾಟಕವೇ ಪ್ರಧಾನವಾಗಿ ಪ್ರಸ್ತಾಪವಾಗಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಸರಕಾರ ಸಿಬಿಐ, ಜಾರಿ ನಿರ್ದೇಶನಾಲಯಗಳನ್ನು ಅನುಕೂಲಕ್ಕೆ ತಕ್ಕಂತೆ ಅಸ್ತ್ರದಂತೆ ಪ್ರಯೋಗಿಸುತ್ತಿದೆ. ಬರಗಾಲ, ಅಂಗನವಾಡಿ, ನರೇಗಾ, ಕಾವೇರಿ, ಮಹಾದಾಯಿ, ರೈತರ ಸಾಲ ಮನ್ನಾ... ರಾಜ್ಯ ಸರಕಾರದ ನೆರವಿಗೆ ಧಾವಿಸಬೇಕಾದ ಕೇಂದ್ರ ಸರಕಾರ ಜಿದ್ದಿಗೆ ಬಿದ್ದು, ಸಕಾಲಕ್ಕೆ ಸರಿಯಾಗಿ ಅನುದಾನ ನೀಡದೆೆ ಸತಾಯಿಸುತ್ತಿದೆ. ಮತ್ತೊಂದು ಕಡೆ, ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಚುನಾವಣೆಯಿಂದ ಚುನಾವಣೆಗೆ ರಾಜ್ಯಗಳ ಹಿಡಿತವನ್ನು, ಸಂಖ್ಯಾಬಲವನ್ನು ಕುಗ್ಗಿಸಿಕೊಳ್ಳುತ್ತಾ ಸಾಗಿದ್ದರೆ, ಬಿಜೆಪಿ ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತಿದೆ. ಬಿಜೆಪಿ ಬಲಾಢ್ಯಗೊಳ್ಳುತ್ತಾ ಸಾಗಿರುವುದು ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಮಂತ್ರಕ್ಕೆ, ದೊಡ್ಡ ಗಂಟಲಿನ ಮೋಡಿ ಮಾತಿಗೆ, ಮಾಧ್ಯಮಗಳ ಪರೋಕ್ಷ ಬೆಂಬಲಕ್ಕೆ ಬೆಲೆ ಸಿಕ್ಕಂತಾಗಿದೆ.
ಇದು ಸಹಜವಾಗಿಯೇ ಅವರ ಸರ್ವಾಧಿಕಾರಿ ವರ್ತನೆಗೆ ಕುಮ್ಮಕ್ಕು ಕೊಡುತ್ತಿದೆ. ಸಾಮ್ರಾಜ್ಯ ವಿಸ್ತರಣೆಗೆ ಪ್ರೇರೇಪಿಸಿದೆ. ಇನ್ನು ಕರ್ನಾಟಕದ ವಿಚಾರಕ್ಕೆ ಬರುವುದಾದರೆ, ಈಗಾಗಲೇ ಕರಾವಳಿ, ಕೊಡಗು ಸಂಘಪರಿವಾರದ ಕೈವಶವಾಗಿ, ಉಪಟಳ ವಿಪರೀತವಾಗಿದೆ. ಮಾನವಂತರ ನೆಮ್ಮದಿಯ ಬದುಕಿಗೆ ಭಂಗ ಬಂದಿದೆ. ಇದೇ ಅಜೆಂಡಾವನ್ನು ರಾಜ್ಯಕ್ಕೆ ವಿಸ್ತರಿಸಲು ಬಿಜೆಪಿಯ ಒಂದು ತಂಡ ಸಿದ್ಧವಾಗಿ ನಿಂತಿದೆ. ಮೋದಿಯ ಮಂತ್ರವಾದ ಅಭಿವೃದ್ಧಿ ಮತ್ತು ಭ್ರಷ್ಟಾಚಾರಕ್ಕೆ ಕರ್ನಾಟಕದಲ್ಲಿ ಮಾವಿನಕಾಯಿ ಉದುರುವಂತೆ ಕಾಣದು. ಏಕೆಂದರೆ ಉತ್ತರದ ರಾಜ್ಯಗಳಂತೆ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳಿದಿಲ್ಲ. ಇನ್ನು ಭ್ರಷ್ಟಾಚಾರ ಬಿಜೆಪಿಯಲ್ಲಿಯೇ ಅತಿಯಾಗಿ, ಅವರೇ ಜೈಲಿಗೆ ಹೋಗಿದ್ದು ಹಿನ್ನಡೆಯಾಗಲಿದೆ. ಹಾಗಾಗಿ ಈಗ ಹೊಸದಾಗಿ ಚುನಾವಣೆಗಾಗಿ ಮೋದಿ ಅಹಿಂದ ಚಾಲ್ತಿಗೆ ಬರಲಿದೆ. ಅಲ್ಲಿ ಅಲ್ಪಸಂಖ್ಯಾತರನ್ನು ಅಪ್ಪಿಕೊಳ್ಳುವ, ಅಂಬೇಡ್ಕರ್ ಆರಾಧನೆ ಮಾಡುವ, ಗೋವನ್ನು ಮಾತೆಯ ಸ್ಥಾನಕ್ಕೇರಿಸಿ ಭಾವನಾತ್ಮಕ ಬೀಜ ಬಿತ್ತುವ ಬೆಂಕಿಯ ಬೆಳೆ ತೆಗೆಯುವ ಸಂಚು ಚಾಲ್ತಿಗೆ ಬರುತ್ತಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ವಿ.ಶ್ರೀನಿವಾಸಪ್ರಸಾದ್, ಎಸ್.ಎಂ.ಕೃಷ್ಣ ಬಿಜೆಪಿ ಸೇರಿದ್ದಾರೆ. ಮತ್ತೊಬ್ಬ ಹಿರಿಯ ನಾಯಕ ಜಾಫರ್ ಶರೀಫ್, ಆರೆಸ್ಸೆಸ್ನ ಭಾಗವತ್ ರಾಷ್ಟ್ರಪತಿ ಹುದ್ದೆಗೆ ಸೂಕ್ತ ಅಭ್ಯರ್ಥಿ ಎಂದು, ಅಲ್ಪಸಂಖ್ಯಾತರಲ್ಲಿ ಹಾಗೂ ಕಾಂಗ್ರೆಸ್ಸಿಗರಲ್ಲಿ ಕಸಿವಿಸಿಯನ್ನುಂಟುಮಾಡಿದ್ದಾರೆ. ಹಾಗೆಯೇ ಹಿರಿಯ ಮಹಿಳಾ ನಾಯಕಿ ಮಾರ್ಗರೆಟ್ ಆಳ್ವಾ ಕೆಲವು ವರ್ಷಗಳಿಂದ ತಟಸ್ಥ ನಿಲುವು ತಳೆದು ಪಕ್ಷದಿಂದ ದೂರವಾಗಿದ್ದಾರೆ. ಜನಾರ್ದನ ಪೂಜಾರಿ, ಎಚ್.ವಿಶ್ವನಾಥ್ ಆಗಾಗ ಸಿದ್ದರಾಮಯ್ಯ ಮತ್ತವರ ಸರಕಾರದ ವಿರುದ್ಧ ಅಪಸ್ವರ ಎತ್ತಿ ಕಿರಿಕಿರಿಗೆ ಕಾರಣರಾಗಿದ್ದಾರೆ. ಇದು ಸಾಲದೆಂಬಂತೆ, ಈಗ ಉಪಚುನಾವಣೆಯ ಗೆಲುವಿನ ನಂತರ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಒಕ್ಕಲಿಗರು ಮತ್ತು ಲಿಂಗಾಯತರ ನಡುವೆ ಪೈಪೋಟಿ ಶುರುವಾಗಿದೆ. ಡಿ.ಕೆ.ಶಿವಕುಮಾರ್, ಆರ್.ವಿ. ದೇಶಪಾಂಡೆ ಯಾವ ಕ್ಷಣದಲ್ಲಿ ಎಂತಹ ಆಟ ಹಾಕಲಿದ್ದಾರೋ ಎಂಬುದು ಯಾರಿಗೂ ತಿಳಿಯದಾಗಿದೆ.
ಅಂದು, 1977ರಲ್ಲಿ ದೇವರಾಜ ಅರಸರಿಗೆ ಸೃಷ್ಟಿಯಾಗಿದ್ದ ಸಂದರ್ಭವೇ ಇಂದು, 40 ವರ್ಷಗಳ ನಂತರ, 2017ರಲ್ಲಿ ಸಿದ್ದರಾಮಯ್ಯರಿಗೆ ಸೃಷ್ಟಿಯಾಗಿದೆ. ಅಂದು 1978ರಲ್ಲಿ, ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ದೇವರಾಜ ಅರಸರ ಮುತ್ಸದ್ದಿತನ, ಸಾಮಾಜಿಕ ನ್ಯಾಯ ಪರಿಪಾಲನೆ, ಚಾಣಾಕ್ಷ ರಾಜಕೀಯ ನಡೆಯ ಮೂಲಕ 149 ಸ್ಥಾನಗಳನ್ನು ಗೆದ್ದಿದ್ದರು. ಇಂದು 2018ರಲ್ಲಿ, ಕರ್ನಾಟಕದ ಕಾಂಗ್ರೆಸ್ನಲ್ಲಿ ಇಂಥದ್ದನ್ನು ನಿರೀಕ್ಷಿಸಲು ಸಾಧ್ಯವೇ?