varthabharthi


ತಾರಸಿ ನೋಟ

ಭಾರತರತ್ನ ಮಾಣಿಕ್‌ದಾಗೆ ಇಂಥ ಒಬ್ಬ ಆಪ್ತಮಿತ್ರ

ವಾರ್ತಾ ಭಾರತಿ : 22 Apr, 2017
ವೆಂಕಟಲಕ್ಷ್ಮೀ ವಿ.ಎನ್.

ಇಂದಿಗೆ ಸುಮಾರು ಐವತ್ತು ವರ್ಷಗಳ ಹಿಂದೆ, ಒಬ್ಬ ಇಪ್ಪತ್ತಾರು ವರ್ಷದ ತರುಣ ಕೆಥೊಲಿಕ್ ಪಾದ್ರಿ, ಫ್ರಾನ್ಸ್ ಹಾಗೂ ಕೆನಡಾ-ಎರಡೂ ದೇಶಗಳ ಪ್ರಜೆ, ತಮ್ಮ ಭಾರತ ಪ್ರಯಾಣದ ಮಧ್ಯೆ ನ್ಯೂಯಾರ್ಕ್‌ನಲ್ಲಿ ತಂಗಿದ್ದರು. ಅಲ್ಲಿ ಅವರಿಗೆ, ಬಂಗಾಳಿ ಚಲನಚಿತ್ರ, ‘ಅಪೂ ತ್ರಿವಳಿ-ಮೂರು ಸಿನೆಮಾಗಳಲ್ಲಿ ಅರಳಿರುವ ಅಪೂ ಜಗತ್ತು’ ನೋಡಲು ಸಿಕ್ಕಿತು. ಅದರಲ್ಲಿ ಮುಳುಗಿಹೋದರು. ಎಷ್ಟರಮಟ್ಟಿಗೆ ಅಂದರೆ, ಮುಂದಿನ ಮೂರು ದಶಕ ಅದರ ಕರ್ತಾರ, ಸತ್ಯಜಿತ್ ರೇ ಎಂಬ ಅಯಸ್ಕಾಂತಕ್ಕೆ ಅವರು, ಅಂಟಿಕೊಂಡ ಲೋಹದ ತುಂಡು. ಸತತ 22 ವರ್ಷ, ಪಾದ್ರಿಯವರ ಸವಾರಿ, ಕೋಲ್ಕತಾದ ಬಿಷಪ್ ಲೆಫ್ರಾಯ್ ರಸ್ತೆಯ ಒಂದು ಮನೆಗೆ, ಸರಿಯಾಗಿ ಬೆಳಗ್ಗೆ ಒಂಬತ್ತು ಗಂಟೆಗೆ ಚಿತ್ತೈಸುತ್ತಿತ್ತು. ಆರಡಿಗೂ ಮಿಕ್ಕಿದ ಎತ್ತರದ ನಿರ್ದೇಶಕ, ಫಾದರ್ ಗ್ಯಾಸ್ಟನ್ ರಾಬರ್ಜ್‌ರ ಈ ನೇಮಕ್ಕೆ ಕಾಲಾಂತರದಲ್ಲಿ ಕರಗಿದರು; ಅಂತರಂಗಕ್ಕೆ ಬಿಟ್ಟುಕೊಂಡರು.

‘‘ಮೊದಲೆಲ್ಲ ಅವರ ಸಿನೆಮಾ ಕುರಿತು ನಾವು ಚರ್ಚಿಸುತ್ತಿರಲಿಲ್ಲ. ಹೊರನೋಟಕ್ಕೆ ಕಾಣುವುದಕ್ಕೆ ತದ್ವಿರುದ್ಧವಾಗಿ, ಸಂಕೋಚ ಪ್ರವೃತ್ತಿ, ಬಡಿವಾರ ಇಲ್ಲದ ಸರಳ ನಡೆನುಡಿಯ ಮಿತಭಾಷಿ ಅವರು ಎಂದು ಕಂಡುಕೊಂಡೆ. ಹೊಗಳಿಕೆ ಸ್ವೀಕರಿಸಲು ಸಹ ಮುಜುಗರ ಪಡುತ್ತಿದ್ದವರು ಕ್ರಮೇಣ ತಮ್ಮ ಚಿತ್ರಗಳ ಪ್ರಥಮ ಪ್ರದರ್ಶನಗಳಿಗೆ ನನ್ನನ್ನು ಆಹ್ವಾನಿಸುವಷ್ಟು, ಅಭಿಪ್ರಾಯ ಕೇಳುವಷ್ಟು ಹತ್ತಿರವಾದರು’’ ಎಂದಿದ್ದಾರೆ ಗ್ಯಾಸ್ಟನ್. ಧರ್ಮಗುರುವಾಗಿ, ಇಂಡಿಯ ಎಂಬ ವಿಸ್ಮಯ ಅರಿತುಕೊಳ್ಳಲು ಬಂದಾತ ಹೀಗೆ ಸಿನೆಮಾ ಲೋಕದಲ್ಲಿ ಕಳೆದುಹೋಗಿದ್ದರಿಂದ ಆದ ಲಾಭ ಸುಮಾರು 15 ಚಲನಚಿತ್ರ ರಸಗ್ರಹಣ ಕುರಿತ ಪುಸ್ತಕಗಳು. ನಷ್ಟ, ಏನಂದರೆ ಏನೂ ಇಲ್ಲ. ಕಳೆದ ಜೂನ್‌ನಲ್ಲಿ ತೀರಿಕೊಂಡ ಫಾದರ್ ವಾಸವಾಗಿದ್ದುದು, ನಗರದ ಸೈಂಟ್ ಕ್ಸೇವಿಯರ್ ಕಾಲೇಜಿನ ಸನ್ಯಾಸಿ ಬಿಡಾರದಲ್ಲಿ. ಕೋಲ್ಕತಾದಲ್ಲಿ ಜರಗುವ ಚಲನಚಿತ್ರೋದ್ಯಮದ ಎಲ್ಲ ಪ್ರಮುಖ ಉತ್ಸವ-ಸಮಾರಂಭ ಗಳಲ್ಲಿ ರಾಬರ್ಜ್ ಉಪಸ್ಥಿತಿ ಇರುತ್ತಿತ್ತು.

ಭಾರತೀಯ ಚಲನಚಿತ್ರ ಅಧ್ಯಯನ ಸಾಹಿತ್ಯದ ಪಿತಾಮಹ ಎಂದು ಗ್ಯಾಸ್ಟನ್‌ರನ್ನು ಪರಿಗಣಿಸುವುದರ ಹಿಂದೆ ಅನೇಕ ಕಾರಣಗಳಿವೆ. ಸತ್ಯಜಿತ್‌ರೇ ಅವರನ್ನು ಮುಂದಿಟ್ಟುಕೊಂಡು ‘ಚಿತ್ರಬನಿ’ ಎಂಬ ಸಿನೆಮಾ ಅಧ್ಯಯನ ಹಾಗೂ ಸಂವಹನ ಸಂಸ್ಥೆಯೊಂದನ್ನು ಕಟ್ಟಿ(1070) ಬೆಳೆಸಿದ ಅವರು, 26 ವರ್ಷಗಳಷ್ಟು ದೀರ್ಘ ಕಾಲ ಅದರ ನಿರ್ದೇಶಕರಾಗಿ ದುಡಿದರು. ಅನೇಕ ಸಾಕ್ಷ್ಯಚಿತ್ರಗಳ ನಿರ್ಮಾಣ, ಸ್ಥಳೀಯ ಪ್ರತಿಭೆಗಳಿಗೆ ಬೇಕಾಗಿರುವ ಉತ್ತೇಜನ ಮುಂತಾಗಿ ಹಲವು ಕ್ರಿಯಾಶೀಲ ಯೋಜನೆಗಳನ್ನು ಸಂಸ್ಥೆ, ಅಧ್ಯಯನದೊಂದಿಗೆ ಜೋಡಿಸಿಕೊಂಡಿತು. ತರಗತಿಗಳಲ್ಲಿ ಪಾಠ ಹೇಳಲು ಭಾರತೀಯ ಚಲನಚಿತ್ರ ರಂಗ ಕುರಿತ ಪುಸ್ತಕಗಳೇ ಇರಲಿಲ್ಲ. ವಿದೇಶಿ ಸೌಂದರ್ಯ ಮೀಮಾಂಸೆ ಆಧರಿಸಿದ, ಪಾಶ್ಚಾತ್ಯ ಸಿನೆಮಾಗಳ ಬಗ್ಗೆ ಪಾಶ್ಚಾತ್ಯ ವಿದ್ವಾಂಸರು ಬರೆದ ಗ್ರಂಥಗಳಷ್ಟೇ ಲಭ್ಯ ಇದ್ದ ಸಂದರ್ಭದಲ್ಲಿ ತಕ್ಷಣಕ್ಕೆ ಬೇಕಾದ ಒಂದು ಶೈಕ್ಷಣಿಕ ಕೃತಿ ರಚಿಸಿ ‘ಚಿತ್ರಬನಿ’ ಎಂಬ ಹೆಸರನ್ನೇ ಅದಕ್ಕೂ ಇಟ್ಟರು. ಭಾರತೀಯ ಹಾಗೂ ಬಂಗಾಳಿ ಸಿನೆಮಾಗಳ ರಸಗ್ರಹಣಕ್ಕೆ ಅರಿಸ್ಟಾಟಲ್ ರಚಿಸಿದ್ದ ‘ಪೊಯೆಟಿಕ್ಸ್’ ಸೂಕ್ತವಲ್ಲ ಎಂದು ಗ್ರಹಿಸಿ ಪೌರ್ವಾತ್ಯ ಲಕ್ಷಣ ಗ್ರಂಥ, ಭರತ ಮುನಿಯ ನಾಟ್ಯಶಾಸ್ತ್ರದ ಮೊರೆಹೋದರು.

ಸಿನೆಮಾ ಸಂವಹನ, ಮೀಮಾಂಸೆ, ರಸಗ್ರಹಣ, ವಿಶ್ಲೇಷಣೆ, ವಿಮರ್ಶೆ.. ಹೀಗೆ ಪ್ರತೀ ಅಂಶವನ್ನೂ ಅಕಡಮಿಕ್ ಆಗಿ ಮೇಲ್ಮಟ್ಟದಲ್ಲಿ ಚರ್ಚಿಸಿ, ಸಿದ್ಧಾಂತಗೊಳಿಸಿದ ಗೆಳೆಯನ ಎಲ್ಲ ಪ್ರಯತ್ನಗಳನ್ನು ಗುರುತಿಸಿ ಶ್ಲಾಘಿಸಿದ ರೇ, ಅದಕ್ಕೊಂದು ವಿದ್ವತ್ಪೂರ್ಣ ಸುದೀರ್ಘ ಪೀಠಿಕೆ ಬರೆದುಕೊಟ್ಟರು. ಇಷ್ಟೇ ಪರಿಶ್ರಮ-ವ್ಯಾಸಂಗ, ಇತ್ತೀಚಿನ ಪ್ರಕಟನೆ, ‘‘ಸತ್ಯಜಿತ್ ರೇ. ಎಸ್ಸೇಸ್: 1970-2005’’ (2007)ದಲ್ಲೂ ಕಾಣಬಹುದು. ಉದ್ದಾಮ ಕಲಾಕಾರನನ್ನು ಒಂದು ‘ಮ್ಯೂಸಿಯಂ ವಸ್ತು’ವಾಗಿ ನೋಡಲೊಲ್ಲೆ ಎಂದು ನಿರ್ಧರಿಸಿದ ತರುಣ ಫಾದರ್, ಕೋಲ್ಕತಾಗೆ ಬಂದಿಳಿದ ಮೇಲೆ ಒಂಬತ್ತು ವರ್ಷ ಸುಮ್ಮನಿದ್ದರು; ರೇ ಭೇಟಿಗೆ, ಅವರೊಂದಿಗೆ ನಡೆಸಬೇಕಾಗಿದ್ದ ಸಂವಾದಕ್ಕೆ ಬೇಕಾದ ಸಿದ್ಧತೆಗಳನ್ನು ಆ ಸಮಯ ಮಾಡಿಕೊಂಡರು ಎಂದಮೇಲೆ ಅವರ ಪುಸ್ತಕ ರಚನೆಯ ವ್ಯವಸ್ಥಿತ ವಿಧಾನಗಳು ಮತ್ತೂ ಎಷ್ಟು ಕರಾರುವಾಕ್ಕಾಗಿದ್ದಿರಬಹುದು ಎಂದು ಅಂದಾಜಿಸಬಹುದು.

ನಿಸ್ಸಂದೇಹವಾಗಿ ಇದು ಪಶ್ಚಿಮದ ಶಿಸ್ತೇ ಹೌದು. ಶೇಕ್‌ಸ್ಪಿಯರ್‌ನ ಕೊನೆಯ ನಾಟಕಗಳ ಕುರಿತು ವಿಮರ್ಶಕರು ವಿಶೇಷವಾಗಿ ಚರ್ಚಿಸುವಂತೆ, ಸತ್ಯಜಿತ್‌ರ ಅಂತಿಮ ಮೂರು ಸಿನೆಮಾ ಗಳಾದ ‘ಗಣಶತ್ರು’, ‘ಶಾಖಾ-ಪ್ರೊಶಾಖಾ’ ಹಾಗೂ ‘ಆಗಂತುಕ್’ಗಳ ಕಡೆ ಗ್ಯಾಸ್ಟನ್ ವಿಶೇಷ ಆಸ್ಥೆ ತಳೆದದ್ದು ಕುತೂಹಲಕರ: ತೆರೆಯ ಮೇಲಿನ ಕಾವ್ಯ (ಕ್ಲೀಷೆಯಾದರೂ ಇದುವೇ ಸೂಕ್ತ)ದಂತೆ ಇದ್ದ ಹಿಂದಿನ ಕೃತಿಗಳಿಗೆ ಹೋಲಿಸಿದರೆ ಈ ಮೂರು ವಾಚಾಳಿಯಾಗಿವೆ, ನೀತಿಬೋಧೆ ಮಾಡುತ್ತವೆ, ಸ್ವಂತ ಅಭಿಪ್ರಾಯ ಹೇರಿದಂತಿದೆ ಎಂಬ ಕಟುಟೀಕೆಗಳು ಹೊರಬಿದ್ದವು. ನಾರ್ವೆ ದೇಶದ ವಿಖ್ಯಾತ ನಾಟಕಕಾರ ಹೆನ್ರಿಕ್ ಇಬ್ಸನ್ ರಚಿಸಿದ ‘ಎನಿಮಿ ಆಫ್ ದಿ ಪೀಪಲ್’ ರೂಪಾಂತರವಾಗಿ ‘ಗಣಶತ್ರು’ವನ್ನು, ತುಂಬ ನಿರೀಕ್ಷೆ ಇಟ್ಟುಕೊಂಡು ದಿಗ್ದರ್ಶಿಸಿದ್ದ ರೇ ಗೆ ಈ ಸ್ಪಂದನ ನೋವುಂಟುಮಾಡಿತು. ಆಗ, ಗ್ಯಾಸ್ಟನ್ ಅವರನ್ನು ಸಮರ್ಥಿಸಿ, ‘ಗಣಶತ್ರು’ವನ್ನು ಮೆಚ್ಚಿಕೊಂಡು ಬರೆದ ಲೇಖನ ಹಲವು ಮಹತ್ವದ ಒಳನೋಟಗಳನ್ನು ನೀಡುತ್ತದೆ. ಚಿತ್ರದ ಚುಟುಕು ಸಾರಾಂಶ ಇದು:

ಗ್ರಾಮದಲ್ಲಿ ವಿಚಿತ್ರ, ನಿಗೂಢ ಬೇನೆ ತಲೆದೋರಿ ಜನ ಪುತಪುತನೆ ಸಾಯುತ್ತಿದ್ದಾರೆ. ಚಿಕಿತ್ಸೆ ನೀಡಲು ಬಂದ ಯುವ ವೈದ್ಯ ಪೂಜಾಸ್ಥಳ ಒಂದರಲ್ಲಿ ತೀರ್ಥವಾಗಿ ನೀಡುತ್ತಿರುವ ಕಲುಷಿತ ನೀರೇ ಬೇನೆಗೆ ಕಾರಣ ಎಂದು ಕಂಡುಹಿಡಿಯುತ್ತಾನೆ. ಅದನ್ನು ಕೊಡಕೂಡದು ಎಂದು ಸಂಬಂಧಪಟ್ಟವರಲ್ಲಿ ಆಗ್ರಹಿಸುತ್ತಾನೆ. ಆದರೆ ಮುನಿಸಿಪಾಲಿಟಿಯಲ್ಲಿ ಅಧಿಕಾರಿಯಾಗಿರುವ ಸ್ವತಃ ಅವನ ಸೋದರ ಹಾಗೂ ಅಲ್ಲೇ ಕೈಗಾರಿಕೆ ನಡೆಸುತ್ತಿದ್ದ ಒಬ್ಬ ಉದ್ಯಮಿ ಇದಕ್ಕೆ ಪ್ರಬಲ ತಡೆ ಒಡ್ಡುತ್ತಾರೆ. ಸಂವೇದನಾಶಾಲಿ, ಜೀವರಕ್ಷಕ ವೈದ್ಯನನ್ನೇ ಸಮುದಾಯಕ್ಕೆ ಶತ್ರು ಎಂದು ಬಿಂಬಿಸಿ ಜನರನ್ನು ಆತನ ವಿರುದ್ಧ ಎತ್ತಿಕಟ್ಟುತ್ತಾರೆ. ಆಡಳಿತಶಾಹಿ-ಅಧಿಕಾರಶಾಹಿ ಮಾನವತೆಗೆ ಹೀಗೆ ಮಂಕುಹಿಡಿಸುವುದು ಎಷ್ಟೊಂದು ಆಘಾತಕಾರಿ ಎಂಬುದನ್ನು ಚಿತ್ರ ಬಯಲಾಗಿಸುತ್ತದೆ.

ಎರಡನೆ ಮಹಾಯುದ್ಧ ಸಮಯ ರವೀಂದ್ರನಾಥ ಠಾಕೂರರು ಬರೆದ ‘ಸಭ್ಯತಾರ್ ಸಂಕಟ್’ (ನಾಗರಿಕತೆಯ ಸಂಕಷ್ಟ) ಪ್ರಬಂಧದ ಚಿಂತನೆಯನ್ನು ‘ಗಣಶತ್ರು’ ಹೋಲುತ್ತಿದೆ ಎಂಬುದು ಗ್ಯಾಸ್ಟನ್ ಗ್ರಹಿಕೆ. ಎಷ್ಟೆಲ್ಲ ಅವಘಡಗಳು ಸುತ್ತ ಘಟಿಸುತ್ತಿದ್ದರೂ ಮನುಷ್ಯನಲ್ಲಿ, ಮಾನವತ್ವ ದಲ್ಲಿ ನಂಬಿಕೆ ಕಳೆದುಕೊಳ್ಳುವುದು ಪಾಪ ಎಂದು ರವೀಂದ್ರರು ಪ್ರತಿಪಾದಿಸಿದ್ದರು. ಅವರು ಬಿಟ್ಟಲ್ಲಿಂದ ಸತ್ಯಜಿತ್ ಅದೇ ವಾದವನ್ನು ಎತ್ತಿಕೊಂಡು ಮುಂದುವರಿಸಿದ್ದಾರೆ ಎಂಬ ಈ ನಿರೀಕ್ಷಣೆ ಗಮನಾರ್ಹ. ವೀಕ್ಷಕರೊಂದಿಗೆ ನೇರ ಸಂವಾದಕ್ಕಿಳಿಯುವ ನಿರ್ದೇಶಕರನ್ನು ಹತ್ತಿಕ್ಕಲು ನಾವು ಯಾರು? ಯೋಚನೆ, ಚಿಂತನೆಯ ನೇರಾನೇರ ಸಂವಹನಕ್ಕೆ ಆಕ್ಷೇಪಣೆ ಯಾಕೆ ಎಂಬುದು ಅವರ ಪ್ರಶ್ನೆ. ಕನ್ನಡ ಸಂದರ್ಭದಲ್ಲಿ, ನಾವು ಈಗ ಸುತ್ತ ಹೊಂದಿರುವ ವಾತಾವರಣಕ್ಕೆ ಲಂಕೇಶ್, ತೇಜಸ್ವಿ ಮುಂತಾದವರು ಹೇಗೆ ಪ್ರತಿಕ್ರಿಯಿಸುತ್ತಿದ್ದರು, ಡಿಆರ್ ಯಾವ ಅಂಶವನ್ನು ಮೀಮಾಂಸೆಗೊಳಿಸುತ್ತಿದ್ದರು ಎಂದೆಲ್ಲ ಊಹಾತ್ಮಕವಾಗಿ ಚಿಂತಿಸು ತ್ತೇವಲ್ಲವೇ? ಅದೇ ರೀತಿ, ಮಾನವತೆಯ ಅವನತಿ ಹಾಗೂ ಅದನ್ನು ಮೀರಿ ಸ್ವಾಸ್ಥ್ಯ ಕಾಯ್ದು ಕೊಳ್ಳುವುದಕ್ಕೆ ಸಂಬಂಧಪಟ್ಟ ಹಾಗೆ, ಸತ್ಯಜಿತ್‌ರೇ ವಿಚಾರ ಪ್ರಕಟಪಡಿಸಬಾರದೆ ಎಂಬುದು ಬಹುಶಃ ಈ ಒಡನಾಡಿಯ ವಾದ.

ಪ್ರತಿಭೆ, ಮೇಧಾವಿತನವನ್ನು ವಂಶಪಾರಂಪರ್ಯವಾಗಿಯೇ ಪಡೆದವರಾಗಿದ್ದು, ಸುಸಂಸ್ಕೃತ ಪಾಲನೆ-ಪೋಷಣೆಯಲ್ಲಿ ಬೆಳೆದ, ಉನ್ನತ ವಿದ್ಯಾಭ್ಯಾಸ ಪೂರೈಸಿದ, ತಾಯಿಯ ಅಪೇಕ್ಷೆಯಂತೆ ಶಾಂತಿನಿಕೇತನಕ್ಕೂ ಹಾಜರಿ ಹಾಕಿ ಬಂದ ಮಾಣಿಕ್‌ದಾರವರ ಖ್ಯಾತಿ ವರ್ಷದಿಂದ ವರ್ಷಕ್ಕೆ ಬೃಹತ್ ತರಂಗದಂತೆ ವಿಸ್ತಾರಗೊಂಡು, ಬಡವರು-ಬಲ್ಲಿದರು, ಪುರುಷರು-ಸ್ತ್ರೀಯರು, ಮಕ್ಕಳು-ಮುದುಕರು, ಸುಶಿಕ್ಷಿತರು-ಮುಗ್ಧರು, ಬಲವಾನರು-ಅಶಕ್ತರು ಅವರನ್ನು ಆರಾಧಿಸುತ್ತಿದ್ದುದನ್ನು ಕಣ್ಣಾರೆ ಕಂಡಿದ್ದರಷ್ಟೇ ಅಲ್ಲ, ಆ ಬಗೆಯ ಜನಪ್ರೀತಿಯ ಆಳ-ವಿಸ್ತಾರಗಳನ್ನೂ ಊಹಿಸಿಕೊಳ್ಳಬಲ್ಲವರಾಗಿದ್ದರು ಗ್ಯಾಸ್ಟನ್. ಹೀಗಾಗಿ, ಸಮಾನವಾಗಿ ಒಡನಾಡುವ ಒಬ್ಬ ಸ್ನೇಹಿತನಾಗಿ ಅವರಿಗೆ ಸಿಕ್ಕಿದ ಹತ್ತಿರದ ನೋಟವೂ ಅಮೂಲ್ಯ.

ಅದು ಎಷ್ಟೋ ಕತೆ ಹೇಳುತ್ತದೆ. ಒಂದು ನಮೂನೆ ಅವರ ಮಾತಲ್ಲೇ...‘‘ಯಥಾಪ್ರಕಾರ ರವಿವಾರದ ಭೇಟಿಗೆ ಹೋದಾಗ ಒಮ್ಮೆ ಸತ್ಯಜಿತ್ ಅಸಮಾಧಾನದಿಂದ ಇದ್ದುದು ಕಂಡೆ. ಸ್ವಲ್ಪಹೊತ್ತಿಗೆ ಮುಂಚೆಯಷ್ಟೇ ನಿರ್ದೇಶಕರ ಒಂದು ಪಟಾಲಂ ಅವರನ್ನು ಕಂಡುಹೋಗಿದ್ದುದ್ದು ನನಗೂ ಗೊತ್ತಿತ್ತು. ಅವರಲ್ಲಿ ಯಾರೋ ‘ಚಾರುಲತಾ’ದ ಸ್ಕ್ರಿಪ್ಟ್ ಎಗರಿಸಿದ್ದರು. ರೇ ಸಿದ್ಧಪಡಿಸುತ್ತಿದ್ದ ಚಿತ್ರಪಠ್ಯ ಎಷ್ಟು ಕಲಾತ್ಮಕವಾಗಿರುತ್ತಿತ್ತು ಎಂದು ಎಲ್ಲರಿಗೂ ಗೊತ್ತು. ಮುದ್ದಾದ ಕೈಬರಹದಲ್ಲಿ ಬರೆದ ಬಂಗಾಳಿ ಸಂಭಾಷಣೆ, ಪಕ್ಕದಲ್ಲಿ ಸೆಟ್‌ವಿನ್ಯಾಸಕಾರನಿಗಾಗಿ ಇಂಗ್ಲಿಷ್‌ನಲ್ಲಿ ಇರುತ್ತಿದ್ದ ಟಿಪ್ಪಣಿ, ಅಲ್ಲೊಂದು ಇಲ್ಲೊಂದು ರೇಖಾಚಿತ್ರ, ಲಹರಿ ಬಂದ ಕಡೆ ಇರುತ್ತಿದ್ದ ಮ್ಯೂಸಿಕ್ ನೊಟೇಷನ್‌ಗಳ ತುಣುಕುಗಳು...‘ಕದ್ದವರ್ಯಾರು ಎಂದು ತಮಗೆ ಚೆನ್ನಾಗಿ ಗೊತ್ತು; ಆದರೆ ಅವರ ಮಾನ ಹರಾಜು ಹಾಕಲಾರೆ’ ಎಂದವರು ಹೇಳಿದಾಗ ಚಕಿತನಾದೆ.’’

23 ಎಪ್ರಿಲ್ 1992 ಸತ್ಯಜಿತ್ ರೇ ಜಗತ್ತಿಗೆ ವಿದಾಯ ಹೇಳಿದ ದಿನ. ನಾಳೆಗೆ 25 ವರ್ಷ ಕೆಳಗೆ, ಅದೇ ರವಿವಾರ ಭೇಟಿಗೆ ಗ್ಯಾಸ್ಟನ್ ಠಾಕೋ ಠೀಕಾಗಿ ಒಂಬತ್ತು ಗಂಟೆಗೆ ಪ್ರತ್ಯಕ್ಷರಾದಾಗ ಪರಿಸ್ಥಿತಿ ವಿಷಮಿಸಿತ್ತು. ಮಾಣಿಕ್‌ದಾರವರ ಆಜಾನುಬಾಹು ಶರೀರ ಕೃಶಗೊಂಡು ಅವರು ಮಗುವಿನಷ್ಟು ನಾಜೂಕಾಗಿ ಕಂಡಿದ್ದನ್ನು ಫಾದರ್ ದಾಖಲಿಸಿದ್ದಾರೆ. ಒಂದೆರಡು ಮಾತಾಡಿದ ಬಳಿಕ ಬೀಳ್ಕೊಡಲು ಬಂದಾತ ‘‘ನೀವು ಬಂದಿದ್ದು ಒಳ್ಳೆಯದೆನಿಸಿತು’’ ಎಂದು ಜೂನಿಯರ್ ಮಿತ್ರನಿಗೆ ಬಂಗಾಳಿಯಲ್ಲೇ ಹೇಳಿದರು. ಫ್ರೆಂಚ್ ಮಾತೃಭಾಷೆಯಾದರೂ, ಇಷ್ಟಪಟ್ಟು ಬಂಗಾಳಿ ಕಲಿತುಕೊಂಡಿದ್ದ ಇವರಿಗೆ ಬಂಧುವಿನಂತೆ ತನ್ನನ್ನು ಬಂಗಾಳಿಯಲ್ಲಿ ಮಾತನಾಡಿಸುತ್ತಾರೆ ಎಂಬುದು ಪ್ರತೀ ಸಲವೂ ಪುಲಕಗೊಳಿಸುವ ಸಂಗತಿ.

‘ಮ್ಯಾನ್ ಆಫ್ ಗಾಡ್ ಹೂ ಡ್ರೀಮ್ಸ್ ಫಿಲಮ್ಸ್’ ಬಗೆಯ ಶೀರ್ಷಿಕೆಯಲ್ಲಿ ಕೋಲ್ಕೊತಾದ ಪತ್ರಿಕೆಗಳು ಫಾದರ್ ಸಾಧನೆಯನ್ನು ಆಗಿಂದಾಗ್ಗೆ ಕೊಂಡಾಡಿವೆ. ಜೀವನಪೂರ್ತಿ ಅಜ್ಞೇಯವಾದ ನೆಚ್ಚಿಕೊಂಡಿದ್ದ ರೇ, (ದೇವರ ಇರವನ್ನು ನಂಬುವುದೂ ಇಲ್ಲ, ನಿರಾಕರಿಸುವುದೂ ಇಲ್ಲ) ಕಡೆಗಾಲದಲ್ಲಿ ಯಾತರದೋ ಹುಡುಕಾಟದಲ್ಲಿದ್ದರೆ? ‘ಶಾಖಾ ಪ್ರೊ ಶಾಖಾ’ದಲ್ಲಿ ಅವರು ಬಳಸಿದ ಸಂಗೀತ ಇದರ ದಿಕ್ಸೂಚಿಯೆ ಮುಂತಾಗಿರುವ ಈ ‘ದೇವದೂತ’ನ ಇಂಗಿತ ಎಷ್ಟೋ ಸಾವು-ಬದುಕಿನ ಸಾರ್ವಕಾಲಿಕ ಪ್ರಶ್ನೆಗಳನ್ನು ಪುಟಿದೇಳಿಸುವಂಥದು. ಇಷ್ಟೆಲ್ಲ ಗಂಭೀರ ಸಿನೆಮಾ ವಿದ್ಯಾರ್ಥಿ, ಬಾಲಿವುಡ್‌ನತ್ತಲೂ ಆಕರ್ಷಿತರಾಗಿದ್ದರು; ಶೋಲೆ, ತ್ರೀಈಡಿಯಟ್ಸ್‌ನಂತಹ ಸಿನೆಮಾಗಳನ್ನೂ ನೋಡಿ ವಿಮರ್ಶಿಸುತ್ತಿದ್ದರು. ಇದು ಹೇಗೆ ಸಾಧ್ಯ ಎಂದರೆ,

‘‘ಸಾಮಾನ್ಯ ಮನುಷ್ಯನನ್ನು, ಅವನ ಭಾವನೆಯ ಜಗತ್ತನ್ನು ಅರಿತು ಕೊಳ್ಳವುದೂ ತಮಗಿಷ್ಟ ಎಂದು ಉತ್ತರಿಸುತ್ತಿದ್ದರು. ‘ವ್ಯೆಯಿಂಗ್ ಫಿಲಮ್ಸ್, ದಿ ಇಂಡಿಯನ್ ವೇ’ ಎಂಬ ತಮ್ಮ ಇತ್ತೀಚಿನ ಪುಸ್ತಕದಲ್ಲಿ ಅವರು, ಪಶ್ಚಿಮದ ಹಾಗೂ ಭಾರತೀಯ ಪ್ರೇಕ್ಷಕರಲ್ಲಿ ಸಿನೆಮಾ ವೀಕ್ಷಣೆಯ ಸಂವೇದನೆಯೇ ಹೇಗೆ ಭಿನ್ನವಾಗಿರುತ್ತದೆ ಎಂದು ಚರ್ಚಿಸಿರುವುದು ಮಹತ್ವದ್ದು. ಹಿನ್ನೆಲೆ ಗಾಯಕರು ಹಾಡಿದ ಗೀತೆಗಳಿಗೆ ತಕ್ಕಹಾಗೆ ತುಟಿಚಲನೆ ಮಾಡುತ್ತಾ ನಾಯಕ, ನಾಯಕಿ, ಕಥನದಲ್ಲಿ ಇದ್ದಕ್ಕಿದ್ದಂತೆ ಹಾಡಲಾರಂಭಿಸುವುದು ಎಷ್ಟೊಂದು ಕೃತ್ರಿಮ ಹಾಗೂ ತಮಾಷೆಯಾಗಿರುತ್ತದೆ ಎಂದು ಬಲವಾಗಿ ನಂಬಿಯೂ ನಮ್ಮ ಹಿಂದಿ ಸಿನೆಮಾ ಜಗತ್ತಿನ ನವಯುಗದ ನಿರ್ದೇಶಕರು ಹಾಡುಗಳನ್ನು ಕೈಬಿಡಲಾರದ ಇಬ್ಬಂದಿ ನೆನಪಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)