ಫತ್ವಾ ಮತ್ತು ಮಾಲಿನ್ಯ
Pollution (Control and Regulation) Rules, 2000 ಎಂಬ ಕಾನೂನಿನ ಪ್ರಕಾರ ಬೆಳಗ್ಗೆ ಹೊತ್ತು 50 ಡೆಸಿಬೆಲ್ ಮತ್ತು ರಾತ್ರಿಹೊತ್ತು 40 ಡೆಸಿಬೆಲ್‌ಗಿಂತ ಜಾಸ್ತಿ ಸದ್ದು ಮಾಡುವ ಯಾವ ಧ್ವನಿವರ್ಧಕವನ್ನೂ ನಾವು ಬಳಸುವಂತಿಲ್ಲ. ಆಗಸ್ಟ್ 2016ರಲ್ಲಿ ಮುಂಬೈ ಮಹಾನಗರ ಪಾಲಿಕೆ ಸುಮಾರು 740 ಸ್ಥಳಗಳಲ್ಲಿ ಒಂದು ಸಮೀಕ್ಷೆ ನಡೆಸಿ ಈ ಎಲ್ಲಾ ಸ್ಥಳಗಳಲ್ಲಿ ಸಾಮಾನ್ಯ ಸ್ಥರಕ್ಕಿಂತ ಹೆಚ್ಚು ಶಬ್ದ ಮಾಲಿನ್ಯವಿದೆಯೆಂದು ಘೋಷಿಸಿದೆ. ಪರಿಸರ ಇಲಾಖೆ ಮುಂಬೈ ನಗರದ 1200 ಸ್ಥಳಗಳಲ್ಲಿ ಶಬ್ದ ಮಾಲಿನ್ಯ ಮಾಪಕಗಳನ್ನು ಅಳವಡಿಸಿದೆ.
ಶಬ್ದ ಮಾಲಿನ್ಯವಾಗುತ್ತಿರುವುದು ಅಝಾನ್ ಒಂದರಿಂದಲೇ ಇರಬಹುದೇ? ಅಝಾನ್ ನಿಂತುಬಿಟ್ಟರೆ ದೇಶದ ಶಬ್ದಮಾಲಿನ್ಯವನ್ನು ನಾವು ನಿಲ್ಲಿಸಿಬಿಡಬಹುದೇ? ಕೋಲ್ಕತಾ ಮತ್ತು ಮುಂಬೈ ಹೈಕೋರ್ಟುಗಳು ಶಬ್ದ ಮಾಲಿನ್ಯ ನಿಯಂತ್ರಣದ ಬಗ್ಗೆ ಸಾಕಷ್ಟು ತೀರ್ಪುಗಳನ್ನು ನೀಡಿವೆ. ಧ್ವನಿವರ್ಧಕಗಳನ್ನು ನಿಯಂತ್ರಿಸಲೇಬೇಕಾದ ಅಗತ್ಯವಿದೆ. ಇದನ್ನು ಎಲ್ಲಿಂದ ಪ್ರಾರಂಭಿಸುವುದು ಎಂಬುದು ನಿಜವಾದ ಪ್ರಶ್ನೆ. ಸಾಮಾನ್ಯವಾಗಿ ಸಂಗೀತಗಾರರಿಗೆ ಯಾರೂ ಮನೆ ಬಾಡಿಗೆಗೆ ಕೊಡುವುದಿಲ್ಲ. ಇವರು ರಿಯಾಜ್ ಮಾಡುವಾಗ ಎಷ್ಟೋ ಬಾರಿ ಮನೆಯವರೇ ಓಡಿಹೋಗಿರುತ್ತಾರೆ. ಇವರ ಅಕ್ಕ-ಪಕ್ಕದ ಮನೆಯವರು ಈ ಸಂಗೀತಗಾರರು ಒಮ್ಮೆ ಮನೆಬಿಟ್ಟರೆ ಸಾಕೆಂದು ಕಂಡ ಕಂಡ ದೇವರಿಗೆ ಹರಕೆ ಹೊತ್ತಿರುತ್ತಾರೆ. ಸೋನು ನಿಗಮ್‌ರ ನಿದ್ದೆ ಅಝಾನ್‌ನಿಂದ ಮಾತ್ರ ಹಾಳಾಗುತ್ತದೆ ಎಂದಾದರೆ ಇವರು ಖಂಡಿತವಾಗಿಯೂ ಕಿವಿ ಪರೀಕ್ಷೆ ಮಾಡಿಸಿಕೊಳ್ಳಬೇಕಾದ ಅಗತ್ಯವಿದೆ. ಇದು ಒಂದೆಡೆಯಿರಲಿ.
ಕುಲಕ್ಕೆ ಕುಲವೇ ಕೇಡು ಎನ್ನುತ್ತಾರೆ. ಹಾಗೆ ಈ ತಲೆ ತೆಗೆಯಲು, ಕೂದಲು ಬೋಳಿಸಲು ‘ಫತ್ವಾ’ ಹೊರಡಿಸುವ ‘ಘನ ವಿದ್ವಾಂಸ’ರು ಇಸ್ಲಾಂ ಧರ್ಮಕ್ಕೆ ಮಾಡಿದಷ್ಟು ಹಾನಿಯನ್ನು ಯಾರೂ ಮಾಡಿರಲು ಸಾಧ್ಯವಿಲ್ಲ. ನನ್ನ ಸೀಮಿತ ತಿಳುವಳಿಕೆಯ ಪ್ರಕಾರ ‘ಫತ್ವಾ’ ಎಂದರೆ ‘ತಜ್ಞರ ಅಭಿಪ್ರಾಯ’. ಇಸ್ಲಾಂ ಧರ್ಮವನ್ನು ನಿಷ್ಠೆಯಿಂದ ಆಚರಿಸಿ ಬೋಧನೆ ಮಾಡುವ ವಿದ್ವಾಂಸರು ಒಂದು ವಿಚಾರದಲ್ಲಿ ಧರ್ಮ ಏನನ್ನು ಹೇಳುತ್ತದೆ, ಯಾವುದು ಧರ್ಮಸಮ್ಮತ ಮತ್ತು ಯಾವುದಲ್ಲ ಎಂದು ವ್ಯಕ್ತಪಡಿಸುವ ಅಭಿಪ್ರಾಯವೇ ಫತ್ವಾ. ಹಾಗಾಗಿ ಇದು ಆಜ್ಞೆಯಲ್ಲ, ಅಥವಾ ಶಿಕ್ಷೆಯ ಘೋಷಣೆಯಲ್ಲ.
ಇವತ್ತು ಹೊರಗಿನವರಿಗೆ ಮಾತ್ರವಲ್ಲ ಅರ್ಧಂಬರ್ಧ ತಿಳಿದುಕೊಂಡ ಮುಸ್ಲಿಮರಿಗೂ ಇಸ್ಲಾಂ ಎಂದರೆ ಫತ್ವಾ ಮಾತ್ರವೇನೋ ಎಂಬಂತಾಗಿದೆ. ಶಿಕ್ಷಣಕ್ಕೆ ಪ್ರಾಧಾನ್ಯ (ಪವಿತ್ರ ಕುರ್‌ಆನ್‌ನ ಮೊದಲಕ್ಷರವೇ ‘ಇಕ್ರಾ’- ಇದರರ್ಥ ಓದು, ತಿಳಿದುಕೋ ಎಂದು) ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕು, ಬಡ್ಡಿ ನಿಷೇಧ, ಮದ್ಯಪಾನ ನಿಷೇಧ, ವರ್ಣಸಮಾನತೆ, ವಿಶ್ವಭ್ರಾತೃತ್ವ, ವಿವಾಹ ವಿಚ್ಛೇದನದ ಹಕ್ಕು ಇನ್ನೂ ಮುಂತಾದ ಉದಾತ್ತ ಆದರ್ಶಗಳನ್ನು ಸಾರುವ ಧರ್ಮವನ್ನು ಒಂದು ಬಾಲಿಶವಾದ ಫತ್ವಾ ಮಟ್ಟಕ್ಕೆ ಇಳಿಸುವ ಇವರ ಮೇಲೇ ಒಂದು ಫತ್ವಾ ಹೊರಡಿಸಬೇಕಿದೆ. ನಮ್ಮ ದೇಶದಲ್ಲಿ ಸಂವಿಧಾನವೇ ಶ್ರೇಷ್ಠ. ಅದರ ಮುಂದೆ ಎಲ್ಲ ಧರ್ಮಗುರುಗಳೂ ತಲೆಬಾಗಬೇಕಿದೆ. ಒಂದು ವೇಳೆ ಸೋನು ನಿಗಮ್ ಹೇಳಿದ್ದು ಕಾನೂನಿಗೆ ವಿರುದ್ಧವಾಗಿದ್ದರೆ ಧರ್ಮಕ್ಕೆ ಅಪಮಾನವಾಗುವಂತಿದ್ದರೆ ನ್ಯಾಯಾಲಯಕ್ಕೆ ಹೋಗಬೇಕಲ್ಲದೇ ಇವರು ಕುಳಿತಲ್ಲಿ ಫತ್ವಾ ಹೊರಡಿಸಲು ಇದೇನು ಕತ್ತಲೆ ಯುಗವೇ? ಇಸ್ಲಾಂನಲ್ಲಿ ‘ದಾವಾ’ ಎಂಬ ವಿಶಿಷ್ಟ ಪರಿಕಲ್ಪನೆಯಿದೆ.
ಇಸ್ಲಾಂನ ಪವಿತ್ರ ಆದರ್ಶಗಳನ್ನು ಪರಧರ್ಮದವರಿಗೆ ಹಾಗೆಯೇ ಇಸ್ಲಾಂ ಧರ್ಮದವರಿಗೆ ತಿಳಿಹೇಳುವುದು ಪ್ರತಿಯೊಬ್ಬ ಮುಸಲ್ಮಾನನ ಕರ್ತವ್ಯ ಎಂದು ಪವಿತ್ರ ಕುರ್‌ಆನ್ ಹೇಳುತ್ತದೆ. ಯಾರೇ ಇಸ್ಲಾಂ ಬಗ್ಗೆ ತಿಳಿಯದೇ ಏನೂ ಒಂದು ಹೇಳಿದರೆ ದಾವಾ ಮುಖಾಂತರ ಇಸ್ಲಾಂ ಬಗ್ಗೆ ಅವರಲ್ಲಿ ತಿಳುವಳಿಕೆ ಮೂಡಿಸುವುದು ಬಿಟ್ಟು ಬಾಯಿಗೆ ಬಂದಂತೆ ಫತ್ವಾ ಹೊರಡಿಸಿದರೆ ಇಸ್ಲಾಂಗೆ ಅಪಚಾರ ಮಾಡಿದಂತಲ್ಲವೇ? ತಲೆಬೋಳಿಸಿಕೊಂಡು ಬಾಲಿಶತನ ಮೆರೆದ ಸೋನು ನಿಗಮ್‌ಗೂ ಇಸ್ಲಾಂ ಬಗ್ಗೆ ಅರಿವು ಮೂಡಿಸದೆ ಪ್ರಶ್ನಿಸಿದವರಿಗೆಲ್ಲ ಫತ್ವಾ ಹೊರಡಿಸಿದವರಿಗೂ ಏನೂ ವ್ಯತ್ಯಾಸವಿದ್ದಂತಿಲ್ಲ. ಅಂದ ಹಾಗೆ...
ಅಝಾನ್ ಪ್ರಾರ್ಥನೆಯ ಒಂದು ಅವಿಭಾಜ್ಯ ಭಾಗವಾಗಿರಬಹುದು ಆದರೆ ಧ್ವನಿವರ್ಧಕವಲ್ಲ. ಈ ದೇಶದಲ್ಲಿ ಯಾವ ಧರ್ಮವೂ ಮೈಕು ಹಿಡಿದು ಪ್ರಚಾರ ಮಾಡಿ ಪ್ರವರ್ಧಮಾನಕ್ಕೆ ಬಂದಿಲ್ಲ. ಅಥವಾ ಮೈಕು ಸಿಗದೆ ಯಾವ ಧರ್ಮ ಪ್ರಚಾರಕ್ಕೂ ಅಡ್ಡಿಯಾಗಿಲ್ಲ. ಈ ಫತ್ವಾ ಹೊರಡಿಸುವ ಯಾವುದೊ ಮೂಲೆಯಲ್ಲಿರುವ ಮೌಲ್ವಿಯೊಬ್ಬ ಇಪ್ಪತ್ತೈದು ಕೋಟಿ ಮುಸ್ಲಿಮರ ಪ್ರತಿನಿಧಿಯೇ ಅಥವಾ ಅವರ ಆಶಯಗಳ ಪ್ರತೀಕವೇ? ಇದು ಇಸ್ಲಾಂ ಧರ್ಮಕ್ಕೆ ಮಾತ್ರ ಅನ್ವಯಿಸುವ ಮಾತಲ್ಲ.
‘‘ಅಸ್ಪೃಶ್ಯತೆ ಆಚರಿಸಿದರೆ ನಮ್ಮ ಜಾತಿಯಿಂದ ಹೊರಹಾಕುತ್ತೇವೆ’’ ‘‘ಮೇಲು ಕೀಳು ಆಚರಿಸಿದರೆ ಪಾಪ ಬರುತ್ತದೆ’’ ‘‘ಗಂಗಾ ಯಮುನಾ ನದಿಯನ್ನು ಕಲುಷಿತಮಾಡಿದರೆ ಮಾತೃಹತ್ಯಾ ದೋಷ ಬರುತ್ತದೆ’’ ಎಂದು ಒಬ್ಬರೇ ಒಬ್ಬ ಹಿಂದೂ ಧರ್ಮಗುರುಗಳು ಒಂದೇ ಬಾರಿ ಒಂದು ಕಠಿಣ ಫರ್ಮಾನು ಹೊರಡಿಸಿದರೆ ಹಿಂದೂ ಧರ್ಮ ವಿಶ್ವಮಾನ್ಯವಾಗುತ್ತದೆ. ಬೇರೆಯವರ ಫತ್ವಾಗಳನ್ನು ನೋಡಿ ಗೇಲಿಮಾಡುವವರು ನಮ್ಮ ತಟ್ಟೆಯಲ್ಲಿ ಏನು ಬಿದ್ದಿದೆ ಎಂದು ನೋಡಿಕೊಳ್ಳುವುದೇಯಿಲ್ಲ.
ಕೊನೆಯ ಮಾತು..
ಬಾಲಿಶವಾದ ಹೇಳಿಕೆಗೆ ಫತ್ವಾ ಸ್ವರೂಪ ಕೊಡುವವರನ್ನು ವಿರೋಧಿಸುವವರು, ಹಸಿರು ನ್ಯಾಯಾಧಿಕರಣಕ್ಕೇ ಅಪಮಾನಿಸಿರುವ ಶ್ರೀ ರವಿಶಂಕರರ ಬಗ್ಗೆ ಏನೊಂದೂ ಹೇಳುವುದಿಲ್ಲ. ಪವಿತ್ರ ಯಮುನಾ ನದಿಯನ್ನು ಕಲುಷಿತ ಮಾಡಿದ್ದಲ್ಲದೇ ದೇಶದ ಕಾನೂನಿಗೇ ಗೌರವಿಸದವರು ಯಾವ ಧರ್ಮದವರಾದರೂ ಸಮಾಜ ವಿರೋಧಿಗಳಲ್ಲವೇ? ಅದೇ ಒಬ್ಬ ಮೌಲ್ವಿ ನ್ಯಾಯಾಲಯಕ್ಕೆ ಹೀಗೆ ಮಾತಾಡಿದ್ದರೆ ಇಷ್ಟು ಹೊತ್ತಿಗೆ ಏನಾಗಿರುತ್ತಿತ್ತು? ಇದನ್ನೂ ಸ್ವಲ್ಪನಾವು ಯೋಚಿಸಬೇಡವೇ? ಸೋನು ನಿಗಮ್ ಗೆ ಫತ್ವಾ ಹೊರಡಿಸಿದರೆ ತಪ್ಪು, ನ್ಯಾಯಾಲಯಕ್ಕೇ ಫತ್ವಾ ಹೊರಡಿಸಿದರೆ ಸರಿಯೇ? ಹೀಗೆ ಕೇಳಿದರೆ ಸಾಕಷ್ಟು ಜನರಿಗೆ ಶಬ್ದ ಮಾಲಿನ್ಯ ವೆನಿಸುವುದು ಸಹಜ!