ಈ ದೇಶದಲ್ಲೇಕೆ ಮಹಿಳೆ ಶಾಂತಿಯಿಂದ ಬದುಕಲು ಸಾಧ್ಯವಿಲ್ಲ:ಸುಪ್ರೀಂ ಪ್ರಶ್ನೆ
ಹೊಸದಿಲ್ಲಿ,ಎ.23: ಈ ದೇಶದಲ್ಲೇಕೆ ಮಹಿಳೆ ಶಾಂತಿಯಿಂದ ಬದುಕಲು ಸಾಧ್ಯವಿಲ್ಲ ಎಂದು ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧ ಕೃತ್ಯಗಳಿಂದ ಕೆರಳಿರುವ ಸರ್ವೋಚ್ಚ ನ್ಯಾಯಾಲಯವು ಪ್ರಶ್ನಿಸಿದೆ.
16ರ ಹರೆಯದ ಬಾಲಕಿಯನ್ನು ಚುಡಾಯಿಸಿ, ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣನಾಗಿದ್ದ ಆರೋಪದಲ್ಲಿ ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯವು ತನಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿರುವುದನ್ನು ಪ್ರಶ್ನಿಸಿ ವ್ಯಕ್ತಿಯೋರ್ವ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಸಂದರ್ಭ ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಪೀಠವು ಈ ಪ್ರಶ್ನೆಯನ್ನು ಕೇಳಿತು. ಮೇಲ್ಮನವಿಗೆ ಸಂಬಂಧಿಸಿದಂತೆ ತನ್ನ ತೀರ್ಪನ್ನು ನ್ಯಾಯಾಲಯವು ಕಾಯ್ದಿರಿಸಿದೆ.
ಮಹಿಳೆ ತನ್ನದೇ ಆದ ಆಯ್ಕೆಯ ಅಧಿಕಾರ ಹೊಂದಿರುವುದರಿಂದ ಯಾರನ್ನಾದರೂ ಪ್ರೀತಿಸುವಂತೆ ಆಕೆಯನ್ನು ಬಲವಂತಗೊಳಿಸುವಂತಿಲ್ಲ ಎಂದು ಪ್ರತಿಪಾದಿಸಿದ ಪೀಠವು, ವ್ಯಕ್ತಿಯೋರ್ವನನ್ನು ಪ್ರೇಮಿಸಬೇಕೆ ಬೇಡವೇ ಎನ್ನುವುದು ಮಹಿಳೆಯ ಆಯ್ಕೆಯಾಗಿದೆ. ಯಾರೂ ಆಕೆಯನ್ನು ಬಲವಂತಗೊಳಿಸುವಂತಿಲ್ಲ. ಪ್ರೇಮಕ್ಕೊಂದು ಪರಿಕಲ್ಪನೆಯಿದೆ ಮತ್ತು ವ್ಯಕ್ತಿ ಅದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿತು.
ವಿಚಾರಣೆ ಸಂದರ್ಭ ಮೃತ ಬಾಲಕಿಯ ಮರಣ ಹೇಳಿಕೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ ಆರೋಪಿ ಪರ ವಕೀಲರು,ಆಕೆಯ ದೇಹದ ಶೇ.80ರಷ್ಟು ಭಾಗ ಸುಟ್ಟುಹೋಗಿತ್ತು. ಆಕೆಗೆ ಮಾತನಾಡಲು ಸಾಧ್ಯವಿರಲಿಲ್ಲ. ಆಕೆಯ ಎರಡೂ ಕೈಗಳು ಸುಟ್ಟುಹೋಗಿದ್ದವು. ಆಕೆ ಏನನ್ನಾದರೂ ಹೇಳುವ ಅಥವಾ ಬರೆಯುವ ಸ್ಥಿತಿಯಲ್ಲಿರಲಿಲ್ಲ ಎಂದು ವಾದಿಸಿದರು.
ಇದನ್ನು ತಳ್ಳಿಹಾಕಿದ ನ್ಯಾಯಾಲಯವು ಬಾಲಕಿಯ ಮರಣ ಹೇಳಿಕೆಯಂತೆ ಆರೋಪಿಯು ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶವನ್ನು ಸೃಷ್ಟಿಸಿದ್ದ ಎಂದು ಹೇಳಿತು.
2010,ಜುಲೈನಲ್ಲಿ ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿತ್ತಾದರೂ ರಾಜ್ಯ ಸರಕಾರವು ಅದರ ವಿರುದ್ಧ ಉಚ್ಚನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು ಮತ್ತು ಅಲ್ಲಿ ಆತನಿಗೆ ಶಿಕ್ಷೆಯಾಗಿತ್ತು.
ಆರೋಪಿಯ ಚುಡಾವಣೆ ಮತ್ತು ಬೆದರಿಕೆಯಿಂದ ಬೇಸತ್ತಿದ್ದ ಬಾಲಕಿ 2008, ಜುಲೈನಲ್ಲಿ ಮೈಗೆ ಬೆಂಕಿ ಹಚ್ಚಿಕೊಡು ಆತ್ಮಹತ್ಯೆ ಮಾಡಿಕೊಂಡಿದ್ದಳು.