ಈ ಹೊತ್ತಿನ ಹೊತ್ತಿಗೆ
ಗುಜರಾತ್ ಫೈಲುಗಳು ಅಗೆದಷ್ಟೂ ಆಳ...
ಗುಜರಾತ್ ಫೈಲುಗಳೆಂದರೆ ಅಗೆದಷ್ಟೂ ಆಳ. ಮುಟ್ಟಿದಲ್ಲಿ ಗಾಯಗಳು. ಕಾಲಿಟ್ಟಲ್ಲಿ ಸತ್ಯದ ತಲೆಬುರುಡೆಗಳು. ಸಂವಿಧಾನದ ಅಸ್ಥಿಪಂಜರಗಳು. ಪತ್ರಕರ್ತನೊಬ್ಬ ಬರೆದಷ್ಟೂ ಮುಗಿಯದ ರುದ್ರ ಕಥಾನಕ ಅದು. ಪೊಲೀಸ್ ಅಧಿಕಾರಿಗಳು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರು, ಸಾಹಿತಿಗಳು, ಚಿಂತಕರು ಗುಜರಾತ್ ಹತ್ಯಾಕಾಂಡದ ಕುರಿತಂತೆ ಬರೆದುದಕ್ಕೆ ಲೆಕ್ಕವಿಲ್ಲ. ಆದರೆ ಬರೆದು ಮುಗಿದಿದೆ ಎನ್ನುವಂತೆಯೂ ಇಲ್ಲ. ಇದೀಗ ಇನ್ನೊಂದು ಗುಜರಾತ್ ಫೈಲ್ ಖ್ಯಾತ ಪತ್ರಕರ್ತೆ, ಅಂಕಣಗಾರ್ತಿ ರಾಣಾ ಅಯ್ಯೂಬ್ ಮೂಲಕ ತೆರೆದಿದೆ.
ಲಂಕೇಶ್ ಪ್ರಕಾಶನ ಈ ಕೃತಿಯನ್ನು ಹೊರಗೆ ತಂದಿದೆ. ಹಿರಿಯ ಬರಹಗಾರರಾಗಿರುವ ಶ್ರೀನಿವಾಸ್ ಕಾರ್ಕಳ ಅವರು ಇದನ್ನು ಕನ್ನಡಕ್ಕಿಳಿಸಿದ್ದಾರೆ. ‘ಗುಜರಾತ್ ಫೈಲುಗಳು-ಮುಚ್ಚಿ ಹಾಕುವ ಹುನ್ನಾರದ ಒಳನೋಟಗಳು’’ ಹೆಸರೇ ತಿಳಿಸುವಂತೆ ಗುಜರಾತ್ ಗಲಭೆಗಳು, ನಕಲಿ ಎನ್‌ಕೌಂಟರ್‌ಗಲು ಮತ್ತು ಬೆಚ್ಚಿ ಬೀಳಿಸುವಂತಹ ಸತ್ಯ ಗಳನ್ನು ಮುನ್ನೆಲೆಗೆ ತಂದ, ಗೃಹಮಂತ್ರಿ ಹರೇನ್ ಪಾಂಡ್ಯನ ಹತ್ಯೆ ಇತ್ಯಾದಿಗಳ ಬಗ್ಗೆ ಪತ್ರಕರ್ತೆ ರಾಣಾ ಅಯ್ಯೂಬ್ ಎಂಟು ತಿಂಗಳ ಕಾಲ ಮಾರುವೇಷದಲ್ಲಿ ನಡೆಸಿದ ಕಾರ್ಯಾಚರಣೆಯ ಕಥಾನಕ.
ಖಾದಿ ಮತ್ತು ಖಾಕಿ ಜೊತೆ ಸೇರಿದರೆ ಮಾನವತೆಯ ಮೇಲೆ ಅದೆಷ್ಟು ಬರ್ಬರವಾದ ಹಲ್ಲೆಗಳು ನಡೆಯ ಬಹುದು ಎನ್ನುವುದನ್ನು ರಾಣಾ ಅಯ್ಯೂಬ್ ಅವರು ತಮ್ಮ ಕಾರ್ಯಾಚರಣೆಯಲ್ಲಿ ಬಹಿರಂಗಪಡಿಸಿದ್ದಾರೆ. ಅವರು ವಿವಿಧ ಅಧಿಕಾರಿಗಳನ್ನು ರಾಜಕಾರಣಿಗಳನ್ನು ಸಂದರ್ಶನ ಮಾಡಿದಾಗ ರಹಸ್ಯವಾಗಿ ದಾಖಲಿಸಲಾದ ವೀಡಿಯೊಗಳೇ ಈ ರಕ್ತಸಿಕ್ತ ಫೈಲುಗಳ ಪುಟಗಳನ್ನು ನಮಗೆ ತೆರೆದಿಡುತ್ತದೆ.
‘ಒಬ್ಬ ಒಳ್ಳೆಯ ಪತ್ರಕರ್ತ ಯಾವತ್ತೂ ವರದಿಯಿಂದ ಕಳಚಿಕೊಂಡು ವ್ಯಾವಹಾರಿಕವಾಗಿ ವರ್ತಿಸುವ ಕಲೆಯನ್ನು ರೂಢಿಸಿಕೊಂಡಿರಬೇಕು’ ಎನ್ನುವುದು ಎಲ್ಲ ಸಂಪಾದಕೀಯ ವಿಭಾಗಗಳಲ್ಲೂ ವರದಿಗಾರರಿಗೆ ಕಲಿಸುವ ಮೊದಲ ಪಾಠ. ಆದರೆ ಆ ಪಾಠವನ್ನು, ಆ ಕಲೆಯನ್ನು ಮೈಗೂಡಿಸಲು ಸಾಧ್ಯವಾಗದ ಕಾರಣದಿಂದಲೇ, ಇಂತಹದೊಂದು ಮಾನವೀಯ ವರದಿಯನ್ನು ವೈಯಕ್ತಿಕ ಆಸಕ್ತಿಯ ಮೇಲೆ ರಾಣಾ ಅಯ್ಯೂಬ್‌ಗೆ ಬಹಿರಂಗಪಡಿ ಸಲು ಸಾಧ್ಯವಾಗಿದೆ. ಇದು ಕೇವಲ ವರದಿಯಲ್ಲ, ಒಂದು ರೀತಿಯ ಪಯಣ. ಭೂಗತವಾಗಿರುವ ಸತ್ಯದ ಹೆಜ್ಜೆಗುರುತುಗಳನ್ನು ಹುಡು ಕುತ್ತಾ ಹೊರಡುವ ಪತ್ರಕರ್ತೆಯ ಸಾಹಸ ಯಾತ್ರೆ. ಹೋರಾಟ. ಆಕೆಯ ಒಳಗಿನ ಸಂಕಟ. 186 ಪುಟಗಳ ಈ ಕೃತಿಯ ಮುಖಬೆಲೆ 150 ರೂಪಾಯಿ. ಆಸಕ್ತರು 080-26676427 ದೂರವಾಣಿ ಯನ್ನು ಸಂಪರ್ಕಿಸಬಹುದು.