ಓ.. ಮೆಣಸೇ..
ಅಧಿಕಾರದಲ್ಲಿರುವಾಗ ಬಿಜೆಪಿ ನಾಯಕರು ವೌನದ ಕಲೆಯನ್ನು ಅಭ್ಯಾಸ ಮಾಡಿಕೊಳ್ಳಬೇಕು
-ನರೇಂದ್ರ ಮೋದಿ, ಪ್ರಧಾನಿ
ಕಲೆ ಮತ್ತು ಕೊಲೆ ಎರಡನ್ನೂ ಜೀರ್ಣಿಸಿಕೊಂಡವರ ಅನುಭವದ ಮಾತು.
---------------------
ಉ.ಪ್ರ.ದಲ್ಲಿ ಜನ ಬಿಜೆಪಿ ಮಾತು ಕೇಳಿ ಮೂರ್ಖರಾದರು
-ಮುಲಾಯಂ ಸಿಂಗ್ ಯಾದವ್, ಎಸ್ಪಿ ಮುಖ್ಯಸ್ಥ
ಅಪ್ಪ-ಮಕ್ಕಳ ಮೂರ್ಖತನಕ್ಕೆ ಬಲಿಯಾದರು ಎಂದರೆ ಅರ್ಥಪೂರ್ಣ.
--------------------
ಮನುಷ್ಯರಿಗಿಂತ ಹೆಚ್ಚಿನ ವೌಲ್ಯ ಕಾಮಧೇನು, ಕಲ್ಪವೃಕ್ಷಕ್ಕಿದೆ
-ಶೋಭಾ ಕರಂದ್ಲಾಜೆ, ಸಂಸದೆ
ತಮಗೆ ಮತ ಹಾಕುವ ಬದಲು ಕಲ್ಪವೃಕ್ಷಕ್ಕೆ ಹಾಕಿದ್ದರೆ ಹತ್ತು ಎಳ ನೀರಾದರೂ ಸಿಗುತ್ತಿತ್ತು ಎನ್ನುವುದು ಮತದಾರರ ಅನಿಸಿಕೆ.
---------------------
ಹಿಂದುಳಿದ ಸಮಾಜದ ಉನ್ನತಿಯಾಗದೆ ಹಿಂದೂ ಸಮಾಜ ಉನ್ನತಿಯಾಗದು
-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಹಿಂದೂ ಸಮಾಜಕ್ಕೆ ಮೀಸಲಾತಿ ನೀಡಬೇಕು ಎನ್ನುವುದನ್ನು ಈಗಲಾದರೂ ಒಪ್ಪಿಕೊಳ್ಳುತ್ತೀರಾ?
---------------------
ಸಕ್ಕರೆ ಕಾರ್ಖಾನೆಗಳು ಹೆಂಡದ ಕಾರ್ಖಾನೆಗಳ ಮುಖವಾಡಗಳಾಗಿವೆ
-ಯು.ಟಿ.ಖಾದರ್, ಸಚಿವ
ರಾಶಿ ಬಿದ್ದ ಕಬ್ಬು ಕೊಳೆಯುತ್ತಿರುವುದರಿಂದ ಅದನ್ನೇ ಕಳ್ಳಭಟ್ಟಿ ಸಾರಾಯಿಗೆ ಬಳಸಿರಬೇಕು.
---------------------
ಯಡಿಯೂರಪ್ಪ ಮಾತು ಕೇಳಿ ಎಸ್.ಎಂ.ಕೃಷ್ಣ ಹಾಳಾದ್ರು
-ರಿಝ್ವನ್ ಅರ್ಷದ್, ವಿಧಾನ ಪರಿಷತ್ ಸದಸ್ಯ
ಕಾಂಗ್ರೆಸ್ ಬಚಾವಾಯಿತು ಬಿಡಿ.
---------------------
ಪಾಕಿಸ್ತಾನಿಯರಿಂದ ಇಸ್ಲಾಮಿಗೆ ಕೆಟ್ಟ ಹೆಸರು
-ಮಲಾಲಾ ಯೂಸುಫ್‌ಝಾಯಿ, ನೊಬೆಲ್ ಪುರಸ್ಕೃತೆ
ಇಸ್ಲಾಮಿನಿಂದ ತಮಗೆ ಕೆಟ್ಟ ಹೆಸರು ಬಂದ ಬಗ್ಗೆ ಆರೋಪಗಳಿವೆಯೇ?
---------------------
2019ರ ಲೋಕಸಭಾ ಚುನಾವಣೆಯಲ್ಲಿ ಜಾತ್ಯತೀತ ಶಕ್ತಿಗಳ ಜತೆ ಕೈಜೋಡಿಸಲು ಸದಾ ಸಿದ್ಧ್ದ
-ಮಣಿಶಂಕರ್ ಅಯ್ಯರ್, ಕಾಂಗ್ರೆಸ್ ಮುಖಂಡ
ಮೊದಲು ಕತ್ತರಿಸಲ್ಪಟ್ಟ ತಮ್ಮ ಕೈಗಳನ್ನು ಸರ್ಜರಿ ಮೂಲಕ ತಮ್ಮ ತೋಳಿಗೆ ಜೋಡಿಸಿಕೊಳ್ಳಿ.
---------------------
ಮುಂಬರುವ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾವ ಶಕ್ತಿಗೂ ಸಾಧ್ಯವಿಲ್ಲ
-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ತಡೆಯಲು ನೀವು ಮತ್ತು ಈಶ್ವರಪ್ಪ ಇಬ್ಬರು ಸಾಕು.
---------------------
ಸಂಶೋಧನೆಗಳಾಗದೆ ಯಾವುದೇ ಹೊಸ ಯೋಜನೆಗಳನ್ನು ಹುಟ್ಟುಹಾಕಲು ಸಾಧ್ಯವಿಲ್ಲ
-ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ
ಪತಂಜಲಿಯ ವಿಜ್ಞಾನಿಗಳಿಗೆ ಇನ್ನಷ್ಟು ಅನುದಾನ ಬಿಡುಗಡೆ ಮಾಡಿ.
---------------------
ಪಕ್ಷ ವಿರೋಧಿ ಹೇಳಿಕೆ ನೀಡುತ್ತಿರುವ ಹಿರಿಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು
-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ
ತಮ್ಮ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದೇ ಅವರ ದೊಡ್ಡ ಆರೋಪ.
---------------------
ಕೆಪಿಸಿಸಿ ಅಧ್ಯಕ್ಷನಾಗಬೇಕೆಂದು ನಾನೇನು ಅರ್ಜಿ ಹಾಕಿ ಕುಳಿತಿಲ್ಲ
-ಡಿ.ಕೆ.ಶಿವಕುಮಾರ್, ಸಚಿವ
ಸೂಟ್‌ಕೇಸ್ ಹಿಡಿದು ಕೂತಿದ್ದೀರಿ ಎಂದು ಸುದ್ದಿ
---------------------
ತ್ರಿವಳಿ ತಲಾಖ್ ದ್ರೌಪದಿ ವಸ್ತ್ರಾಪಹರಣಕ್ಕೆ ಸಮ
-ಆದಿತ್ಯನಾಥ್, ಉ.ಪ.ಮುಖ್ಯಮಂತ್ರಿ
ಅದಕ್ಕೇ ಇರಬೇಕು, ಮೋದಿಯವರು ಇನ್ನೂ ತಮ್ಮ ಪತ್ನಿಗೆ ತಲಾಖ್ ನೀಡದೇ ಇರುವುದು.
---------------------
ಕೆಪಿಸಿಸಿ ಅಧ್ಯಕ್ಷ ಹುದ್ದೆ ಖಾಲಿ ಇಲ್ಲ
-ದಿಗ್ವಿಜಯ್ ಸಿಂಗ್, ಎಐಸಿಸಿ ಪ್ರಧಾನ ಕಾರ್ಯದರ್ಶಿ
ಖಾಲಿ ಇರುವುದು ಕೆಪಿಸಿಸಿಯ ಹಾಲಿ ಅಧ್ಯಕ್ಷರ ತಲೆ ಮಾತ್ರ.
---------------------
ತಮಿಳು ನಾಡಿನಲ್ಲಿ ಸ್ಥಿರ ಸರಕಾರ ಇರಬೇಕೆಂದು ಕೇಂದ್ರ ಸರಕಾರ ಬಯಸುತ್ತದೆ
-ವೆಂಕಯ್ಯ ನಾಯ್ಡು, ಕೇಂದ್ರ ಸಚಿವ
ಅದಕ್ಕಾಗಿ ಇರುವ ಸರಕಾರವನ್ನು ಅಸ್ಥಿರ ಮಾಡುತ್ತಿದ್ದೀರಾ?
---------------------
ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧ
-ಆಸ್ಕರ್ ಫೆರ್ನಾಂಡಿಸ್, ಕಾಂಗ್ರೆಸ್ ಮುಖಂಡ
ಚುನಾವಣೆಗೆ ಸ್ಪರ್ಧಿಸುವವರ ಸಮಸ್ಯೆ ತಾನೇ ಅದು.
---------------------
ಕಾರ್ಕಳದಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭಿಸಿದ್ದೇನೆ
-ಸುನಿಲ್ ಕುಮಾರ್, ಶಾಸಕ
ಅದು ಶಕೆ ಅಲ್ಲ, ಬೇಸಿಗೆ ಕಾಲದ ಶೆಕೆ.
---------------------
ಕೆಪಿಸಿಸಿ ಅಧ್ಯಕ್ಷನಾಗುವ ಅರ್ಹತೆ, ಅನುಭವ ನನಗಿದೆ
-ಕೆ.ಎಚ್.ಮುನಿಯಪ್ಪ, ಕೇಂದ್ರ ಮಾಜಿ ಸಚಿವ
ನಿಮ್ಮ ಅರ್ಹತೆ ಮತ್ತು ಅನುಭವ ಎಷ್ಟು ಸೂಟ್‌ಕೇಸ್ ಬೆಲೆಬಾಳುತ್ತದೆ ಎನ್ನುವುದನ್ನೂ ಹೇಳಿ.
---------------------
ನನ್ನಲ್ಲಿ ಹಣವಿರಲಿಲ್ಲ, ಹಾಗಾಗಿ ಚುನಾವಣೆಯಲ್ಲಿ ಸೋತೆ
-ಶ್ರೀನಿವಾಸ ಪ್ರಸಾದ್, ಮಾಜಿ ಸಚಿವ
ಮತ್ತೆ ಯಾರ ಹಣವನ್ನು ನಂಬಿ ಚುನಾವಣೆಗೆ ನಿಂತಿರಿ?
---------------------
ಅಧಿಕಾರಿಗಳು ಹೌದಪ್ಪಗಳಾಗುವ ಮೂಲಕ ಆತ್ಮವಂಚನೆ ಮಾಡಿಕೊಳ್ಳಬಾರದು
-ರಾಜನಾಥ ಸಿಂಗ್, ಕೇಂದ್ರ ಸಚಿವ
ಇಲ್ಲಪ್ಪ ಎಂದು ಹೇಳಿ ಆತ್ಮವಂಚನೆ ಮಾಡಿಕೊಳ್ಳಬಹುದೇ?
---------------------
ಸುಂದರವಾದ ಜಗತ್ತನ್ನು ಶಾಂತವಾಗಿಟ್ಟುಕೊಳ್ಳಿ
-ಸೋನು ನಿಗಮ್, ಗಾಯಕ
ನಿಮಂಥವರು ಅದನ್ನು ಕೆಡಿಸುವುದಕ್ಕೋಸ್ಕರವಾದರೂ...
---------------------
ನಾನು ಯಾರಿಗೂ ಹೆದರುವವನಲ್ಲ
-ಕೆ.ಎಸ್.ಈಶ್ವರಪ್ಪ, ವಿ.ಪ.ವಿ.ನಾಯಕ
ಉಪಚುನಾವಣೆಯ ಫಲಿತಾಂಶದ ಧೈರ್ಯ.
---------------------
ಇತರರಿಗೆ ಹೋಲಿಸಿದರೆ ಧರ್ಮದ ವಿಚಾರದಲ್ಲಿ ಹಿಂದಿ ಚಿತ್ರೋದ್ಯಮ ಅತ್ಯಂತ ಜಾತ್ಯತೀತ
-ರವೀನಾ ಟಂಡನ್, ಬಾಲಿವುಡ್ ನಟಿ
ಎಲ್ಲವೂ ನಟನೆಗಷ್ಟೇ ಸೀಮಿತವಾದರೆ ಹೇಗೇ?