ಮಂಗಳೂರಿನಲ್ಲಿ ಭಯ ಉತ್ಪಾದನೆಯೇ ಉದ್ಯಮ!
ಮಂಗಳೂರು ಮೂಲದ ಬಜರಂಗದಳ ಮುಖಂಡ ಶರಣ್ ಪಂಪ್ವೆಲ್ಗೆ ತಮ್ಮ ಅದ್ಭುತ ವ್ಯವಹಾರ ಚಾಣಾಕ್ಷತೆ ಬಗ್ಗೆ ಅಪಾರ ನಂಬಿಕೆ. ಒಳ್ಳೆಯ ಉದ್ಯಮಶೀಲರಂತೆ, ಬಜರಂಗದಳ ಚಟುವಟಿಕೆಗಳ ನೇರ ಪರಿಣಾಮವಾದ ಸ್ಥಳೀಯ ವ್ಯಾಪಾರಿಗಳ ಆತಂಕವನ್ನೇ ಚೆನ್ನಾಗಿ ಬಳಸಿಕೊಂಡಿದ್ದಾರೆ. ಅವರು ಪ್ರತಿನಿಧಿಸುವ ಹಿಂದುತ್ವ ಸಂಘಟನೆಯ ಕಾಲಾಳುಗಳನ್ನೇ ಬಳಸಿಕೊಂಡು ಅವರಿಗೆ ಸುರಕ್ಷೆ ಒದಗಿಸುತ್ತಾರೆ.
ಅವರ ರಾಜಕೀಯದ ಆರ್ಥಿಕತೆ ಬಗ್ಗೆ ತಿಳಿದುಕೊಳ್ಳಲು ಅವರ ಜತೆ ಕುಳಿತಿದ್ದಾಗ ಶರಣ್ ನೇರವಾಗಿ, ‘‘ನಾವು ವ್ಯವಹಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ’’ ಎಂದರು. ವ್ಯಾಪಾರಿಗಳು ನಮ್ಮ ಜತೆ ಕೆಲಸ ಮಾಡಲು ಸಿದ್ಧರಿದ್ದಾರೆ. ಏಕೆಂದರೆ ಅವರಿಗೆ ಭದ್ರತಾ ಸೇವೆಯನ್ನು ತೀರಾ ನ್ಯಾಯೋಚಿತ ದರದಲ್ಲಿ ನಾವು ಒದಗಿಸುತ್ತೇವೆ ಬಜರಂಗದಳದ ಅಸ್ತಿತ್ವಕ್ಕೆ ಹಿಂದೊಮ್ಮೆ ರಾಜಕೀಯ ಕಾರಣವಿದ್ದಿರಬಹುದು. ಆದರೆ ಮಂಗಳೂರಿನಲ್ಲಿ, ಇಂದು ಈ ಸಂಘಟನೆ ಅತ್ಯಂತ ಸಕ್ರಿಯ. ಇದಕ್ಕೆ ಕಾರಣ ಕುಶಾಗ್ರಮತಿ ಶರಣ್ ಅವರ ಲಾಭ ಉದ್ದೇಶದ ಕಾರ್ಯತಂತ್ರ.
ಇದು ಕಾರ್ಯ ನಿರ್ವಹಿಸುವುದು ಹೀಗೆ: ಬಜರಂಗ ದಳದ ಹೋರಾಟ ಮತ್ತು ಪ್ರತಿಭಟನೆಗಳ ಮೂಲಕವೇ ಬೇಡಿಕೆ ಸೃಷ್ಟಿಯಾಗುತ್ತದೆ. ಇದು ಜಾಗೃತಿಯಿಂದ ಹಿಡಿದು ಗೂಂಡಾಗಿರಿ, ವಿಧ್ವಂಸಕ ಚಟುವಟಿಕೆವರೆಗೂ ವಿಸ್ತರಿಸಿದೆ.
ಇದು ಮಾಲ್, ಅಂಗಡಿ ಹಾಗೂ ಅಪಾರ್ಟ್ಮೆಂಟ್ಗಳ ಮಾಲಕರಲ್ಲಿ ಒಂದು ಬಗೆಯ ಅಭದ್ರತೆಯ ಚಿತ್ರಣವನ್ನು ಸೃಷ್ಟಿಸುತ್ತದೆ. ಶರಣ್ ಪಂಪ್ವೆಲ್ ಮಾಲಕತ್ವದ ಈಶ್ವರಿ ಮ್ಯಾನ್ಪವರ್ ಸೊಲ್ಯೂಶನ್ಸ್ ಲಿಮಿಟೆಡ್ ಎಂಬ ಕಂಪೆನಿ, ಹೀಗೆ ಭೀತಿಗೊಂಡ ಉದ್ಯಮಿಗಳಿಗೆ ಭದ್ರತಾ ಸಿಬ್ಬಂದಿಯ ಸೇವೆ ಒದಗಿಸುತ್ತದೆ. ಈ ಮೂಲಕ ಅವರ ಭೀತಿ ಶಮನವಾಗುತ್ತದೆ. ಈ ಎರಡೂ ಚಟುವಟಿಕೆಗಳಿಗೆ ಮಾನವಶಕ್ತಿಯನ್ನು ಒಂದೇ ಕಡೆಯಿಂದ ಒದಗಿಸಲಾಗುತ್ತದೆ. ‘‘ಈ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಸೂಪರ್ವೈಸರ್ಗಳು ಮತ್ತು ಬಹುತೇಕ ಭದ್ರತಾ ಸಿಬ್ಬಂದಿ ಬಜರಂಗದಳ ಕಾರ್ಯಕರ್ತರು’’ ಎಂದು ಶರಣ್ ಹೇಳುತ್ತಾರೆ. ‘‘ನಗರದಲ್ಲಿ ಬಜರಂಗದಳ ಮುಖಂಡರಾಗಿ, ಎಲ್ಲ ಕಾರ್ಯಕರ್ತರಿಗೆ ಜೀವನಾಧಾರದ ಸುರಕ್ಷತೆ ಒದಗಿಸುವುದು ನನ್ನ ಕರ್ತವ್ಯ. ನನ್ನ ಬಳಿ ಉದ್ಯೋಗಕ್ಕಾಗಿ ಬಂದ ಯಾರನ್ನೂ ನಾನು ವಾಪಸು ಕಳುಹಿಸುವುದಿಲ್ಲ. ನಗರದಲ್ಲಿ ಭದ್ರತಾ ಸಿಬ್ಬಂದಿಗೆ ಬೇಡಿಕೆ ಸಾಕಷ್ಟು ಇದೆ. ನಮ್ಮ ಭದ್ರತಾ ಸಿಬ್ಬಂದಿ ಪೈಕಿ ಕೆಲವರು ಮುಸ್ಲಿಮರೂ ಇದ್ದಾರೆ’’
2005ರಲ್ಲಿ ಬಜರಂಗದಳ ಸೇರಿದಾಗಿನಿಂದ ಶರಣ್ ಪಂಪ್ವೆಲ್, ಉಲ್ಕೆಯಂತೆ ಮೇಲಕ್ಕೆ ಬಂದಿದ್ದಾರೆ. 2011ರಲ್ಲಿ ಅವರು ಮಂಗಳೂರು ವಿಭಾಗ ಸಂಚಾಲಕರಾದರು. 2014ರಲ್ಲಿ ದಕ್ಷಿಣ ಕನ್ನಡ ಪ್ರಾಂತದ ಸಂಚಾಲಕ ಹುದ್ದೆ ನೀಡಲಾಯಿತು. ಬಜರಂಗ ದಳದ ಸಾಂಸ್ಥಿಕ ಸ್ವರೂಪದಲ್ಲಿ, ಕರ್ನಾಟಕ ರಾಜ್ಯವನ್ನು ಉತ್ತರ ಹಾಗೂ ದಕ್ಷಿಣ ಘಟಕಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದಕ್ಕೂ ಒಬ್ಬ ಸಂಚಾಲಕರಿದ್ದಾರೆ. ಉತ್ತರ ಕರ್ನಾಟಕ ಬಜರಂಗ ದಳ ದುರ್ಬಲವಾಗಿದ್ದರೆ, ದಕ್ಷಿಣ ಘಟಕ ಅತಿಕ್ರಿಯಾಶೀಲ. ಬಹುಶಃ ದೇಶದ ಯಾವುದೇ ಭಾಗದಲ್ಲಿ ಇರುವುದಕ್ಕಿಂತ ಹೆಚ್ಚು ಕ್ರಿಯಾಶೀಲ.
‘ಈಶ್ವರಿ ಮ್ಯಾನ್ಪವರ್ ಸೊಲ್ಯೂಶನ್ಸ್ ಲಿಮಿಟೆಡ್’ ಸಂಸ್ಥೆಗೆ ನಿರಂತರ ವ್ಯಾಪಾರ ಅವಕಾಶಗಳು ಅಗತ್ಯವಿರುವ ಹಿನ್ನೆಲೆಯಲ್ಲಿ, ಬಜರಂಗ ದಳ, ಶರಣ್ ಪಂಪ್ವೆಲ್ ಅವರ ನೇತೃತ್ವದಲ್ಲಿ ಹೋರಾಟ ಚಟುವಟಿಕೆಗಳು ಸಕ್ರಿಯವಾಗಿರಬೇಕಾದ್ದು ಅಗತ್ಯ ಎಂದು ಬಲವಾಗಿ ನಂಬಿದೆ. ‘‘ಮಂಗಳೂರು ವಿಭಾಗದ ಸಂಚಾಲಕ ಜವಾಬ್ದಾರಿಯನ್ನು ನನಗೆ ವಹಿಸಿದ ತಕ್ಷಣ ನಾನು ಈ ವ್ಯವಹಾರ ಆರಂಭಿಸಿದೆ. ಇದೀಗ ಕೆ.ಎಸ್.ರಾವ್ ರಸ್ತೆಯ ಸಿಟಿ ಸೆಂಟರ್, ಪಾಂಡೇಶ್ವರದ ಫೋರಂ ಫಿಝಾ ಮಾಲ್ ಹಾಗೂ ಲಾಲ್ಬಾಗ್ನ ಬಿಗ್ ಬಝಾರ್ನ ಭದ್ರತಾ ಗುತ್ತಿಗೆ ನನಗೆ ದೊರಕಿದೆ. ಇದರೊಂದಿಗೆ ಹಲವು ವ್ಯಾಪಾರಿ ಮಳಿಗೆಗಳು ಹಾಗೂ ಅಪಾರ್ಟ್ಮೆಂಟ್ಗಳ ಭದ್ರತಾ ಗುತ್ತಿಗೆಯೂ ಸಿಕ್ಕಿದೆ’’ ಎಂದು ವಿವರಿಸಿದರು. ಈ ಮೂರು ಮಾಲ್ಗಳು ನಗರದ ಅತಿದೊಡ್ಡ ಮಾಲ್ಗಳು.
ಇನ್ನೂ ಕುತೂಹಲದ ವಿಚಾರವೆಂದರೆ, ಸಿಟಿ ಸೆಂಟರ್ ಹಾಗೂ ಫೋರಂ ಫಿಝಾ ಮಾಲ್ನ ಬಹುತೇಕ ಮಳಿಗೆಗಳು, ಮಂಗಳೂರಿನಲ್ಲಿ ಬಜರಂಗ ದಳದ ದಾಳಿ ಟಾರ್ಗೆಟ್ ಎನಿಸಿದ ಮುಸ್ಲಿಮರಿಗೆ ಸೇರಿವೆ. ಆದಾಗ್ಯೂ ಮುಸ್ಲಿಮರನ್ನು ಕಕ್ಷಿದಾರರಾಗಿ ಪಡೆದು ಈ ಹಿಂದುತ್ವ ಸಂಘಟನೆ ತನ್ನ ವಹಿವಾಟು ದ್ವಿಗುಣಗೊಳಿಸಿಕೊಂಡ ಬಳಿಕ, ಬಜರಂಗ ದಳದ ಮುಸ್ಲಿಂ ವಿರೋಧಿ ರಾಜಕೀಯ ಹಿನ್ನೆಲೆ ಇಲ್ಲಿ ಕೋಮು ಸಾಮರಸ್ಯಕ್ಕೆ ದಾರಿ ಮಾಡಿಕೊಟ್ಟಿದೆ. ತಮ್ಮ ಉದ್ಯಮಶೀಲ ಚಾಣಾಕ್ಷತೆಯನ್ನು ಬಳಸಿಕೊಂಡಿರುವುದನ್ನು ಶರಣ್ ಒಪ್ಪಿಕೊಳ್ಳುತ್ತಾರೆ.
‘‘ಮುಸ್ಲಿಂ ಅಂಗಡಿಗಳ ಮಾಲಕರು ಹಾಗೂ ಮಾಲ್ ಮಾಲಕರಿಂದ ನಮಗೆ ದೊಡ್ಡ ವ್ಯವಹಾರ ಸಿಗುತ್ತಿದೆ. ಇದಕ್ಕೆ ಕಾರಣ ನಮ್ಮ ಕಂಪೆನಿ ಮೇಲೆ ಮತ್ತು ವೈಯಕ್ತಿಕವಾಗಿ ನಮ್ಮ ಮೇಲೆ ಅವರು ಇರಿಸಿರುವ ನಂಬಿಕೆ.’’ ಮುಸ್ಲಿಂ ಕಕ್ಷಿದಾರರನ್ನು ಪಡೆಯುವಲ್ಲಿ ಯಶಸ್ವಿಯಾದ ಗುಟ್ಟಿನ ಬಗ್ಗೆ ಪ್ರಶ್ನಿಸಿದಾಗ ಒಂದು ಕ್ಷಣ ಮೌನ ವಹಿಸಿದರು. ಭೀತಿಕಾರಣದಿಂದ ಮುಸ್ಲಿಮರು ಈಶ್ವರಿ ಮ್ಯಾನ್ಪವರ್ ಸೆಕ್ಯುರಿಟಿ ಸೇವೆಯನ್ನು ಬಳಸಿಕೊಳ್ಳುತ್ತಾರೆ. ಬಜರಂಗದಳ ಕಾರ್ಯಕರ್ತರು ತೊಡಗಿಸಿಕೊಳ್ಳುವ ಚಟುವಟಿಕೆಗಳ ಹಿನ್ನೆಲೆಯಲ್ಲಿ ಇದು ಶಾಂತಿಯುತ ವ್ಯವಹಾರ ನಡೆಸಲು ಒಳ್ಳೆಯ ವಿಧಾನ ಎಂದು ಸಿಟಿ ಸೆಂಟರ್ನಲ್ಲಿ ಮಳಿಗೆ ಹೊಂದಿರುವ ಒಬ್ಬ ಮುಸ್ಲಿಂ ವ್ಯಾಪಾರಿ ಹೇಳುತ್ತಾರೆ. ‘‘ಮಂಗಳೂರಿನಂಥ ನಗರದಲ್ಲಿ, ನಿಮ್ಮ ಭದ್ರತಾಸೇವೆಯನ್ನು ಅವರಿಗೆ ಹೊರಗುತ್ತಿಗೆ ನೀಡದಿದ್ದರೆ, ನಿಮ್ಮ ಮಳಿಗೆ ದಾಳಿಗೊಳಗಾಗುವ ಸಾಧ್ಯತೆ ಹೆಚ್ಚು. ಕೊನೆಗೂ ಇದು ಕೆಟ್ಟ ಡೀಲ್ ಕೂಡಾ ಅಲ್ಲ. ನಮಗೆ ಅವರಿಂದ ಭದ್ರತಾ ಸಿಬ್ಬಂದಿ ಸಿಗುವುದು ಮಾತ್ರವಲ್ಲದೆ, ಹಿಂದುತ್ವ ಚಟುವಟಿಕೆಗಳಿಂದಲೂ ಸುರಕ್ಷೆ ಸಿಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ವ್ಯವಹಾರ ಹಾಳುಗೆಡವಲು ಕೇವಲ ಒಂದು ದಾಳಿ ಸಾಕು’’ ಎನ್ನುತ್ತಾರವರು.
ಬಜರಂಗ ದಳ ಸುರಕ್ಷಾ ದಂಧೆಯಾಗಿ ಬದಲಾದದ್ದು ಹಿಂದುತ್ವದ ಬೀದಿಮಟ್ಟದ ಚಟುವಟಿಕೆಗಳ ಸಹಜ ಬೆಳವಣಿಗೆಯೇನಲ್ಲ. ರಕ್ಷಣೆಗಾಗಿ ಪೊಲೀಸರಿಗೆ ಮನವಿ ಮಾಡಿಕೊಳ್ಳುವುದು ನಿಷ್ಪ್ರಯೋಜಕ ಎಂಬ ಭಾವನೆ ಮಂಗಳೂರಿನ ವ್ಯಾಪಾರಿಗಳು ಮತ್ತು ನಾಗರಿಕರಲ್ಲಿ ದಟ್ಟವಾಗಿವೆೆ. ಕಿರುಕುಳ ನೀಡುವವರನ್ನು ನಿಯಂತ್ರಿಸಲು ಸರಕಾರಕ್ಕೆ ಸಾಧ್ಯವಾಗದಿದ್ದಾಗ, ಸರಕಾರದ ಕಾನೂನು ಮತ್ತು ಸುವ್ಯವಸ್ಥೆ ಆಡಳಿತಯಂತ್ರವನ್ನೇ ಅವರು ಮೀರಿಸಿರುವಾಗ, ಇರುವ ಏಕೈಕ ಆಯ್ಕೆ ಎಂದರೆ, ಅಪರಾಧ ಸಂಸ್ಕೃತಿಯ ದಾಳಿಕೋರರ ಜತೆ ಸಹಕರಿಸುವುದು.
ಮಂಗಳೂರಿನಲ್ಲಿ ಬಜರಂಗ ದಳದ ರಾಜಕೀಯ ದೃಷ್ಟಿಕೋನವೆಂದರೆ, ಸಮಾಜದ ದುರ್ಬಲ ವರ್ಗಗಳ ನಿರುದ್ಯೋಗಿ ಯುವಕರನ್ನು ಕಾರ್ಯಕರ್ತ ರಾಗಿ ನೇಮಿಸಿಕೊಳ್ಳುವುದು. ತೀರಾ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಇಂಥ ದುರ್ಬಲ ವರ್ಗದವರು ತಮ್ಮ ಜೀವನಾಧಾರ ಕಂಡುಕೊಳ್ಳಲು ಕಷ್ಟಪಡಬೇಕಾಗಿರುವುದು ಕೂಡಾ ಇಂಥ ಬಜರಂಗದಳದ ಸುರಕ್ಷಾ ದಂಧೆಯಿಂದಾಗಿ.
ವಿಶ್ವ ಹಿಂದೂ ಪರಿಷತ್ ತನ್ನ ಉಗ್ರವಾದಿ ಯುವ ಪಡೆಯಾಗಿ ಬಜರಂಗದಳವನ್ನು 1984ರಲ್ಲಿ ಸ್ಥಾಪಿಸಿದಾಗ, ಅದರ ಮೂಲ ಉದ್ದೇಶ ಇದ್ದುದು, ಅಯೋಧ್ಯೆ ಚಳವಳಿಗೆ ಹಿಂದೂ ಯುವಕರ ಕ್ರೋಡೀಕರಣ. ‘ಬಜರಂಗ್’ ಎಂಬ ಪದವೇ ರಾಮನ ಕಪಿಸೈನ್ಯದ ಬಲಾಢ್ಯ ವ್ಯಕ್ತಿ ಎನಿಸಿದ ಹನುಮಂತನ ಬಲ ಮತ್ತು ಸಾಮರ್ಥ್ಯದ ಸಂಕೇತ. ಸಂಘಟನೆಯ ಸದಸ್ಯರ ತೋಳ್ಬಲಕ್ಕೇ ಮಹತ್ವ ನೀಡುವ ಸಲುವಾಗಿ ಇದೇ ಹೆಸರು ಆಯ್ಕೆ ಮಾಡಿಕೊಳ್ಳಲಾಗಿದೆ.
(Shadow Armies: Fringe Organizations and Foot Soldiers of Hindutva ಪುಸ್ತಕದಿಂದ)
ಕೃಪೆ: scroll.in