varthabharthi


ನನ್ನೂರು ನನ್ನ ಜನ

ನನ್ನ ಹಸುಗೂಸಿನ ಆರೈಕೆಗೆ ಒದಗಿದವಳು ಝುಲೈಖಾ!

ವಾರ್ತಾ ಭಾರತಿ : 26 Apr, 2017
ಚಂದ್ರಕಲಾ ನಂದಾವರ

ಕೋಟೆಕಾರಿನಿಂದ ಮಂಗಳೂರಿಗೆ ನಮ್ಮ ಪ್ರಯಾಣ ರೈಲಿನಲ್ಲಿ. ನಮ್ಮವರಿಗೆ ಈ ಪ್ರಯಾಣ ಬಹಳ ವರ್ಷಗಳದ್ದು, ವಿದ್ಯಾರ್ಥಿ ದೆಸೆಯಿಂದಲೇ ಪ್ರಾರಂಭವಾದುದು. ಕಳೆದ ಸುಮಾರು ಹದಿನೈದು ವರ್ಷಗಳ ಪ್ರಯಾಣದಿಂದ ಅವರಿಗೆ ಹಿರಿಯರೆಲ್ಲರೂ ಪರಿಚಿತರು. ಕಿರಿಯರಿಗೆ ಅವರೂ ಪರಿಚಿತರು. ನನಗೋ ರೈಲಿನ ಪ್ರಯಾಣದ ಅನುಭವ ನನ್ನ ಬಾಲ್ಯದ್ದು. ಆಗ ಇಂತಹ ಜನದಟ್ಟಣಿ ಇದ್ದರೂ ನೂಕುನುಗ್ಗಲು ಎನ್ನುವಂತಿರಲಿಲ್ಲ. ಇದೀಗ ಉಳ್ಳಾಲ ರೈಲ್ವೇ ಸ್ಟೇಶನ್‌ನಲ್ಲಿ ಸೇರುವ ಜನರನ್ನು ನೋಡಿದರೆ ಜಾತ್ರೆಯಂತೆಯೇ ಕಾಣುತ್ತಿತ್ತು.

ಮಂಗಳೂರಿನ ಎಲ್ಲಾ ಕಾಲೇಜುಗಳಿಗೆ, ಕೆಲವು ಹೈಸ್ಕೂಲುಗಳಿಗೆ, ಹಾಗೆಯೆ ಖಾಸಗಿ ಹಾಗೂ ಸರಕಾರಿ ಕಚೇರಿಗಳಿಗೆ, ಬ್ಯಾಂಕಿಗೆ ಎಂದು ಸುಮಾರು ಇನ್ನೂರು ಮುನ್ನೂರು ಜನ ಸೇರುತ್ತಿದ್ದರು. ಬಾಲ್ಯದಲ್ಲಿ ಪಯಣಿಸುತ್ತಿದ್ದಾಗ ವಿದ್ಯಾರ್ಥಿನಿಯರಾಗಿ, ಶಿಕ್ಷಕಿಯರಾಗಿ ಮಾತ್ರ ಹೋಗುತ್ತಿದ್ದ ಹೆಣ್ಣುಮಕ್ಕಳ ಸಂಖ್ಯೆ ಇಪ್ಪತ್ತೈದರೊಳಗೆ ಇದ್ದುದು ಈಗ ನೂರಕ್ಕೆ ಸಮೀಪಿಸಿತ್ತು ಎಂದರೆ ತಪ್ಪಲ್ಲ. ಹಾಗೆಯೇ ಕಾಸರಗೋಡನ್ನು ಹಾದುಬರುವ ಈ ರೈಲಲ್ಲಿ ಮಂಗಳೂರಿಗೆ ಕಾಞಂಗಾಡಿನಿಂದಲೂ ದಿನಾ ಬರುವ ಉದ್ಯೋಗಿಗಳ ಜತೆಗೆ ವಿದ್ಯಾರ್ಥಿಗಳೂ ಇದ್ದರು ಎನ್ನುವುದು ಮಂಗಳೂರಿನ ಶೈಕ್ಷಣಿಕ ವ್ಯವಸ್ಥೆಯನ್ನು ತಿಳಿಸುತ್ತದೆ. ನಮ್ಮ ಗಣಪತಿ ಸಂಸ್ಥೆಯ ಲೀಲಾ ಟೀಚರ್, ನರ್ಮದಾ ಟೀಚರ್, ಕ್ಲಾರ್ಕ್ ಮೊಂತೇರೋ ಇವರಲ್ಲದೆ ಅನೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಇದ್ದರು. ಅವರೊಂದಿಗೆ ನಾನೂ ಸೇರಿಕೊಂಡೆ. ತಲಪಾಡಿ, ಉಚ್ಚಿಲ ಹಾಗೂ ಒಳಗಿನ ಊರುಗಳ ವಿದ್ಯಾರ್ಥಿಗಳು ನಡೆದು ಬಂದು ಉಳ್ಳಾಲದಲ್ಲಿ ರೈಲು ಹತ್ತಿದರೆ ಇನ್ನು ಕೆಲವರು ಕೋಟೆಕಾರು ಜಂಕ್ಷನ್ ವರೆಗೆ ಬಸ್ಸುಗಳಲ್ಲಿ ಮುಂದಿನ ಪ್ರಯಾಣವನ್ನು ರೈಲಿನಲ್ಲಿ ಮಾಡುತ್ತಿದ್ದರು. ಇದಕ್ಕೆ ಕಾರಣ ರೈಲು ಪ್ರಯಾಣ ಅಗ್ಗದ ಪ್ರಯಾಣ.

ಒಂದರ್ಥದಲ್ಲಿ ಇಡೀ ಭಾರತವನ್ನು ಬೇರೆ ಬೇರೆ ಭಾಷೆಯ, ಬೇರೆ ಬೇರೆ ರಾಜ್ಯಗಳನ್ನು ಒಂದುಗೂಡಿಸಿದ್ದೇ ರೈಲಿನ ಸಾರಿಗೆ ವ್ಯವಸ್ಥೆ. ಬ್ರಿಟಿಷರು ಈ ದೇಶವನ್ನು ಸಾಕಷ್ಟು ಲೂಟಿಮಾಡಿದ್ದಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ವಿಜ್ಞಾನದ ಕೆಲವು ಸೌಲಭ್ಯಗಳು, ತಾಂತ್ರಿಕತೆಗಳನ್ನು ನಮ್ಮ ದೇಶದಲ್ಲೂ ಅವರು ಅಳವಡಿಸಿಕೊಂಡುದು ನಮಗೆ ಒಂದು ರೀತಿಯ ಕೊಡುಗೆಯೆಂದರೆ ಸರಿಯಾದ ಮಾತು. ಸೇತುವೆಗಳು ಹಾಗೂ ರೈಲು ಹಳಿಗಳು ನಮ್ಮನ್ನು ಭಾರತೀಯರು ಎಂದು ಗುರುತಿಸುವುದಕ್ಕೆ ಕಾರಣವಾದವುಗಳು. ಈ ರೈಲು ಇಲ್ಲದೆ ಇರುತ್ತಿದ್ದರೆ ನನ್ನ ಅಪ್ಪನ ಮನೆಯ ಹಿರಿಯರು ಅಂದರೆ ದೊಡ್ಡಪ್ಪನ ತಲೆಮಾರಿನಿಂದ, ಎರಡನೆ ತಲೆಮಾರಿನಲ್ಲಿ ನನ್ನ ಅತ್ತಿಗೆಯರು ವಿದ್ಯಾವಂತರಾಗಿ, ಮುಂಬೈ ಸೇರಿ, ಅಲ್ಲಿಂದ ಮುಂದೆ ಗಲ್ಫ್ ರಾಷ್ಟ್ರಗಳಿಗೆ, ಅಲ್ಲಿಂದ ಮುಂದೆ ಅಮೆರಿಕ ತಲುಪುವುದು, ಮಿಲಿಟರಿ ಸೇರುವುದು ಸಾಧ್ಯವಾಗುತ್ತಿರಲಿಲ್ಲ. ಈಗ ಕೇರಳಕ್ಕೆ ಸೇರಿ ಹೋಗಿರುವ ಊರಿನ ನನ್ನ ಸಂಬಂಧಿಗಳೂ ಕೂಡ ಈ ರೈಲಿನ ಕಾರಣದಿಂದಲೇ ವಿದ್ಯಾವಂತರಾದರು. ವಿದೇಶಗಳಿಗೂ ಹೋದರು.

ಇದು ನನ್ನ ಕುಟುಂಬದ ಕತೆಯಲ್ಲ, ಇಡೀ ನೇತ್ರಾವತಿಯ ಆ ತೀರದ ಸಮಾಜದ ಕತೆ. ನೇತ್ರಾವತಿ ನದಿಗೆ ಅರುವತ್ತರ ದಶಕದಲ್ಲಿ ನಿರ್ಮಿಸಿದ ಸೇತುವೆಯ ಮೇಲೆ ಬಸ್ಸು, ಕಾರುಗಳ ಓಡಾಟ ಶುರುವಾದ ಮೇಲೂ ಬಸ್ಸಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾದಂತೆ, ರೈಲು ಸಂಚಾರದ ಜನಸಂಖ್ಯೆ ಕಡಿಮೆಯಂತೂ ಆಗಿಲ್ಲ. ಬದಲಿಗೆ ಇನ್ನೂ ಹೆಚ್ಚಾಗಿದೆ. ಇದಕ್ಕೆ ಕಾರಣ ಹೆಚ್ಚುತ್ತಿರುವ ಜನಸಂಖ್ಯೆ ಹಾಗೆಯೇ ಮಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಹೆಚ್ಚಳ, ಉದ್ಯೋಗಾವಕಾಶಗಳ ಹೆಚ್ಚಳ ಎಂದರೂ ಸರಿಯೇ.

ಎಪ್ಪತ್ತರ ದಶಕದ ಕೊನೆಯ ವರ್ಷಗಳ ಆ ನನ್ನ ರೈಲು ಪ್ರಯಾಣ ನನಗೆ ಬಾಲ್ಯದ ಸಂತಸ ನೀಡುತ್ತಿರಲಿಲ್ಲ. ಅದು ಅನಿವಾರ್ಯವಾಗಿತ್ತು. ಜತೆಗೆ ಆ ನೂಕುನುಗ್ಗಲಲ್ಲಿ ಮೊದಲೇ ಜನ ತುಂಬಿಕೊಂಡು ಬರುವ ರೈಲಿನಲ್ಲಿ ಬಾಗಿಲಲ್ಲೇ ಜನ ನೇತಾಡುತ್ತಿದ್ದರೆ ಯಾವ ಬೋಗಿಗೆ ಹತ್ತಬೇಕೆಂದು ತಿಳಿಯುತ್ತಿರಲಿಲ್ಲ. ನಿಲ್ದಾಣದಲ್ಲಿ ಸ್ವಲ್ಪವೇ ನಿಮಿಷಗಳ ಕಾಲ ನಿಲ್ಲುವ ರೈಲಿಗೆ ಹತ್ತುವುದೆಂದರೆ ನನಗೆ ಭಯವಾಗುತ್ತಿತ್ತು. ಯಾವ ಕಂಪಾರ್ಟ್‌ಮೆಂಟಿಗೆ ಹತ್ತುವುದು ಎನ್ನುವುದು ಕೊನೆಯವರೆಗೂ ನಿರ್ಧಾರವಾಗುತ್ತಿರಲಿಲ್ಲ.

ನಾವು ಸ್ಟೇಶನ್‌ನಲ್ಲಿ ನಿಂತಿದ್ದ ಜಾಗದಲ್ಲಿ ಹತ್ತುವ ಬೋಗಿ ಯಾವುದಿರುತ್ತದೆಯೋ ಅದಕ್ಕೆ ಹತ್ತುವುದು. ಜನರಲ್ ಕಂಪಾರ್ಟ್‌ಮೆಂಟ್ ಆಗಿ ಬಿಟ್ಟರೆ ನನ್ನವರು ಜತೆಗಿದ್ದರೂ ಒಳಗೆ ಕಿಕ್ಕಿರಿದ ಜನಸಂದಣಿಯಲ್ಲಿ ಗಂಡಸರ, ಹುಡುಗರ ನಡುವೆ ನಿಂತುಕೊಳ್ಳುವುದು ತೀರಾ ಅಸಹನೀಯವಾದ ಸ್ಥಿತಿ. ಜತೆಗೆ ನನ್ನ ವಿದ್ಯಾರ್ಥಿಗಳೂ ಇರುತ್ತಿದ್ದರು. ಒಟ್ಟಿನಲ್ಲಿ ಉಸಿರು ಕಟ್ಟಿಸುವ ವಾತಾವರಣ. ಮಹಿಳೆಯರ ಕಂಪಾರ್ಟ್‌ಮೆಂಟು ಹತ್ತಿದರೂ ಜನಸಂದಣಿ ಉಸಿರು ಕಟ್ಟಿಸುತ್ತಿದ್ದವು. ಮುಜುಗರದ ಪ್ರಶ್ನೆ ಇರುತ್ತಿರಲಿಲ್ಲ. ಹೀಗೆ ಸಂಜೆಯೂ ರೈಲಿನಲ್ಲಿ ಪ್ರಯಾಣ. ಬಡವರ ಬಂಧುವಿನಂತೆ ಇದ್ದ ಈ ರೈಲು ಪ್ರಯಾಣ ಇಷ್ಟೊಂದು ತ್ರಾಸದಾಯಕವಾದರೂ ಮೂರು ತಿಂಗಳಿಗೋ, ಆರು ತಿಂಗಳಿಗೋ ಒಮ್ಮೆ ದುಡ್ಡು ಕೊಟ್ಟು ‘ಪಾಸ್’ ಮಾಡಿಕೊಂಡರೆ ಇನ್ನೂ ಅಗ್ಗದ ಪ್ರಯಾಣವೇ ಆಗುತ್ತಿತ್ತು. ಬೆಳಗ್ಗಿನ ಗಡಿಬಿಡಿಯ ಬದುಕಿನಲ್ಲಿ ಸ್ಟೇಶನ್‌ನಲ್ಲಿ ಮಂಜೇಶ್ವರದಿಂದ ರೈಲು ಹೊರಡುವ ಸೂಚನೆ ಕೊಡುವ ಗಂಟೆಯೊ ಸಿಳ್ಳೆಯೋ ಕೇಳಿದ ಮೇಲೂ ಮನೆಯಿಂದ ಓಡೋಡಿ ರೈಲು ಹತ್ತುತ್ತಿದ್ದ ನೆನಪುಗಳು ರೈಲಿನ ಪ್ರಯಾಣದ ಸುಖವನ್ನು ಮಾತ್ರ ಮರೆಸಿತ್ತು.

ರೈಲು ಪ್ರಯಾಣ ಸುಖ ನೀಡದಿದ್ದರೂ ಅತ್ಯಂತ ಸುಖ ನೀಡಿದ್ದು ಸೋಮೇಶ್ವರದ ಸಮುದ್ರತೀರ, ಶನಿವಾರ, ರವಿವಾರದ ಸಂಜೆಗಳಲ್ಲಿ ನಾವಿಬ್ಬರೂ ಸಾಮಾನ್ಯವಾಗಿ ಸಮುದ್ರ ತೀರಕ್ಕೆ ಹೋಗುತ್ತಿದ್ದೆವು. ಹೀಗೆ ಹೋಗುವಾಗಲು ಕೋಟೆಕಾರಿನಿಂದ ಪಶ್ಚಿಮಕ್ಕೆ ಇರುವ ಅನೇಕ ಒಳದಾರಿಗಳನ್ನು ಪರಿಚಯಿಸಿಕೊಂಡು ಹೋಗುವಾಗ ಸಿಗುತ್ತಿದ್ದ ಹಿರಿಯರಿಗೆ ನಾನು ಮತ್ತೆ ವಾಮನ ಮಾಸ್ಟ್ರ ಮಗಳಾಗಿಯೇ ಪರಿಚಯಗೊಳ್ಳುತ್ತಿದ್ದುದು ನನಗೇ ಆಶ್ಚರ್ಯ. ಯಾಕೆಂದರೆ ಅವರ್ಯಾರೂ ನನ್ನ ರಕ್ತಸಂಬಂಧಿಗಳಲ್ಲ. ಜತೆಗೆ ಒಂದೇ ಧರ್ಮದವರೂ ಅಲ್ಲ. ಅವರು ಒಂದಿಷ್ಟು ವಿದ್ಯಾವಂತರಾಗಿದ್ದವರಾದರೆ ಕ್ರಿಶ್ಚಿಯನ್ನರಿಗೂ, ಮುಸ್ಲಿಮರಿಗೂ ನಾನು ಪರಿಚಿತಳೇ. ಬಹುಶಃ ಅದು ಅಪ್ಪನ ರಾಜಕೀಯ ಒಲವಿನ ವರ್ಚಸ್ಸಿನಿಂದ. ಬಿ.ಎಂ. ಇದಿನಬ್ಬ, ಯು.ಟಿ.ಫರೀದರ ಸ್ನೇಹದಿಂದ ಎನ್ನುವುದು ಕೂಡ ಸತ್ಯ. ಶನಿವಾರದ ಮಧ್ಯಾಹ್ನ ಹೆಚ್ಚಾಗಿ ನಾನೂ ನಮ್ಮವರೂ ನನ್ನ ತವರಿಗೆ ಅಂದರೆ ಉರ್ವಸ್ಟೋರಿನ ಮನೆಗೆ ಹೋಗಿ ಸಂಜೆ ರೈಲಿಗೆ ಹಿಂದಿರುಗುವುದೂ ಇತ್ತು. ಹಾಗಲ್ಲದೆ ಹೋದರೆ ಮಧ್ಯಾಹ್ನ ಬಸ್ಸಿನಲ್ಲಿಯೇ ಬರುತ್ತಿದ್ದೆವು. ಹಾಗೆ ಬಂದ ಸಂದರ್ಭಗಳಲ್ಲಿ ನನಗೆ ಒಂದು ವಿಶೇಷ ಕಾಣ ಸಿಗುತ್ತಿತ್ತು.

ಬಸ್ಸು ಇಳಿದು ನೆಲ್ಲಿ ಸ್ಥಳದ ದೇವಸ್ಥಾನದ ಹೊರವಲಯದ ಪದವಿನಂತಹ ಬಯಲಲ್ಲಿ ಮೇಯುತ್ತಿದ್ದ ಒಂದು ಟಗರು. ಅದು ಆಡೋ ಕುರಿಯೋ ಎಂದು ತಿಳಿಯದ ನಾನು ನಮ್ಮವರಲ್ಲಿ ಅದರ ಬಗ್ಗೆ ಕೇಳಿದೆ. ಅದು ಗಂಡು ಆಡು ಅಂದರೆ ಹೋತ. ಕೊಬ್ಬಿದ ಅದು ತನಗೆ ಇಚ್ಛೆ ಬಂದಲ್ಲಿ, ಯಾರ್ಯಾರದೋ ಹಿತ್ತಲಲ್ಲಿ ಗೋಡೆ ಇದ್ದಲ್ಲಿಯೂ ಅದನ್ನು ಹಾರಿ ಮೇಯುತ್ತಿತ್ತು. ಅದನ್ನು ಯಾರೂ ಓಡಿಸುತ್ತಿರಲಿಲ್ಲ. ಇದನ್ನು ಕಂಡು ಆಶ್ಚರ್ಯದಿಂದ ಕೇಳಿದರೆ ಅದು ದರ್ಗಾಕ್ಕೆ ಸೇರಿದ್ದು, ಅದು ಹರಕೆಗಾಗಿ ಬಿಟ್ಟ ಆಡು. ಅದೇ ಕಾರಣಕ್ಕೆ ಅದಕ್ಕೆ ಯಾರೂ ಕಲ್ಲು ಎಸೆಯಬಾರದು, ಓಡಿಸಬಾರದು ಎಂಬ ನಂಬಿಕೆ. ಹಿಂದೂಗಳು ಕೂಡಾ ತಮ್ಮ ಹಿತ್ತಲಲ್ಲಿ ಮೇಯುತ್ತಿದ್ದರೂ ಓಡಿಸುತ್ತಿರಲಿಲ್ಲ, ಕಲ್ಲು ಹೊಡೆಯುತ್ತಿರಲಿಲ್ಲ ಎಂದು ತಿಳಿಯಿತು. ಆ ದಿನಗಳಲ್ಲಿ ಅದು ನನಗೆ ವಿಶೇಷವಾದುದೆಂದು ಅನ್ನಿಸದೆ ಸಹಜವಾಗಿತ್ತು ಎಂದಾಗಿದ್ದರೆ ಇಂದು ಅಂತಹ ವಾತಾವರಣ ಅಲ್ಲಿ ಇರಲಾರದು.

ಆದರೆ ಅಂದು ನಮ್ಮ ಹಿರಿಯರು ಪರಸ್ಪರ ಧರ್ಮಗಳ ನಂಬಿಕೆಗಳಿಗೆ ಗೌರವ ನೀಡುತ್ತಿದ್ದುದರ ಬಗ್ಗೆ ಇಂದು ಪರಧರ್ಮಗಳ ಬಗ್ಗೆ ಸಹಿಷ್ಣುತೆ ಎಂದರೆ ಇದೇ ಎಂದು ಅನ್ನಿಸುತ್ತದೆ. ಅವರ್ಯಾರಿಗೂ ಕವಿರಾಜ ಮಾರ್ಗಕಾರಣ ‘‘ಕಸವರ ಮೆಂಬುದು ನೆರೆ ಸೈರಿಸಲಾರ್ಪೊಡೆ ಪರಧರ್ಮಮುಮಂ ಪರಮತಮಂ’’ ಎಂಬ ಉಲ್ಲೇಖ ಗೊತ್ತಿರಲಾರದು. ಆದ್ದರಿಂದಲೇ ಕವಿರಾಜ ಮಾರ್ಗಕಾರ ಜನರನ್ನು ಕುರಿತು ಹೇಳುವಾಗ ‘‘ಕುರಿತೋದದೆಯುಂ ಪರಿಣತಮತಿಗಳ್’’ ಎಂದಿರುವುದು. ಆ ಕಾಲದ ಪೂರ್ವದ ಹಿರಿಯರು ಗ್ರಂಥಗಳನ್ನು ಓದಿರದೆ ಇದ್ದರೂ ಜೀವನದಲ್ಲಿ ನಂಬಿಕೆಗಳನ್ನು ನಂಬಿದ್ದರು, ಮನುಷ್ಯತ್ವವನ್ನು ಹೊಂದಿದ್ದರು ಎನ್ನುವುದೇ ಹೆಚ್ಚು ಸರಿ. ಇಂತಹ ವಾತಾವರಣದಲ್ಲಿ ದೇವಸ್ಥಾನದ ಗಂಟೆ, ಮಸೀದಿಯ ಬಾಂಗ್ ಕೇಳಿದಾಗ ಯಾರೂ ಕೆಟ್ಟದಾಗಿ ಆಡುತ್ತಿರಲಿಲ್ಲ. ಬದಲಿಗೆ ಅದು ಅವರ ದಿನನಿತ್ಯಕ್ಕೆ ಸಮಯವನ್ನು ಲೆಕ್ಕಾಚಾರ ಮಾಡಿಕೊಳ್ಳಲು ಉಪಯೋಗವೂ ಆಗುತ್ತಿತ್ತು.

ಸಾಹೇಬರ ಮನೆಯಲ್ಲಿದ್ದ ಎದುರು ಮನೆಯಲ್ಲಿ ನೂರ್‌ಜಹಾನಳಿಗೆ ಮದುವೆ ಕೂಡಿ ಬಂತು. ಮನೆ ಮುಂದೆ ಚಪ್ಪರ ಹಾಕಲಾಯಿತು. ಹೊರ ದೇಶದಿಂದ ಅಣ್ಣನೂ ಬಂದರು. ಹುಡುಗಿ ಮನೆಯಲ್ಲಿ, ಹಾಗೆಯೇ ಮದುಮಗನ ಮನೆಯಲ್ಲಿ ನಡೆದ ಮದುವೆಯ ಕಾರ್ಯಕ್ರಮಗಳೂ ಇಂದಿನಂತೆ ಹಣದ ಪ್ರದರ್ಶನವಾಗಿರದೆ ಸರಳವಾಗಿ ನಡೆಯಿತು. ಅವರ ಮನೆಯಲ್ಲಿ ನಡೆದ ‘ಟೀ ಪಾರ್ಟಿ’ಗೆ ನಾವೂ ಸೇರಿದಂತೆ ನೆರೆಕರೆಯವರೂ ಬಂದು ಹೋಗುತ್ತಿದ್ದರು. ಸಿಹಿ ಸೋಡಾದೊಂದಿಗೆ ಬಾಳೆಹಣ್ಣು, ಲಾಡು, ಖಾರದ ಬಿಸ್ಕತ್ತುಗಳ ಸಹಿತದ ಉಪಾಹಾರ ಆ ಕಾಲಕ್ಕೆ ದೊಡ್ಡದೇ ಆಗಿತ್ತು. ಹಾಗೆಯೇ ಉಡುಗೊರೆಯು ತಮ್ಮ ತಮ್ಮ ಸಾರ್ಮರ್ಥ್ಯಕ್ಕೆ ಸಹಜವಾಗಿರುತ್ತದೆ ಎನ್ನುವುದು ವಸ್ತು ರೂಪಕ್ಕಿಂತ ಹಣದ ರೂಪದಲ್ಲಿ ನೀಡುವುದೇ ಹೆಚ್ಚು ಸೂಕ್ತವಾಗಿದ್ದ ದಿನಗಳು.

ಆದ್ದರಿಂದ ನಾನೂ ಹುಡುಗಿಯ ಕೈಯಲ್ಲಿ ಒಂದು ಸಣ್ಣ ಮೊತ್ತದ ಕವರನ್ನು ನೀಡಿದ್ದೆ. ನಾವಿದ್ದ ಮನೆಯ ಋಣವೂ ಹೆಚ್ಚು ದಿನವಿರಲಿಲ್ಲ ಎಂದು ಈಗಾಗಲೇ ಹೇಳಿರಬೇಕು. ಅದಕ್ಕೆ ಕಾರಣವಿತ್ತು. ನಾನು ತಾಯಾಗುವ ಸಂಭ್ರಮದಲ್ಲಿದ್ದೆ. ಏಳನೆಯ ತಿಂಗಳಲ್ಲಿ ಸೀಮಂತ ಮಾಡಿಸಿಕೊಂಡು ತವರಿಗೆ ಬಂದೆ. ಮಗುವಿನ ತಾಯಿಯಾದವಳಿಗೆ ತವರಲ್ಲಿ ಹೆಚ್ಚು ತಿಂಗಳು ಇರುವ ಯೋಗ ದೊರೆಯದೆ ಗಂಡನ ಮನೆಗೆ ಹೆಣ್ಣು ಮಗುವಿನೊಂದಿಗೆ ನಾದಿನಿಯ ಮದುವೆ ತಯಾರಿಗೆ ಹೊರಟೇ ಬಿಟ್ಟೆ. ಊರಿನವರೆಲ್ಲಾ ತನ್ನ ಅತ್ತೆಯನ್ನು ಮದುವೆ ಮಾಡಿ ಕಳುಹಿಸುವ ಯೋಗ ಪಡೆದ ಹೆಣ್ಣು ಮಗುವೆಂದು ಶ್ಲಾಘಿಸಿದರು. ಇಂತಹ ನಂಬಿಕೆಗಳು ಎಷ್ಟು ಸರಿ ಎಂದು ನನಗೆ ಆಗಲೂ ತಿಳಿಯಲಿಲ್ಲ. ಈಗಲೂ ತಿಳಿದಿಲ್ಲ. ಅಂತೂ ನಾದಿನಿಗೆ ಮದುವೆಯಾದುದು ಮಾತ್ರ ತಂಗಿಗೆ ಮದುವೆಯಾಗದೆ ಅಣ್ಣ ಮದುವೆಯಾಗಿ ಸೊಸೆ ಬಂದ ಒಳಗೊಳಗಿನ ಅಸಮಾಧಾನದ ಅತ್ತೆ ಮಾವಂದಿರಿಗೆ ಮಾತ್ರ ತುಂಬಾ ಸಂತೋಷವಾಯ್ತು. ಆ ನಿಟ್ಟಿನಲ್ಲಿ ನನ್ನ ಒಳಗಿದ್ದ ಅಪರಾಧಿ ಭಾವವನ್ನು ನನ್ನ ಹೆಣ್ಣು ಮಗಳು ನೀಗಿಸಿ ನಾನು ನಿರಾಳವಾಗುವಂತೆ ಮಾಡಿದಳು.

ಈಗ ಮನೆಯ ಅಡುಗೆ, ಒಟ್ಟು ಮನೆವಾರ್ತೆಯ ಜವಾಬ್ದಾರಿ, ಜೊತೆಗೆ ಮಗುವಿನ ಆರೈಕೆ ಹಾಗೂ ಕಾಲೇಜಿನ ವೃತ್ತಿ ಇವೆಲ್ಲವನ್ನು ನಿಭಾಯಿಸುವುದು ಕಷ್ಟ ಎಂದು ತಿಳಿಯುವುದಕ್ಕೆ ಹೆಚ್ಚು ಸಮಯಬೇಕಾಗಲಿಲ್ಲ. ಆದರೇನು ಮಾಡುವುದು ಮಳೆಗಾಲ. ಕಾಲೇಜು ಪ್ರಾರಂಭವಾದ ಸಮಯ. ನನ್ನ ರೈಲು ಪ್ರಯಾಣ ಬಸ್ಸು ಪ್ರಯಾಣವಾಗಿ ಬದಲಾಯಿತು. ನಾನು ಮಗುವಿಗೆ ಹಾಲುಣಿಸುತ್ತಿದ್ದ ತಾಯಾಗಿ ಒಂದು ಹದಿನೈದು ದಿನ ಮಧ್ಯಾಹ್ನ ಬಂದು ಹೋಗುತ್ತಿದ್ದೆ. ಸಂಜೆ ಮನೆಗೆ ಬೇಗ ಹಿಂದಿರುಗಬೇಕಾಗುತ್ತಿತ್ತು. ಮಗುವನ್ನು ಮೀಯಿಸುವುದು ಅತ್ತೆಗೆ ಕಷ್ಟವಾದುದನ್ನು ಗಮನಿಸಿದ ನಾನು ಅದನ್ನು ಕಲಿತುಕೊಂಡೆ. ಮಗುವಿನ ಉಚ್ಚೆ ಹೇಲುಗಳ ಬಟ್ಟೆಯನ್ನು ಅಂದಂದೇ ಒಗೆಯಬೇಕಾಗಿತ್ತು. ಅದನ್ನು ಅತ್ತೆ ಬಹಳ ಕಷ್ಟಪಟ್ಟು ನಿರ್ವಹಿಸಿದರು.

ಮುಂದಿನ ತಿಂಗಳಿಂದ ಮಗುವಿಗೆ ಬೇಕಾದ ಆಹಾರದ ವಸ್ತುಗಳನ್ನೆಲ್ಲಾ ಇಟ್ಟು ಅದನ್ನು ತಯಾರಿಸುವ ರೀತಿ ಅತ್ತೆಗೆ ಹೇಳಿಕೊಟ್ಟು ತಿನ್ನಿಸುವುದನ್ನು, ಕುಡಿಸುವುದನ್ನು ಮಾಡಲು ಒಪ್ಪಿಸುತ್ತಿದ್ದೆ. ಆದರೆ ಅದು ಸರಿಯಾಗಿ ನಿರ್ವಹಣೆ ಆಗುತ್ತಿರಲಿಲ್ಲ ಮತ್ತು ಆಗಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದ್ದರೂ ನಾನು ಅಸಹಾಯಕಳಾಗಿದ್ದೆ. ಆಗ ನನಗೆ ನೆರವಾದವಳು ಎದುರು ಮನೆಯ ಝುಲೈಖಾ. ಅಕ್ಕ ನೂರ್‌ಜಹಾನ್‌ಳನ್ನು ಗಂಡನ ಮನೆಗೆ ಕಳುಹಿಸಿದ ಬಳಿಕ ನನ್ನ ನಾದಿನಿ ಅವಳಿಗೆ ಸ್ನೇಹಿತೆಯಾಗಿದ್ದಳು. ಈಗ ಅವಳೂ ಗಂಡನ ಮನೆಗೆ ಹೊರಟ ಮೇಲೆ ಅವಳಿಗೆ ನನ್ನ ಮಗಳು ಪುಟ್ಟ ಸ್ನೇಹಿತೆಯಾಗಿದ್ದಳು. ನನ್ನ ಮಗಳಿಗೆ ಅವಳು ಪ್ರೀತಿಯ ಅತ್ತೆಯಾದಳು. ನಾನು ಇಟ್ಟು ಬಂದುದೆಲ್ಲವನ್ನೂ ಓದಬಲ್ಲ ಅವಳು ತಿಳಿದು ಸಮಯ ಸಮಯಕ್ಕೆ ಉಣಿಸಿ, ನಿದ್ದೆ ಬಂದಾಗ ನಿದ್ದೆ ಮಾಡಿಸಿ ನನ್ನ ಮಗಳ ಆರೈಕೆಗೆ ಒದಗಿದವಳು ಝುಲೈಖಾ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)