ಪ್ರೊ.ಟಿ.ಕೆ.ಮೋಹನ್
ಉಡುಪಿ, ಎ.27: ಉಡುಪಿ ಎಂಜಿಎಂ ಕಾಲೇಜಿನಲ್ಲಿ ಸುದೀರ್ಘ ಕಾಲ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಪ್ರೊ.ಟಿ.ಕೆ. ಮೋಹನ್ ಗುರುವಾರ ಬೆಳಗ್ಗೆ ಬೆಂಗಳೂರಿನ ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 66 ವರ್ಷ ಪ್ರಾಯವಾಗಿತ್ತು. ಅವರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಉಡುಪಿ ಎಂ.ಜಿ.ಎಂ. ಕಾಲೇಜಿನ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕ ರಾಗಿ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಪ್ರೊ. ಮೋಹನ್, ವಿದ್ಯಾರ್ಥಿಗಳ ಹಾಗೂ ಸಹೋದ್ಯೋಗಿಗಳ ನೆಚ್ಚಿನ ಶಿಕ್ಷಕರಾಗಿದ್ದರು. ಇದಕ್ಕೆ ಮೊದಲು ಅವರು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು, ಶೃಂಗೇರಿ ಜೆ.ಸಿ.ಬಿ.ಎಂ. ಕಾಲೇಜಿ ನಲ್ಲಿ ಪ್ರಾಧ್ಯಾಪಕರಾಗಿ,ಮೂಡಬಿದ್ರೆ ಮಹಾವೀರ ಕಾಲೇಜಿನ ಪ್ರಾಂಶುಪಾಲ ರಾಗಿ ಸೇವೆ ಸಲ್ಲಿಸಿದ್ದರು.
ನಿವೃತ್ತಿಯ ನಂತರ ಬೆಂಗಳೂರಿನ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ಪ್ರೊ.ಮೋಹನ್, ಮಂಗಳೂರು ವಿವಿಯ ಅರ್ಥಶಾಸ್ತ್ರ ವಿದ್ಯಾರ್ಥಿಗಳಿಗಾಗಿ ಬರೆದ ಗ್ರಂಥ ‘ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಹಣಕಾಸು’ ಅತ್ಯಂತ ಬೇಡಿಕೆಯ ಗ್ರಂಥವಾಗಿತ್ತು.