ಗೋಹತ್ಯಾ ನಿಷೇಧದ ರಾಜಕೀಯ ಲಾಭವೂ - ಬೀಫ್ ಉದ್ದಿಮೆಯ ಸಮಾಜೋಆರ್ಥಿಕ ಲಾಭವೂ
ಭಾಗ - 2
2015ರಲ್ಲಿ ಭಾರತದ ಒಟ್ಟು ಬೀಫ್ ಉತ್ಪಾದನೆಯ ಶೇ. 53ರಷ್ಟನ್ನು ರಫ್ತು ಮಾಡಲಾಗಿದ್ದರೆ ಶೇ. 47ರಷ್ಟು ಆಂತರಿಕವಾಗಿ ಬಳಕೆಯಾಗಿದೆ. 2015-16ರಲ್ಲಿ ಭಾರತಕ್ಕೆ ಅತ್ಯಧಿಕ ರಫ್ತು ಆದಾಯ (ರೂ. 26,685.41 ಕೋಟಿ) ತಂದುಕೊಟ್ಟಿರುವುದೇ ಬೀಫ್ ರಫ್ತು!
ಖಾಸಗಿ ಘಟಕಗಳಲ್ಲಿ ವಧೆಯಿಂದ ಹಿಡಿದು ರಫ್ತು ಮಾಡುವ ತನಕದ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತವೆ. ಈ ಘಟಕಗಳು ಎಲ್ಲಾ ವಿಧದ ಕೇಂದ್ರ, ರಾಜ್ಯ ಮತ್ತು ಸ್ಥಳೀಯಾಡಳಿತಗಳ ನಿಯಮಗಳಿಗೆ ಅನುಸಾರವಾಗಿ ಕಾರ್ಯಾಚರಿಸುತ್ತವೆ ಮಾತ್ರವಲ್ಲದೆ ಕೃಷಿ ಮತ್ತು ಸಂಸ್ಕರಿತ ಆಹಾರೋತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (Agricultural and Processed Food Products Export Development Authority; APEDA) ಅಧಿಕಾರಿಗಳಿಂದ ಕಾಲಕಾಲದ ತನಿಖೆ ಮತ್ತು ಗುಣಮಟ್ಟ ಪರಿಶೀಲನೆಗೆ ಒಳಪಟ್ಟಿರುತ್ತವೆ. 2015ರಲ್ಲಿ ಭಾರತದ ಒಟ್ಟು ಬೀಫ್ ಉತ್ಪಾದನೆಯ ಶೇ. 53ರಷ್ಟನ್ನು ರಫ್ತು ಮಾಡಲಾಗಿದ್ದರೆ ಶೇ. 47ರಷ್ಟು ಆಂತರಿಕವಾಗಿ ಬಳಕೆಯಾಗಿದೆ. 2015-16ರಲ್ಲಿ ಭಾರತಕ್ಕೆ ಅತ್ಯಧಿಕ ರಫ್ತು ಆದಾಯ (ರೂ. 26,685.41 ಕೋಟಿ) ತಂದುಕೊಟ್ಟಿರುವುದೇ ಬೀಫ್ ರಫ್ತು!
ಉತ್ತರ ಪ್ರದೇಶದ ಕತೆ
ಸುಮಾರು 126 ಸಾರ್ವಜನಿಕ ಕಸಾಯಿಖಾನೆಗಳಿರುವ ಉತ್ತರ ಪ್ರದೇಶ ಇಡೀ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ಇನ್ನು ರಾಜ್ಯದಲ್ಲಿರುವ 66 ಸಂಸ್ಕರಣಾ ಘಟಕಗಳೆಲ್ಲವೂ (ಇವುಗಳಲ್ಲಿ ವಧೆ ಹಾಗೂ ಸಂಸ್ಕರಣೆ ಘಟಕಗಳು, ಬರೀ ವಧಾ ಘಟಕಗಳು ಮತ್ತು ಬರೀ ಸಂಸ್ಕರಣಾ ಘಟಕಗಳು ಸೇರಿವೆ) ಖಾಸಗಿ ವಲಯದಲ್ಲಿದ್ದು ಅವುಗಳ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಭಾರತ ರಫ್ತು ಮಾಡುತ್ತಿರುವ ಒಟ್ಟು ಬೀಫ್ನ ಶೇ. 67ರಷ್ಟು ಉತ್ತರ ಪ್ರದೇಶ ಒಂದರಲ್ಲೇ ಉತ್ಪತ್ತಿಯಾಗುತ್ತಿದೆ! ಗುಜರಾತ್ನ ಕತೆ
39 ಸಂಸ್ಕರಣಾ ಘಟಕಗಳನ್ನು ಹೊಂದಿರುವ ಗುಜರಾತ್ ಭಾರತದಲ್ಲಿ 10ನೆ ಸ್ಥಾನದಲ್ಲಿದೆ. ಅಲ್ಲಿ ದಿನಂಪ್ರತಿ 1,000ಕ್ಕೂ ಅಧಿಕ ಜಾನುವಾರುಗಳನ್ನು ವಧಿಸಲಾಗುತ್ತದೆ. ಮೋದಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಗುಜರಾತ್ನಿಂದ ರಫ್ತಾದ ಬೀಫ್ನ ಪ್ರಮಾಣ ಏರಿಕೆಯಾಗುತ್ತಲೇ ಹೋಗಿದೆ. ಉದಾಹರಣೆಗೆ 2001ರಲ್ಲಿ 10,600 ಟನ್ ಇದ್ದದ್ದು 2010-11ರಲ್ಲಿ ಎರಡು ಪಟ್ಟು ಹೆಚ್ಚಾಗಿ 22,000 ಟನ್ ಆಗಿತ್ತು!
ಸಮಾಜೋಪಕಾರಿ ಉದ್ದಿಮೆ
ಬೀಫ್ ಉದ್ದಿಮೆಯಿಂದ ಸರಕಾರಗಳಿಗೆ ಮತ್ತು ಸಮಾಜಕ್ಕೆ ಕೇವಲ ವಿದೇಶಿ ವಿನಿಮಯವಷ್ಟೇ ಅಲ್ಲದೆ ಇನ್ನಿತರ ಬಗೆಯ ಪ್ರಯೋಜನಗಳು ಕೂಡ ದೊರೆಯುತ್ತಿವೆ. ಪ್ರತಿಯೊಂದು ಜಾನುವಾರನ್ನು ಖರೀದಿಸಿದಾಗ ಮತ್ತು ಪ್ರತಿಯೊಂದು ವಧೆ ನಡೆಸಿದಾಗ ಸರಕಾರಕ್ಕೆ ಹಣ ಸಂದಾಯವಾಗುತ್ತದೆಂದು ತಿಳಿದುಬರುತ್ತದೆ. ಇನ್ನು ಕಸಾಯಿಖಾನೆ ಮತ್ತು ಸಂಸ್ಕರಣಾ ಘಟಕಗಳ ಉಪಉತ್ಪನ್ನಗಳು ನಮ್ಮ ದಿನಬಳಕೆಯ ಆಹಾರ ಮತ್ತು ಆಹಾರೇತರ ವಸ್ತುಗಳ ತಯಾರಿಯಲ್ಲಷ್ಟೇ ಅಲ್ಲದೆ ವೈದ್ಯಕೀಯ ಮತ್ತು ಉದ್ಯಮ ರಂಗಗಳಲ್ಲೂ ವ್ಯಾಪಕವಾಗಿ ಬಳಕೆಯಾಗುವ ಸತ್ಯ ಎಷ್ಟು ಮಂದಿಗೆ ಗೊತ್ತಿದೆ? ತಮ್ಮ ನಾಯಕರ ಕಪಟ ರಾಜಕೀಯಕ್ಕೆ ಬಲಿಯಾದ ಮುಗ್ಧ ಗೋಪ್ರೇಮಿಗಳು, ಶಾಖಾಹಾರಿ ಸಂಘಪರಿವಾರಗರಂತೂ ಇದನ್ನು ಕೇಳಿದರೆ ಹೌಹಾರುವುದು ಖಚಿತ! ಆದರೆ ಸತ್ಯ ಯಾವತ್ತೂ ಕಹಿಯಾಗಿರುತ್ತದೆ.
ನಿಮಗಿದು ಗೊತ್ತೇ?
►ಆಕಳ ಚರ್ಮ ಮತ್ತಿತರ ಅಂಗಗಳಿಂದ ಸಿಗುವ ಕೊಲಾಜೆನ್ ಎಂಬ ದ್ರವ್ಯವನ್ನು ಅನಿಯಂತ್ರಿತ ಮೂತ್ರ ವಿಸರ್ಜನೆ ತಡೆಗಟ್ಟುವ ಔಷಧಿಯಲ್ಲಿ, ಬ್ಯಾಂಡೇಜುಗಳಲ್ಲಿ, ಕಣ್ಣಿನ ಪೊರೆ ನಿವಾರಣೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
►ಇದೇ ಕೊಲಾಜೆನ್ನಿಂದ ತಯಾರಾಗುವ ಜಿಲೆಟಿನ್ ಪುಡಿಯಿಂದ ಜೆಲ್ಲಿ, ಜ್ಯಾಮ್, ಸೌಂದರ್ಯವರ್ಧಕ, ನೋವು ನಿವಾರಕ ಮುಲಾಮು ಇತ್ಯಾದಿಗಳನ್ನು ತಯಾರಿಸಲಾಗುತ್ತದೆ.
►ಪಾದರಕ್ಷೆ, ಬ್ಯಾಗು, ದುಬಾರಿ ಸೋಫಾ, ಕುಷನ್ ಇತ್ಯಾದಿಗಳ ತಯಾರಿಗೆ ಚರ್ಮವೇ ಮೂಲಸಾಮಗ್ರಿ.
►ನಾವು ತಿನ್ನುವ ಸಕ್ಕರೆಯ ಸಂಸ್ಕರಣೆಗೆ, ನಮ್ಮ ಪಿಂಗಾಣಿ ವಸ್ತುಗಳಿಗೆ, ನಮ್ಮ ಬಟ್ಟೆಯ ಬಟನ್ಗಳಿಗೆ, ಸಂಧಿವಾತದ ಔಷಧಿಗೆ, ರಸಗೊಬ್ಬರಕ್ಕೆ ಬೇಕಾದ ಕ್ಯಾಲ್ಷಿಯಂ ಮತ್ತು ರಂಜಕಗಳಿಗೆ ಮೂಳೆಯ ಪುಡಿಯೇ ಮೂಲ.
►ಕಿವಿ, ಕಣ್ಣಿನ ಡ್ರಾಪ್ಸ್, ಕೆಮ್ಮಿನ ಔಷಧ, ಕೂದಲು ಕಂಡಿಷನರ್, ಶಾಂಪೂ, ಬಣ್ಣದ ಶಾಯಿ ಇತ್ಯಾದಿ ತಯಾರಿಸಲು, ಕೃತಕ ಕಣ್ಣೀರು ಬರಿಸಲು ಬೇಕಾಗುವ ಗ್ಲಿಸರಿನ್ ಎಲ್ಲಿಂದ ಬರುತ್ತದೆ ಗೊತ್ತೇ? ಮೂಳೆ, ಗೊರಸು, ಕೊಂಬು ಮತ್ತು ಕೊಬ್ಬುಗಳಿಂದ ತೆಗೆಯುವ ಟ್ಯಾಲೊ ಎಣ್ಣೆಯಿಂದ!
►ಟ್ಯಾಲೊ ಎಣ್ಣೆಯನ್ನು ಬ್ರೇಕ್ ದ್ರವ, ವಿಮಾನದ ಕೀಲೆಣ್ಣೆ, ಮೋಂಬತ್ತಿ, ಆಹಾರವಸ್ತುಗಳ ಪ್ಯಾಕಿಂಗ್ಗೆ ಬೇಕಾದ ಎಣ್ಣೆಕಾಗದ, ನಾನಾ ಬಗೆಯ ಆ್ಯಂಟಿಬಯಾಟಿಕ್ ಮುಂತಾದವುಗಳ ಉತ್ಪಾದನೆಗೂ ಉಪಯೋಗಿಸಲಾಗುತ್ತದೆ.
►ನಾವು ಸೇವಿಸುವ ಚ್ಯೂಯಿಂಗ್ ಗಮ್, ಬೇಕರಿ ಖಾದ್ಯಗಳನ್ನು ಭಕ್ಷ್ಯಯೋಗ್ಯ ಟ್ಯಾಲೊ ಎಣ್ಣೆಯಿಂದ ತಯಾರಿಸಲಾಗುತ್ತದೆ.
►ಜಾನುವಾರುಗಳ ಶ್ವಾಸಕೋಶ ಮತ್ತು ಶ್ವಾಸನಾಳಗಳಿಂದ ತಯಾರಿಸುವ ‘ಹೆಪಾರಿನ್’ ಎಂಬ ರಕ್ತ ಮುದ್ದೆಗಟ್ಟುವಿಕೆಯನ್ನು ತಡೆಯುವ ಔಷಧ ಶಸ್ತ್ರಚಿಕಿತ್ಸೆಯಲ್ಲಿ ಉಪಯುಕ್ತ.
►ಅಡ್ರಿನಾಲಿನ್ ಗ್ರಂಥಿಗಳಿಂದ ಸ್ಟಿರಾಯ್ಡಿಗಳು ಮತ್ತು ಹೃದ್ರೋಗ ಚಿಕಿತ್ಸೆಗೆ ಬೇಕಾದ ಎಫಿನೆಫ್ರಿನ್ ಸಿಗುತ್ತವೆ. ಯಕೃತ್ತಿನಿಂದ ವಿಟಮಿನ್ ಬಿ-12, ಲಿವರ್ ಎಕ್ಸ್ಟ್ರಾಕ್ಟ್ ಸಿಕ್ಕರೆ ಡಯಾಬಿಟಿಸ್ ರೋಗಿಗಳಿಗೆ ಸುಪರಿಚಿತವಾದ ಇನ್ಸುಲಿನ್ಅನ್ನು ಮೇದೋಜೀರಕ ಗ್ರಂಥಿಯಿಂದ ಪಡೆಯಲಾಗುತ್ತದೆ.
►ಆಕಳಿನ ರಕ್ತದ ಪುಡಿಯಿಂದ ಮರಗೆಲಸದ ಗಮ್, ಅಗ್ನಿಶಾಮಕ ನೊರೆ, ರಸಗೊಬ್ಬರ, ರಕ್ತಹೀನತೆಯ ಮಾತ್ರೆ ಮುಂತಾದವುಗಳನ್ನು ಉತ್ಪಾದಿಸಲಾಗುತ್ತದೆ......... ಪಟ್ಟಿ ಇಲ್ಲಿಗೆ ಮುಗಿಯುವುದಿಲ್ಲ, ಇನ್ನೂ ದೀರ್ಘವಿದೆ!
ವಾಸ್ತವ ಏನೆಂದರೆ ಇಷ್ಟೊಂದು ವರಮಾನ ತಂದುಕೊಡುವ, ಇಷ್ಟೊಂದು ಜನರಿಗೆ ಉದ್ಯೋಗ ಕಲ್ಪಿಸುವ, ಸಮಾಜಕ್ಕೆ ಇಷ್ಟೊಂದು ಪ್ರಯೋಜನಕಾರಿಯಾದ ಉದ್ದಿಮೆಯನ್ನು ಖುದ್ದು ಕೇಂದ್ರ ಸರಕಾರವೇ ಪ್ರೋತ್ಸಾಹಿಸುತ್ತದೆ. ಎಮ್ಮೆ ಮಾಂಸ ರಫ್ತು ಮಾಡುವವರಿಗೆ ಕಿಲೊ ಒಂದರ ರೂ. 70ರಂತೆ ಸಾಗಾಟ ಸಬ್ಸಿಡಿ ನೀಡಲಾಗುತ್ತಿದೆ. ಕಸಾಯಿಖಾನೆಗಳ ಸ್ಥಾಪನೆ ಮತ್ತು ಆಧುನಿಕೀಕರಣಕ್ಕೂ ಶೇ. 50ರಿಂದ 75ರಷ್ಟು ಗ್ರಾಂಟ್ ನೀಡಲಾಗುತ್ತಿದೆ (ಗರಿಷ್ಠ 15 ಕೋಟಿ). ಉದಾಹರಣೆಗೆ 2006-07ರಿಂದ 2011-12ರ ವರೆಗಿನ 5 ವರ್ಷಗಳ ಅವಧಿಯಲ್ಲಿ ಕಸಾಯಿಖಾನೆ ಸ್ಥಾಪನೆಗೆಂದು ರೂ. 240 ಕೋಟಿ, ಎಮ್ಮೆ, ಕೋಣ ಸಾಕಣೆಗೆಂದು ರೂ. 300 ಕೋಟಿ ಸಬ್ಸಿಡಿ ನೀಡಲಾಗಿದೆ! ಮೋದಿ ಸರಕಾರ ಇರಲಿ ಯೋಗಿ ಸರಕಾರ ಇರಲಿ ಅಥವಾ ಇನ್ಯಾವುದೇ ಸರಕಾರ ಇರಲಿ, ಇಂತಹ ಚಿನ್ನದ ಮೊಟ್ಟೆ ಇಡುವ ಉದ್ದಿಮೆಗಳನ್ನು ಮುಟ್ಟುವ ಗೋಜಿಗೆ ಯಾರೂ ಹೋಗಲಾರರು. ಬಂದ್ ಮಾಡಿದರೇನು, ಪರ್ಯಾಯವಾಗಿ ಗೋಮೂತ್ರ, ಗೋಲದ್ದಿ ಇತ್ಯಾದಿ ಉದ್ದಿಮೆಗಳಿವೆಯಲ್ಲಾ ಎಂಬ ಮಾತುಗಳು ಕೇಳಿಬರಬಹುದು. ಯಾರೇನೇ ಹೇಳಿದರೂ, ಅದೆಷ್ಟೇ ಆಕರ್ಷಕವಾಗಿ ಪ್ಯಾಕ್ ಮಾಡಿದರೂ ಇವುಗಳಿಗೆ ಮಾರುಕಟ್ಟೆ ತುಂಬಾ ತುಂಬಾ ಸೀಮಿತ.
ಬೀಫ್ ರಫ್ತು ಉದ್ದಿಮೆಗಳ ಮಾಲಕರಾರು?
ನಿಜ ಹೇಳಬೇಕೆಂದರೆ ಆಧುನಿಕ ಸಂಸ್ಕರಣಾ ಘಟಕಗಳು, ಮಾಂಸ ರಫ್ತು ಮತ್ತಿತರ ಸಂಬಂಧಪಟ್ಟ ಉದ್ದಿಮೆಗಳನ್ನು ನಡೆಸುತ್ತಿರುವವರಲ್ಲಿ ಅತ್ಯಧಿಕ ಮಂದಿ ಹಿಂದೂಗಳೇ ಆಗಿದ್ದಾರೆ. ಉದಾಹರಣೆಗೆ ಅರೇಬಿಯನ್ ಎಕ್ಸ್ಪೋರ್ಟ್ಸ್, ಅಲ್ ಕಬೀರ್, ಸುಜಾತಾ ಬೋನ್ಸ್, ಬೌಂಟಿ ಫ್ಯಾಶನ್, ಮಹೇಶ್ ಜಗದಾಲೆ ಆ್ಯಂಡ್ ಕೊ. ಮುಂತಾದ ಅನೇಕ ಸಂಸ್ಥೆಗಳಿರುವುದು ಮುಸ್ಲಿಮೇತರರ ಮಾಲಕತ್ವದಲ್ಲಿ. 2013ರ ಮುಜಪ್ಫರ್ನಗರ ಕೋಮು ಗಲಭೆಗಳ ಕಾಲದಲ್ಲಿ ದ್ವೇಷದ ಭಾಷಣ ಮಾಡಿದ ಆರೋಪ ಎದುರಿಸುತ್ತಿರುವ ಸಂಗೀತ ಸೋಮನ ಕಥೆಯನ್ನೇ ತೆಗೆದುಕೊಳ್ಳಿ. ಇದೇ ಸೋಮ್, ಮೊಯಿನುದ್ದೀನ್ ಖುರೇಷಿ ಮತ್ತು ಯೋಗೇಶ್ ರಾವತ್ ಎಂಬಿಬ್ಬರ ಜೊತೆ ಸೇರಿಕೊಂಡು ಒಂದು ಮಾಂಸ ಸಂಸ್ಕರಣಾ ಘಟಕವನ್ನು ಸ್ಥಾಪಿಸಲೆಂದು ಅಲಿಗಡದಲ್ಲಿ ಜಮೀನು ಖರೀದಿಸಿದ್ದ. ಅದರ ಹೆಸರು ‘ಅಲ್ ದುವಾ ಆಹಾರ ಸಂಸ್ಕರಣಾ ಸಂಸ್ಥೆ ಪ್ರೈ.ಲಿ. ’ 2005-08ರ ಅವಧಿಯಲ್ಲಿ ಮೂವರೂ ಅಲ್ ದುವಾದಲ್ಲಿ ಷೇರುದಾರರಾಗಿದ್ದರು. ಪ್ರತಿಯೊಬ್ಬನ ಬಳಿ 20,000 ಷೇರುಗಳಿದ್ದವು. ಅಲ್ ದುವಾ ತನ್ನ ಜಾಲತಾಣದಲ್ಲಿ ಹೇಳಿಕೊಳ್ಳುವಂತೆ ಅದು ಭಾರತದ ಓರ್ವ ಪ್ರಮುಖ ‘ಹಲಾಲ್’ ಮಾಂಸ ಉತ್ಪಾದಕ ಹಾಗೂ ರಫ್ತುದಾರ; ಎಮ್ಮೆ, ಕೋಣ, ಕುರಿ/ಕುರಿಮರಿ, ಆಡುಗಳ ಹಲಾಲ್ ಮಾಂಸ ಮತ್ತು ಚರ್ಮದ ರಫ್ತಿನಲ್ಲಿ ವಿಶೇಷ ಪರಿಣತಿ ಇರುವ ಸಂಸ್ಥೆ. ಅಲ್ ದುವಾದ ನಿಬಂಧನೆಗಳ ದಾಖಲೆಪತ್ರದಲ್ಲಿ (Memorandum of Association ) ಸಂಗೀತ ಸೋಮನ ಸಹಿ ಇದೆ. ಕಂಪೆನಿ ವ್ಯವಹಾರಗಳ ಸಚಿವಾಲಯಕ್ಕೆ ನೀಡಲಾಗಿರುವ ಅಧಿಕೃತ ದಾಖಲೆಗಳ ಪ್ರಕಾರ 2005ರಲ್ಲಿ ಸ್ಥಾಪನೆ ಆದಂದಿನಿಂದ 2008ರ ತನಕ ಸೋಮ್ ಅಲ್ ದುವಾದ ನಿರ್ದೇಶಕನಾಗಿದ್ದ. ಇದಲ್ಲದೆ ‘ಅಲ್ ಅನಮ್ ಆಗ್ರೊ ಫುಡ್ಸ್’ ಎಂಬ ಮತ್ತೊಂದು ಮಾಂಸ ರಫ್ತು ಸಂಸ್ಥೆಯಲ್ಲೂ ಭಾಗೀದಾರನಾಗಿದ್ದ. ಮಾತ್ರವಲ್ಲ ಸ್ವಲ್ಪಸಮಯ ‘ಎಂಕೆ ಓವರ್ಸೀಸ್’ ಹೆಸರಿನ ಮಾಂಸ ಸಂಸ್ಕರಣಾ ಸಂಸ್ಥೆಯಲ್ಲೂ ಓರ್ವ ಪಾರ್ಟನರ್ ಆಗಿದ್ದ.
ನಿಷೇಧ ಮತ್ತು ಪರಿಣಾಮ
ಈಗ ಗೋಹತ್ಯಾ ನಿಷೇಧದ ಕೂಗಿಗೂ, ಆಂತರಿಕವಾಗಿ ಬಳಕೆಯಾಗುವ ಬೀಫ್ಗೂ, ಕಸಾಯಿಖಾನೆ, ಮಾಂಸದಂಗಡಿ ಮುಚ್ಚುಗಡೆಗೂ ಇರುವ ಸಂಬಂಧಗಳ ಕುರಿತು ಸ್ವಲ್ಪ ತಿಳಿದುಕೊಳ್ಳೋಣ. ಮೂಲತಃ ರೈತನಿಂದ ಏಜಂಟರ ಕೈಗೆ ತಲಪುವ ಮುದಿಯಾದ, ಬತ್ತಿದ ಎಮ್ಮೆಗಳು ಮತ್ತು ಕೋಣಗಳು ಅಂತಿಮವಾಗಿ ಸಾರ್ವಜನಿಕ ಕಸಾಯಿಖಾನೆಗಳಿಗೆ ಮತ್ತು ಸಂಸ್ಕರಣಾ ಕಾರ್ಖಾನೆಗಳಿಗೆ ತಲುಪುತ್ತವೆ. ಇಂದು ಯೋಗಿ ಸರಕಾರದಡಿ ಕಾನೂನುಬಾಹಿರವಾಗಿ ಪರಿಣಮಿಸಿರುವುದು ಸಾರ್ವಜನಿಕ ವಲಯದ ಕಸಾಯಿಖಾನೆಗಳು. ಅವು ಕಾನೂನುಬಾಹಿರ ಆಗಿರು ವುದರ ಹಿಂದೆ ದೊಡ್ಡ ಕತೆಯೇ ಇದೆ. ದಶಕಗಳ ಕಾಲದಿಂದ ಅತೀವ ನಿರ್ಲಕ್ಷ್ಯಕ್ಕೊಳಗಾಗಿರುವ ಫಲವಾಗಿ ಇವೆಲ್ಲವುಗಳ ಪರಿಸ್ಥಿತಿ ತೀರ ಹದಗೆಟ್ಟಿದ್ದು ದೇಶಾದ್ಯಂತ ಹೆಚ್ಚಿನ ಕಡೆಗಳಲ್ಲಿ ಇವುಗಳಿಗೆ ಅಪ್ಪ, ಅಮ್ಮ ಇಲ್ಲದಂತಾಗಿದೆ.
ಆಧುನಿಕೀಕರಣದ ಮಾತೆತ್ತಿದಾಗಲೆಲ್ಲ ಹಲವಾರು ಕುಂಟುನೆವನಗಳನ್ನು ಮುಂದಿಡುವ ಮೂಲಕ ಪ್ರಕ್ರಿಯೆಯನ್ನು ನಿರಂತರವಾಗಿ ಮುಂದೂಡಲಾಗುತ್ತಿದೆ. ಹೀಗೆ ಅಧಿಕಾರಿಗಳ ನಿರಂತರ ಉಪೇಕ್ಷೆಯ ಫಲವಾಗಿ ಇವು ನಿಧಾನಕ್ಕೆ ಕೆಡುತ್ತಾ ಬಂದಿವೆ. ಸಂಘ ಪರಿವಾರಕ್ಕೆ ಭಾರೀ ಉಪಯುಕ್ತವಾದ ಈ ನಿರ್ಲಕ್ಷ್ಯ ಉದ್ದೇಶಪೂರ್ವಕವೇ ಇರಬೇಕು ಅನಿಸುತ್ತದೆ. ಇದರ ಪರಿಣಾಮವಾಗಿ ಈಗಾಗಲೇ ಅನೇಕ ಕಸಾಯಿಖಾನೆಗಳು ಮುಚ್ಚಿ ಹೋಗಿವೆ. ಸಾರ್ವಜನಿಕ ಕಸಾಯಿಖಾನೆಗಳ ದಿನಚರಿ ಹೇಗಿದೆ ಎಂದರೆ ಅಲ್ಲಿ ಸಿದ್ಧವಾಗುವ ಮಾಂಸದ ಖರೀದಿಗೆ ಪರವಾನಿಗೆಯನ್ನು ಹೊಂದಿರುವ ಸಗಟು ಅಥವಾ ಚಿಲ್ಲರೆ ಮಾರಾಟ ಗಾರರು ಅದನ್ನು ಅದೇ ದಿನ ಬಳಕೆದಾರರಿಗೆ ತಲುಪಿಸುತ್ತಾರೆ. ಇಂತಹ ಚಿಲ್ಲರೆ ಅಂಗಡಿಗಳಲ್ಲಿ ಹೆಚ್ಚಾಗಿ ಶೈತ್ಯಾಗಾರಗಳಿರುವುದಿಲ್ಲ. ಈಗ ಏನಾಗಿದೆ ಎಂದರೆ ಕಸಾಯಿಖಾನೆಗಳು ಮುಚ್ಚಿರುವ ಕಾರಣ ನೀಡಿ ಅನೇಕ ಮಾಂಸ ಮಾರಾಟಗಾರರ ಲೈಸೆನ್ಸ್ ಗಳನ್ನು ನವೀಕರಿಸಲಾಗಿಲ್ಲ. ಯೋಗಿ ಸರಕಾರಕ್ಕಿದು ರೋಗಿ ಬಯಸಿದ್ದೂ ಹಾಲು, ವೈದ್ಯ ಹೇಳಿದ್ದೂ ಹಾಲು ಎಂಬಂತಾಗಿದೆ. ಹೀಗಾಗಿ ಇವತ್ತು ಮಾರಾಟದ ಲೈಸೆನ್ಸ್ ಇಲ್ಲ ಎಂಬ ಕಾರಣವೊಡ್ಡಿ ಇಂತಹ ಸಾವಿರಾರು ಮಾಂಸದಂಗಡಿಗಳಿಗೆ ಬೀಗ ಜಡಿಯಲಾಗಿದೆ.
ಯೋಗಿ ಸರಕಾರದ ಕ್ರಮದಿಂದಾಗಿ ಸಾವಿರಾರು ಜನ ನಿರುದ್ಯೋಗಿಗಳಾಗುವುದರೊಂದಿಗೆ ಎಮ್ಮೆ, ಕೋಣಗಳ ಸಂಖ್ಯೆಯೂ ಇಳಿಮುಖವಾಗಲಿದೆ. ಸಂಘಪರಿವಾರಿಗರು ಸುಖಾಸುಮ್ಮನೆ ಆರೋಪಿಸುವಂತೆ ಬೀಫ್ ಸೇವನೆಯಿಂದ ಎಮ್ಮೆ, ಕೋಣಗಳ ಸಂಖ್ಯೆ ಕಡಿಮೆಯಾಗಿಲ್ಲ. ತದ್ವಿರುದ್ಧವಾಗಿ 2007ರಿಂದ 2012ರ ತನಕದ ಐದು ವರ್ಷಗಳ ಅವಧಿಯಲ್ಲಿ ಎಮ್ಮೆ, ಕೋಣಗಳ ಸಂಖ್ಯೆಯಲ್ಲಿ ಶೇ. 29ರಷ್ಟು ಹೆಚ್ಚಳ ಆಗಿದೆ! ಆದರೆ ವಾಸ್ತವದಲ್ಲಿ ಯೋಗಿ ಸರಕಾರದ ನೀತಿಯಿಂದಾಗಿ ಇನ್ನು ಮುಂದೆ ಅವುಗಳ ಸಂಖ್ಯೆ ಇಳಿಮುಖವಾಗಲಿದೆ. ಏಕೆೆಂದರೆ ಅನುಪಯುಕ್ತ ಎಮ್ಮೆ, ಕೋಣಗಳನ್ನು ಮಾರಲಾಗದ ಪರಿಸ್ಥಿತಿಯಲ್ಲಿ ಹೈನುಗಾರಿಕೆ ಆರ್ಥಿಕವಾಗಿ ನಷ್ಟದಾಯಕ ಆಗಲಿರುವುದರಿಂದ ಹೈನುಗಾರರು, ರೈತರು ಸಾಕಣೆಯನ್ನೇ ಕಡಿಮೆ ಮಾಡಲಿದ್ದಾರೆ. ಪಕ್ಷಪಾತೀಯ ನಡೆ
ಕಸಾಯಿಖಾನೆಗಳನ್ನು, ಮಾಂಸದಂಗಡಿಗಳನ್ನು ಮುಚ್ಚಿಸುತ್ತಿರುವ ಯೋಗಿ ಸರಕಾರ ಹಸಿರು ನ್ಯಾಯಾಲಯದ ಮೇ 12, 2015ರ ತೀರ್ಪನ್ನು ಉಲ್ಲೇಖಿಸುತ್ತಿದೆ. ಆದರೆ ಇಂತಹದೊಂದು ತೀರ್ಪು ಹಸಿರು ನ್ಯಾಯಾಲಯದ ಜಾಲತಾಣದಲ್ಲಿಯೂ ಲಭ್ಯವಿಲ್ಲ, ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯ ಜಾಲತಾಣದಲ್ಲಿಯೂ ಲಭ್ಯವಿಲ್ಲ. ಹಸಿರು ನ್ಯಾಯಾಲಯದ ಡಿಸೆಂಬರ್ 2015ರ ಆದೇಶದಲ್ಲಿ ಕೇವಲ 4 ಕಸಾಯಿಖಾನೆಗಳ ಮುಚ್ಚುಗಡೆ ಬಗ್ಗೆ ಹೇಳಲಾ ಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ 2015ರಲ್ಲಿ ಪರಿಸರಕ್ಕೆ ಅತ್ಯಂತ ಹಾನಿಕರವಾಗಿರುವ ಬಟ್ಟೆ, ನೂಲು, ಅಲುಮಿನಿಯಂ ಸಂಸ್ಕರಣೆ, ಪಲ್ಪ್, ಪೇಪರ್ ಮುಂತಾದ 129 ಉದ್ದಿಮೆಗಳನ್ನು ಗುರುತಿಸಿದ್ದು ಅದರಲ್ಲಿ 44 ಕಸಾಯಿಖಾನೆಗಳೂ ಸೇರಿದ್ದವು. ಆದರೆ ಯೋಗಿ ಸರಕಾರ ಇಂದು ಮಾಲಿನ್ಯಕ್ಕೆ ಕಾರಣವಾದ ಉದ್ದಿಮೆಗಳತ್ತ ವಾರೆ ನೋಟವನ್ನೂ ಬೀರದೆ ಕೇವಲ ಆಂತರಿಕ ಬಳಕೆಗೆಂದು ಬೀಫ್ ಉತ್ಪಾದಿಸುವ ಸಾರ್ವಜನಿಕ ಕಸಾಯಿಖಾನೆಗಳನ್ನಷ್ಟೇ ಗುರಿಯಾಗಿಸಿದೆ. ಯಾಕೆ? ಯಾಕೆಂದರೆ ಅದರ ನೈಜ ಉದ್ದೇಶ ದೇಶದೊಳಗಿನ ಉತ್ಪಾದಕರು, ವಿತರಕರು, ಮಾರಾಟಗಾರರು ಮತ್ತು ಬಳಕೆದಾರರನ್ನು ಸದೆಬಡಿಯುವುದೇ ಹೊರತು ಮಾಲಿನ್ಯ ನಿಯಂತ್ರಣ ಅಲ್ಲ. ಬೇರೊಂದು ವಿಧದಲ್ಲಿ ಹೇಳುವುದಾದರೆ ದಲಿತ, ಆದಿವಾಸಿ ಮತ್ತು ಮುಸ್ಲಿಂ ಸಮುದಾಯಗಳ ದಮನವೇ ಯೋಗಿ ಸರಕಾರದ ಪ್ರಧಾನ ಉದ್ದೇಶ. ಇದು ಅಂತಿಮವಾಗಿ ಅವರನ್ನು ಸಂಘ ಪರಿವಾರದ ಹಿಂದೂ ರಾಷ್ಟ್ರದಲ್ಲಿ ದ್ವಿತೀಯ, ತೃತೀಯ ದರ್ಜೆಯ ಪ್ರಜೆಗಳನ್ನಾಗಿಸುವ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿದೆ.
(ಆಧಾರ: ವಯರ್.ಇನ್ ನಲ್ಲಿ ಸಾಗರಿ ರಾಮದಾಸ್ ಲೇಖನ; ಸ್ಕ್ರಾಲ್.ಇನ್ನಲ್ಲಿ ಎಂ.ರಾಜಶೇಖರ್ ಲೇಖನ; ಉಮ್ಮೀದ್.ಕಾಮ್ ಲೇಖನ; ನಾಗೇಶ ಹೆಗಡೆ ವಿರಚಿತ: ಗೋಹತ್ಯೆ ಒಂದು ಪರಾಮರ್ಶೆ)