varthabharthi


ತಾರಸಿ ನೋಟ

ಬೇಸಿಗೆ ಬೇಗುದಿ ಕಳೆಯಲು ಪಾರ್ಕ್‌ನಲ್ಲಿ ಸ್ಟ್ರೋಲ್.ಇನ್

ವಾರ್ತಾ ಭಾರತಿ : 29 Apr, 2017
ವೆಂಕಟಲಕ್ಷ್ಮೀ ವಿ.ಎನ್.

ಅಗೋ ಇಗೋ (ಕನ್ನಡ) ಅನ್ನುವಷ್ಟರಲ್ಲಿ ನಮ್ಮ ದೈನಿಕದ ಭಾಷೆ ಸೈಬರೀಕರಣಗೊಂಡಿದೆ; ಪ್ರವಾಹದ ನೀರು ಕ್ಷಣಾರ್ಧದಲ್ಲಿ ಕಾಲ್ಮಟ್ಟ, ಎದೆಮಟ್ಟ, ತಲೆಮಟ್ಟ ತಲುಪುವಂತೆ ಕನ್ನಡ-ತೆಲುಗು-ತಮಿಳು-ಹಿಂದಿ ಎನ್ನದೆ ಮಾತೃಭಾಷೆಗಳನ್ನೂ ತೋಯಿಸಿದೆ. ಹಾಗಾಗಿಯೇ ‘ಉದ್ಯಾನವನದಲ್ಲಿ ಒಂದು ಅಡ್ಡಾಟ’ ಎನ್ನುವ ಬದಲು ಸ್ಟ್ರೋಲ್.ಇನ್! ಒಂದಾನೊಂದು ಕಾಲದಲ್ಲಿ ವೃತ್ತ/ವಾರ/ಮಾಸ ಪತ್ರಿಕೆಗಳ ಹೆಸರುಗಳು ಜೀವನ, ತಾಯಿನಾಡು, ನವಯುಗ ಎಂದಿರುತ್ತಿದ್ದವು. ಆನಂತರ ಆ ‘ವಾಣಿ’ ಈ ‘ವಾಣಿ’ಗಳಾಗಿ ಮೊಳಗಿದವು. ಸಹಜವಾಗಿಯೇ ಅವು ಈಗ, ಸ್ಕ್ರಾಲ್.ಇನ್, ವಯರ್.ಇನ್, ಫಸ್ಟ್ ಪೋಸ್ಟ್‌ಗಳಾಗಿ ಡಿಜಿಟಲೀಕರಣಗೊಂಡಿವೆ.

ಇಂಗ್ಲಿಷ್ ಭಾಷೆಯ ಬರಹಗಾರರು, ವಾಗ್ಮಿಗಳು ಹೊಸ ಸರಕು ಬಿಡುಗಡೆಯಾದಂತೆಲ್ಲ ಸರಸರನೆ ಅವನ್ನು ಅಪ್ಪಿಕೊಂಡು ಪಳಗಿಸಿಕೊಳ್ಳುತ್ತಾರೆ. ಇಲ್ಲದಿದ್ದರೆ, ಕಿರಿಯ ಸಹೋದ್ಯೋಗಿಗಳು, ತಾಂತ್ರಿಕ ಬೆಂಬಲ ನೀಡಲು ಇರುವ ತರುಣ ಕನ್ಸಲ್‌ಟೆಂಟ್‌ಗಳು ಇಂಗ್ಲಿಷ್ ಭಾಷೆ ಮಾತನಾಡುತ್ತಿದ್ದಾರೆಯೇ, ಅವರು ಆಂಗ್ಲ ಭಾಷೆಯಲ್ಲಿಯೇ ಸಂವಹಿಸುತ್ತಿದ್ದರೂ ಅದೇನೋ ತಮಗೆ ಗೊತ್ತಿಲ್ಲದ್ದನ್ನು ಹೇಳುತ್ತಿದ್ದಾರಲ್ಲ ಎಂಬ ಕಸಿವಿಸಿ ಕಾಡಬಹುದು. ಇಂಟರ್‌ನೆಟ್ ಆಡುನುಡಿ ಕ್ರಮೇಣ ಒಪ್ಪಿತ ಗ್ರಾಂಥಿಕ ಭಾಷೆಯಾಗಿ ಪಸರಿಸುತ್ತದೆ.

ಉದಾಹರಣೆಗೆ, ಒಂದು ಗೊತ್ತಾದ ಸಂಗತಿ ಕುರಿತು ತಾನು, ಈ ಹಿಂದೆ ಮಾತನಾಡಿದವರಿಗಿಂತ ಭಿನ್ನವಾಗಿ ಯೋಚಿಸುತ್ತೇನೆ ಎಂಬುದನ್ನು ಹೇಳಲು ‘ಐ ಆ್ಯಮ್ ನಾಟ್ ಆನ್ ದಿ ಸೇಮ್ ಪೇಜ್ ಆ್ಯಸ್ ಹಿಮ್/ಹರ್’ ಪದಪುಂಜವನ್ನು ಇತ್ತೀಚೆಗೆ ಬಳಸುವಂತೆ. ಹಂತ ಹಂತವಾಗಿ ವಿಷಯ ಪ್ರವೇಶಿಸಿ ವಿಶದಪಡಿಸಿಕೊಳ್ಳಲು ‘ನ್ಯಾವಿಗೇಟ್’ ಮಾಡೋಣ ಎನ್ನುವಂತೆ. (ಈ ಹಿಂದೆ ಇವು ಹೊತ್ತಿದ್ದ ಸಾಂಪ್ರದಾಯಿಕ ಅರ್ಥಗಳಿಗೆ ಡಿಜಿಟಲ್ ಡೌಲು ಬಂದಿದೆ). ಯೋಜನೆ ಚುರುಕುಗೊಳಿಸುತ್ತೇವೆ ಎನ್ನುವುದನ್ನು ‘ವಿಲ್ ಪುಟ್ ಮೋರ್ ಗ್ರೀನ್ ಇನ್‌ಟು ಇಟ್’ ಎಂದು ರೂಪಕಾತ್ಮಕವಾಗಿ ಹೇಳುವಂತೆ. ಬಿಸಿನೆಸ್‌ಮನ್, ರಾಜಕೀಯ ವಕ್ತಾರ, ಸಾಹಿತಿ, ಸಮಾಜವಿಜ್ಞಾನಿ ಎಂಬ ಭೇದ ಇಲ್ಲದೆ ಎಲ್ಲರ ಮಾತುಗಳು ಟೆಕ್ ಸ್ಸಾವಿ-ತಂತ್ರಜ್ಞಾನ ಪರಿಣತವಾಗದೆ ಬೇರೆ ಆಯ್ಕೆಯೇ ಇಲ್ಲ ಅನ್ನುವಂತಾಗಿದೆ.

ಅರೆ, ವಿಷಯಕ್ಕೆ ಬರೋಣ. ದಿನೇದಿನೇ ಏರುತ್ತಿರುವ ಮರ್ಕ್ಯುರಿಯ ಉಪಟಳ ತಾಳಲಾರದೆ, ‘‘ಶಿವಪ್ಪಾಕಾಯೊ ತಂದೆ...ಬಿಸಿಲನ್ನು ತಾಳಲಾರೆ ಕಾಪಾಡೆಯಾ’’ ಎಂದು ಅಂಗಲಾಚಿದರೆ ಪ್ರತ್ಯಕ್ಷವಾಗುವವು ಬಹುತೇಕ ಎಲ್ಲ ಬಡಾವಣೆಗಳಲ್ಲಿ ಹರಡಿರುವ ಸಣ್ಣ-ಪುಟ್ಟ, ಭವ್ಯ-ಪುರಾತನ ಪಾರ್ಕ್‌ಗಳು. ಈಗೀಗ ಎಲ್ಲವೂ ಜನನಿಬಿಡ; ಎಷ್ಟೊಂದು ಎಂದರೆ, ಅವುಗಳಲ್ಲಿ ನಿಯಮಿತವಾಗಿ ತಿರುಗಿದರೆ, ಸಣ್ಣಕತೆ, ಪ್ರಬಂಧ, ಕಿರುಚಿತ್ರ, ಸಾಕ್ಷ್ಯಚಿತ್ರ ವಗೈರೆಗಳ ನೀಲನಕ್ಷೆ ಮೂಡಲು ಮೋಸವಿಲ್ಲ. ‘ಎ ಕ್ರಾಸ್‌ಸೆಕ್ಷನ್ ಆಫ್ ಸೊಸೈಟಿ’ ಅಂತೀವಲ್ಲ-ಅಡ್ಡಲಾಗಿ ಕತ್ತರಿಸಿದ ಸಮಾಜ ನೋಟ-ಅಂದರೆ ಏನೇನಿರುತ್ತದೆಯೋ ಎಲ್ಲವೂ ಅಲ್ಲಿ ಪ್ರತಿನಿಧಿಸಲ್ಪಟ್ಟಿರುತ್ತದೆ. ನೋಡಿಯೂ ನೋಡದಂತೆ, ಕೇಳಿಯೂ ಕೇಳದಂತೆ ನಿರ್ಲಿಪ್ತ ಮುಖಮುದ್ರೆ ಹೊಂದಿರುವುದು ಹಾಗೂ ಪ್ರಸಂಗಗಳಲ್ಲಿ ಭಾಗೀದಾರರಾಗದೆ ದೂರ ಕಾಯ್ದುಕೊಳ್ಳುವುದು ವಹಿಸಬೇಕಾದ ಮುನ್ನೆಚ್ಚರಿಕೆ.

ಚಿತ್ರಿಕೆ 1: ಒಂದು ಬೆಂಚಿನ ಮೇಲೆ ಇಬ್ಬರು ವಾಕ್‌ಮೇಟ್‌ಗಳು ಸ್ನೇಹ ವಿಸ್ತರಿಸಿಕೊಳ್ಳುತ್ತಿದ್ದಾರೆ...ಲಕ್ಷಣವಾಗಿ ಸೀರೆಯುಟ್ಟು, ಹೂ ಮುಡಿದ ಗರತಿ ಗೌರಮ್ಮ. ಅಂಕಲ್ ಎಂದಾಕೆ ಕರೆಯುತ್ತಿರುವ ವಿರಳ ಕೂದಲಿನ ಆ ‘ಸಜ್ಜನ’ ಕೈಯಲ್ಲಿರುವ ಮ್ಯಾಗಝಿನ್‌ನಲ್ಲಿ ಮುಖ ತೂರುತ್ತ, ಆಗಾಗ ಮುಚ್ಚಿ ಗಾಳಿ ಹಾಕಿಕೊಳ್ಳುತ್ತಾ, ‘‘ಅದ್ಯಾಕೆ ಮೇಡಂ ಓದಲಿಲ್ಲ?’’ ಅಂತ ನಯವಾಗಿ ಕೆದಕಿಯೇ ಬಿಡುತ್ತಾರೆ. ‘‘ಅಯ್ಯೋ ಅಂಕಲ್! ಆವಾಗೆಲ್ಲ ಬರೀ ಆಟದ ಕಡೆ ಧ್ಯಾನ...ಸ್ಕೂಲಿಗೆ ಸರಿಯಾಗಿ ಹೋಗಲಿಲ್ಲ’’ ಎಂದು ಕಿಲಕಿಲಿಸುತ್ತ ಆಕೆ ಐಬು ಮುಚ್ಚಿಕೊಳ್ಳಲು ನೋಡುತ್ತಿದ್ದರೆ, ನಿಮಗೆ ನಖಶಿಖಾಂತ ಬೆರಗು: ಈ ಕಾಲದಲ್ಲಿಯೂ, ಇಂತಹ ಪ್ರದೇಶದಲ್ಲಿಯೂ ನಿರಕ್ಷರಕುಕ್ಷಿಗಳು ಇದ್ದಾರೆಯೇ?... 18-24 ತಿಂಗಳಿಗೇ ಶಿಶುಗಳನ್ನು ಪ್ಲೇಹೋಮ್‌ಗೆ ಕಳುಹಿಸುವ ಸಂಪ್ರದಾಯ ಬೇರುಬಿಟ್ಟಿರುವಾಗಲೂ? ಅಷ್ಟುಹೊತ್ತಿಗೆ ಅವರಿಬ್ಬರೂ, ತಮ್ಮತಮ್ಮ ಶಿಕ್ಷಕರಿಂದ ಎಷ್ಟೆಲ್ಲ ಪ್ರಕಾರದ ಬೆತ್ತಸೇವೆ ಅನುಭವಿಸಿದ್ದೆವು ಎಂಬ ಗತವೈಭೋಗದಲ್ಲಿ ತೇಲುತ್ತ ವಿಷಯಾಂತರ ಮಾಡಿದ್ದಾರೆ. (ಹೋ, ಸೋಷಿಯಲೈಸಿಂಗ್ ಘನವಾಗಿ ಮುಗಿದಿದೆ).

ಆಗಲೀಗ, ‘ಪ್ರಾಮ್’ನಲ್ಲಿ ಬೆಣ್ಣೆಮುದ್ದೆಯಂತಹ ಮಗು ಕುಳ್ಳಿರಿಸಿಕೊಂಡು ಪರಿಚಿತ ಮುಖ ತರಿಸಿದ ಕುಪ್ಪಳಿಸುವ ಖುಷಿಯಲ್ಲಿ ಬಂದ ಆ ಗೌರವರ್ಣದ (ತರುಣ್ ವಿಜಯ್ ಪ್ರಕಾರ ಆರ್ಯೆ) ಎಳೆತಾಯಿ, ಗೌರಮ್ಮನ ಮುಂದೆ ಪ್ರತಿಷ್ಠಾಪಿತ. ಪರಸ್ಪರ ಅರ್ಥವಾಗಲು ಭಾಷೆ ಇಲ್ಲ, ಭಾವದ್ದೇ ಎಲ್ಲ. ದಂಗುಬಡಿಸುವ ನಯ-ನಾಜೂಕು ಹಾಗೂ ನವಯುಗದ ತಾಯಿಯರಿಗೆ ಒಪ್ಪಿತವಾಗುವಷ್ಟೇ ಮುದ್ದುಮಾಡುವ ಹುಶಾರು ಹೊಂದಿರುವ ಗೌರಮ್ಮ, ಕಂದನನ್ನು ಬೆಲ್ಟ್‌ನಿಂದ ಬಿಡಿಸಿ, ಸೊಂಟಕ್ಕೇರಿಸಿಕೊಂಡು ಬ್ರಹ್ಮಾನಂದ ಅನುಭವಿಸುತ್ತಿದ್ದರೆ, ಅಂಕಲ್‌ಗೆ ಅದೆಲ್ಲ ಅಷ್ಟಕ್ಕಷ್ಟೆ. ‘‘ಅಲ್ನೋಡು ತಾತ’’ ಅಂದಾಗ ಮಾತ್ರ ಪ್ರತಿಭಟಿಸಿ ನೀಳಕಾಯದ ತರುಣಿಗೆ, ಗೌರಮ್ಮನಿಗೆ ಹಾಗೂ ಶಿಶುವಿಗೆ ಮೂವರಿಗೂ ಸಮಾನವಾಗಿ ತಾವು ಅಂಕಲ್ಲೇ ಎಂದು ತಿದ್ದುತ್ತಾರೆ.

ಪೋರ ಹುರುಹುರು ಮಾಡುತ್ತಾ ಅವರ ತೋಳಿಗೆ ಬರುತ್ತೇನೆಂದರೆ, ‘‘ಬೇಡಪ್ಪಾ, ನನಗೆ ಹೆದರಿಕೆ, ಎಂದೂ ಮಕ್ಕಳನ್ನು ಎತ್ತಿಕೊಂಡಿಲ್ಲ’’ ಎಂದು ನಿವಾರಿಸಿಕೊಂಡು ಇಂತಹ ‘ನಿರಕ್ಷರಕುಕ್ಷಿ’ಗಳೂ ಇರಬಹುದೆ ಎಂಬ ಆಶ್ಚರ್ಯ ಹುಟ್ಟಿಸುತ್ತಾರೆ. ಕಣ್ಣಮುಂದೆ ಹುಟ್ಟಿ ಬೆಳೆವ ಈ ಬಗೆಯ ‘ನಾಟಕ’ಗಳು ಕೆಲವಾದರೆ, ಇನ್ನು ಕೆಲವು ಕಿವಿಯ ಮೇಲೆ ಬಿದ್ದ ಕತೆಗಳು; ಅರೆಬರೆ ಕೇಳಿಸಿಕೊಂಡು ಬಿಟ್ಟ ಸ್ಥಳ ತುಂಬಿಕೊಂಡವು. ಸ್ನೇಹಿತರ ಗುಂಪು, ತುದಿಗೆ ಕೂತ ಅಪರಿಚಿತ ಮುಖವನ್ನು ಸರದಿಯಂತೆ ದಿಟ್ಟಿಸುತ್ತ ಪಿಸುಗುಟ್ಟಿದ ಗಾಸಿಪ್. ಸೂರ್ಯನಡಿಯ ಎಲ್ಲದರ ಕುರಿತು ತಮಗಿರುವ ಅಭಿಪ್ರಾಯ ಘೋಷಿಸುವ ಜೆಂಟ್ಲ್‌ಮನ್ ಗ್ಯಾಂಗ್‌ನಿಂದ ಗಾಳಿಯಲೆ ತಂದ ತುಂಡು ಮಾತು. ‘‘ನಾವೇ ಬೇರೆ, ನೀವೇ ಬೇರೆ’’ ಎಂದು ಸೋಷಿಯಲೈಸ್ ಆಗದೆ ಗಂಡಸರು ಪ್ರತ್ಯೇಕ ಒಂದು ಗುಂಪಾಗಿ ಕೂರುವ ಒಂದು ಪಾರ್ಕ್‌ನಲ್ಲಿ ಐಪಿಲ್, ಅಂಬಾನಿ ಕುಟುಂಬ ಕುಡಿ ನಡೆದು ನಡೆದೇ ತೂಕ ಇಳಿಸಿಕೊಂಡ ವೈಖರಿ, ರಾಜಕಾರಣಿಗೆ ಆ ಪೊಲೀಸ್ ಅಧಿಕಾರಿಣಿ ಸಡ್ಡು ಹೊಡೆದದ್ದು ಸರಿಯೆ ಅಥವಾ ಅದು ಗಮನ ಬೇಡುವ ವರ್ತನೆಯೆ ಮುಂತಾಗಿ ಸಕಲವೂ ಚೂಪಾಗಿ ಚರ್ಚಿತವಾಗುತ್ತವೆ.

ಸಾಫ್ಟ್‌ವೇರಿಗಳ ಮಾತೆಯರು ಎಂದು ಊಹಿಸಬಹುದಾದ ಗುಂಪು, ‘‘ಬರುವ ತಿಂಗಳಿಗೆ ನನ್ನ ಫಾರಿನ್ ಟ್ರಿಪ್, ತಯಾರಿ ಇಷ್ಟೆಲ್ಲ ಆಗಿದೆ, ಸೊಸೆಯ ಬಾಣಂತನ ಮುಗಿಸಿ ಸೈಟ್ ಸೀಯಿಂಗ್‌ಗೂ ವೇಳೆ ಹೊಂದಿಸಿಕೊಳ್ಳಲಾಗಿದೆ’’ ಮುಂತಾಗಿ ಹೇಳಿಕೊಳ್ಳುತ್ತಿದ್ದರೆ, ಧಾರ್ಮಿಕ ನಿಷ್ಠೆಯ ಕೆಲವರು ಬರಲಿರುವ ವ್ರತ-ಉಪಾಸನೆಗಳಿಗೆ ಎಷ್ಟು ಕಟ್ಟುನಿಟ್ಟಿನ ತಯಾರಿ ಮಾಡಬೇಕು ಎಂದು ಅರ್ಧ ಹೆಮ್ಮೆ ಅರ್ಧ ಸುಸ್ತಿನ ದನಿಯಲ್ಲಿ ಬಿತ್ತರಿಸುತ್ತಿರುತ್ತಾರೆ. ‘‘ನಾವು ಮಾಡುತ್ತಿದ್ದ ಸಾರಿನ ಪರಿಮಳ ವಾರಗಟ್ಟಲೆ ಅಲ್ಲಲ್ಲೇ ಸುಳಿದಾಡಿಕೊಂಡಿರುತ್ತಿತ್ತು...ಈ ಸೊಸೆಯರೂ ಮಾಡ್ತಾರೆ’’ ಎಂಬ ಹೀಗಳಿಕೆ ಉತ್ಪ್ರೇಕ್ಷಾಲಂಕಾರಪ್ರಿಯ ಅತ್ತೆಮ್ಮಗಳ ಕಾರ್ನರ್‌ನಿಂದ ಕಳ್ಳತಪ್ಪಿಸಿಕೊಂಡು ತನ್ನನ್ನು ತಾನು ಪ್ರಕಟಪಡಿಸುತ್ತದೆ.

ಮದುವೆಯಾದರೂ ಅಮ್ಮನ ಮಾತು ತೆಗೆದುಹಾಕದ ಮಗ ಹಾಗೂ ಅದರ ವಿರುದ್ಧ ಮಾದರಿ, ಅತ್ತೆಯನ್ನು ಮನೆಯಲ್ಲಿ ಸುತರಾಂ ಇರಿಸಿಕೊಳ್ಳುವುದಿಲ್ಲ ಎಂಬ ಹೆಂಡತಿಯ ಕೈಗೊಂಬೆಯಾಗಿರುವವನು ತರದ ಟಾಪಿಕ್, ಹೇಳುವವರ ದನಿಗೂ, ಕೇಳುಗರ ಆಲಿಕೆಗೂ ಸಮಾನವಾಗಿ ಭಾರ: ‘‘ಮಗ, ಪಾಪ ಏನೆಲ್ಲ ವ್ಯವಸ್ಥೆ ಮಾಡಿದ, ಮನೆಯಲ್ಲಿ ಸಹಿಸದಿದ್ದರೆ ಬೇಡ, ಕಣ್ಣೆದುರಿಗೆ ನಾವಿರುವ ಕಡೆಯೇ ಇರಲಿ ಎಂದು ಅದೇ ಅಪಾ ರ್ಟ್‌ಮೆಂಟ್‌ನಲ್ಲಿ ತಾಯಿಗೂ ಮನೆ ಮಾಡಿದ. ಆದರೆ ಸೊಸೆ, ಅದನ್ನೂ ಸಹಿಸಲಿಲ್ಲ. ಅದ್ಯಾವಾಗಲೋ ಮೊಮ್ಮಗು ಅವರ ಜತೆ ಇದ್ದಾಗ ಬಿದ್ದು ಪೆಟ್ಟು ಮಾಡಿಕೊಂಡಿತ್ತಂತೆ. ಅದಕ್ಕೇ ಅವಳಿಗೆ ಅಷ್ಟು ಕೋಪ...ಈಗ, ಅಷ್ಟು ದೊಡ್ಡ ಮನೆಯಲ್ಲಿ ಒಬ್ಬರೇ ಇದ್ದಾರೆ. ಕೈತುಂಬ ಪೆನ್ಷನ್ ಬರುತ್ತೆ, ಯಾವುದಕ್ಕೂ ತಾಪತ್ರಯವಿಲ್ಲ...ವೃದ್ಧಾಪ್ಯದಲ್ಲಿ ಅತ್ಯಗತ್ಯವಾದ ಮನುಷ್ಯರ ನೆರವು ಇಲ್ಲ ಎನ್ನುವುದೊಂದೇ ಕೊರತೆ.

ನಾನು ಆ ಕಡೆ ಹೋದಾಗೆಲ್ಲ ಮಾತಾಡಿಸಿಕೊಂಡು ಬರ್ತೀನಿ’’ಯಂತಹ ಒಕ್ಕಣಿಕೆಯಲ್ಲಿ ಜಿನುಗುವ ಸಹಾನುಭೂತಿ ತರುವುದು ಸ್ವಲ್ಪಸಮಾಧಾನ. ಹೀಗೆ ಹಗೆ ಸಾಧಿಸದೆ, ಒಟ್ಟಾಗಿ ಮನೆಯಿಂದ ಬಂದು, ಪಾರ್ಕ್‌ನಲ್ಲಿ ತಮ್ಮ ತಮ್ಮ ಗುಂಪಿನೊಂದಿಗೆ ಬೆರೆತು, ಮರಳಿ ಮನೆಗೆ ನಡೆಯುವ ಅತ್ತೆ-ಸೊಸೆ ಜೋಡಿಗಳೂ ಕಾಣಸಿಗುತ್ತವೆ. ‘‘ಅಕಿ ನೋಡ್ರಿ, ನಮ್ಮ ಸೊಸಿ’’ ಅಂತ ದೂರದಿಂದ ಅತ್ತೆ ಇಂಟ್ರಡ್ಯೂಸ್ ಮಾಡಿಸಿದರೆ, ‘‘ನಮ್ಮತ್ತೇನೂ ಬಂದಿದ್ದಾರೆ, ಅಲ್ಲಿ ಕೂತಿದ್ದಾರೆ’’ ಎಂದು ಸೊಸೆ, ಯಾವುದಕ್ಕೂ ಇರಲಿ ಎಂದು ಮೊದಲೇ ಗೆಳತಿಯರಿಗೆ ಹೇಳಿಡುತ್ತಾಳೆ. ಆಮೇಲೆ ಅವರು, ಮಕ್ಕಳ ತಾಯಂದಿರಾದರೂ ಅಂಗಸೌಷ್ಠವ ಕಾಪಾಡಿಕೊಳ್ಳುವ ಕುರಿತು, ಹಾಗೆ ಮಾಡಿದರೆ ಪಾರ್ಟಿ, ಫಂಕ್ಷನ್‌ಗಳಲ್ಲಿ ಎಂತಹ ಆಧುನಿಕ ಉಡುಪು ಬೇಕಾದರೂ ತೊಡುವ ಸಾಧ್ಯತೆ ಕುರಿತು ಉತ್ಸಾಹದಿಂದ ಚರ್ಚಿಸುತ್ತಾರೆ. ಪ್ರಿಯಾಂಕಾ ಗಾಂಧಿ ತನ್ನ ಮಕ್ಕಳಿಗೆ ತುಂಬ ಇಷ್ಟವಾದ ಕಪ್‌ಕೇಕ್ ಅನ್ನು, ಅವರನ್ನು ಶಾಲೆಯಿಂದ ಕರೆತರುವ ಮೊದಲು ಬೇಕ್ ಮಾಡುವ ಸುದ್ದಿಯ ಪ್ರಸ್ತಾಪ, ನಟ ಉಪೇಂದ್ರರವರ ಮಕ್ಕಳನ್ನು ಅವರ ತಾರಾ ಪತ್ನಿ (ಅವರೂ ಪ್ರಿಯಾಂಕಾ) ಎಷ್ಟು ಚೆನ್ನಾಗಿ ಬೆಳೆಸುತ್ತಿದ್ದಾರೆ ಎಂಬ ವಿವರಗಳೂ ಕಾವು ಪಡೆದುಕೊಳ್ಳುತ್ತವೆ.

ಋತುಬಂಧ ದೈನಿಕ ಚಟುವಟಿಕೆಗಳಿಗೆ ತರುವ ಏರುಪೇರು, ಸುಸ್ತು-ಸಂಕಟಗಳನ್ನು ಇಳಿದನಿಯಲ್ಲಿ ಕ್ರೋಡೀಕರಿಸಿದ ಒಂದು ಗುಂಪು, ‘‘ಹೆಂಗಸರಿಗೆ ನೋಡ್ರಿ, ಮಧ್ಯ ವಯಸ್ಸಿನಲ್ಲಿಯೂ ಸುಖವಿಲ್ಲ’’ ಎಂಬ ಒಮ್ಮತ ತಲುಪಿದೆ. ಆಮೇಲೆ ಅವರು, ಸಹಜೀವಿ ಪುರುಷರಿಗೆ ಇರುವ ಕಿರಿಕಿರಿ ಕಡೆ ಹೊರಳಿದ್ದಾರೆ. (ಈಗ ದನಿ ಏರಿದೆ). ದಿನ ಬಿಟ್ಟು ದಿನ ಮುಖ ಕ್ಷೌರ ಮಾಡಿಕೊಳ್ಳುವ ದರ್ದು...ಅದೊಂದೇ ಬಹುಶಃ ಎಂದು ಅಭಿಪ್ರಾಯ ಹೊರಹಾಕಿದ ಒಬ್ಬಾಕೆ, ‘‘ಹೇಗೂ ಹೆಂಗಸರಿಗೆ ಎಷ್ಟೊಂದು ತೊಂದರೆಗಳು ಇದ್ದೇ ಇವೆ, ಅದರ ಜತೆಯಲ್ಲಿ ಕ್ಷೌರಕರ್ಮವನ್ನೂ ನೀಡಿದ್ದರೆ ಪ್ರಕೃತಿಯ ಗಂಟು ಏನು ಹೋಗೋದು? ಅವರು ಹೇಗೋ ನಿಭಾಯಿಸೋರು’’ ಎಂದು ತಮ್ಮ ಬಾವನವರು ಹೇಳಿದ್ದನ್ನು ನೆನಪಿಸಿಕೊಂಡು ನಗುತ್ತಾರೆ.

ಬಾವ-ನಾದಿನಿ ಮಧ್ಯೆ ಅಷ್ಟೇ ಇಂತಹ ಮುಕ್ತ ಸಂಭಾಷಣೆ ಸಾಧ್ಯ ಎಂದು ಒಂದು ಹಾಸ ತುಟಿಯ ಮೇಲೆ ಮಂದವಾಗಿ ಬಂದರೂ, ಅಬ್ಬಾ! ಆತನ ಕಪ್ಪುಹಾಸ್ಯ ಪ್ರಜ್ಞೆಯೇ ಎಂದು ಮನಸ್ಸು ಅಪ್ರತಿಭಗೊಳ್ಳದೇ ಇರುವುದಿಲ್ಲ. ವೈಭವೋಪೇತ ‘ಬಾಜಿರಾವ್ ಮಸ್ತಾನಿ’ ಸಿನೆಮಾ ನೋಡಿಬಂದಿದ್ದು, (ಮಧ್ಯೆ ಬಂದ ಪ್ರೇಯಸಿ ದೀಪಿಕಾಗಿಂತ ಒಳಗೇ ಕೊರಗುವ ದೊಡ್ಡ ಗುಣದ ದೊಡ್ಡಾಕೆ ಪ್ರಿಯಾಂಕಾಗೇ ಅವರ ಮತ) ಬಡಾವಣೆಯ ಪ್ರಸಿದ್ಧ ರೆಸ್ಟೋರೆಂಟ್‌ನಲ್ಲಿ ಮಸಾಲೆದೋಸೆ ತಿಂದಿದ್ದನ್ನು ಗುಂಪುಗಳು ಮೆಲುಕಾಡಿದಾಗ, ಹೀಗೆ ಸಾಮೂಹಿಕ ಮನೋರಂಜನೆ ಯೋಜಿಸುವಷ್ಟು ಅವರ ಸ್ನೇಹ-ಸಂಬಂಧಗಳು ಗಟ್ಟಿಗೊಂಡಿರುವುದು ಗೊತ್ತಾಗುತ್ತದೆ. ಒಬ್ಬರಾದ ಮೇಲೆ ಒಬ್ಬರು ಹಿತವಾದ ಪೈಪೋಟಿಯಿಂದ ತಮ್ಮ ಹಕ್ಕುಸ್ವಾಮ್ಯ ಹೊಂದಿರುವ ಹೊಸರುಚಿಯ ತಿನಿಸು ತಂದು ಹಂಚುವುದು ಆಗಾಗ ಸಿಗುವ ನೋಟ. ಆರೋಗ್ಯ ಸರಿ ಇಲ್ಲದೆ, ದೀರ್ಘ ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳು ಕಾರಣವಾಗಿ ಬ್ರೇಕ್ ತೆಗೆದುಕೊಂಡಿದ್ದ ಸದಸ್ಯರು, ಒಂದು ಶುಭ ಸಂಜೆ ಉದ್ಯಾನವನಕ್ಕೆ ವಾಪಸಾದಾಗ ಸಿಗುವ ಸ್ವಾಗತ-ಸಾಂತ್ವನಗಳಂತೂ ನೋಡಲೂ, ಕೇಳಲೂ ಹೃದ್ಯ.

ಪುಟ್ಟ ಬ್ಯಾಗು-ಪರ್ಸ್‌ಗಳಲ್ಲಿ ಸ್ಟ್ರೋಲಿಣಿಯರೆಲ್ಲ ಜಂಗಮವಾಣಿಯನ್ನು ಪಾರ್ಕ್‌ಗೆ ತಂದೇತರುತ್ತಾರೆ. ಎಷ್ಟೊಂದು ಬಹೂಪಯೋಗಿ ಸಾಧನ ಅದು ಎಂದು ಅವರಿಗೆಲ್ಲ ಚೆನ್ನಾಗಿ ಮನದಟ್ಟಾಗಿದೆ. ಸಂಜೆ ಮುಗಿದು ಇರುಳು ಸೆರಗು ಹಾಸುವ ವೇಳೆ, ಮನೆಯಾಕೆಯನ್ನು ಕರೆದೊಯ್ಯಲು ಬಂದ ಯಜಮಾನರು ಮಾಡಿದ ಕರೆ ಸ್ವೀಕರಿಸಿ, ಆ ತುಂಟ ಸೀನಿಯರ್ ಸಿಟಿಝನ್ ಗೆಳತಿಯರಿಗೆ ಸಾರುತ್ತಾರೆ: ಹೊರಗಡೆ ಇದೀನಿ ಬಾರೇ ಅಂದರು...ಬರ್ತೀನಿ ಇರೋ ಅಂದೆ! ಅಲ್ಲವೇ ಮತ್ತೆ? ಇನ್ನೂ ಎಷ್ಟು ಕಾಲ ಅವರು ‘ಯಜಮಾನರು’, ಇವರು ‘ಇವಳೇ’ ಆಗಿರಬೇಕು?!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)