ಗುರೂಜಿಯ ಪತ್ರ ಕರೆಯಿತು!
ಧಾರಾವಾಹಿ-28
‘‘ಒಂದು ಯುದ್ಧವನ್ನು ಗೆದ್ದರೆ ಮಾತ್ರ ಅವಳ ಎದುರು ಮುಖಕ್ಕೆ ಮುಖ ಕೊಟ್ಟು ನನ್ನ ಪ್ರೇಮವನ್ನು ಹೇಳಲು ನನಗೆ ಧೈರ್ಯ’’
‘‘ಅಂದರೆ ನಿನ್ನ ಪ್ರೇಮವನ್ನು ಅರುಹುವುದಕ್ಕಾ ಗಿಯೇ ಗಡಿಯಲ್ಲಿ ಒಂದು ಯುದ್ಧ ನಡೆಯಬೇಕೇ?’’
‘‘ನಡೆದರಷ್ಟೇ ಸಾಲುವುದಿಲ್ಲ....ಶತ್ರುಗಳ ನೂರು ತಲೆಗಳನ್ನಾದರೂ ಚೆಂಡಾಡಬೇಕು...ಜಾನಕಿ ಅದನ್ನು ಕೇಳಿ ರೋಮಾಂಚನಗೊಳ್ಳಬೇಕು...ಗುರೂಜಿ ನನ್ನನ್ನು ಎದೆಗೊತ್ತಿಕೊಳ್ಳಬೇಕು...’’
‘‘ಪೆದ್ದು ಪೆದ್ದಾಗಿ ಮಾತನಾಡಬೇಡ. ಯುದ್ಧ ಯಾವತ್ತೂ ಪ್ರೇಮಿಗಳಿಗೆ ಸಹಕರಿಸುವುದಿಲ್ಲ’’
‘‘ಆದರೆ ನನ್ನ ಮತ್ತು ಜಾನಕಿಯ ಪ್ರೇಮ ನಿಂತಿರು ವುದೇ ಯುದ್ಧದ ಮೇಲೆ. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮನಾದ ವೆಂಕಟನ ಸಮ್ಮುಖದಲ್ಲಿ ಅರಳಿದ ಪ್ರೇಮ ಇದು...’’
ಪಪ್ಪುವಿನ ಆ ಮಾತು ಕೇಳಿ ಅಪ್ಪಯ ಒಮ್ಮೆಲೆ ವೌನವಾದ. ಅಪ್ಪಯ್ಯನ ವೌನ ಪಪ್ಪುವನ್ನು ಒಮ್ಮೆಲೆ ಇರಿದು ಬಿಟ್ಟಿತು
‘‘ಅಂದರೆ ನೀನಿನ್ನೂ ಅದನ್ನು ನಂಬಿದ್ದೀಯಲ್ಲ?’’ ಪಪ್ಪು ಕೇಳಿದ.
‘‘ಯಾವುದನ್ನು?’’
‘‘ಅದೇ ವೆಂಕಟ ಆತ್ಮಹತ್ಯೆಗೈದಿದ್ದ ಎನ್ನುವುದನ್ನು...’’
ಅಪ್ಪಯ ಮತ್ತೆ ವೌನವಾದ.
‘‘ಹೇಳು...ನೀನು ನಂಬುತ್ತೀಯ? ಅದರಲ್ಲಿ ಸತ್ಯ ಇದೆ ಅಂತೀಯ?’’
‘‘ಕೆಲವು ವಿಷಯಗಳನ್ನು ಮತ್ತೆ ಮತ್ತೆ ಕೆದಕಿ ಹುಣ್ಣು ಮಾಡ್ಕೋಬಾರದು. ನಿನ್ನ ಜಾನಕಿಯ ವಿಷಯದಲ್ಲಿ ನೀನು ಅನಗತ್ಯವಾಗಿ ವೆಂಕಟನನ್ನು ಎಳೆದು ತರಬೇಡ. ವೆಂಕಟ ಹೇಗೆ, ಯಾವ ರೀತಿಯಲ್ಲೇ ಸಾಯಲಿ. ಅವರು ಈ ದೇಶಕ್ಕಾಗಿಯೇ ಸತ್ತಿದ್ದಾರೆ...ಆ ಗೌರವ ನನ್ನೊಳಗೆ, ನಿನ್ನೊಳಗೆ ಇರಬೇಕು...’’
ಪಪ್ಪು ವೌನವಾದ. ತನ್ನ ಸಂಕಟಗಳನ್ನು ಅಪ್ಪಯ್ಯನಿಗೆ ಯಾವ ರೀತಿಯಲ್ಲಿ ವಿವರಿಸಬೇಕು ಎನ್ನುವುದು ಅವನಿಗೆ ಹೊಳೆಯುತ್ತಿರಲಿಲ್ಲ. ಗಡಿಭಾಗಕ್ಕೆ ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ತನ್ನ ಯುನಿಟ್‌ನ್ನು ಸೇರಿಕೊಂಡ ಪಪ್ಪುವಿಗೆ ಹೊಸ ಜನ, ಹೊಸ ಭಾಷಿಗರ ಜೊತೆಗೆ ಮತ್ತೆ ಹೊಂದಾಣಿಕೆ ಮಾಡಬೇಕಾಗಿತ್ತು. ಉಳಿದಂತೆ, ತರಬೇತಿಯ ಅವಯಲ್ಲಿ ಮಾಡುತ್ತಿದ್ದ ಕಸರತ್ತುಗಳ ಮುಂದುವರಿದ ಭಾಗ ಇದು ಅನ್ನಿಸಿತು. ತನಗೆ ಕೋವಿಯನ್ನೇನೋ ಕೊಟ್ಟಿದ್ದಾರೆ. ಆದರೆ ಅದರಿಂದ ಗುಂಡು ಹಾರಿಸುವುದಕ್ಕೆ ಅನುಮತಿ ಸಿಕ್ಕಿರಲಿಲ್ಲ. ನಿಜವಾದ ರೈಲ್‌ನಿಂದ ನಿಜವಾದ ಶತ್ರುವೊಬ್ಬನಿಗೆ ಗುಂಡು ಹಾರಿಸುವ ಗಳಿಗೆಗಾಗಿ ಪಪ್ಪು ಕಾಯುತ್ತಿದ್ದ. ‘ಶತ್ರು ನಿಜಕ್ಕೂ ಎಲ್ಲಿ ಅಡಗಿಕೊಂಡಿದ್ದಾನೆ? ಮತ್ತು ನಾವೇಕೆ ಅವನು ಆಗಮಿಸುವವರೆಗೆ ಕಾಯಬೇಕು? ನಾವೇ ಯಾಕೆ ಅವನನ್ನು ಹುಡುಕಿಕೊಂಡು ಹೋಗಬಾರದು...’ ಎಂದು ಆಲೋಚಿಸುತ್ತಿದ್ದ. ಆದರೆ ಇಡೀ ಯುನಿಟ್ ಶತ್ರುಗಳನ್ನು ಸಂಪೂರ್ಣ ಮರೆತು, ತನ್ನಷ್ಟಕ್ಕೆ ತಾನಿದೆಯಲ್ಲ? ಯಾವುದೋ ರಸ್ತೆಯನ್ನು ಸರಿಪಡಿಸುವ, ಸೇತುವೆಗೆ ಕಲ್ಲುಹೊರುವ, ಯಾವುದೋ ಸಮಾರಂಭಕ್ಕೆ ಚಪ್ಪರ ಹಾಕುವ ಕೆಲಸಗಳೆಲ್ಲ ಯೋಧರಿಗೆ ಸೇರಿದ್ದೆ? ಪಪ್ಪು ನಿಜಕ್ಕೂ ಆಘಾತಗೊಂಡಿದ್ದ. ಹೆಚ್ಚಿನ ಸಹೋದ್ಯೋಗಿಗಳು ಹಲವು ಮೇಲಕಾರಿಗಳ ಮನೆಗೆಲಸಗಳಿಗೆ ಬಳಸಲ್ಪಡುವುದನ್ನು ಅವನು ಗಮನಿಸಿದ. ಅಪ್ಪಯ್ಯನೂ ಯುನಿಟ್‌ನಲ್ಲಿ ಸರಿಯಾಗಿ ಮಾತನಾಡಲು ಸಿಗುತ್ತಿರಲಿಲ್ಲ. ಇನ್ನೂ ಒಂದೆರಡು ಕನ್ನಡಿಗರು ಅವನಿಗೆ ಪರಿಚಿತರಾದರೂ, ಅವರೊಂದಿಗೆ ಆತ್ಮೀಯವಾಗಿ ಬೆರೆಯುವುದಕ್ಕೆ ಅವಕಾಶ ಸಿಕ್ಕಿದ್ದೇ ಕಮ್ಮಿ. ಒಮ್ಮಿಮ್ಮೆ ಅವನು ಮಧ್ಯಾಹ್ನದ ಹೊತ್ತಲ್ಲೇ ಕನಸು ಕಾಣುತ್ತಿದ್ದ. ಏಕಾಏಕಿ ಪಾಕಿಸ್ತಾನದ ಗಡಿಯಲ್ಲಿ ಭಾರೀ ಯುದ್ಧ ನಡೆದ ಹಾಗೆ ಮತ್ತು ನಮ್ಮ ನಮ್ಮ ಕೋವಿಗಳೊಂದಿಗೆ ಪಾಕಿಸ್ತಾನದ ಗಡಿಗೆ ದಾವಿಸಿದ ಹಾಗೆ. ಭೀಕರ ಯುದ್ಧದಲ್ಲಿ ತಾನು ಮೃತಪಟ್ಟ ಹಾಗೆ. ಅದೇ ಬಜತ್ತೂರಿನ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರಧ್ವಜದಿಂದ ಮುಚ್ಚಿದ ನನ್ನ ಮೃತದೇಹವನ್ನು ಮಕ್ಕಳು ಸಾಲಾಗಿ ಬಂದು ವೀಕ್ಷಿಸಬೇಕು. ಅದೆಷ್ಟೋ ಮಕ್ಕಳು ನನ್ನ ಮೃತದೇಹವನ್ನು ನೋಡಿ ಯೋಧರಾಗುವ ಪ್ರತಿಜ್ಞೆ ಸ್ವೀಕರಿಸಬೇಕು....ಎಲ್ಲರೂ ವೀಕ್ಷಿಸಿದ ಬಳಿಕ ಗುರೂಜಿಯ ಜೊತೆಗೆ ಕಣ್ಣಲ್ಲಿ ಒಂದು ಹನಿಯನ್ನೂ ಹನಿಸದೇ ತನ್ನೆಡೆಗೆ ನಡೆದು ಬರುತ್ತಿರುವ ಜಾನಕಿ. ಅವಳು ಬಿಳಿ ಸೀರೆಯುಟ್ಟಿದ್ದಾಳೆ. ಹಣೆಯ ಕುಂಕುಮ ಅಳಿಸಲ್ಪಟ್ಟಿದೆ. ಅರೆ...ಮದುವೆಯೇ ಆಗಿಲ್ಲ. ಜಾನಕೀಯೇಕೆ ವಿಧವೆಯಾಗಿದ್ದಾಳೆ?
ಗುರೂಜಿಯೂ ಜಾನಕಿಯ ಬಳಿ ಅದೇ ಪ್ರಶ್ನೆಯನ್ನು ಕೇಳುತ್ತಾರೆ. ಆದರೆ ಜಾನಕಿಯ ಉತ್ತರ ಕೋವಿಯಿಂದ ಸಿಡಿದ ಗುಂಡಿನಂತೆ ನೇರವಾಗಿದೆ. ಗುರಿ ಅಷ್ಟೇ ನಿಖರವಾಗಿದೆ. ‘‘ಅಪ್ಪಾ, ಅವರು ಸೇನೆಗೆ ಸೇರಿದಾಗಲೇ ನಾನು ಅವರನ್ನು ಮಾನಸಿಕವಾಗಿ ವರಿಸಿದ್ದೇನೆ. ಈ ಜನ್ಮದಲ್ಲಿ ನನಗೆ ಮದುವೆಯಿಲ್ಲ. ಮುಂದಿನ ಜನ್ಮದಲ್ಲಿ ಅವರನ್ನು ಸೇರಿಕೊಳ್ಳುತ್ತೇನೆ...’’
ಜಾನಕಿಯ ಮಾತು ಗುರೂಜಿಗೆ ಅರ್ಥವಾಗುತ್ತದೆ. ಯಾಕೆಂದರೆ ಅದೆಲ್ಲ ಸಂಸ್ಕಾರದಿಂದ ಬರುವ ಮಾತು. ಆ ಸಂಸ್ಕಾರ ಗುರೂಜಿಯಿಂದ ಜಾನಕಿಗೆ ದೊರಕಿದೆ. ‘ಪ್ರತಾಪ ಸಿಂಹ’ ಎಂಬ ನಾಮಕರಣದ ಮೂಲಕ ಗುರೂಜಿಯಿಂದ ನನಗೂ ಆ ಸಂಸ್ಕಾರ ದೊರಕಿದೆ. ಇದ್ದಕ್ಕಿದ್ದಂತೆ ತಲೆಗೆ ಟಪ್ಪೆಂದು ಹೊಡೆತ. ಪಪ್ಪು ಬೆಚ್ಚಿ ಬಿದ್ದ. ಎದುರಿನಲ್ಲೇ ಹವಾಲ್ದಾರ್ ನಿಂತಿದ್ದ ‘‘ಏನೋ ಬೊಮ್ಮನ್...ಮಧ್ಯಾಹ್ನವೇ ಕನಸು ಕಾಣುತ್ತಿದ್ದೀಯಾ? ಒಳಗಡೆ ಕೆಲಸ ಇದೆ...ನೋಡು...’’ ಆದೇಶಕ್ಕೆ ಪಪ್ಪು ತಲೆತಗ್ಗಿಸಿ ನಿಂತ. ನಿಧಾನಕ್ಕೆ ಅಡುಗೆ ಕೋಣೆಯ ಕಡೆಗೆ ನಡೆದ. ತಾನು ಬ್ರಾಹ್ಮಣ ಎನ್ನುವುದನ್ನು ಯುನಿಟ್‌ನಲ್ಲಿ ಮುಚ್ಚಿಡಲು ಪಪ್ಪು ಬಹಳ ಶ್ರಮಿಸಿದ್ದ. ಬೇಕು ಬೇಕೆಂದೇ ಮಾಂಸಾಹಾರದ ಕುರಿತಂತೆ ಅತ್ಯಾಸಕ್ತಿ ತೋರಿಸುತ್ತಿದ್ದ. ಜನಿವಾರವನ್ನು ತೆಗೆದು ಪೆಟ್ಟಿಗೆಯ ಮೂಲೆಯಲ್ಲಿ ಬಚ್ಚಿಟ್ಟಿದ್ದ. ಇಷ್ಟಾದರೂ, ತನ್ನ ಜಾತಿ ಹವಾಲ್ದಾರ್‌ಗೆ ಗೊತ್ತಾಗಿಯೇ ಬಿಟ್ಟಿತ್ತು. ಹಲವರಿಗೆ ತನ್ನ ಜಾತಿ ಒಂದು ತಮಾಷೆಯ ವಸ್ತುವಾಗಿತ್ತು. ಯುನಿಟ್‌ನಲ್ಲಿ ಮತ್ತೆ ಹೊಸದಾಗಿ ತರಬೇತಿ ಪಡೆಯುತ್ತಿದ್ದೇನೆ ಅನ್ನಿಸಿತು ಪಪ್ಪುವಿಗೆ. ತನ್ನ ಸುತ್ತಮುತ್ತಲಿರುವವರೆಲ್ಲ ಸದಾ ‘ಭಾರತ ಮಾತೆಯನ್ನು ಜಪಿಸಬೇಕು’ ಎಂದು ಪಪ್ಪು ಬಯಸುತ್ತಿದ್ದರೆ, ಇವರೋ ಅಶ್ಲೀಲ ಜೋಕುಗಳನ್ನು ಹಂಚಿಕೊಳ್ಳುತ್ತಿದ್ದರು. ತನ್ನ ಮೇಲಕಾರಿಗಳ ಬಗ್ಗೆಯೇ ಅಸಹ್ಯವಾಗಿ ಮಾತನಾಡುತ್ತಿದ್ದರು. ಸದಾ ಮಾ...ಚೋದ್...ಬೇಂ...ಚೋದ್‌ಗಳ ನಡುವೆ ಅನು ಕಿವಿಮುಚ್ಚಿಕೊಂಡು ಓಡಾಡುತ್ತಿದ್ದ. ಪಕ್ಕದ ಸಹೋದ್ಯೋಗಿಗಳು ರಾತ್ರಿ ಮಲಗಿದ ತನ್ನ ಮೈಮೇಲೆ ಕೈಯಾಡಿಸಿ ಜೋರಾಗಿ ನಗುತ್ತಿದ್ದರೆ ಇವನು ಅಸಹ್ಯದಿಂದ ಎದ್ದು ಕುಳಿತುಕೊಳ್ಳುತ್ತಿದ್ದ. ಇವೆಲ್ಲವನ್ನು ಸಹಿಸಿಕೊಳ್ಳಬೇಕು. ಕಾಯಬೇಕು. ಶತ್ರುಗಳು ನಮ್ಮ ಗಡಿಯೊಳಗೆ ನುಗ್ಗುವವರೆಗೂ ಕಾಯಬೇಕು. ಯುದ್ಧವೊಂದೇ ಈ ಎಲ್ಲ ಅಸಹನೀಯತೆಗೆ ಪರಿಹಾರ ಅನ್ನಿಸಿತು ಅವನಿಗೆ. ಆದರೆ ಈ ಕಾಯುವಿಕೆ ಎಲ್ಲಿವರೆಗೆ?
ಪಪ್ಪು ತಿಂಗಳಿಗೊಮ್ಮೆ ತಂದೆಗೆ ಪತ್ರ ಬರೆಯುತ್ತಿದ್ದ. ಪ್ರತೀ ಪತ್ರದಲ್ಲೂ ಬೇರೆ ಬೇರೆ ನೆವದಲ್ಲಿ ಜಾನಕಿಯನ್ನು ಪ್ರಸ್ತಾಪಿಸುತ್ತಿದ್ದ. ಒಮ್ಮೆ ಗುರೂಜಿಗೆ ಪತ್ರ ಬರೆದಾಗ ಅವರಿಂದ ಮರಳಿ ಉತ್ತರ ಬಂದಿತು. ಇದು ಪಪ್ಪುವಿಗೆ ಶೌರ್ಯ ಪ್ರಶಸ್ತಿ ಸಿಕ್ಕಿದ ಸಂಭ್ರಮವನ್ನು ತಂದುಕೊಟ್ಟಿತ್ತು. ಅದರಲ್ಲಿ ಬರೆದಿದ್ದರು;
‘‘ಭಾರತ ಮಾತೆಯನ್ನು, ಹಿಂದೂ ನೆಲವನ್ನು ಕಾಯುವ ಯೋಧನೇ ನಿನಗೆ ವಂದನೆಗಳು. ತರಬೇತಿಯ ಸಮಯದಲ್ಲಿ ನೀನು ಒಂದೆರಡು ಬಾರಿ ಊರಿಗೆ ಬಂದಿದ್ದರೂ ನಿನ್ನನ್ನು ಭೇಟಿಯಾಗುವ ಅದೃಷ್ಟ ನನಗಿರಲಿಲ್ಲ. ಈಗ ನೀನು ಪೂರ್ಣ ಪ್ರಮಾಣದಲ್ಲಿ ಯೋಧನಾಗಿದ್ದೀಯ. ನಿನ್ನನ್ನು ತಬ್ಬಿಕೊಳ್ಳಬೇಕು ಎಂದು ಮನಸ್ಸಾಗುತ್ತಿದೆ. ಶತ್ರುಗಳು ಗಡಿಯಲ್ಲಿ ಮಾತ್ರವಲ್ಲ, ದೇಶದೊಳಗೂ ಹರಡಿಬಿಟ್ಟಿದ್ದಾರೆ. ನಿನ್ನಂತಹ ಯೋಧರು ಗಡಿಯಲ್ಲಿ ಕಾವಲು ಕಾದರೆ, ಇಲ್ಲಿ ನನ್ನ ಶಾಖೆಯಿಂದ ಹೊರ ಬಿದ್ದ ಯೋಧರು ದೇಶದೊಳಗಿನ ಶತ್ರುಗಳನ್ನು ಮಟ್ಟ ಹಾಕುತ್ತಾರೆ. ನೀನು ಊರಿಗೆ ಬರುವುದನ್ನು ಎಲ್ಲರೂ ಕಾಯುತ್ತಿದ್ದಾರೆ. ನಮ್ಮ ಊರು ನಿನಗಾಗಿ ಹೆಮ್ಮೆ ಪಡುತ್ತಿದೆ. ಜಾನಕಿ ಪ್ರತೀ ಬಾರಿ ಬಂದಾಗಲೂ ನಿನ್ನನ್ನು ಕೇಳುತ್ತಿರುತ್ತಾಳೆ. ಅವಳೀಗ ಮಂಗಳೂರಿನಲ್ಲಿ ಓದುತ್ತಿದ್ದಾಳೆ. ಅವಳಿಗೆ ನೀನೆಂದರೆ ಭಾರೀ ಹೆಮ್ಮೆ. ಜೊತೆಯಾಗಿ ಓದಿದವರಲ್ಲವೆ ನೀವು? ನನ್ನ ಗೆಳೆಯ ಸೇನೆಯಲ್ಲಿದ್ದಾನೆ ಎನ್ನುವುದನ್ನು ಕಾಲೇಜಲ್ಲೆಲ್ಲ ಹೇಳಿಕೊಂಡು ತಿರುಗಾಡುತ್ತಿದ್ದಾಳೆ...’’
ಅಂದು ರಾತ್ರಿ ಅಪ್ಪಯ್ಯನನ್ನು ಪಕ್ಕದಲ್ಲಿ ಕೂರಿಸಿ ಇದನ್ನು ಎರಡೆರಡು ಬಾರಿ ಓದಿದ. ‘‘ಗುರೂಜಿ ಮತ್ತು ಇಡೀ ಊರು ನಾನು ರಜೆಯಲ್ಲಿ ಹೋಗುವುದನ್ನೇ ಕಾಯುತ್ತಿದೆ. ಒಮ್ಮೆ ಊರಿಗೆ ಹೋಗಿ ಬರಬೇಕು...’’
‘‘ಕಾಯುತ್ತಿರುವುದು ಊರೋ ಅಥವಾ ಜಾನಕಿಯೋ...’’ ಅಪ್ಪಯ್ಯ ನಕ್ಕು ಕೇಳಿದ.
ಪಪ್ಪು ಮುಗುಳ್ನಕ್ಕ.
ಅಪ್ಪಯ್ಯ ಗೆಳೆಯನ ಹೆಗಲಿಗೆ ಕೈ ಹಾಕಿ ಹೇಳಿದ ‘‘ಪಪ್ಪು...ನೀನು ಈ ಬಾರಿ ಮಾತ್ರ ಆ ಪತ್ರವನ್ನು ಜಾನಕಿಗೆ ಕೊಡ ಬೇಕು. ಒಬ್ಬ ಯೋಧನಾಗಿ ಒಬ್ಬ ಹುಡುಗಿಗೆ ಪ್ರೇಮ ಪತ್ರ ಕೊಡಲು ಅಂಜಿದರೆ ಹೇಗೆ? ಅವಳು ಪ್ರತೀ ಬಾರಿಯೂ ನಿನ್ನನ್ನು ಕೇಳುತ್ತಿದ್ದಾಳೆ ಎಂದರೆ ನಿನ್ನ ಕುರಿತಂತೆ ಆಸಕ್ತಿಯನ್ನು ಹೊಂದಿದ್ದಾಳೆ ಎಂದು ಅರ್ಥ. ಎಲ್ಲವನ್ನೂ ಹುಡುಗಿಯರು ಬಾಯಿ ತೆರೆದು ಹೇಳಬೇಕು ಎಂದು ಕಾಯಬಾರದು’’
ಪಪ್ಪು ಅದಕ್ಕೂ ಬರಿದೇ ನಕ್ಕ. ‘‘ನನಗನ್ನಿಸುತ್ತದೆ...ಗುರೂಜಿಯೇ ಜಾನಕಿಯ ವಿಷಯವನ್ನು ನಿನ್ನ ತಂದೆಯ ಜೊತೆಗೆ ಪ್ರಸ್ತಾಪಿಸಿರಬಹುದು. ಈ ವರೆಗೆ ನಿನಗೆ ವಿಶೇಷ ಪತ್ರ ಬರೆಯದವರು ಈ ಬಾರಿ ಬರೆದಿದ್ದಾರೆ ಎಂದರೆ ಅದರಲ್ಲಿ ಇನ್ನೇನೋ ಇದೆ’’ ಅಪ್ಪಯ್ಯ ಪಪ್ಪುವಿಗೆ ಇನ್ನಷ್ಟು ಉತ್ಸಾಹ ತುಂಬಿದ. ಪಪ್ಪುವಿಗೆ ಹೌದು ಅನ್ನಿಸಿತು. ಇಷ್ಟು ಆತ್ಮೀಯವಾಗಿ, ಹೆಮ್ಮೆಯಿಂದ ಅವರು ಪತ್ರ ಬರೆದಿರುವುದು ಇದೇ ಮೊದಲ ಬಾರಿ. ಆದಷ್ಟು ಬೇಗ ಊರಿಗೆ ಹೋಗಬೇಕು. ಊರನ್ನು ತುಂಬಾ ಕಾಯಿಸಬಾರದು. ಅಮ್ಮ, ಅಪ್ಪಾಜಿ, ಸುಬ್ಬಣ್ಣ ಮೇಷ್ಟ್ರು....ಎಲ್ಲರನ್ನು ಕಾಣಬೇಕು. ‘‘ನೋಡಿ...ನಿಮ್ಮ ಪ್ರತಾಪಸಿಂಹ ದೇಶ ಕಾಯುವ ಯೋಧನಾಗಿ ಬಂದಿದ್ದಾನೆ. ಈ ದೇಶಕ್ಕೆ ಪ್ರಾಣವನ್ನೇ ಅರ್ಪಿಸಲು ಸಿದ್ಧನಾಗಿದ್ದಾನೆ...’’ ಎಂದು ಅವರ ಮುಂದೆ ನಿಲ್ಲಬೇಕು. ಪಪ್ಪುವಿನ ನಿರ್ವಹಣೆ ನಿಧಾನಗತಿಯಲ್ಲಿದ್ದುದರಿಂದ ಅವನಿಗೆ ರಜೆ ದೊರಕುವುದೇ ಕಷ್ಟವಾಗಿತ್ತು. ಸುಮಾರು ಒಂದೂವರೆ ವರ್ಷಗಳ ಬಳಿಕ, ಅವನ ರಜಾ ಅರ್ಜಿ ಅಂಗೀಕರಿಸಲ್ಪಟ್ಟಿತು. ಆಕಾಶದೆಡೆಗೆ ದುಮುಕಲು ರೆಕ್ಕೆ ಬಿಚ್ಚಿದ ಹಕ್ಕಿಯಂತೆ ಊರಿನೆಡೆಗೆ ಧಾವಿಸಲು ಪಪ್ಪು ಸಿದ್ಧನಾಗತೊಡಗಿದ.