varthabharthi


ಕಮೆಂಟರಿ

ಭಾರತ-ಪಾಕಿಸ್ತಾನ ಕ್ರೀಡಾ ಸೂರ್ತಿಗೆ ರಾಜಕೀಯದ ಲೇಪನ

ವಾರ್ತಾ ಭಾರತಿ : 30 Apr, 2017

ಇವೆಲ್ಲಾ ಮೊದಲೇ ನಿರ್ಧರಿಸಿಕೊಂಡಂತೆ ಈಗ ಭಾರತದಲ್ಲಿ ನಡೆದಿವೆ ಅಷ್ಟೆ. ಈಗ ಭಾರತ ಸರಕಾರವು ಈ ಸಂದರ್ಭವನ್ನು ಬಳಸಿಕೊಂಡು ಪಾಕಿಸ್ತಾನದ ಕ್ರೀಡಾಪಟುಗಳು ಅವುಗಳಲ್ಲಿ ಭಾಗಿಯಾಗದಂತೆ ವೀಸಾ ನೀಡದೆ ತಡೆಗಟ್ಟುವ ಮೂಲಕ ಪಾಕ್ ಬಗ್ಗೆ ತನಗಿರುವ ಅಸಮಾಧಾನಕ್ಕೆ ಒಂದು ವೇದಿಕೆಯಾಗಿ ಬಳಸಿಕೊಳ್ಳುತ್ತಿದೆ.

ಭಾರತ-ಪಾಕಿಸ್ತಾನದ ನಡುವೆ ಈಗ ಒಂದು ಹಿಡಿ ಹಸಿ ಹುಲ್ಲು ಹಾಕಿದರೂ ಧಗ್ಗನೆ ಹತ್ತಿ ಉರಿಯುವ ಕಹಿಯ, ಬಿಗುವಿನ ಸನ್ನಿವೇಶ ನಿರ್ಮಾಣ ಗೊಂಡಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ನಂತರ ಇದು ಇನ್ನಷ್ಟು ಅತಿರೇಕಕ್ಕೆ ತಲುಪಿದೆ ಎಂದು ಹೇಳಬಹುದು. ಇತ್ತೀಚೆಗೆ ಚೆನ್ನೆನಲ್ಲಿ ಏರ್ಪಾಡಾಗಿದ್ದ ಇಂದು ಅಂದರೆ ಎಪ್ರಿಲ್ 30ರಂದು ಸಮಾಪ್ತಿಯಾಗುತ್ತಿರುವ ಏಷ್ಯನ್ ಸ್ಕ್ವಾಶ್ ಚಾಂಪಿಯನ್‌ಶಿಪ್ ಟೂರ್ನಿಯು ಇದಕ್ಕೊಂದು ನಿದರ್ಶನವಾಗಿದೆ.

ಹಾಲಿ ಏಷ್ಯನ್ ಚಾಂಪಿಯನ್ನರಾಗಿರುವ ಪಾಕಿಸ್ತಾನದ ಟೀಂಗೆ ಭಾರತಕ್ಕೆ ಬರಲು ವೀಸಾ ನೀಡುವಲ್ಲಿ ಉದ್ದೇಶಪೂರ್ವಕವಾಗಿ ತಡ ಮಾಡಿದರೆಂದು ಆರೋಪಿಸಿ ಕೊನೆಗಳಿಗೆಯಲ್ಲಿ ಪಾಕ್ ತಂಡ ಈ ಟೂರ್ನಿಯಿಂದ ಹೊರಗುಳಿ ಯಿತು. ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನರ್ ಕಚೇರಿಗೆ ಮಾರ್ಚ್ 17ರಂದೇ ನಾಲ್ವರು ಪಾಕ್ ಆಟಗಾರರು ವೀಸಾಗಾಗಿ ಅರ್ಜಿ ಸಲ್ಲಿಸಿದ್ದರೂ ಭಾರತದ ಅಕಾರಿಗಳು ವೀಸಾ ನೀಡದೆ ಕೊನೆಗಳಿಗೆಯಲ್ಲಿ ಸತಾಯಿಸಿದರಾದ್ದರಿಂದ ಪಾಕ್ ತಂಡ ಚೆನ್ನೆಗೆ ಬರಲಿಲ್ಲ.

ವಿಶ್ವ ಸ್ಕ್ವಾಷ್ ಕ್ರೀಡೆಯಲ್ಲಿ ಪಾಕಿಸ್ತಾನದ್ದು ಬಹುದೊಡ್ಡ ವಿಜಯಯಾತ್ರೆಯ ಇತಿಹಾಸವಿದೆ. ಪಾಕ್‌ನ ಜಹಾಂಗೀರ್ ಖಾನ್ 90ರ ದಶಕದಲ್ಲಿ ವಿಶ್ವ ಸ್ಕ್ವಾಷ್ ಸಾಮ್ರಾಟನಾಗಿ ಚಾಂಪಿಯನ್ ಆಗಿ ಮೆರೆದವರು. ಆರು ಬಾರಿ ವಿಶ್ವ ಚಾಂಪಿಯನ್ ಆಗಿ ಹತ್ತು ಬಾರಿ ಬ್ರಿಟಿಶ್ ಚಾಂಪಿಯನ್‌ಶಿಪ್ ಆಗಿದ್ದವರು. ಈ ಜಹಾಂಗೀರ್ ಸ್ಕ್ಯಾಶ್ ಆಟದಲ್ಲಿ 555 ಸತತ ಜಯ ಸಾಸಿರುವುದು ಇಂದಿಗೂ ಒಂದು ಗಿನ್ನೆಸ್ ದಾಖಲೆಯಾಗಿದೆ.

ಅದೇ ಪರಂಪರೆಯಲ್ಲಿ ಬಂದಿರುವ ರಾಹ್ ಮೆಹಬೂಬ್, ರ್‌ಹಾನ್ ಜಮಾನ್, ತಯ್ಯಬ್ ಅಸ್ಲಂ, ವಕಾರ್ ಮೆಹಬೂಬ್ ಈ ಬಾರಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಆಡಲು ಚೆನ್ನೆಗೆ ಬರುವುದಿತ್ತು. ಆದರೆ ಭಾರತದ ಬಿಜೆಪಿ ಸರಕಾರ ಅದಕ್ಕೆ ಅವಕಾಶ ನೀಡಲಿಲ್ಲ. ಹಾಲಿ ಚಾಂಪಿಯನ್ನನಿಲ್ಲದ ಈ ಟೂರ್ನಿಯು ಅಷ್ಟರ ಮಟ್ಟಿಗೆ ಕಳೆಗುಂದಿದೆ ಎಂದೇ ಹೇಳಬೇಕು.

ಬಿಜೆಪಿ ಸರಕಾರವು ಪಾಕಿಸ್ತಾನದ ಆಟಗಾರರಿಗೆ ವೀಸಾ ನಿರಾಕರಿಸುತ್ತಿರುವುದು ಇದೇ ಮೊದಲೇನಲ್ಲ. 2016ರ ಡಿಸೆಂಬರ್‌ನಲ್ಲಿ ಲಕ್ನೋದಲ್ಲಿ ನಡೆದ ವಿಶ್ವ ಜೂನಿಯರ್ ಹಾಕಿ ಟೂರ್ನಿಮೆಂಟ್‌ನಲ್ಲಿ ಪಾಕ್ ತಂಡ ಭಾಗವಹಿಸಲು ಆಗದಂತೆ ಆಗಲೂ ವೀಸಾ ಕೊಡದೆ ನಿರಾಕರಿಸಲಾಗಿತ್ತು. ಹದಿನಾರು ಟೀಂಗಳು ಭಾಗಿಯಾಗಿದ್ದ ಆ ಟೂರ್ನಿಯಿಂದ ಪಾಕಿಸ್ತಾನದ ತಂಡ ಹೊರಗುಳಿಯಬೇಕಾಯಿತು. ಅದಕ್ಕೂ ಮೊದಲು 2016ರ ಅಕ್ಟೋಬರ್‌ನಲ್ಲಿ ವಿಶ್ವ ಕಬಡ್ಡಿ ಚಾಂಪಿಯನ್‌ಶಿಪ್ ಟೂರ್ನಿಯು ಅಹಮದಾಬಾದ್‌ನಲ್ಲಿ ನಡೆದಾಗಲೂ ಭಾರತವು ಪಾಕ್ ಟೀಂಗೆ ವೀಸಾ ನೀಡದೆ ಟೂರ್ನಿಯಿಂದ ಹೊರಗಿರುವಂತೆ ನೋಡಿಕೊಂಡಿತ್ತು.

ಈಗ ಇವೇ ಘಟನೆಗಳು ಮರುಕಳಿಸಿವೆ. ಏಷ್ಯನ್ ಸ್ಕ್ವಾಷ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಪಾಕ್ ಆಟಗಾರರು ಬಂದು ಆಡಲಾಗದಂತೆ ಭಾರತ ನೋಡಿಕೊಂಡಿದೆ.

 ಇದನ್ನು ಏನೆಂದು ಅರ್ಥೈಸಬೇಕೆಂಬುದೇ ಪ್ರಶ್ನೆಯಾಗಿದೆ ?

ಇದೇನು ಕ್ರೀಡಾ ಕೂಟದಲ್ಲಿ ಸಾಸಲಾಗುವ ಜಯವೇ ? ಅಥವಾ ಇದೊಂದು ರಾಜತಾಂತ್ರಿಕ ವಿಜಯವೋ ?

 ನಿಜಾರ್ಥದಲ್ಲಿ ಹೇಳಬೇಕೆಂದರೆ ಇವೆರಡೂ ಅಲ್ಲ !

 ಏಕೆಂದರೆ ಈ ಕ್ರೀಡಾಕೂಟಗಳೆಲ್ಲಾ ಕೇವಲ ಭಾರತಕ್ಕೋ ಅಥವಾ ಪಾಕಿಸ್ತಾನಕ್ಕೋ ಸೀಮಿತವಾದವುಗಳಲ್ಲ. ಹಲವು ಹತ್ತು ದೇಶದ ತಂಡಗಳು ಪಾಲ್ಗೊಳ್ಳುವ ಅಂತಾರಾಷ್ಟ್ರಿಯ ಕ್ರೀಡಾ ಈವೆಂಟ್‌ಗಳಿವು. ಇವೆಲ್ಲಾ ಮೊದಲೇ ನಿರ್ಧರಿಸಿಕೊಂಡಂತೆ ಈಗ ಭಾರತದಲ್ಲಿ ನಡೆದಿವೆ ಅಷ್ಟೆ. ಈಗ ಭಾರತ ಸರಕಾರವು ಈ ಸಂದರ್ಭವನ್ನು ಬಳಸಿಕೊಂಡು ಪಾಕಿಸ್ತಾನದ ಕ್ರೀಡಾಪಟುಗಳು ಅವುಗಳಲ್ಲಿ ಭಾಗಿಯಾಗದಂತೆ ವೀಸಾ ನೀಡದೆ ತಡೆಗಟ್ಟುವ ಮೂಲಕ ಪಾಕ್ ಬಗ್ಗೆ ತನಗಿರುವ ಅಸಮಾಧಾನಕ್ಕೆ ಒಂದು ವೇದಿಕೆಯಾಗಿ ಬಳಸಿಕೊಳ್ಳುತ್ತಿದೆ.

 ಇದೆಲ್ಲಾ ದೀರ್ಘಕಾಲ ಬಾಳಿಕೆ ಬರುವಂತಹ ರಾಜತಾಂತ್ರಿಕ ನಡೆಗಳಲ್ಲ, ಅಷ್ಟು ಪರಿಣಾಮಕಾರಿಯೂ ಅಲ್ಲ ಎನ್ನುವುದನ್ನು ನಾವು ಅರಿಯಬೇಕಿದೆ. ಏಕೆಂದರೆ ಇದು ಕೇವಲ ಭಾರತ-ಪಾಕಿಸ್ತಾನಕ್ಕೆ ಸಂಬಂಸಿದ ವಿಷಯವಾಗಷ್ಟೆ ಬಹಳ ದಿನ ಉಳಿಯಲಾರದು. ಮುಂದೊಂದು ದಿನ ಶ್ರೀಲಂಕಾ ಸರಕಾರವು ತಮಿಳರ ಸಾಮೂಹಿಕ ಹತ್ಯೆ ನಡೆಸಿದ ಕಾರಣ ಆ ದೇಶದೊಂದಿಗೆ ಭಾರತ ಕ್ರೀಡಾ ಸಂಬಂಧವನ್ನು ಮುರಿದುಕೊಳ್ಳುವಂತೆ ತಮಿಳುನಾಡಿನ ಜನ ಒತ್ತಾಯಿಸಿದರೆ ಆಗೇನು ಮಾಡುವುದು?

ಭಾರತವನ್ನು ಲೂಟಿಗೈದ ಬ್ರಿಟಿಶರನ್ನು ಭಾರತದ ಕ್ರೀಡಾ ನಕ್ಷೆಯಿಂದ, ಐಪಿಎಲ್ ಟೂರ್ನಿಗಳಿಂದ ಹೊರಗಿಡ ಬೇಕೆಂಬ ಒತ್ತಾಯ ಕೇಳಿ ಬಂದರೆ ಸರಕಾರ ಆಗೇನು ಮಾಡುತ್ತದೆ!

 ಭಾರತದ ಈಗಿನ ಕ್ರೀಡಾ ನೀತಿಗಳನ್ನು ದಿಲ್ಲಿಯ ಬದಲಾಗಿ ನಾಗಪುರದಿಂದ ನಿರ್ವಹಿಸಲಾಗುತ್ತಿದೆ ಎನ್ನುವುದು ಸಾಬೀತಾಗುತ್ತಿದೆ, ಮತ್ತದು ಹಾಸ್ಯಾಸ್ಪದವಾಗಿದೆ.

ಭಾರತ-ಪಾಕಿಸ್ತಾನ ಕ್ರೀಡಾ ಸಂಬಂಧಗಳಿಗೆ ನಾಗ್ಪುರದ ಗೂಗ್ಲಿ

ಏಕೆಂದರೆ, ಭಾರತದಲ್ಲಿ ನಡೆದ ಈ ಕ್ರಿಡಾಕೂಟಗಳು ಕೇವಲ ಭಾರತ ಮತ್ತು ಪಾಕಿಸ್ತಾನ ತಂಡಗಳಿಗೆ ಮಾತ್ರ ಸೀಮಿತವಾಗಿದ್ದ ಇವೆಂಟ್‌ಗಳಾಗಿರಲಿಲ್ಲ. ಅಂತಾರಾಷ್ಟ್ರೀಯ ಮಟ್ಟದ ಈ ಕ್ರೀಡಾಕೂಟಗಳನ್ನು ಭಾರತದಲ್ಲಿ ನಡೆಸುವಂತೆ ಈ ಹಿಂದೆ ನಿರ್ಧರಿಸಿದಂತೆ ಈಗ ನಡೆಸಲಾಗಿರುವ ಕ್ರೀಡಾಕೂಟಗಳಿವು. ಭಾರತದ ಈ ಪ್ರವೃತ್ತಿ ಹೀಗೆಯೇ ಮುಂದುವರಿದರೆ ಪಾಕಿಸ್ತಾನವೂ ಭಾರತ ಸರಕಾರದ ಈ ಪೂರ್ವಾಗ್ರಹಗಳನ್ನು ಅಂತಾರಾಷ್ಟ್ರೀಯ ಸಮುದಾಯದ ಗಮನಕ್ಕೆ ತಂದು ಇಂತಹ ಕೂಟಗಳು ಭಾರತದಲ್ಲಿ ನಡೆಸಲು ಅವಕಾಶ ನೀಡಬಾರದೆಂದು ಒತ್ತಾಯಿಸುವ ಸಾಧ್ಯತೆಗಳಿವೆ. ಭಾರತ ಸರಕಾರ ಪಾಕ್ ಆಟಗಾರರಿಗೆ ಹೀಗೆ ವೀಸಾ ನಿರಾಕರಿಸುವ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಂತೆ ತಡೆಯುವ ಧೋರಣೆಯನ್ನು ಸದಾಕಾಲ ತೋರಿಸಲು ಆಗುವುದಿಲ್ಲ. ಒಟ್ಟಾರೆ ಹೇಳಬೇಕೆಂದರೆ ಭಾರತ ಸರಕಾರದ ಕ್ರೀಡಾ ನೀತಿಯನ್ನು ರೂಪಿಸುವ ತಂಡದಲ್ಲಿ ಈಗ ನಾಗ್ಪುರದ ವಟುಗಳು ಸೇರಿಕೊಂಡಂತೆ ಕಾಣುತ್ತದೆ. ನಮ್ಮಲ್ಲಿ ಕ್ರಿಕೆಟ್ ಆಡುವಾಗ ಬೌಲಿಂಗ್ ಮಾಡಿದಂತೆಯೂ ಆಗಬೇಕು. ಆದರೆ ಬ್ಯಾಟ್ಸ್‌ಮೆನ್‌ಗೆ ಹೊಡೆಯಲು ಬಾಲ್ ಸಿಗಬಾರದು ಎನ್ನುವಾಗ ಚೆಂಡನ್ನು ನೆಲದಲ್ಲಿ ಉರುಳಿಸಿ ಬಿಡುವ ಒಂದು ವಿಚಿತ್ರ ಬೌಲಿಂಗ್ ಪದ್ಧತಿಯಿತ್ತು. ಅದನ್ನು ಸ್ಥಳೀಯವಾಗಿ ‘ಪಿಂಡಾ ಬೌಲಿಂಗ್’ ಎನ್ನುತ್ತಾರೆ. ಅಂತಹ ಪಿಂಡಾ ಬೌಲಿಂಗನ್ನು ಗೂಗ್ಲಿ ಎಂದು ಕೆಲವರು ನಂಬಿಕೊಂಡಿರಬಹುದು. ಆದರೆ ಅದು ನಿರೋದ್ಧಾತ ಬೌಲಿಂಗ್ ಅನ್ನಿಸಿಕೊಳ್ಳುವುದಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)