ಮಾಂಸಾಹಾರಿಗಳಿಗೆ ಫ್ಲ್ಯಾಟ್ ನಿರಾಕರಿಸಿದರೆ ಹುಶಾರ್ !
ಬಿಲ್ಡರ್ ಗಳಿಗೆ ರಾಜ್ ಠಾಕ್ರೆ ಎಚ್ಚರಿಕೆ
ಮುಂಬೈ,ಎ.30: ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಜನರ ಆಹಾರಕ್ರಮ ಅಥವಾ ಧರ್ಮದ ಆಧಾರದಲ್ಲಿ ಅವರಿಗೆ ಫ್ಲಾಟ್‌ಗಳನ್ನು ಮಾರಾಟ ಮಾಡಲು ನಿರಾಕರಿಸುತ್ತಿರುವ ಬಿಲ್ಡರ್‌ಗಳಿಗೆ ಬೆದರಿಕೆಯೊಡ್ಡುವ ಮೂಲಕ ಮಾಂಸಾಹಾರ- ಸಸ್ಯಾಹಾರ ವಿವಾದವನ್ನು ಮತ್ತೆ ಕೆದಕಿದೆ. ಮಾಂಸಾಹಾರಿ ಗ್ರಾಹಕರಿಗೆ ಫ್ಲಾಟ್‌ಗಳ ಮಾರಾಟಕ್ಕೆ ನಿರಾಕರಿಸಿದರೆ ‘ಪರಿಣಾಮಗಳನ್ನು ’ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯೊಂದಿಗೆ ಪಕ್ಷವು ಹತ್ತಕ್ಕೂ ಅಧಿಕ ಪ್ರಮುಖ ಬಿಲ್ಡರ್‌ಗಳಿಗೆ ಪತ್ರಗಳನ್ನು ಬರೆದಿದೆ.
ಕೆಲವು ತಿಂಗಳುಗಳ ಹಿಂದೆ ನಡೆದ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯ ತನ್ನ ಪ್ರಚಾರ ಅಭಿಯಾನದ ವೇಳೆ ಪಕ್ಷವು ಜೈನರ ಪರ್ಯೂಷಣ ಉತ್ಸವದ ಸಂದರ್ಭ ಮಾಂಸ ಮಾರಾಟ ನಿಷೇಧವನ್ನು ಪ್ರತಿಭಟಿಸಿ ವಿಲೆಪಾರ್ಲೆಯಲ್ಲಿನ ಜೈನರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಹೌಸಿಂಗ್ ಸೊಸೈಟಿಯ ಪ್ರವೇಶ ದ್ವಾರದ ಹೊರಗೆ ಮಾಂಸಾಹಾರದ ಅಂಗಡಿಯೊಂದನ್ನು ತೆರೆದಿತ್ತು. ಚುನಾವಣೆಯಲ್ಲಿ ಒಟ್ಟು 227 ಸ್ಥಾನಗಳ ಪೈಕಿ ಕೇವಲ ಏಳು ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿದ್ದ ಪಕ್ಷಕ್ಕೀಗ ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಬಲ ಸವಾಲು ಎದುರಾಗಿದೆ. ಇದೇ ಕಾರಣಕ್ಕಾಗಿ ಅದು ಮತ್ತೆ ಮಾಂಸಾಹಾರ-ಸಸ್ಯಾಹಾರದ ವಿವಾದವನ್ನು ಕೆದಕಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಜಾತಿ,ಧರ್ಮ ಮತ್ತು ಆಹಾರ ಕ್ರಮದ ತಾರತಮ್ಯದಲ್ಲಿ ಬಿಲ್ಡರ್‌ಗಳು ಗ್ರಾಹಕರಿಗೆ ಫ್ಲಾಟ್‌ಗಳನ್ನು ಮಾರಾಟ ಮಾಡಲು ನಿರಾಕರಿಸುತ್ತಿದ್ದಾರೆ ಎಂಬ ದೂರುಗಳು ನಮಗೆ ಬಂದಿವೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಈ ವಿಷಯವನ್ನೆತ್ತಲು ನಾವು ನಿರ್ಧರಿಸಿದ್ದೇವೆ ಎಂದು ಮರಾಠಿ ಬಾಹುಳ್ಯದ ಪ್ರದೇಶಗಳಾದ ದಾದರ್ ಮತ್ತು ಮಾಹಿಮ್‌ಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ನಡೆಸುತ್ತಿರುವ ಕೆಲವು ಬಿಲ್ಡರ್‌ಗಳಿಗೆ ಪತ್ರಗಳನ್ನು ಬರೆದಿರುವ ಎಂಎನ್‌ಎಸ್ ನಾಯಕ ಹಾಗೂ ಮಾಜಿ ಕಾರ್ಪೊರೇಟರ್ ಸಂದೀಪ್ ದೇಶಪಾಂಡೆ ಹೇಳಿದರು.
ಬಾಂದ್ರಾ ನಿವಾಸಿಯಾಗಿರುವ ಎಂಎನ್‌ಎಸ್ ಯುವಘಟಕದ ಉಪಾಧ್ಯಕ್ಷ ಅಖಿಲ್ ಚಿತ್ರೆ ಅವರೂ ಕೆಲವು ಬಿಲ್ಡರ್‌ಗಳಿಗೆ ಇಂತಹುದೇ ಪತ್ರಗಳನ್ನು ಬರೆದಿದ್ದಾರೆ. ‘ನಮ್ಮದು ಕಾಸ್ಮೊಪಾಲಿಟನ್ ನಗರವಾಗಿದೆ. ಇಲ್ಲಿ ವಿವಿಧ ಸಮದಾಯಗಳ, ವಿವಿಧ ಧರ್ಮಗಳನ್ನು ಅನುಸರಿಸುತ್ತಿರುವ ಜನರು ವಾಸವಾಗಿದ್ದಾರೆ. ಅವರಿಗೆ ಅವರ ಧರ್ಮ ಪಾಲನೆಯ ಮತ್ತು ಅವರ ಆಯ್ಕೆಯ ಆಹಾರದ ಹಕ್ಕು ಇದೆ ’ ಎಂದು ಅವರು ಹೇಳಿದರು.
ಪತ್ರಗಳಲ್ಲಿ ಬಿಲ್ಡರ್‌ಗಳಿಗೆ ಎಚ್ಚರಿಕೆಯನ್ನು ನೀಡಲಾಗಿದ್ದರೂ, ಇವು ‘ಮನವಿ ಪತ್ರಗಳು’ ಎಂದು ದೇಶಪಾಂಡೆ ಬಣ್ಣಿಸಿದರು. ಸದ್ಯಕ್ಕೆ ನಾವು ಮನವಿ ಪತ್ರಗಳನ್ನು ಕಳುಹಿಸಿದ್ದೇವೆ. ಅವರು ತಮ್ಮನ್ನು ತಿದ್ದಿಕೊಳ್ಳದಿದ್ದರೆ ನಾವು ಅವರಿಗೆ ತಕ್ಕ ಪಾಠವನ್ನು ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.
ಎಂಎನ್‌ಎಸ್‌ನ ಬೆದರಿಕೆಗೆ ಮಣಿದಿರುವ ಕೆಲವು ಬಿಲ್ಡರ್‌ಗಳು ಪಕ್ಷದ ಪದಾಧಿಕಾರಿಗಳಿಗೆ ಮಾರೋಲೆಗಳನ್ನು ಬರೆದು, ಫ್ಲಾಟ್ ಖರೀದಿದಾರರ ವಿರುದ್ಧ ತಾವೆಂದೂ ತಾರತಮ್ಯವೆಸಗಿಲ್ಲ, ಭವಿಷ್ಯದಲ್ಲಿಯೂ ಅಂತಹುದನ್ನು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಇದು ತನ್ನ ನೈತಿಕ ಗೆಲುವು ಎಂದು ಎಂಎನ್‌ಎಸ್ ಬೀಗುತ್ತಿದೆ. ಆದರೆ ಕಾಂಗ್ರೆಸ್‌ಇದನ್ನು ಕಟುವಾಗಿ ಟೀಕಿಸಿದೆ. ಇದೊಂದು ಪ್ರಚಾರ ತಂತ್ರ ಎಂದು ಬಣ್ಣಿಸಿದ ಕಾಂಗ್ರೆಸ್ ನಾಯಕ ಸಚಿನ್ ಸಾವಂತ್, ಅವರು ಜನತೆಯ ಬೆಂಬಲ ಕಳೆದುಕೊಂಡಿದ್ದಾರೆ. ಈಗ ಇಂತಹ ವಿಷಯಗಳನ್ನು ಕೆದಕಿ ಜನರ ಸಹಾನುಭೂತಿ ಗಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.