ಏಕೀಕರಣದಿಂದ ರಾಜ್ಯಕ್ಕೆ ನಷ್ಟವೇ ಹೆಚ್ಚು: ಡಾ.ಹಂಪನಾ
ಬೆಂಗಳೂರು, ಎ.30: ಕನಾರ್ಟಕ ಏಕೀಕರಣದಿಂದ ರಾಜ್ಯಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಈ ಕುರಿತು ಪ್ರತಿಯೊಬ್ಬ ಕನ್ನಡಿಗರು ಸಿಂಹಾವಲೋಕನ ಮಾಡಬೇಕು ಎಂದು ಹಿರಿಯ ಸಾಹಿತಿ ಡಾ.ಹಂಪಾ ನಾಗರಾಜಯ್ಯ ತಿಳಿಸಿದ್ದಾರೆ.
ರವಿವಾರ ನಗರದ ಕಸಾಪದಲ್ಲಿ ಹೊರನಾಡು-ಗಡಿ ನಾಡು ಬರಹಗಾರರ ಒಕ್ಕೂಟ (ಸ್ಪಂದನ ವೇದಿಕೆ )ಆಯೋಜಿಸಿದ್ದ ಪುಸ್ತಕ ಬಿಡುಗಡೆ ಹಬ್ಬ ಕಾರ್ಯಕ್ರಮದಲ್ಲಿ 21ಲೇಖಕರ 33 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕರ್ನಾಟಕದ ಏಕೀಕರಣದ ಮೊದಲು ಮದ್ರಾಸ್ ಪ್ರಾಂತ್ಯದಲ್ಲಿ 175 ಕನ್ನಡ ಉಪನ್ಯಾಸಕರಿದ್ದರು.ಕೇರಳದಲ್ಲಿ ಕನ್ನಡ ಶಾಲೆಗಳು ಇದ್ದವು. ಆಂಧ್ರ ಪ್ರದೇಶದ ಎಲ್ಲ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಬಳಸಿಕೊಂಡಿದ್ದರು.ಆದರೆ ಏಕೀಕರಣದ ಬಳಿಕ ಕನ್ನಡದ ವ್ಯಾಪ್ತಿ ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾಷಾವಾರು ರಾಜ್ಯಗಳ ರಚನೆಯಿಂದ ದೇಶದ ಏಕತೆ ಮತ್ತು ಸಾಮರಸ್ಯಕ್ಕೆ ಹುಳಿ ಹಿಂಡಿದಂತ್ತಾಗಿದೆ.ಪರ ಭಾಷಿಕರನ್ನು ಶತ್ರುಗಳನ್ನಾಗಿ ನೋಡುವ ಗುಮಾನಿ ನಮ್ಮಲ್ಲಿ ಹುಟ್ಟಿಕೊಂಡಿದೆ. ಇತರೆ ಭಾಷೆಗಳೊಂದಿಗಿನ ಕೊಡುಕೊಳ್ಳುವಿಕೆ, ಸಾಂಸ್ಕೃತಿಕ ಐಕ್ಯತೆಯೂ ರೋಗ ಪೀಡಿತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡ ಭಾಷೆಯ ಸ್ಥಿತಿ ನೀರು ಹಿಂಗುವ ರೀತಿಯಲ್ಲಿದೆ.ಪ್ರತಿಕೂಲ ಪರಿಸ್ಥಿತಿ ವೇಳೆ ಕನ್ನಡವನ್ನು ಜೀವಂತವಾಗಿಡಲು ಪ್ರತಿಯೊಬ್ಬರು ಪ್ರಯತ್ನಿಸಬೇಕು. ಹೊರ ಕನ್ನಡಿಗರಿಂದ ಸ್ವಲ್ಪ ಮಟ್ಟಿಗೆ ಕನ್ನಡದ ತಂಗುದಾಣಗಳು ಹಸಿರುನಿಂದ ಕೂಡಿವೆ.ಇದರ ಜೊತೆಗೆ ಒಳ ಕನ್ನಡಿಗರಿಂದ ಕನ್ನಡ ವಿಕಸನಕ್ಕೆ ಕೈ ಜೋಡಿಸಬೇಕು ಎಂದು ಕರೆಕೊಟ್ಟರು.
ವಿಮರ್ಶಕ ಎಸ್.ಆರ್.ವಿಜಯ್ ಶಂಕರ್ ಮಾತನಾಡಿ, ಗಡಿ ನಾಡು- ಹೊರನಾಡು ಕನ್ನಡಿಗರ ಸಮಸ್ಯೆಗಳ ಬಗ್ಗೆ ಒಳನಾಡಿನ ಕನ್ನಡಿಗರಿಗೆ ಗೊತ್ತಿಲ್ಲ.ಆದರೂ ಕನ್ನಡದ ಬಗ್ಗೆ ಪ್ರೀತಿ ಇಟ್ಟುಕೊಂಡಿದ್ದಾರೆ. ಸಂಘ ಸಂಸ್ಥೆಗಳ ಮೂಲಕ ಕನ್ನಡದ ಅಸ್ತಿತ್ವವನ್ನು ಉಳಿಸಲು ಹೋರಾಟ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಕನ್ನಡದ ಪಾಂಡಿತ್ಯವನ್ನು ರಕ್ಷಣೆ ಮಾಡುವಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳಗಿಂತ ಹೊರನಾಡಿನ ವಿಶ್ವವಿದ್ಯಾಲಯಗಳ ಪಾತ್ರ ದೊಡ್ಡದ್ದು.ಹೊರ ನಾಡಿನ ವಿವಿಗಳು ಕನ್ನಡ ಭಾಷೆಯ ಸಂಶೋಧನೆ ಮತ್ತು ವಿದ್ವತ್‌ಗೆ ಹೆಚ್ಚು ಮಹತ್ವವನ್ನು ನೀಡುತ್ತಿರುವುದು ಗಮನಾರ್ಹವಾದದ್ದು ಎಂದು ಬಣ್ಣಿಸಿದರು.
ಒಕ್ಕೂಟ ವ್ಯವಸ್ಥೆಗೂ ಮುನ್ನಾ ಇದ್ದ ಭಾಷಾ ಸೌಹಾರ್ದತೆ ಕ್ಷೀಣಿಸತೊಡಗಿದೆ. ಭಾಷಾವಾರು ರಾಜ್ಯಗಳೊಂದಿಗಿನ ಸಾಂಸ್ಕೃತಿಕ ಕೊಡುಕೊಳ್ಳುವಿಕೆ ಮಹತ್ವ ಸಂಪೂರ್ಣವಾಗಿ ಕಳೆದುಕೊಂಡಿದೆ. ಕೇರಳದಲ್ಲಿ ಮಲಯಾಳಂ ಭಾಷೆ ಕಡ್ಡಾಯಗೊಳಿಸಿರುವುದರಿಂದ ಕಾಸರಗೋಡಿನ ಕನ್ನಡಿಗರ ಮೇಲೆ ಪರಿಣಾಮ ಬೀರಿಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಾಹಿತಿ ಡಾ.ಆನಂದರಾಮ ಉಪಾಧ್ಯ, ವಾಣಿಜ್ಯ ತೆರಿಗೆಗಳ ಉಪ ಆಯುಕ್ತ ಕೆ.ಸಿ.ವಿರೂಪಾಕ್ಷ ಇದ್ದರು.