ಕಿವುಡುತನ ಮೆಟ್ಟಿ ನಿಂತ ಈಕೆಯ ಸಾಧನೆಗೆ ನೀವು ನಿಬ್ಬೆರಗಾಗುವಿರಿ !
ಅಹ್ಮದಾಬಾದ್, ಮೇ 2: ಕಿವುಡುತನ ಒಂದು ಶಾಪವೆಂದು ನಂಬಿದವರು ಹಲವರಿದ್ದಾರೆ. ಆದರೆ ಅಹ್ಮದಾಬಾದ್ ನಗರದ ಯುವತಿಯೊಬ್ಬಳು ತನ್ನ ಕಿವುಡುತನವನ್ನು ಮೆಟ್ಟಿ ನಿಂತು ಮಾಡಿದ ಸಾಧನೆ ಎಲ್ಲರನ್ನೂ ನಿಬ್ಬೆರಗಾಗಿಸಿದೆ. ನರ್ತನ, ಹಾಡುಗಾರಿಕೆ ಹಾಗೂ ಹಾರ್ಮೋನಿಯಂ ವಾದನದ ಅಭೂತಪೂರ್ವ ಸಾಧನೆಯಿಂದಾಗಿ ಆಕೆಯ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ 2017ನಲ್ಲಿ ಸೇರಿದೆ.
ಈ ಅಪ್ರತಿಮ ಸಾಧಕಿಯ ಹೆಸರು ರಚನಾ ಡಿ. ಶಾ (23). ಕಿವುಡುತನದ ತೀವ್ರ ಸಮಸ್ಯೆ ಎದುರಿಸುತ್ತಿರುವ ಈಕೆ ಸ್ಪೀಚ್ ಥೆರಪಿ ಮತ್ತು ತರಬೇತಿ ಪಡೆದ ಪರಿಣಾಮ ಈಗ ಗುಜರಾತಿ, ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಓದಬಲ್ಲಳು, ಬರೆಯಬಲ್ಲಳು ಹಾಗೂ ಮಾತನಾಡಬಲ್ಲಳು. ಅಷ್ಟೇ ಅಲ್ಲ ಈಕೆ ಶಾಸ್ತ್ರೀಯ ಹಾಗೂ ಜನಪದ ಹಾಡುಗಳನ್ನು ಹಾಡುತ್ತಾಳೆ, ನೃತ್ಯ ಮಾಡುತ್ತಾಳೆ. ಇಂಜಿನಿಯರಿಂಗ್ ಪದವೀಧರೆಯಾಗಿರುವ ಈಕೆ ಬಿ.ಟೆಕ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ.
ಹುಟ್ಟುವಾಗ ಶೇ.100ರಷ್ಟು ಕಿವುಡುತನವಿದ್ದ ಈಕೆ ಬೆಳೆದು ದೊಡ್ಡವಳಾದಾಗ ಸಂಗೀತ ವಿಶಾರದೆಯಾಗುತ್ತಾಳೆಂದು ಯಾರೂ ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಆಕೆಯ ತಾಯಿ ಗ್ಯಾನೇಶ್ವರಿ ದೇವಿ ಮಗಳಿಗೆ ಶ್ರವಣ ಸಾಧನಗಳನ್ನು ತಂದಿತ್ತರು, ಆಕೆಗೆ ಶಾಸ್ತ್ರೀಯ ಸಂಗೀತ ಕೇಳಿಸಿದರು. ಆಕೆ ಸಕಾರಾತ್ಮಕವಾಗಿ ಸ್ಪಂದಿಸಿದಾಗ ಆಕೆಗೆ ಸೂಕ್ತ ತರಬೇತಿ ನೀಡಲಾಯಿತು. ಮೊದಲಿಗೆ ಥೆರಪಿಯ ಭಾಗವಾಗಿ ನೃತ್ಯ ಕಲಿಸಲಾಯಿತು. ನಂತರ ಸಂಗೀತದಲ್ಲೂ ಆಸಕ್ತಿ ತೋರಿಸಿದಳು. ಇದೀಗ ಆಕೆ ಎಂಟು ಶಾಸ್ತ್ರೀಯ ರಾಗಗಳನ್ನು ಸುಲಲಿತವಾಗಿ ಹಾಡಬಲ್ಲಳು ಎನ್ನುತ್ತಾರೆ ಆಕೆಯ ತಾಯಿ.