ನಗದು ಕೊರತೆಯ ಹಿಂದಿನ ಕಾರಣಗಳೇನು?
ನಗದು ವ್ಯವಹಾರಗಳನ್ನು ನಿಯಂತ್ರಿಸಲು ಮತ್ತು ಡಿಜಿಟಲ್ ವ್ಯವಹಾರ ಹೆಚ್ಚಿಸಲು, ಕೆಲವು ನಿರ್ದಿಷ್ಟ ನಗದು ವ್ಯವಹಾರದ ನಂತರದ ವ್ಯವಹಾರಗಳಿಗೆ ಶುಲ್ಕ ವಿಧಿಸುವ ಸರಕಾರದ ಇತ್ತೀಚೆಗಿನ ನಿರ್ದೇಶನ, ಸಮಸ್ಯೆಯ ಹಿಂದಿನ ಮುಖ್ಯ ಕಾರಣ ಎಂದು ಹಣಕಾಸು ತಜ್ಞರ ಅಭಿಪ್ರಾಯ.
ಕಳೆದ ಕೆಲವು ದಿವಸಗಳಿಂದ ನಗದು ಇಲ್ಲ... ಎಟಿಎಂ ಔಟ್ ಆಫ್ ಆರ್ಡರ್... ಎಟಿಎಂ ದುರಸ್ತಿಯಲ್ಲಿದೆ... ಕ್ಯಾಶ್ ಬಂದಿಲ್ಲ... ಕ್ಯಾಶ್ ಖಾಲಿ... ಮುಂತಾದ ಬರಹಗಳು ಮತ್ತು ಫಲಕಗಳು ಎಟಿಎಂ ಮುಂದೆ ರಾರಾಜಿಸುತ್ತಿವೆ. ಟಿವಿ ಚಾನೆಲ್ ಒಂದರ ರಿಯಾಲಿಟಿ ಚೆಕ್ ಪ್ರಕಾರ ಶೇ. 80ರಷ್ಟು ಎಟಿಎಂಗಳಲ್ಲಿ ಕ್ಯಾಶ್ ಇಲ್ಲ ಎನ್ನುವ ಮಾಹಿತಿ ಕೇಳಿ ಬರುತ್ತಿದೆ. ಜನರು ಮಾಧ್ಯಮದ ಎದುರು ತಮ್ಮ ಹತಾಶ ಅಳಲನ್ನು ತೋಡಿಕೊಳ್ಳುವುದನ್ನು, ಗೋಗರೆಯವುದನ್ನು ದೃಶ್ಯ ಮಾಧ್ಯಮದಲ್ಲಿ ನೋಡಬಹುದು. ಕೆಲವರು ಬ್ಯಾಂಕಿನವರನ್ನು ತರಾಟೆಗೆ ತೆಗೆದುಕೊಂಡರೆ, ಇನ್ನು ಕೆಲವರು ಮೋದಿ ಸರಕಾರವನ್ನು ಟೀಕಿಸುತ್ತಾರೆ. 2016ರ ನವೆಂಬರ್ ತಿಂಗಳ ನೋಟು ಅಮಾನ್ಯೀಕರಣದ ನಂತರದ ದೃಶ್ಯಾವಳಿಗಳು ಹಣಕಾಸು ಮಾರುಕಟ್ಟೆಯಲ್ಲಿ ಮರು ಭೇಟಿ ಕೊಟ್ಟಂತೆ ಕಾಣುತ್ತಿದೆ ಎನ್ನುವ ಬ್ಯಾಂಕ್ ಗ್ರಾಹಕರ ಅಭಿಪ್ರಾಯದಲ್ಲಿ ಅರ್ಥವಿಲ್ಲದಿಲ್ಲ. ಎಟಿಎಂ ಮತ್ತು ಬ್ಯಾಂಕುಗಳ ಮುಂದೆ ಒಂದು ರೀತಿಯ ಗೊಂದಲ ಮತ್ತು ಹತಾಶೆ ಕಾಣುತ್ತಿದೆ. ಗ್ರಾಹಕರು ಹಿಡಿ ಶಾಪ ಹಾಕಿ ‘ಒಳ್ಳೆಯ ನಾಳೆ’ಗಾಗಿ ಹಂಬಲಿಸುತ್ತಾ ಹಿಂದಿರುಗುತ್ತಾರೆ. ಗ್ರಾಹಕರನ್ನು ಸಮಾಧಾನ ಪಡಿಸುವಲ್ಲಿ ಬ್ಯಾಂಕ್ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು, ‘‘ಸದ್ಯದಲ್ಲಿಯೇ ಪರಿಸ್ಥಿತಿ ಸುಧಾರಿ ಸುತ್ತದೆ’’ ಎನ್ನುವ ಭರವಸೆ ಕೊಟ್ಟು ಗ್ರಾಹಕರನ್ನು ಸಾಗ ಹಾಕುತ್ತಾರೆ.
ಈ ಪರಿಸ್ಥಿತಿಗೆ ಕಾರಣವೇನು?
ನೋಟು ಅಮಾನ್ಯೀಕರಣದ ನಂತರ, ನವೆಂಬರ್ನಿಂದ ಮಾರ್ಚ್ 2017ರ ವರೆಗೆ, ಕೇವಲ ಸುಮಾರು ಒಂದು ತಿಂಗಳು ಮಾತ್ರ ‘ನಗದು ಸಮಸ್ಯೆ’ ಸಮಾಧಾನಕರವಾಗಿತ್ತು. ಆದರೆ, ಮಾರ್ಚ್ ಕೊನೆಯ ವಾರದಿಂದ ಪರಿಸ್ಥಿತಿ ಬಿಗಡಾಯಿಸಿದ್ದು, ಈ ಪರಿಸ್ಥಿತಿಗೆ ನಿಖರವಾದ ಕಾರಣವನ್ನು ಯಾರೂ ನೀಡುತ್ತಿಲ್ಲ ಮತ್ತು ಈ ನಿಟ್ಟಿನಲ್ಲಿ ಅಧಿಕೃತ ಹೇಳಿಕೆಯನ್ನು ಸರಕಾರವೂ ಕೊಡುತ್ತಿಲ್ಲ. ಮಾಧ್ಯಮದವರು, ಆರ್ಥಿಕ ತಜ್ಞರು, ವಿಶ್ಲೇಷಕರು, ಬ್ಯಾಂಕುಗಳು, ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಮತ್ತು ಕೆಲವರನ್ನು ಮೆಚ್ಚಿಸಲು, ಯಾವುದೇ ಬಧ್ಧತೆ ಇಲ್ಲದೇ ಪರಿಸ್ಥಿತಿಯನ್ನು ವಿವರಿಸಿ, ಗೊಂದಲವನ್ನು ತಿಳಿಗೊಳಿಸಲು ಆಶಾ ಗೋಪುರವನ್ನು ಕಟ್ಟುತ್ತಾರೆ. ಆದರೆ, ಈ ಗೊಂದಲದಲ್ಲಿ ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿದ ಬ್ಯಾಂಕುಗಳ ಕೈವಾಡ ಇಲ್ಲವೆನ್ನುವುದನ್ನು ನೇರವಾಗಿ ಮತ್ತು ದಿಟ್ಟವಾಗಿ ಹೇಳಬಹುದು. ಬ್ಯಾಂಕುಗಳು ತಮ್ಮಲ್ಲಿ ನಗದು ಸ್ಟಾಕ್ ಇದ್ದರೆ ಕೂಡಲೇ ಎಟಿಎಂ ಭರ್ತಿ ಮಾಡುತ್ತಾರೆ. ಸ್ಟಾಕ್ ಇಲ್ಲದಿದ್ದರೆ ಅವರೇನು ಮಾಡಲು ಸಾಧ್ಯ? ನೋಟು ಮುದ್ರಣ ರಿಸರ್ವ್ ಬ್ಯಾಂಕ್ನ ಏಕಸ್ವಾಮ್ಯ. ಬೇರೆ ಯಾವ ಬ್ಯಾಂಕೂ ನೋಟು ಮುದ್ರಣ ಮಾಡುವುದಿಲ್ಲ. ಅವುಗಳು ತಾವು ಗ್ರಾಹಕರಿಂದ, ಬೇರೆ ಬ್ಯಾಂಕುಗಳಿಂದ ಪಡೆದ ಮತ್ತು ರಿಸರ್ವ್ ಬ್ಯಾಂಕ್ನಿಂದ ಪಡೆದ ನೋಟುಗಳಿಂದ ತಮ್ಮ ನಗದು ವ್ಯವಹಾರಗಳನ್ನು ನಿರ್ವಹಿಸುತ್ತವೆ. ರಿಸರ್ವ್ ಬ್ಯಾಂಕ್, ಬ್ಯಾಂಕ್ ಗಳಿಗೆ ನಗದು ಪೂರೈಸುವ ಮುಖ್ಯ ಮೂಲವಾಗಿದ್ದು, ಇಂದಿನ ನಗದು ಕೊರತೆಗೆ ಬ್ಯಾಂಕುಗಳು ರಿಸರ್ವ್ ಬ್ಯಾಂಕ್ನತ್ತ ಬೊಟ್ಟು ಮಾಡುವುದರಲ್ಲಿ ಅರ್ಥವಿದೆ.
ಫೆಬ್ರವರಿ 20, 2017 ನಂತರ, ಸರಕಾರ ನಗದು ಹಿಂದೆಗೆತದ ಮೇಲಿನ ನಿಯಂತ್ರಣವನ್ನು ತೆಗೆದದ್ದು ಮತ್ತು ಮಾರ್ಚ್ 13ರ ನಂತರ ಎಟಿಎಂ ಹಿಂದೆೆಗೆತದ ಮೇಲಿನ ಮಿತಿಯನ್ನೂ ತೆಗೆದದ್ದು, ಗ್ರಾಹಕರು ಒಮ್ಮೆಲೆ ಮುಗಿಬಿದ್ದು ನಗದು ಹಿಂಪಡೆದಿದ್ದು, ಬ್ಯಾಂಕುಗಳಲ್ಲಿ ಕ್ಯಾಶ್ ಕೊರತೆಗೆ ಕಾರಣ ಎಂದು ಕೆಲವು ಬ್ಯಾಂಕಿನವರು ಅಭಿಪ್ರಾಯಪಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ‘ಸಂಭವನೀಯ’ ನಿಯಂತ್ರಣವನ್ನು ಊಹಿಸಿ ಗ್ರಾಹಕರು ಈ ರೀತಿ ಮಾಡಿರಬಹುದು ಎಂದೂ ಹೇಳುತ್ತಾರೆ. ನವೆಂಬರ್ 2016 ರಿಂದ ಮಾರ್ಚ್ 2017ರ ವರೆಗೆ ನಗದು ಮಿತಿಯಿಂದ ತಡೆ ಹಿಡಿಯಲ್ಪಟ್ಟ ಪೇಮೆಂಟ್ನ್ನು ಒಮ್ಮೆಲೆ ಗ್ರಾಹಕರು ಮಾಡಿರಬಹುದು ಎಂದೂ ಹೇಳಲಾಗುತ್ತಿದೆ.
ಈಗ ಮದುವೆ ಸೀಸನ್ ನಡೆಯುತ್ತಿದ್ದು, ಗ್ರಾಹಕರು ಬ್ಯಾಂಕುಗಳಿಂದ ಭಾರೀ ಪ್ರಮಾಣದಲ್ಲಿ ನಗದು ಹಿಂಪಡೆದ ಸಾಧ್ಯತೆಯನ್ನು ಕೆಲವರು ಒತ್ತಿ ಹೇಳುತ್ತಿದ್ದಾರೆ. ನಗದು ವ್ಯವಹಾರದಲ್ಲಿ ಯಾವುದಾದರೂ ಅನಿರೀಕ್ಷಿತ ಬೆಳವಣಿಗೆಯಾಗಬಹುದು ಎನ್ನುವ ಭಯದಲ್ಲಿ, ಅವಕಾಶ ಸಿಕ್ಕಿದಾಗ ಸಾಕಷ್ಟು ಹಿಂಪಡೆದು ಸಂಗ್ರಹಿಸಿ ಇಟ್ಟಿರಬಹುದು. ಕಳೆದ ನವೆಂಬರ್ ಮತ್ತು ಡಿಸೆಂಬರ್ ತಿಂಗಳನಲ್ಲಿ ಅನುಭವಿಸಿದ ಹಣಕಾಸು ಕೊರತೆಯ ಕಷ್ಟ ಗ್ರಾಹಕರನ್ನು ಜಾಗೃತಗೊಳಿಸಿರಬೇಕು. ಅಂತೆಯೇ ‘ಹಣಕಾಸು ತೊಂದರೆ ರಹಿತ ನಾಳೆ’ಗಾಗಿ ಜನರು ಹಣವನ್ನು ಕೂಡಿಟ್ಟಿರಬೇಕು. ಮಾರ್ಚ್ 31, ವರ್ಷಾಂತ್ಯಕ್ಕೆ ವ್ಯವಹಾರಸ್ಥರು, ಉದ್ಯಮಿಗಳು ಲೆಕ್ಕ ಚುಕ್ತಾಕ್ಕೆ ಭಾರೀ ಹಣ ಹಿಂಪಡೆದ ಕಾರಣವೂ ಇರಬಹುದು ಎಂದು ಕೆಲವರು ವಾದಿಸುತ್ತಿದ್ದಾರೆ. ಬೇಸಿಗೆ ರಜೆ ಮತ್ತು ಹಬ್ಬ ಹರಿದಿನಗಳಿಗಾಗಿ ಜನರು ಸಾಕಷ್ಟು ಹಣ ಡ್ರಾ ಮಾಡಿರಬೇಕು ಎನ್ನುವ ಮಾತೂ ಕೇಳಿ ಬರುತ್ತಿದೆ
ನಗದು ವ್ಯವಹಾರಗಳನ್ನು ನಿಯಂತ್ರಿಸಲು ಮತ್ತು ಡಿಜಿಟಲ್ ವ್ಯವಹಾರ ಹೆಚ್ಚಿಸಲು, ಕೆಲವು ನಿರ್ದಿಷ್ಟ ನಗದು ವ್ಯವಹಾರದ ನಂತರದ ವ್ಯವಹಾರಗಳಿಗೆ ಶುಲ್ಕ ವಿಧಿಸುವ ಸರಕಾರದ ಇತ್ತೀಚೆಗಿನ ನಿರ್ದೇಶನ, ಸಮಸ್ಯೆಯ ಹಿಂದಿನ ಮುಖ್ಯ ಕಾರಣ ಎಂದು ಹಣಕಾಸು ತಜ್ಞರ ಅಭಿಪ್ರಾಯ. ಮೊದಲಿನಂತೆ ನಾಲ್ಕಾರು ಬಾರಿ ಹಣ ಹಿಂಪಡೆಯದೆ, ಶುಲ್ಕ ಉಳಿಸಲು ಗ್ರಾಹಕರು ಒಂದೇ ಬಾರಿ ತಮಗೆ ಬೇಕಾದಷ್ಟು ಹಣವನ್ನು ಡ್ರಾ ಮಾಡುತ್ತಿರುವುದು, ಎಟಿಎಂ ಗಳಲ್ಲಿ ನಗದು ಕೊರತೆಗೆ ಕಾರಣ ಎನ್ನುವುದರಲ್ಲಿ ತಥ್ಯವಿದೆ.
ಜಗತ್ತಿನಲ್ಲಿ ಯಾವುದೇ ಸಮಸ್ಯೆ ಬಿಗಡಾಯಿಸಲು ಮತ್ತು ನಿಯಂತ್ರಣ ತಪ್ಪಲು ವದಂತಿಗಳು ಮತ್ತು ಗುಮಾನಿಗಳ ಪಾತ್ರ ಬಹು ಮುಖ್ಯ. ನಗದು ಕೊರತೆ ಮತ್ತು ಎಟಿಎಂಗಳ ವಿಷಯದಲ್ಲೂ ಇವು ಸಾಕಷ್ಟು ಗೊಬ್ಬರ ಮತ್ತು ನೀರನ್ನು ಪೂರೈಸಿ ಸಮಸ್ಯೆ ದಿನ ದಿನವೂ ಬಿಗಡಾಯಿಸುವಂತೆ ಮಾಡಿವೆ. ರಿಸರ್ವ್ ಬ್ಯಾಂಕ್ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ರದ್ದು ಮಾಡುತ್ತದೆಯಂತೆ, ಅವುಗಳ ಮುದ್ರಣವನ್ನು ನಿಲ್ಲಿಸಿದೆಯಂತೆ... ಹೊಸ 200 ರೂಪಾಯಿ ಮತ್ತು ಸಾವಿರ ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡುತ್ತದಂತೆ ಎನ್ನುವ ಊಹಾಪೋಹಗಳು ಮತ್ತು ವದಂತಿಗಳು ಸಮಸ್ಯೆಯನ್ನು ಇನ್ನೂ ಕ್ಲಿಷ್ಟಕರ ಮಾಡಿವೆ.
ನಗದುರಹಿತ ಹಣಕಾಸು ವ್ಯವಸ್ಥೆಯನ್ನು ಉತ್ತೇಜಿಸಲು ಮತ್ತು ಡಿಜಟಲೀಕರಣವನ್ನು ಪ್ರೋತ್ಸಾಹಿಸಲು ರಿಸರ್ವ್ ಬ್ಯಾಂಕ್ ಬ್ಯಾಂಕುಗಳ ನಗದು ಆವಶ್ಯಕತೆಯ ಕೇವಲ ಶೇ. 25ನ್ನು ಪೂರೈಸುತ್ತಿದ್ದು, ಎಟಿಎಂಗಳಲ್ಲಿ ನಗದು ಕೊರತೆಗೆ ಕಾರಣ ಎನ್ನುವ ವದಂತಿ ನಗದು ಕೊರತೆ ಸಮಸ್ಯೆಗೆ ಕಿಚ್ಚು ಹಚ್ಚಿದೆ. ಸರಕಾರವು ನಗದು ರಹಿತ ಹಣಕಾಸು ವ್ಯವಸ್ಥೆ ಮತ್ತು ಡಿಜಟಲೀಕರಣಕ್ಕೆ ಕೊಡುವ ಅರ್ಜೆನ್ಸಿಯನ್ನು ನೋಡಿದಾಗ ಇವುಗಳು ಸತ್ಯ ವೇನೋ ಎನ್ನುವ ಭಾವನೆ ಬರುತ್ತದೆ. ಸತ್ಯಕ್ಕಿಂತ ವದಂತಿಗಳಿಗೆ ಹೆಚ್ಚಿನ ಮಾನ್ಯತೆ ಮತ್ತು ತೂಕ ಇರುವ ಸಮಯದಲ್ಲಿ ಮತ್ತು ದೇಶದಲ್ಲಿ, ಯಾವುದೇ ಸಮಸ್ಯೆಯನ್ನು ವಿರಾಟಗೊಳಿಸಲು ಇದು ಸಾಕು. ದುರ್ದೈವವೆಂದರೆ, ಸಮಸ್ಯೆ ಇಂತಹ ವಿರಾಟ ಸ್ವರೂಪ ಪಡೆದು ಜನಸಾಮಾನ್ಯರ ಬದುಕು ದುಸ್ತರ ವಾಗುತ್ತಿದ್ದರೂ, ವದಂತಿಗಳಿಗೆ ಮತ್ತು ಊಹಾಪೋಹಗಳಿಗೆ ಕೊನೆ ಹಾಡಿ, ಸಮಸ್ಯೆಯನ್ನು ತಿಳಿ ಮಾಡುವ ಪ್ರಯತ್ನ ಸಂಬಂಧಪಟ್ಟವರಿಂದ ಅಗುತ್ತಿಲ್ಲ. ಸಮಸ್ಯೆಯ ನಿಜವಾದ ಕಾರಣವನ್ನು ತಿಳಿಯದ ಜನಸಾಮಾನ್ಯ ಗ್ರಾಹಕರು ಬ್ಯಾಂಕ್ ಸಿಬ್ಬಂದಿಯನ್ನು ಖಳನಾಯಕರನ್ನಾಗಿ ನೋಡುತ್ತಿದ್ದಾರೆ.