ಪುರುಷ ದಿರಿಸಿನಲ್ಲಿ ಬುಡಕಟ್ಟು ಮಹಿಳೆಯರ ಬೇಟೆ ಹಬ್ಬ
ಪ್ಯಾಂಟ್, ಜೀನ್ಸ್ ಮತ್ತು ಅಂಗಿ ಧರಿಸಿದ ಸಾವಿರಾರು ಮಂದಿ ಬುಡಕಟ್ಟು ಮಹಿಳೆಯರು ಸಾಂಪ್ರದಾಯಿಕ ಶಸಾಸಗಳೊಂದಿಗೆ ಬೀದಿಗಿಳಿದರೆ ಅಚ್ಚರಿಪಡಬೇಡಿ. ಜಾರ್ಖಂಡ್‌ನ ಬುಡಕಟ್ಟು ಪ್ರಾಬಲ್ಯದ ಜಿಲ್ಲೆಗಳಲ್ಲಿ ಕಾಣಸಿಗುವ ಅಪರೂಪದ ದೃಶ್ಯ ಇದು. ‘ಜಾನಿ ಶಿಕರ್’ ಎಂಬ ಈ ಬೇಟೆ ಹಬ್ಬವನ್ನು ಪ್ರತಿ ವರ್ಷ ಮೊಘಲರ ವಿರುದ್ಧದ ವಿಜಯದ ಸಂಕೇತವಾಗಿ ಆಚರಿಸಲಾಗುತ್ತದೆ. 500 ವರ್ಷ ಹಿಂದೆ ಮೊಘಲ್ ಸಾಮ್ರಾಜ್ಯದ ವಿರುದ್ಧ ಗಳಿಸಿದ ವಿಜಯವನ್ನು ಹೀಗೆ ಪ್ರತಿ ವರ್ಷ ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
ಜಾನಿ ಶಿಕರ್ ಸಂಪ್ರದಾಯವನ್ನು ಪ್ರತಿ 12 ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಶತಮಾನಗಳಿಂದ ಈ ಆಚರಣೆ ರೂಢಿಯಲ್ಲಿದೆ. ಪುರುಷರ ದಿರಿಸುಗಳನ್ನು ತೊಟ್ಟ ಮಹಿಳೆಯರು ಮನೆಗಳಿಂದ ಹೊರಬಂದು ಪ್ರಾಣಿಗಳನ್ನು ಬೇಟೆಯಾಡುತ್ತಾರೆ. ಈಗ ಬಹುತೇಕ ಆಡು ಮತ್ತು ಕೋಳಿ ಬೇಟೆಗೆ ಇದು ಸೀಮಿತವಾಗಿದೆ. ರಾತ್ರಿ ಇದನ್ನು ಹಬ್ಬದ ರೂಪದಲ್ಲಿ ಆಚರಿಸುತ್ತಾರೆ.
ರಾಂಚಿಯ ಪಿಥೋರಿಯಾ ಪ್ರದೇಶದಲ್ಲಿ ನೂರಾರು ಮಂದಿ ಬುಡಕಟ್ಟು ಮಹಿಳೆಯರು ಶನಿವಾರ ಲಾಠಿ ಹಾಗೂ ಸಾಂಪ್ರದಾಯಿಕ ಶಸಾಸಗಳೊಂದಿಗೆ ಅಂಬೇಡ್ಕರ್ ಚೌಕದ ಬಳಿ ವಾಹನಗಳನ್ನು ತಡೆದು ನಿಲ್ಲಿಸಿ, ದೇಣಿಗೆ ನೀಡುವಂತೆ ವಾಹನಗಳ ಚಾಲಕರನ್ನು ಒತ್ತಾಯಿಸಿದ ಸಂದರ್ಭ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೆಲವರು ಇದರಿಂದ ಭೀತಿಗೊಂಡರೆ ಮತ್ತೆ ಕೆಲವರು ಸ್ಥಳೀಯ ಪೊಲೀಸರಿಗೆ ದೂರು ನೀಡಲು ಮುಂದಾದರು. ಪೊಲೀಸರು ಸ್ಥಳಕ್ಕೆ ಆಗಮಿಸಿದರೂ, ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪ ಕೇಳಿಬಂತು. ಇದು ಬುಡಕಟ್ಟು ಹಬ್ಬದ ಭಾಗವಾಗಿರುವುದರಿಂದ ಪೊಲೀಸರು ಯಾವ ಕ್ರಮಕ್ಕೂ ಮುಂದಾಗಲಿಲ್ಲ ಎಂದು ಹೇಳಲಾಗಿದೆ. ರಾಂಚಿಯ ಕನ್ಕೆ ಮತ್ತು ಮೊರಬಡಿ ಪ್ರದೇಶಗಳಲ್ಲೂ ಇಂಥದ್ದೇ ಚಿತ್ರಣ ಕಂಡುಬಂತು.
‘‘ಜಾನಿ ಶಿಕರ್, ಬುಡಕಟ್ಟು ಸಬಲೀಕರಣದ ಸಂಕೇತ’’ ಎಂದು ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ್ತಿ ದಯಾಮಣಿ ಬರ್ಲಾ ಹೇಳುತ್ತಾರೆ. ಮಹಿಳಾ ಚಳವಳಿ 1960ರ ದಶಕದಲ್ಲೇ ಹುಟ್ಟಿಕೊಂಡರೂ, ಎರಡು ನಿರಂತರ ಯುದ್ಧಗಳಲ್ಲಿ ಬುಡಕಟ್ಟು ಮಹಿಳೆಯರು ಮೊಘಲರ ವಿರುದ್ಧ ವಿಜಯ ಸಾಸುವ ಮೂಲಕ ಜಾರ್ಖಂಡ್‌ನ ಒಳನಾಡು ಪ್ರದೇಶ 500 ವರ್ಷಗಳ ಹಿಂದೆಯೇ ಮಹಿಳಾ ಶಕ್ತಿಯನ್ನು ಪ್ರದರ್ಶಿಸಿತ್ತು ಎಂದು ಬರ್ಲಾ ಹೇಳುತ್ತಾರೆ.
1610ರಲ್ಲಿ ಮೊಘಲರು ಬುಡಕಟ್ಟು ವಸತಿ ಪ್ರದೇಶವಾದ ರೋಟ್ಸಘರ್ ಮೇಲೆ ದಾಳಿ ಮಾಡಿದರು. ಈ ಪ್ರದೇಶ ಈಗ ಬಿಹಾರದಲ್ಲಿದ್ದು, ಸ್ಥಳೀಯರ ಮೇಲೆ ಆಕ್ರಮಣ ನಡೆಸುವುದು ಕಷ್ಟಸಾಧ್ಯ ಎನ್ನುವುದು ಅವರಿಗೆ ಮನವರಿಕೆಯಾಯಿತು ಎಂದು ಇತಿಹಾಸವನ್ನು ಬಣ್ಣಿಸುತ್ತಾರೆ.
ಬಳಿಕ ಒಬ್ಬ ಗುಪ್ತಚರ, ಸಾರ್‌ಹಲ್ ಹಬ್ಬದ ಮರುದಿನ ಮುಂಜಾನೆ ದಾಳಿ ಮಾಡುವಂತೆ ಮೊಘಲರಿಗೆ ಸಲಹೆ ಮಾಡುತ್ತಾನೆ. ಹಿಂದಿನ ರಾತ್ರಿಯಿಡೀ ಹಬ್ಬದ ಆಚರಣೆಯಲ್ಲಿ ಮದ್ಯಪಾನ ಮಾಡಿದ ನಶೆಯಲ್ಲಿ ಜನ ಇರುತ್ತಾರೆ ಎಂದು ಆತ ವಿವರಿಸಿದ. ಈ ರಹಸ್ಯ ತಂತ್ರಗಾರಿಕೆಯ ಸುಳಿವು ಬುಡಕಟ್ಟು ಮಹಿಳೆಯರಿಗೆ ದೊರಕಿತು. ತಕ್ಷಣ ಪುರುಷರ ದಿರಿಸಿನಲ್ಲಿ ಅವರು ಯುದ್ಧರಂಗಕ್ಕೆ ಬಂದು, ದಾಳಿಗೆ ಪ್ರತಿರೋಧ ಒಡ್ಡಿದ್ದು ಮಾತ್ರವಲ್ಲದೆ, ಎರಡು ಬಾರಿ ಮೊಘಲರನ್ನು ಸೋಲಿಸಿದರು. ಆದರೆ ತಾವು ಹೋರಾಡುತ್ತಿರುವುದು ಪುರುಷರ ಜತೆಗಲ್ಲ; ಮಹಿಳೆಯರ ಜತೆಗೆ ಎನ್ನುವುದು ಮನವರಿಕೆಯಾದ ಬಳಿಕ ಮೂರನೆ ಯುದ್ಧದಲ್ಲಿ ಮೊಘಲರು ಜಯ ಸಾಸಿದರು
ಆ ಬಳಿಕ ಬುಡಕಟ್ಟು ಮಹಿಳೆಯರು ಮಹಿಳಾ ಶಕ್ತಿಯನ್ನು ಜಾನಿ ಶಿಕರ್ ಹಬ್ಬದ ಮೂಲಕ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಆಚರಿಸುತ್ತಾರೆ. ಅಂದು ಪುರುಷರ ವೇಷದಲ್ಲಿ ಪ್ರಾಣಿಗಳ ಬೇಟೆಯಾಡುತ್ತಾರೆ.
‘‘ಎದುರು ಸಿಕ್ಕಿದ ಪ್ರಾಣಿಗಳನ್ನು ನಾವು ಬೇಟೆಯಾಡುತ್ತೇವೆ. ಕೋಳಿಮರಿ, ಕೋಳಿ ಹಾಗೂ ಆಡುಗಳು ಬಲಿಯಾಗುತ್ತವೆ. ಈ ಹಬ್ಬದ ಬಗ್ಗೆ ತಿಳಿದಿರುವುದರಿಂದ ಯಾವ ಗ್ರಾಮಸ್ಥರೂ ಇದಕ್ಕೆ ಅಡ್ಡಿಪಡಿಸುವುದಿಲ್ಲ. ಸತ್ತ ಪ್ರಾಣಿಗಳನ್ನು ನಮ್ಮ ಹಳ್ಳಿಗಳಿಗೆ ಒಯ್ದು, ರಾತ್ರಿ ಹಬ್ಬದೂಟ ಮಾಡುತ್ತೇವೆ’’ ಎಂದು ಬೇಟೆ ತಂಡದಲ್ಲಿದ್ದ ಮಹಿಳೆ ಬರ್ಷಾದೇವಿ ವಿವರಿಸಿದರು.
ಇತರ ಹಬ್ಬಗಳಂತೆ, ಜಾನಿ ಶಿಕರ್ ಕೂಡಾ ಕಾಲಕ್ರಮೇಣ ಬದಲಾಗಿದೆ. ಹಿಂದೆ ಮಹಿಳೆಯರು ಸಾಂಪ್ರದಾಯಿಕ ದೋತಿ ಹಾಗೂ ಪಾರ್ಗಿ ತೊಡುತ್ತಿದ್ದರು. ಇದೀಗ ಜೀನ್ಸ್ ಹಾಗೂ ಟಿ-ಷರ್ಟ್ ಧರಿಸುತ್ತಾರೆ. ‘‘ಬಲವಂತವಾಗಿ ದೇಣಿಗೆ ಸಂಗ್ರಹಿಸುವುದು ಕೂಡಾ ಸಂಪ್ರದಾಯದ ಅಂಗವಲ್ಲ’’ ಎಂದು ಪಿಥೋರಿಯಾದ ಮಹಾರಾಜ ಮದ್ರಾ ಮುಂಡಾ ಕೇಂದ್ರೀಯ ಪರ್ಹಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಾಧುಲಾಲ್ ಮುಂಡಾ ವಿವರಿಸುತ್ತಾರೆ.