ದೇಶದಲ್ಲಿ ವಾರ್ಷಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರೆಷ್ಟು ಗೊತ್ತೇ?
ಹೊಸದಿಲ್ಲಿ, ಮೇ 3: ರೈತರ ಆದಾಯ ಹೆಚ್ಚಳ ಮತ್ತು ಸಾಮಾಜಿಕ ಭದ್ರತೆ ಹೆಚ್ಚಿಸಲು ಬಹುಮುಖಿ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ದೇಶದಲ್ಲಿ 2013ರಿಂದೀಚೆಗೆ ಪ್ರತೀ ವರ್ಷ 12 ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ಸಿಟಿಝನ್ ರಿಸೋರ್ಸ್ ಆ್ಯಂಡ್ ಆ್ಯಕ್ಷನ್ ಇನೀಶಿಯೇಟಿವ್ ಎಂಬ ಸ್ವಯಂಸೇವಾ ಸಂಸ್ಥೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಹಾಗೂ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಸಂಜಯ್ ಕಿಶನ್ ಕೌಲ್ ಅವರನ್ನೊಳಗೊಂಡ ನ್ಯಾಯಪೀಠ, ರೈತರ ಸ್ಥಿತಿಗತಿ ಸುಧಾರಿಸಲು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ಬಯಸಿತ್ತು. ಎರಡೂ ಕಡೆಯ ವಾದ- ಪ್ರತಿವಾದವನ್ನು ಆಲಿಸಿದ ನ್ಯಾಯಪೀಠ, "ಪ್ರಕರಣದಲ್ಲಿ ಸದ್ಯಕ್ಕೆ ಮಧ್ಯಪ್ರವೇಶಿಸುವುದು ಅಸಾಧ್ಯ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಎಷ್ಟಿರಬೇಕು ಹಾಗೂ ಬೆಳೆವಿಮೆ ನೀಡುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕಾರ್ಯಾಂಗ ಕೈಗೊಳ್ಳಬೇಕು" ಎಂದು ಅಭಿಪ್ರಾಯಪಟ್ಟಿತು.
ರೈತರ ಆತ್ಮಹತ್ಯೆ ಸಮಸ್ಯೆಗೆ ಯಾವ ಪರಿಹಾರ ಒದಗಿಸಬಹುದು ಎನ್ನುವುದನ್ನು ಪರಿಶೀಲಿಸಿ ಕಾರ್ಯತಂತ್ರವನ್ನು ರೂಪಿಸುವಂತೆ ನೀತಿ ಆಯೋಗಕ್ಕೆ ಸರ್ಕಾರ ಸೂಚಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದಾಗ, "ಪ್ರತಿಯೊಂದನ್ನೂ ನೀವು ನೀತಿ ಆಯೋಗಕ್ಕೆ ನೀಡುತ್ತಿದ್ದೀರಿ. ಅಷ್ಟೊಂದನ್ನು ಅದು ನಿರ್ವಹಿಸುವುದಾದರೂ ಹೇಗೆ?" ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್.ನರಸಿಂಗ, "ಕಡಿಮೆ ಆದಾಯದ ರೈತರ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸುತ್ತಿದೆ. ದೊಡ್ಡಸಂಖ್ಯೆಯ ರೈತರು ಬಡತನ ರೇಖೆಗಿಂತ ಕೆಳಗಿದ್ದಾರೆ. ಇವರ ಆದಾಯ ಮಟ್ಟ ಹೆಚ್ಚಿಸುವ ಮೂಲಕ ಆತ್ಮಹತ್ಯೆ ಸಮಸ್ಯೆ ನಿವಾರಿಸಬಹುದು. ಈ ನಿಟ್ಟಿನಲ್ಲಿ 2022ರೊಳಗೆ ರೈತರ ಆದಾಯವನ್ನು ದುಪ್ಪಟ್ಟು ಹೆಚ್ಚಿಸಲು ಸರ್ಕಾರ ಕಾರ್ಯತಂತ್ರ ಹಮ್ಮಿಕೊಂಡಿದೆ" ಎಂದು ವಿವರಿಸಿದರು.
ಸ್ವಯಂಸೇವಾ ಸಂಸ್ಥೆಯ ಪರ ವಕೀಲ ಕೊಲಿನ್ ಗಾನ್‌ಸಲ್ವೇಸ್ ನೀಡಿದ ಅಂಕಿಅಂಶಗಳ ಬಗ್ಗೆ ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ನ್ಯಾಯಪೀಠ ಸೂಚಿಸಿತು. "ವ್ಯಾಪಕ ಪ್ರಚಾರ ಪಡೆದ ಪ್ರಧಾನಮಂತ್ರಿ ಫಸಲು ವಿಮಾ ಯೋಜನೆ, ಶೇಕಡ 20ರಷ್ಟು ಸಣ್ಣ ಹಾಗೂ ಅತಿಸಣ್ಣ ರೈತರಿಗೂ ತಲುಪಿಲ್ಲ. ಸರ್ಕಾರ ಖಾಸಗಿ ವಿಮಾ ಕಂಪೆನಿಗಳಿಗೆ ಈ ಸಂಬಂಧ ಕೋಟ್ಯಂತರ ರೂಪಾಯಿ ನೀಡಿದೆ" ಎಂದು ಅವರು ವಾದ ಮಂಡಿಸಿದರು. ಕೃಷಿ ಕೆಲಸಕ್ಕೆ ಸಬ್ಸಿಡಿ ನೀಡಲು ಕೇಂದ್ರಕ್ಕೆ ಸೂಚಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.
2015ರಲ್ಲಿ 8,007 ರೈತರು ಹಾಗೂ 4,595 ಕೃಷಿ ಕೂಲಿಕಾರ್ಮಿಕರು ಸೇರಿದಂತೆ 12,602 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದಲ್ಲಿ ಆ ವರ್ಷ 1.33 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪೈಕಿ ಶೇಕಡ 9ರಷ್ಟು ರೈತರು ಎಂದು ಕೇಂದ್ರ ಸರ್ಕಾರ ಅಂಕಿ ಅಂಶ ನೀಡಿತು. ಮಹಾರಾಷ್ಟ್ರದಲ್ಲಿ 4,291, ಕರ್ನಾಟಕದಲ್ಲಿ 1,568, ತೆಲಂಗಾಣದಲ್ಲಿ 1,400, ಮಧ್ಯಪ್ರದೇಶದಲ್ಲಿ 1,290, ಛತ್ತೀಸ್‌ಗಢ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಕ್ರಮವಾಗಿ 954, 916 ಮತ್ತು 606 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿವರಿಸಿತು.