ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾದ ವ್ಯಾಟಿಕನ್ ರಾಯಭಾರಿ
ಬೆಂಗಳೂರು, ಮೇ 3: ವ್ಯಾಟಿಕನ್ನಿನ ಹೊಸ ಭಾರತ ರಾಯಭಾರಿ ಮೋಸ್ಟ್ ರೆವರೆಂಡ್ ಗಿಯಂಬಟ್ಟಿಸ್ಟ ಡಿಖುವಟ್ಟ್ರೊ ಅವರು ಬೆಂಗಳೂರಿನ ಆರ್ಚ್ ಬಿಷಪ್ ಮೋಸ್ಟ್ ರೆವರೆಂಡ್ ಬರ್ನಾರ್ಡ್ ಮೊರಾಸ್ ಹಾಗೂ ಕೆಥೊಲಿಕ್ ಕೌನ್ಸಿಲ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಮತ್ತು ಹಣಕಾಸು ಸಮಿತಿಯ ಅಧ್ಯಕ್ಷ ಡಾ.ಆಂಟೋಸ್ ಆಂಟನಿ ಅವರ ಜತೆಗೂಡಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಮಾತುಕತೆಯ ವೇಳೆ ಕರ್ನಾಟಕದ ಕ್ರೈಸ್ತ ಸಮುದಾಯ ಹಾಗೂ ಚರ್ಚಿನ ಹಲವಾರು ಕಾರ್ಯಚಟುವಟಿಕೆಗಳ ಬಗ್ಗೆ ಅವರು ಚರ್ಚಿಸಿದರು. ಮುಖ್ಯಮಂತ್ರಿ ಕೂಡ ಸಮಾಲೋಚನೆ ವೇಳೆ ಚರ್ಚ್ ಕಾರ್ಯಚಟುವಟಿಕೆಗಳನ್ನು ಪ್ರಶಂಸಿಸಿದರು.
ಬೆಂಗಳೂರು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಕೆ.ಜೆ.ಜಾರ್ಜ್ ಹಾಗೂ ಬೆಂಗಳೂರು ಆರ್ಚ್ ಡಯೋಸೀಸ್ ನ ಚಾನ್ಸಲರ್ ಫಾ.ಆಂಥೋನಿ ಸ್ವಾಮಿ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Next Story