ನಾಲ್ಕರ ಬಾಲಕಿಯ ಅತ್ಯಾಚಾರಿಗೆ ಗಲ್ಲುಶಿಕ್ಷೆ ಎತ್ತಿ ಹಿಡಿದ ಸುಪ್ರೀಂ
ಹೊಸದಿಲ್ಲಿ,ಮೇ 3: ಒಂಭತ್ತು ವರ್ಷಗಳ ಹಿಂದೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚರವೆಸಗಿ, ಬಳಿಕ ಆಕೆಯನ್ನು ಕೊಂದು ಹಾಕಿದ್ದ ಆರೋಪಿ ವಸಂತ ಸಂಪತ್ ದುಪಾರೆ (55) ಎಂಬಾತನಿಗೆ ವಿಧಿಸಲಾಗಿರುವ ಮರಣ ದಂಡನೆಯನ್ನು ಸರ್ವೋಚ್ಚ ನ್ಯಾಯಾಲಯವು ಬುಧವಾರ ಎತ್ತಿಹಿಡಿದಿದೆ.
2008ರಲ್ಲಿ ಈ ಘಟನೆ ನಡೆದಿತ್ತು. ಚಾಕ್ಲೇಟ್‌ನ ಆಮಿಷವೊಡ್ಡಿ ಬಾಲಕಿಯನ್ನು ಕರೆದೊಯ್ದಿದ್ದ ಆರೋಪಿ ತನ್ನ ಕಾಮತೃಷೆಯನ್ನು ತೀರಿಸಿಕೊಂಡ ಬಳಿಕ ಭಾರೀ ಕಲ್ಲೊಂದರಿಂದ ಆಕೆಯ ತಲೆಯನ್ನು ಜಜ್ಜಿ ಕೊಂದು ಹಾಕಿ,ಶವವನ್ನು ಬಚ್ಚಿಟ್ಟಿದ್ದ. ಪ್ರಕರಣದ ವಿಚಾರಣೆ ನಡೆಸಿದ್ದ ಬಾಂಬೆ ಉಚ್ಚ ನ್ಯಾಯಾಲಯವು 2012ರಲ್ಲಿ ದುಪಾರೆಗೆ ಗಲ್ಲುಶಿಕ್ಷೆಯನ್ನು ವಿಧಿಸಿತ್ತು ಮತ್ತು 2014ರಲ್ಲಿ ಸರ್ವೋಚ್ಚ ನ್ಯಾಯಾಲಯವು ಇದನ್ನು ದೃಢೀಕರಿಸಿತ್ತು.
ಬಳಿಕ ದುಪಾರೆ ಬಂಧನದಲ್ಲಿ ತಾನು ಮಾನಸಿಕ ಕಾಯಿಲೆಗೆ ಗುರಿಯಾಗಿದ್ದೇನೆ ಎಂದು ಉಲ್ಲೇಖಿಸಿ ಮರು ಪರಿಶೀಲನೆ ಅರ್ಜಿ ಸಲ್ಲಿಸಿದ್ದ. ಆದರೆ ಆತ ನಡೆಸಿರುವ ಅಪರಾಧವು ಅತ್ಯಂತ ಹೇಯ ಮತ್ತು ಬರ್ಬರ ಸ್ವರೂಪದ್ದಾಗಿದ್ದು, ಮರಣ ದಂಡನೆಗೆ ಅರ್ಹನಾಗಿದ್ದಾನೆ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.