ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿರಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಮೇ 4: ಪೊಲೀಸ್ ಠಾಣೆಗಳು ಎಷ್ಟು ಸುಂದರವಾಗಿವೆ ಎಂಬುದು ಮುಖ್ಯವಲ್ಲ. ಜನಸಾಮಾನ್ಯರ ಪಾಲಿಗೆ ಅವು ಎಷ್ಟು ಸುರಕ್ಷಿತ ಎಂಬುದು ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ಮಹದೇವಪುರ ಕ್ಷೇತ್ರದಲ್ಲಿ ಪ್ರೆಸ್ಟೀಜ್ ಸಂಸ್ಥೆ ವತಿಯಿಂದ 2.75 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ನೂತನ ವೈಟ್‌ಫೀಲ್ಡ್ ಪೊಲೀಸ್ ಠಾಣೆ ಹಾಗೂ ವೈಟ್‌ಫೀಲ್ಡ್ ಉಪ ವಿಭಾಗದ ಉಪ ಪೊಲೀಸ್ ಆಯುಕ್ತರ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪೊಲೀಸ್ ಠಾಣೆಗಳು ಜನಸ್ನೇಹಿಯಾಗಬೇಕು. ಆಗ ಮಾತ್ರ ಜನರಿಗೆ ಪೊಲೀಸರ ಮೇಲೆ ವಿಶ್ವಾಸ ಬರಲು ಸಾಧ್ಯ. ನಮ್ಮ ಸರಕಾರವು ನಾಲ್ಕು ವರ್ಷಗಳಲ್ಲಿ ಪೊಲೀಸ್ ಇಲಾಖೆಗೆ ಅಗತ್ಯ ಸಿಬ್ಬಂದಿ ಸೇರಿದಂತೆ ಬಹಳಷ್ಟು ನೆರವನ್ನು ನೀಡಿದೆ. ಪೊಲೀಸ್ ಠಾಣೆಗಳಲ್ಲಿ ಗುಣಾತ್ಮಕ ಬದಲಾವಣೆಯಾಗಬೇಕು ಎಂದು ಅವರು ಹೇಳಿದರು.
ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಬೆಂಗಳೂರು ಕೂಡ ಒಂದು. ಸುಮಾರು 1 ಕೋಟಿ ಜನಸಂಖ್ಯೆ, 65 ಲಕ್ಷಕ್ಕೂ ಹೆಚ್ಚು ವಾಹನಗಳು ಇಲ್ಲಿವೆ. ಇಷ್ಟು ದೊಡ್ಡ ಪ್ರಮಾಣದ ನಗರವು ಸ್ವಾಭಾವಿಕವಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ಅಪರಾಧಗಳು ಹೆಚ್ಚುತ್ತಿವೆ. ಪೊಲೀಸ್ ಠಾಣೆಗಳು ತಂತ್ರಜ್ಞಾನದ ಸದ್ಬಳಕೆಯೊಂದಿಗೆ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡಬೇಕು ಎಂದು ಅವರು ಕರೆ ನೀಡಿದರು.
ವೈಟ್‌ಫೀಲ್ಡ್ ಬೆಂಗಳೂರು ಹೊರವಲಯದಲ್ಲಿರುವುದರಿಂದ ಈ ಭಾಗದಲ್ಲಿ ಅಕ್ರಮ ಭೂ ವ್ಯವಹಾರಗಳು ಹೆಚ್ಚುತ್ತಿವೆ. ಪೊಲೀಸರ ಸಹಕಾರವಿಲ್ಲದೆ ಇವೆಲ್ಲ ಸಾಧ್ಯವಿಲ್ಲ. ಪೊಲೀಸರು ಪ್ರಾಮಾಣಿಕವಾಗಿ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸಿದರೆ, ಅಪರಾಧಗಳ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ಅವರು ಹೇಳಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ರಾಜ್ಯದಲ್ಲಿ 1500 ಪೊಲೀಸ್ ಠಾಣೆಗಳಿವೆ. ತಂತ್ರಜ್ಞಾನವನ್ನು ಜನರ ಉಪಯೋಗಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು. ಆಧುನಿಕತೆಯನ್ನು ಪೊಲೀಸ್ ವ್ಯವಸ್ಥೆಯಲ್ಲಿ ಜಾರಿಗೆ ತರಬೇಕು. ಕ್ರೈಮ್ ಕ್ರಿಮಿನಲ್ ಟ್ರಾಕಿಂಗ್ ಸಿಸ್ಟಮ್(ಸಿಸಿಟಿಎಸ್)ಅನ್ನು ಎಲ್ಲ ಪೊಲೀಸ್ ಠಾಣೆಗಳಲ್ಲಿ ಅವಳಡಿಸಲಾಗುವುದು ಎಂದರು.
ಬೆಂಗಳೂರಿಗೆ ವಿಶ್ವದ ಅತ್ಯಂತ ಕ್ರಿಯಾಶೀಲ ನಗರ ಎಂಬ ಹೆಗ್ಗಳಿಕೆ ಸಿಕ್ಕಿದೆ. ಅದೇ ರೀತಿ ಜನಸಾಮಾನ್ಯರ ಪಾಲಿಗೆ ಇದು ಅತ್ಯಂತ ಸುರಕ್ಷಿತ ನಗರವಾಗಬೇಕು. ದಿಲ್ಲಿ ಹೊರತುಪಡಿಸಿದರೆ ಅತೀ ಹೆಚ್ಚು ವಾಹನಗಳನ್ನು ಹೊಂದಿರುವ ನಗರ ಬೆಂಗಳೂರು. ರಾಜ್ಯ ಸರಕಾರವು ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ 7 ಸಾವಿರ ಕೋಟಿ ರೂ.ಗಳ ಅನುದಾನ ಒದಗಿಸಿದೆ ಎಂದು ಅವರು ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ ಪೊಲೀಸರಿಗೆ 11 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಪೊಲೀಸ್ ಸಹಾಯವಾಣಿ 100 ಅನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಕರೆ ಮಾಡುವವರಿಗೆ 15 ಸೆಕೆಂಡುಗಳಲ್ಲಿ ಸ್ಪಂದನೆ ಸಿಗಲಿದೆ. ಇನ್ನು 15 ದಿನಗಳಲ್ಲಿ ಸುಧಾರಿತ ವ್ಯವಸ್ಥೆಯನ್ನು ಲೋರ್ಕಾಪಣೆಗೊಳಿಸಲಾಗುವುದು ಎಂದು ಪರಮೇಶ್ವರ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ವಹಿಸಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಶಾಸಕ ಬಿ.ಎ.ಬಸವರಾಜ, ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪಕ್‌ಕುಮಾರ್ ದತ್ತಾ, ನಗರ ಪೊಲೀಸ್ ಆಯುಕ್ತ ಪ್ರವೀಣ್‌ಸೂದ್, ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ವಿಧಾನಪರಿಷತ್ ಸದಸ್ಯರಾದ ಬಿ.ಎಸ್.ಸುರೇಶ್, ರಿಝ್ವಾನ್‌ಅರ್ಶದ್, ಎಂ.ನಾರಾಯಣಸ್ವಾಮಿ, ಬಿಬಿಎಂಪಿ ಸದಸ್ಯ ಎಸ್.ಮುನಿಸ್ವಾಮಿ, ಕೆಪಿಸಿಸಿ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥೀತರಿದ್ದರು.
ಸಾರ್ವಜನಿಕರು ತಮ್ಮ ಸಮೀಪದ ಪೊಲೀಸ್‌ಠಾಣೆಗಳನ್ನು ಪತ್ತೆ ಹಚ್ಚಲು ನೆರವಾಗುವಂತೆ ‘ನೋ ಮೈ ಪೊಲೀಸ್ ಸ್ಟೇಷನ್’ ಮೊಬೈಲ್ ಅಪ್ಲಿಕೇಷನ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋರ್ಕಾಪಣೆಗೊಳಿಸಿದರು. ಅಲ್ಲದೆ, ಇದೇ ಸಂದರ್ಭದಲ್ಲಿ ಪ್ರೆಸ್ಟೀಜ್ ಸಂಸ್ಥೆಯ ಮುಖ್ಯಸ್ಥ ಇರ್ಫಾನ್ ರಝಾಕ್, ಸಿಐಡಿ ಡಿವೈಎಸ್ಪಿಎಂ.ಡಿ.ಸಕ್ರಿ, ಚೇತನ್ಯ ಫೌಂಡೇಷನ್‌ನ ಗುರುಪ್ರಸಾದ್, ನೆಟ್ ಆಪ್‌ನ ಮುರುಳಿನಾಯ್ಡು, ವೈದೇಹಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಕಲ್ಪಜಾರನ್ನು ಸನ್ಮಾನಿಸಲಾಯಿತು.