ವೇತನ ಆಯೋಗ ರಚನೆಗೆ ಒತ್ತಾಯಿಸಿ ಸರಕಾರಿ ನೌಕರರಿಂದ ಉಪವಾಸ ಧರಣಿ
ಬೆಂಗಳೂರು, ಮೇ 4: ಕೇಂದ್ರ ಸರಕಾರಿ ನೌಕರರಿಗೆ ನೀಡುವ ವೇತನವನ್ನೇ ರಾಜ್ಯ ಸರಕಾರಿ ನೌಕರರಿಗೆ ನೀಡಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದ ನೇತೃತ್ವದಲ್ಲಿ ನಗರದ ಬಹುಮಹಡಿಗಳ ಕಟ್ಟಡದ ಮುಂಭಾಗ ನೌಕರರು ಉಪವಾಸ ಸತ್ಯಾಗ್ರಹ ನಡೆಸಿದರು.
ಈ ವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಮಹದೇವಯ್ಯ ಮಠಪತಿ, ದೇಶದಲ್ಲಿ ಅತ್ಯಂತ ಕಡಿಮೆ ವೇತನವನ್ನು ನಮ್ಮ ರಾಜ್ಯದಲ್ಲಿ ದುಡಿಯುತ್ತಿರುವ ಸರಕಾರಿ ನೌಕರರು ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಈ ಹಿಂದೆ ರಚನೆಯಾಗಿರುವ 5 ಮತ್ತು 6 ನೆ ವೇತನ ಆಯೋಗಗಳು ಅವೈಜ್ಞಾನಿಕವಾಗಿದ್ದು, ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ತತ್ವವನ್ನು ರಾಜ್ಯ ಸರಕಾರ ಗಾಳಿಗೆ ತೂರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವ ನಿಯಮವನ್ನು ಪಾಲಿಸುತ್ತಿಲ್ಲ. ಕೇಂದ್ರ ಸರಕಾರಿ ನೌಕರರು ಹಾಗೂ ರಾಜ್ಯ ಸರಕಾರಿ ನೌಕರರ ನಡುವೆ ವೇತನ ಶೇ. 65 ರಿಂದ 105ರಷ್ಟಿದೆ. ರಾಜ್ಯ ಸರಕಾರಿ ನೌಕರರು ಕೇಂದ್ರ ಸರಕಾರಿ ನೌಕರರಷ್ಟೇ ಸಮಾನ ಸೇವೆ ಸಲ್ಲಿಸುತ್ತಿದ್ದರೂ ವೇತನದಲ್ಲಿ ತಾರತಮ್ಯವೇಕೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಸುಮಾರು 6.5 ಲಕ್ಷ ಸರಕಾರಿ ನೌಕರರ ಹುದ್ದೆಗಳಿದ್ದು, ಅದರಲ್ಲಿ 2.70 ಲಕ್ಷ ಹುದ್ದೆಗಳು ಖಾಲಿಯಿವೆ. ಆದರೆ, ಅದರ ಸಂಪೂರ್ಣ ಕೆಲಸದ ಹೊರೆಯನ್ನು ಪ್ರಸ್ತುತ ಕೆಲಸ ಮಾಡುತ್ತಿರುವ ನೌಕರರೇ ಭರಿಸುತ್ತಿದ್ದಾರೆ. ಆದರೂ, ಸರಕಾರ ನೌಕರರ ಬೇಡಿಕೆಗಳನ್ನು ಈಡೇರಿಸಲು ಮುಂದಾಗದಿರುವುದು ಸರಿಯಲ್ಲ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯಬಜೆಟ್‌ನಲ್ಲಿ ನೌಕರರ ಹಿತದೃಷ್ಟಿಯಿಂದ ವೇತನ ಆಯೋಗವನ್ನು ರಚಿಸುವುದಾಗಿ ತಿಳಿಸಿದ್ದಾರೆ. ಆದರೆ, ಮೇ 3 ಕ್ಕೆ ಅವರು ಘೋಷಣೆ ಮಾಡಿ 50 ದಿನಗಳು ಕಳೆಯುತ್ತಿದ್ದರೂ, ಇದುವರೆಗೂ ಯಾವುದೇ ಆದೇಶ ಹೊರಡಿಸಿಲ್ಲ. ಹೀಗಾಗಿ ಶೀಘ್ರವಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವೇತನ ಆಯೋಗ ರಚನೆ ಮಾಡಬೇಕು, ಜನವರಿ 2017 ರಿಂದ ಪೂರ್ವಾನ್ವಯವಾಗುವಂತೆ ಶೇ. 30 ರಷ್ಟು ಮಧ್ಯಂತರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘದ ಮುಖಂಡರು, ಸರಕಾರಿ ನೌಕರರು ಭಾಗವಹಿಸಿದ್ದರು.