ಬೊಗಸೆ ವೌನದ ಜೊತೆಗೆ - ತೆರೆದಂತೆ ಹಾದಿ
ಈ ಹೊತ್ತಿನ ಹೊತ್ತಿಗೆ
ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿರುವ ಜಯಶ್ರೀ ಬಿ. ಕದ್ರಿ ಅವರ ವೈಚಾರಿಕ ಬರಹಗಳ ಸಂಗ್ರಹ ‘ತೆರೆದಂತೆ ಹಾದಿ’ ಕೃತಿ. ವಿಷಯ ವೈವಿಧ್ಯಗಳೇ ಕೃತಿಯ ಹೆಗ್ಗಳಿಕೆ. ಸಾಹಿತ್ಯ, ಸಮಾಜ, ವಿಚಾರ ಹೀಗೆ ಬೇರೆ ಬೇರೆ ಮಗ್ಗುಲುಗಳಲ್ಲಿ ಬರಹಗಳು ಹೊರಳುತ್ತವೆ. ಈ ಕೃತಿಗೆ ವೈಚಾರಿಕ ಹಣೆಪಟ್ಟಿ ಅಷ್ಟು ಒಗ್ಗುವುದಿಲ್ಲ. ಯಾಕೆಂದರೆ ಇಲ್ಲಿರುವ ಲೇಖನಗಳು ಒಂದು ನಿರ್ದಿಷ್ಟ ಉದ್ದೇಶಗಳಿಂದ ಹುಟ್ಟಿದವುಗಳಲ್ಲ. ಲಾಲಿತ್ಯ ಬರಹಗಳ ಹೆಗ್ಗಳಿಕೆ. ಆದರೂ ವರ್ತಮಾನದ ಹತ್ತು ಹಲವು ವಿಷಯಗಳು ಕೃತಿಯಲ್ಲಿ ಚರ್ಚೆಗೊಳಗಾಗುತ್ತವೆ. ಇಲ್ಲಿ ಒಟ್ಟು 55 ಲೇಖನಗಳಿವೆ. ಹೆಚ್ಚಿನವುಗಳು ಮಹಿಳೆಯರ ಬದುಕು ಬವಣೆಗಳನ್ನು ಕೇಂದ್ರವಾಗಿಟ್ಟುಕೊಂಡು ಬರೆದವುಗಳು. ಇದೇ ಸಂದರ್ಭದಲ್ಲಿ ಟೀನೇಜ್, ಫೇಸ್‌ಬುಕ್, ಸೈಬರ್ ಫೆಮಿನಿಸಂ, ಲಿಪ್‌ಸ್ಟಿಕ್, ಸೌಂದರ್ಯ ಲಹರಿ....ಹೀಗೆ ದಿನ ನಿತ್ಯದ ಬದುಕಿನಲ್ಲಿ ಅವಿನಾಭಾವವಾಗಿರುವ ಹಲವು ಸಂಗತಿಗಳನ್ನು ಲವಲವಿಕೆಯಿಂದ ನಿರೂಪಿಸುತ್ತಾರೆ. ಬಾಲ್ಯ, ಮದುವೆ ಮೊದಲಾದವುಗಳನ್ನು ಹೆಣ್ಣು ಕಣ್ಣುಗಳಲ್ಲಿ ನೋಡಿ ಚರ್ಚಿಸುತ್ತಾರೆ. ಇ ಓದು ಮತ್ತು ಮಕ್ಕಳ ಸಾಹಿತ್ಯದ ಕುರಿತಂತೆ ಬರೆಯುತ್ತಾ ಬಾಲ ಸಾಹಿತ್ಯದ ನಿರ್ಲಕ್ಷದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ. ಇಲ್ಲಿರುವ ಪ್ರತೀ ಬರಹದೊಳಗೂ ಒಂದು ಅಂತಃಕರಣವಿದೆ. ಅಕ್ಕರೆಯಿದೆ. ಪದ್ಯದ ಲಯವಿದೆ. ಆದುದರಿಂದಲೇ ಎಲ್ಲ ಬರಹಗಳೂ ನಮ್ಮನ್ನು ಸಲೀಸಾಗಿ ಓದಿಸಿಕೊಂಡು ಹೋಗುತ್ತದೆ. ಮಾತು ವೌನಗಳ ಬಗ್ಗೆ ಹೇಳುತ್ತಾ ‘‘....ನಮ್ಮತನವನ್ನು ಬಿಟ್ಟುಕೊಡದೆ, ಶೋಷಣೆಗೆ ಒಳಗಾಗದೆ ಇರುವಷ್ಟು ಮಾತು ನಮಗೆ ಬೇಕು. ಹಾಗೆಯೇ ಒಂದು ಬೊಗಸೆ ವೌನವನ್ನು, ನಿಶ್ಶಬ್ದವನ್ನು ನಮ್ಮೆದೆಯ ಗುಡಿಯಲ್ಲಿಟ್ಟುಕೊಳ್ಳುವ ಕಾಳಜಿಯೂ ನಮಗೆ ಬೇಕು’’ ಎಂದು ಬರೆಯುತ್ತಾರೆ. ವೌನದ ಕಾವಿನೊಳಗೆ ಲೇಖಕಿಯ ಬರಹಗಳು ಇನ್ನಷ್ಟು ಮಾಗುವ ಅಗತ್ಯವೂ ಇದೆ ಅನ್ನಿಸುತ್ತದೆ. ಜಯಶ್ರೀ ಅವರು ಇನ್ನೂ ಉತ್ತಮವಾಗಿ ಬರೆಯಬಲ್ಲರು.